Thursday, June 13, 2024

ಸತ್ಯ | ನ್ಯಾಯ |ಧರ್ಮ

ಉಡುಪಿ: ಒಂದೇ ಮನೆಯ ನಾಲ್ವರ ಕಗ್ಗೊಲೆ

ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಕೊಲೆಯಾದವರನ್ನು ತಾಯಿ ಹಸೀನಾ, ಅವರ ಮಕ್ಕಳಾದ ಅಫ್ನಾನ್(23), ಅಯ್ನಾಝ್ (21), ಅಸೀಮ್(14) ಎಂದು ಗುರುತಿಸಲಾಗಿದೆ. ಇದಲ್ಲದೆ ಚೂರಿ ಇರಿತದಿಂದ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು. ದೀಪಾವಳಿ ದಿನದಂದೇ ಉಡುಪಿ ಜಿಲ್ಲೆ ಭೀಕರ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದೆ.

ಕೊಲೆಗಾರನು ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿ ಬಂದಿದ್ದ ಎನ್ನಲಾಗಿದ್ದು, ಬೋಳು ತಲೆಯವನಾಗಿದ್ದ ಎಂದು ತಿಳಿದು ಬಂದಿದೆ.

ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಡಿವೈಎಸ್ಪಿ ದಿನಕರ ಅವರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ತಾಯಿ ಹಾಗೂ ಮೂವರು ಮಕ್ಕಳ ಕೊಲೆ ಕೃತ್ಯವು ಕಳ್ಳತನದ ಉದ್ದೇಶದಿಂದ ನಡೆದಂತೆ ಕಾಣುತ್ತಿಲ್ಲ. ಮನೆಯಿಂದ ಚಿನ್ನಾಭರಣ ಕಳವಾಗಿಲ್ಲ ಎಂದು ತಿಳಿಸಿದ್ದಾರೆ.

ಹಸೀನಾ ಮತ್ತು ಅವರ ಮಕ್ಕಳಾದ ಅಫ್ನಾನ್, ಅಯ್ನಾಝ್ ಮತ್ತು ಅಸೀಮ್ ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿದೆ. ಹಸೀನಾರ ಅತ್ತೆ ಕೂಡಾ ದುಷ್ಕರ್ಮಿಯಿಂದ ಇರಿತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶೀಸಲಾಗಿದ್ದು, ಪ್ರಕರಣವನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು