ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಗೆ ಎಸ್’ಡಿಎ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಅಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಕೆಲಸ ಕೊಡಿಸಲು 10.50 ಲಕ್ಷ ತಗೆದುಕೊಂಡು ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರ ರಾಮಚಂದ್ರ ಎಂಬುವವರು ‘ತಾನು ಗೃಹಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಸರ್ಕಾರಿ ಉದ್ಯೋಗ, ವರ್ಗಾವಣೆ ಏನೇ ಇದ್ದರೂ ಮಾಡಿ ಕೊಡುವುದಾಗಿ, ಅದಕ್ಕೆ ಸ್ವಲ್ಪ ಖರ್ಚು ವೆಚ್ಚವಿದೆ. ಅಧಿಕಾರಿಗಳು ಹಾಗೂ ಸಚಿವರಿಗೆ ಕೊಡಬೇಕು. ಕೆಲಸ ಮಾಡಿಸಿಕೊಡುವ ನನಗೆ 50 ಸಾವಿರ ಕೊಡಬೇಕು’ ಎಂದು ಶ್ರೀನಿವಾಸ್ ನಂಬಿಸಿ ಮೋಸ ಮಾಡಲಾಗಿದೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಪ್ರಕರಣ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು, ಈಗಾಗಲೇ 10.50 ಲಕ್ಷದಲ್ಲಿ 5 ಲಕ್ಷ ಮಾತ್ರ ಮರಳಿ ಕೊಡಲಾಗಿದೆ, ಇನ್ನು 5.5 ಲಕ್ಷ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವಷ್ಟು ಮಾಧ್ಯಮಗಳು ಈ ಬಗ್ಗೆ ವರದಿ ಬಿತ್ತರಿಸಿ, ಹಾಲಿ ಗೃಹ ಸಚಿವರಿಗೆ ಈ ಪ್ರಕರಣ ತಳುಕು ಹಾಕಲು ಮುಂದಾದಾಗ ಅಸಲಿ ವಿಚಾರ ಹೊರಬಿದ್ದಿದೆ.
ಅಸಲಿ ವಿಚಾರ ಏನೆಂದರೆ ವಂಚನೆ ಆರೋಪಿ ಶ್ರೀನಿವಾಸ್ ಮಾಜಿ ಗೃಹ ಸಚಿವರ ನಿಕಟ ಸಂಪರ್ಕದಲ್ಲಿ ಇದ್ದ ಎಂದು ತಿಳಿದು ಬಂದಿದೆ. 2018 ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಗೃಹ ಸಚಿವರ ಪರವಾಗಿ ಆರೋಪಿ ಶ್ರೀನಿವಾಸ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರನ್ನು ಬಳಸಿ ಹಲವಷ್ಟು ಮಂದಿಗೆ ಈ ರೀತಿಯ ವಂಚನೆ ಮಾಡಿದ್ದ, ಇನ್ನೂ ಕೆಲವರಿಗೆ ಹಣ ತಗೆದುಕೊಂಡು ಕೆಲಸ ಕೂಡಾ ಮಾಡಿಸಿಕೊಟ್ಟಿದ್ದ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ವಿಶೇಷವಾಗಿ ಗೃಹ ಸಚಿವರ ಇಲಾಖೆಯಲ್ಲಿನ ಬಹುತೇಕ ವ್ಯವಹಾರಗಳಲ್ಲಿ ಶ್ರೀನಿವಾಸ್ ಹೆಸರು ಓಡಾಡುತ್ತಿತ್ತು ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.
ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡರೆ ಮಾಜಿ ಗೃಹ ಸಚಿವರ ಅತ್ಯಾಪ್ತರೂ ಶ್ರೀನಿವಾಸ್ ಜೊತೆಗಿನ ಈ ರೀತಿಯ ವ್ಯವಹಾರದಲ್ಲಿ ತೊಡಗಿರುವ ಬಗ್ಗೆಯೂ ಮಾಹಿತಿ ಸಿಗಬಹುದು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಬರೆದಿದ್ದಾರೆ.
ಅಂದಹಾಗೆ ಬೆಳಕಿಗೆ ಬಂದ ಈ ಒಂದು ವಂಚನೆ 2021 ರಲ್ಲೇ ನಡೆದಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗತಿಯಲ್ಲಿ ನಡೆದರೆ ಮಾಜಿ ಗೃಹ ಮಂತ್ರಿಗಳ ಹಲವು ಆಪ್ತರು ಈ ಪ್ರಕರಣದಲ್ಲಿ ಭಾಗಿ ಆಗಿರಬಹುದು.. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ವಕ್ತಾರರು ಒತ್ತಾಯಿಸಿದ್ದಾರೆ.