ಹೊಸ ಸರ್ಕಾರ ರಚನೆಯಾದ ನಂತರ ಬಾಲಚಂದ್ರ ಜಾರಕಿಹೊಳಿ ಅವರಿಂದ ತೆರವಾದ ಕೆಎಮ್ಎಫ್ ( KMF ) ಅಧ್ಯಕ್ಷ ಸ್ಥಾನಕ್ಕೆ ಹಗರೀಬೊಮ್ಮನಹಳ್ಳಿ ಮಾಜಿ ಶಾಸಕರಾದ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಸಧ್ಯ ರಾಬಕೋವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಭೀಮಾ ನಾಯ್ಕ್ ಗೆ ಕೆಎಮ್ಎಫ್ ಗದ್ದುಗೆಯ ಅದೃಷ್ಟ ಒಲಿದಿದೆ.
ಕೆಎಮ್ಎಫ್ ಬೋರ್ಡ್ ಮೀಟಿಂಗ್ ನಲ್ಲಿ ಸರ್ವಾನುಮತದಿಂದ ಭೀಮಾ ನಾಯ್ಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಬೆಳಿಗ್ಗೆ ಭೀಮಾ ನಾಯ್ಕ್ ಅವರು ಕೆಎಮ್ಎಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಫೇಸ್ಬುಕ್ ಪೋಸ್ಟ್ನಲ್ಲಿ, ಈ ಸ್ಥಾನಕ್ಕೆ ನನ್ನನ್ನು ನಾಮ ಪತ್ರ ಸಲ್ಲಿಸಲು ಆಯ್ಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ , ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಹಾಗೂ ನೂತನ ಸಚಿವರಿಗೆ ನನ್ನ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದರು.

ಕೆಎಮ್ಎಫ್ ಸಂಸ್ಥೆ ಈ ವರೆಗೂ ರೈತರಿಗೆ ಸಹಕಾರಿಯಾಗಿ ಬೆಳೆದು ಬಂದಿದೆ. ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಗುರಿಯಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಸೇರಿದಂತೆ ಹಿರಿಯರು, ರೈತರು ಮತ್ತು ಗ್ರಾಹಕರ ಸಂಪೂರ್ಣ ಸಹಕಾರ ಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಹಕಾರಿ ಸಚಿವ ರಾಜಣ್ಣ, ‘ನಂದಿನಿ ಸಂಸ್ಥೆಯನ್ನು ಬೆಳೆಸಲು ಸರ್ಕಾರ ಬದ್ಧವಾಗಿದೆ. ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ. ರೈತರಿಗೆ ಸಿಗುವ ಹಾಲಿನ ದರದಲ್ಲಿ ಹೆಚ್ಚಳ ಮಾಡುವ ಕಡೆಗೂ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಕೂಡಾ ನಮ್ಮ ಗಮನದಲ್ಲಿದೆ’ ಎಂದು ಹಾಲಿನ ದರ ಏರಿಕೆಯ ಮುನ್ಸೂಚನೆ ಕೊಟ್ಟಿದ್ದಾರೆ.