Wednesday, June 26, 2024

ಸತ್ಯ | ನ್ಯಾಯ |ಧರ್ಮ

ಇಬ್ಬರನ್ನು ಬಲಿ ತೆಗೆದುಕೊಂಡ ಆನೆಯನ್ನು ಸೆರೆ ಹಿಡಿಯಲು ʼಆಪರೇಷನ್‌ ಭುವನೇಶ್ವರಿʼ ಆರಂಭಿಸಿದ ಅರಣ್ಯ ಇಲಾಖೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಯೊಂದು ಮಹಿಳೆಯನ್ನು ತುಳಿದು ಕೊಂದು ಹಾಕಿದ ಘಟನೆ ನಡೆದ ಒಂದು ದಿನದ ನಂತರ ಅರಣ್ಯಾಧಿಕಾರಿಗಳು ಕೊಲೆಗಾರ ಆನೆಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಕ್ರೆಬೈಲು ಶಿಬಿರದಿಂದ ಮೂರು ಹಾಗೂ ದುಬಾರೆ ಶಿಬಿರದಿಂದ ನಾಲ್ಕು ತರಬೇತಿ ಪಡೆದ ಆನೆಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

ನಿನ್ನೆ, ಬುಧವಾರದಂದು, 32 ವರ್ಷದ ಮೀನಾ ಎಂಬ ಮಹಿಳೆ ಇತರ ಕಾರ್ಮಿಕರೊಂದಿಗೆ ಗಾಳಿದುಂಡಿ ಗ್ರಾಮದ ತನ್ನ ಜಮೀನಿನಲ್ಲಿ ಮಾಡುತ್ತಿದ್ದ ಸಮಯದಲ್ಲಿ ಆನೆಯೊಂದು ಆಕೆಯನ್ನು ತುಳಿದು ಕೊಂದಿದೆ. ಗ್ರಾಮಸ್ಥರ ಪ್ರಕಾರ ಆನೆ ಹಠಾತ್ತಾಗಿ ಕಾಣಿಸಿಕೊಂಡು ಪ್ರತಿರೋಧಿಸಲು ಸಮಯವೇ ಸಿಗದಂತೆ ದಾಳಿ ಮಾಡಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಶಾಸಕಿ ನಯನಾ ಮೋಟಮ್ಮ ಅವರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಮೃತ ಮಹಿಳೆಯ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಈ ಆನೆಗೆ ಇಬ್ಬರು ಬಲಿಯಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ದುರ್ಗ ಗ್ರಾಮದಲ್ಲಿ ಆನೆ ದಾಳಿಯಿಂದ ಮತ್ತೊಬ್ಬ ರೈತ ಸಾವನ್ನಪ್ಪಿದ್ದರು.

ಮೂರು ತಿಂಗಳ ಹಿಂದೆ ಸಕಲೇಶಪುರದಿಂದ ಐದು ಆನೆಗಳ ಹಿಂಡು ಚಿಕ್ಕಮಗಳೂರಿನ ಹೊಲಗಳ ಬಳಿ ಕಾಣಿಸಿಕೊಂಡಿತ್ತು. ಐದು ಆನೆಗಳಲ್ಲಿ ಮೂರು ಮರಿಯಾನೆಗಳಾಗಿದ್ದವು ಮತ್ತು ಅವುಗಳಲ್ಲಿ ಭುವನೇಶ್ವರಿ ಎಂಬ ಆನೆ ರೇಡಿಯೋ ಕಾಲರ್ ಹೊಂದಿದೆ.

ನಂತರ ಈ ಹಿಂಡಿಗೆ ಮತ್ತೆರಡು ಆನೆಗಳು ಸೇರಿಕೊಂಡು ಒಟ್ಟು ಏಳು ಆನೆಗಳ ಗುಂಪಾಗಿದ್ದವು. ಅವುಗಳಲ್ಲಿ ಗುಂಪಿನಿಂದ ಬೇರ್ಪಟ್ಟ ಆನೆಗಳ ಪೈಕಿ ಒಂದು ಆನೆ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇಬ್ಬರನ್ನು ಕೊಂದು ಹಾಕಿದೆ ಎನ್ನಲಾಗಿದೆ.

ಎರಡು ಸಾವು ಹಾಗೂ ಸ್ಥಳೀಯರ ಪ್ರತಿಭಟನೆ ಬಳಿಕ ಸಿಎಂ ಆದೇಶದ ಮೇರೆಗೆ ಅರಣ್ಯ ಇಲಾಖೆ ಆನೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಶಿಬಿರದಿಂದ ಮೂರು ಆನೆಗಳನ್ನು ಕರೆತಂದಿದ್ದು, ಮಡಿಕೇರಿಯ ದುಬಾರೆ ಶಿಬಿರದಿಂದ ನಾಲ್ಕು ಆನೆಗಳನ್ನು ಜಂಬೂ ಹಿಡಿಯಲು ಬಳಸಿಕೊಳ್ಳುವ ನಿರೀಕ್ಷೆಯಿದೆ. ಪಶುವೈದ್ಯಕೀಯ ವೈದ್ಯರು ಮತ್ತು ಟ್ರ್ಯಾಂಕ್ವಿಲೈಸರ್ ತಜ್ಞರನ್ನು ಸಹ ಈ ಕಾರ್ಯಾಚರಣೆಗೆಂದು ನಿಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು