ಚಂಡೀಗಢ : ಹರಿಯಾಣದ (Haryana) ನೂಹ್ (Nuh) ಜಿಲ್ಲೆಯಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Mishap) ಮೂವರು ಪುಟ್ಟ ಮಕ್ಕಳು ಹಾಗೂ ಅವರ ತಂದೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಭೀಕರ ಘಟನೆ ನಡೆದಿದೆ. ವೇಗವಾಗಿ ಬಂದ ಸರಕು ಸಾಗಣೆ ಟ್ರಕ್ ಹಾಗೂ ಬೈಕ್ (Bike) ನಡುವೆ ಸಂಭವಿಸಿದ ಈ ಡಿಕ್ಕಿಯಿಂದಾಗಿ ಇಡೀ ಕುಟುಂಬವೇ ದುರಂತಕ್ಕೆ ಈಡಾಗಿದೆ. ಅಪಘಾತದಲ್ಲಿ ಬೈಕ್ ಚಾಲನೆ ಮಾಡುತ್ತಿದ್ದ ಮೊಹಮ್ಮದ್ ಶಕೀರ್ (32) ಹಾಗೂ ಅವರ ಮಕ್ಕಳಾದ ಒಂದೂವರೆ ತಿಂಗಳ ಕಂದಮ್ಮ ಝಹ್ರಾ, ಎರಡುವರೆ ವರ್ಷದ ಸಜ್ರಾ ಮತ್ತು 5 ವರ್ಷದ ಸಂಬಂಧಿಕ ಮಗು ಗಝಾಲಾ ಮೃತಪಟ್ಟಿದ್ದಾರೆ. ಶಕೀರ್ ಅವರ ಪತ್ನಿ ನಸ್ರೀನ್ (25) ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಸ್ತುತ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮದರಸಾದಲ್ಲಿ ಉರ್ದು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶಕೀರ್, ತಮ್ಮ ಕುಟುಂಬದೊಂದಿಗೆ ತಾವುರು ಪ್ರದೇಶದಲ್ಲಿ ನಡೆದ ಬಂಧುಗಳ ಮನೆಯ ಸಮಾರಂಭವೊಂದರಲ್ಲಿ ಪಾಲ್ಗೊಂಡು ರಾತ್ರಿ ಮನೆಗೆ ಹಿಂತಿರುಗುತ್ತಿದ್ದರು. ನೂಹ್-ತಾವುರು ರಸ್ತೆಯ ಮರಿಯಾ ಮಂಜಿಲ್ ಶಾಲೆ ಬಳಿ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ರಕ್ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಸ್ರೀನ್ ರಸ್ತೆಯ ಬದಿಗೆ ಬಿದ್ದು ಬದುಕಿಉಳಿದಿದ್ದರೆ, ಶಕೀರ್ ಹಾಗೂ ಮೂವರು ಮಕ್ಕಳು ಬೈಕ್‌ನೊಂದಿಗೆ ಟ್ರಕ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಪಘಾತದ ನಂತರವೂ ಚಾಲಕ ಟ್ರಕ್ ನಿಲ್ಲಿಸದೆ ಸುಮಾರು 80 ರಿಂದ 90 ಮೀಟರ್‌ಗಳಷ್ಟು ದೂರ ಅವರನ್ನು ಎಳೆದೊಯ್ದಿದ್ದಾನೆ. ಇದರಿಂದಾಗಿ ನಾಲ್ವರ ದೇಹಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೈಕ್ ಕೂಡ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅಪಘಾತ ನಡೆದ ತಕ್ಷಣ ಚಾಲಕ ವಾಹನವನ್ನು ಘಟನಾ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನೂಹ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ರಕ್ ವಶಪಡಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಚಾಲಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
