ದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಯುಕೋ ಬ್ಯಾಂಕ್‌ನ ಮಾಜಿ ಸಿಎಂಡಿ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಪ್ರಕಟಿಸಿದೆ.
ಗೋಯಲ್ ಯುಕೋ ಬ್ಯಾಂಕಿನ ಸಿಎಂಡಿ ಆಗಿದ್ದಾಗ, ಕೋಲ್ಕತ್ತಾ ಮೂಲದ ಕಾಮ್‌ಕಾಸ್ಟ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಸಿಎಸ್‌ಪಿಎಲ್) ಗೆ ಭಾರಿ ಸಾಲ ನೀಡುವಲ್ಲಿ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪಗಳಿದ್ದವು. ಸಿಎಸ್‌ಪಿಎಲ್ ಕಂಪನಿಯು 6,210.72 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿದೆ.
ಗೋಯಲ್ ಮತ್ತು ಅವರ ಕುಟುಂಬ ಸದಸ್ಯರು ನಿಯಂತ್ರಿಸುವ ಶೆಲ್ ಮತ್ತು ನಕಲಿ ಕಂಪನಿಗಳಿಗೆ ಹಣವನ್ನು ಹರಿಸಲಾಗಿದೆ ಎಂದು ಸಿಬಿಐ ಪತ್ತೆಹಚ್ಚಿದೆ. ಈ ಹಿನ್ನೆಲೆಯಲ್ಲಿ, ತನಿಖೆಗೆ ಇಳಿದ ಇಡಿ ಅಧಿಕಾರಿಗಳು, ಕಳೆದ ಏಪ್ರಿಲ್‌ನಲ್ಲಿ ಗೋಯಲ್ ಮತ್ತು ಇತರ ಹಲವರ ಮನೆಗಳ ಮೇಲೆ ದಾಳಿ ನಡೆಸಿದರು.
ಈ ತಿಂಗಳ 16 ರಂದು ಗೋಯಲ್ ಅವರನ್ನು ಬಂಧಿಸಿ ವಿಶೇಷ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಈ ತಿಂಗಳ 21 ರವರೆಗೆ ಇಡಿ ಕಸ್ಟಡಿಗೆ ನೀಡಿದೆ.
ಸಿಎಸ್‌ಪಿಎಲ್‌ಗೆ ಸಾಲ ಮಂಜೂರು ಪ್ರಕರಣದಲ್ಲಿ ಗೋಯಲ್ ಭಾರಿ ಪ್ರಮಾಣದ ಹಣದ ಲಾಭ ಪಡೆದಿದ್ದಾರೆ ಎಂದು ಇಡಿ ಆರೋಪಿಸಿದೆ. ಗೋಯಲ್ ಅವರು ಶೆಲ್ ಕಂಪನಿಗಳಿಂದ ನಗದು, ರಿಯಲ್ ಎಸ್ಟೇಟ್, ಐಷಾರಾಮಿ ವಸ್ತುಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳ ಮೂಲಕ ಲಾಭ ಪಡೆದಿದ್ದಾರೆ ಎಂದು ಅದು ವಿವರಿಸಿದೆ.