Thursday, June 13, 2024

ಸತ್ಯ | ನ್ಯಾಯ |ಧರ್ಮ

ಕಾಂಗ್ರೆಸ್ ಮತ್ತು ಶಾಸಕ ಸ್ಥಾನ ತೊರೆದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್

ಹೊಸದೆಹಲಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ವಿಧಾನಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ರಾಜ್ಯ ಸಮಿತಿ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ‘ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸರಳವಾಗಿ ಹೇಳಿದ್ದಾರೆ.

ಚವಾಣ್ ಅವರು ಬೆಳಗ್ಗೆ ರಾಜ್ಯ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರನ್ನು ಭೇಟಿ ಮಾಡಿದರು. ಇದಾದ ಬಳಿಕ ತಾವು ಶಾಸಕ ಸ್ಥಾನ ತೊರೆದಿರುವುದಾಗಿ ಸಾಮಾಜಿಕ ತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಇಂದು, ಸೋಮವಾರ, ಫೆಬ್ರವರಿ 12, 2024, ನಾನು ಭೋಕರ್ ಅಸೆಂಬ್ಲಿ ಕ್ಷೇತ್ರದಿಂದ ವಿಧಾನಸಭಾ ಸದಸ್ಯ ಸ್ಥಾನಕ್ಕೆ (ಎಂಎಲ್‌ಎ) ರಾಜೀನಾಮೆಯನ್ನು ಅಸೆಂಬ್ಲಿ ಸ್ಪೀಕರ್ ರಾಹುಲ್‌ ನಾರ್ವೇಕರ್ ಅವರಿಗೆ ಸಲ್ಲಿಸಿದ್ದೇನೆʼ ಎಂದು ತಮ್ಮ ಜಾಲತಾಣದ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ.

ಎನ್‌ಡಿಟಿವಿ ಪ್ರಕಾರ, ಸುದ್ದಿಗಾರರೊಂದಿಗೆ ಮಾತನಾಡಿದ ಚವಾಣ್, ಬೇರೆ ಯಾವುದೇ ಪಕ್ಷಕ್ಕೆ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ. ನಾನು ಇದುವರೆಗೂ ಯಾವುದೇ ಪಕ್ಷದ ಜೊತೆ ಮಾತನಾಡಿಲ್ಲ ಎಂದರು. ಆದರೆ, ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದೊಳಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾ ವಿಕಾಸ್ ಅಘಾಡಿಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಎನ್‌ಸಿಪಿಯ ಶರದ್ ಪವಾರ್ ಪಾಳಯ ಮತ್ತು ಕಾಂಗ್ರೆಸ್ ಸೇರಿದೆ.

ಕಾಂಗ್ರೆಸ್ ಮೂಲಗಳ ಪ್ರಕಾರ, ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಪಕ್ಷವನ್ನು ಬದಲಾಯಿಸುವ ಅವರ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಚವಾಣ್ ಅವರ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಸ್ನೇಹಿತರು ಮತ್ತು ಸಹೋದ್ಯೋಗಿಗಳು ತಮಗೆ ಅರ್ಹತೆಗಿಂತಲೂ ಹೆಚ್ಚಿನದನ್ನು ನೀಡಿದ ರಾಜಕೀಯ ಪಕ್ಷವನ್ನು ತೊರೆದಾಗ ಅದು ನೋವಾಗುತ್ತದೆ. ಆದರೆ ಇಲ್ಲೊಂದು ವಿಷಯವಿದೆ ಅಸುರಕ್ಷಿತ ಭಾವನೆ ಹೊಂದಿರುವವರಿಗೆ ವಾಷಿಂಗ್‌ ಮಷೀನ್‌ ಪಕ್ಷವು ಯಾವಾಗಲೂ ಸೈದ್ಧಾಂತಿಕ ಬದ್ಧತೆ ಅಥವಾ ವೈಯಕ್ತಿಕ ನಿಷ್ಠೆಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆʼ ಎಂದು ಟ್ವೀಟ್‌ ಮಾಡಿದ್ದಾರೆ.

ಇಂದು ತಡರಾತ್ರಿ ಅವರು ಭಾರತೀಯ ಜನತಾ ಪಕ್ಷ ಸೇರಲಿದ್ದಾರೆ ಎಂಬ ಊಹಾಪೋಹವಿದೆ.

ರಾಜ್ಯಸಭಾ ಸಂಸದ ಮತ್ತು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಚವಾಣ್ ಕಾಂಗ್ರೆಸ್ ತೊರೆದಿದ್ದಾರೆ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನಿನ್ನೆಯವರೆಗೂ ಇಲ್ಲೇ ಇದ್ದು ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಮತ್ತು ಇಂದು ಅವರು ಪಕ್ಷ ತೊರೆದಿದ್ದಾರೆ. ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರಂತೆ ಚವಾಣ್ ಕೂಡ ಪಕ್ಷದ ಚುನಾವಣಾ ಚಿಹ್ನೆಯನ್ನು ಪಡೆದುಕೊಳ್ಳುತ್ತಾರೆಯೇ? ಈ ದೇಶದಲ್ಲಿ ಏನು ಬೇಕಾದರೂ ಸಾಧ್ಯ ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಮಾತನಾಡಿ, ‘ಸಿದ್ಧಾಂತಕ್ಕಾಗಿ ನಿಜವಾದ ಹೋರಾಟದ ಅಗತ್ಯವಿರುವ ಸಮಯದಲ್ಲಿ, ಹಿರಿಯ ನಾಯಕ (ಚವಾಣ್) ಅವರು ತಮ್ಮ ಜೀವನದುದ್ದಕ್ಕೂ ಅನುಸರಿಸಿದ ಅದೇ ರಾಜಕೀಯ ಸಿದ್ಧಾಂತವನ್ನು ತ್ಯಜಿಸಿ ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದಾರೆ. .. ಇದು ನಿಜಕ್ಕೂ ದುರದೃಷ್ಟಕರʼ ಎಂದು ಪ್ರತಿಕ್ರಿಯಿಸಿದ್ದಾರೆ.

‘ಪಕ್ಷಗಳನ್ನು ಒಡೆಯುವ ಈ ಪ್ರಯತ್ನ ಮುಂದುವರಿಯುವುದರಿಂದ, ಅಸ್ಮಿತೆ ಮತ್ತು ಸಿದ್ಧಾಂತದ ನಿಜವಾದ ಹೋರಾಟವನ್ನು ಸಾಮಾನ್ಯ ಜನರು ಎದುರಿಸಬೇಕಾಗುತ್ತದೆ ಮತ್ತು ಜನರು ಅದಕ್ಕೆ ಸಿದ್ಧರಾಗಿದ್ದಾರೆ’ ಎಂದು ಪವಾರ್ ಹೇಳಿದರು.

2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಶೋಕ್ ಚವಾಣ್, ಆದರ್ಶ ಸಹಕಾರಿ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಅವರ ಹೆಸರು ಕೇಳಿಬಂದ ನಂತರ 2010ರಲ್ಲಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಇವರು ರಾಜ್ಯದ ಮಾಜಿ ಮುಖ್ಯಮಂತ್ರಿ ಶಂಕರರಾವ್ ಚವ್ಹಾಣ್ ಅವರ ಪುತ್ರ.

ಚವಾಣ್ 2014 ಮತ್ತು 2019ರ ನಡುವೆ ಲೋಕಸಭೆಯಲ್ಲಿ ತಮ್ಮ ತವರು ಮತ್ತು ಭದ್ರಕೋಟೆ ನಾಂದೇಡ್ ಅನ್ನು ಪ್ರತಿನಿಧಿಸಿದ್ದಾರೆ. 2014ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಒಂದು ಸ್ಥಾನವನ್ನು ಗೆದ್ದ ಇಬ್ಬರು ಕಾಂಗ್ರೆಸ್ ನಾಯಕರಲ್ಲಿ ಒಬ್ಬರು. 2015ರಲ್ಲಿ ಅವರನ್ನು ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಯಿತು. ಆದರೆ, 2019ರಲ್ಲಿ ನಾಂದೇಡ್‌ನಲ್ಲಿ ಬಿಜೆಪಿಯಿಂದ ಸೋತಿದ್ದರು.

Related Articles

ಇತ್ತೀಚಿನ ಸುದ್ದಿಗಳು