ಜಂತರ್ ಮಂತರ್‌ನಿಂದ ಜಾಮಾ ಮಸೀದಿವರೆಗೆ: Gen Z ಗಳು ಬೆಸೆದ ಪ್ರೇಮದ ದಾರ

ಶುಕ್ರವಾರ (ಆಗಸ್ಟ್ 28, 2026) ರಕ್ಷಾಬಂಧನದಂದು, ನವದೆಹಲಿಯ ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ಯುವಜನರ ಗುಂಪೊಂದು ದಿನವಿಡೀ ಕಳೆಯಿತು. ತಾವು ಭೇಟಿಯಾದ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತರೆನ್ನದೆ ಎಲ್ಲರ ಕೈಗೆ ಬಣ್ಣಬಣ್ಣದ ‘ಸೌಹಾರ್ದ ಕೆ ಧಾಗೇ’ (ಸೌಹಾರ್ದದ ದಾರ)ಗಳನ್ನು ಕಟ್ಟಿದರು - ರೋಹಿತ್ ಕುಮಾರ್, ಶಿಕ್ಷಣತಜ್ಞ

ಭಾರತೀಯ ಜನತಾ ಪಕ್ಷ ಮತ್ತು ಅದರ ಪರ ನಿಲ್ಲುವ ಮಾಧ್ಯಮಗಳ ಕೋಮು ಪ್ರಚೋದಕ ಮಾತುಗಳು ತಾರಕಕ್ಕೇರಿರುವ ಸಂದರ್ಭದಲ್ಲಿ, ಭಾರತದ ಯುವಜನತೆ ಸೃಜನಶೀಲ ಹಾಗೂ ಮರೆಯಲಾಗದ ರೀತಿಯಲ್ಲಿ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ಈ ಪ್ರತಿರೋಧದ ಪ್ರಬಲ ಅಭಿವ್ಯಕ್ತಿಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರವು, ಸಾರ್ವಜನಿಕ ಜೀವನದಲ್ಲಿ ಧಾರ್ಮಿಕ ಧ್ರುವೀಕರಣವೇ ಅನಿವಾರ್ಯ ವಾಸ್ತವ ಎಂಬುದನ್ನು Gen Z ಒಪ್ಪಿಕೊಳ್ಳಲು ನಿರಾಕರಿಸಿದೆ ಎಂಬುದನ್ನು ಸ್ಪಷ್ಟವಾಗಿ ಕಂಡಿದೆ.

ಶುಕ್ರವಾರ (ಆಗಸ್ಟ್ 28, 2026), ರಕ್ಷಾಬಂಧನದಂದು, ಯುವಜನರ ಗುಂಪೊಂದು ನವದೆಹಲಿಯ ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ದಿನವಿಡೀ ಕುಳಿತು, ತಾವು ಭೇಟಿಯಾದ ಪ್ರತಿಯೊಬ್ಬರ ಕೈಗೆ—ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರೈಸ್ತರೆನ್ನದೆ—ಬಣ್ಣಬಣ್ಣದ ಸೌಹಾರ್ದದ ದಾರಗಳನ್ನು ಕಟ್ಟಿದರು. ಅಂದರೆ, ಇತರರು ಕೋಮು ಸೌಹಾರ್ದದ ಬಂಧಗಳನ್ನು ಒಡೆಯಲು ಪ್ರಯತ್ನಿಸುತ್ತಿರುವಾಗ, ಅವರು ಅಕ್ಷರಶಃ ಒಂದಾಗಿಸುತ್ತಿದ್ದರು. ಅವರಿಗೆ ಅನುಮಾನ ಅಥವಾ ವಿರೋಧದ ಬದಲು ನಗು ಹಾಗೂ ಆತ್ಮೀಯತೆಯ ಪ್ರತಿಕ್ರಿಯೆ ದೊರೆಯಿತು.

‘ಸೌಹಾರ್ದ ಕೆ ಧಾಗೇ’ ಎಂಬುದು ಕ್ರಾಂತಿಕಾರಿ ಯುವ ಸಂಘಟನೆ (KYS)ಯ ಸದಸ್ಯರು ಕಳೆದ ಒಂದು ದಶಕದಿಂದ ಪ್ರತಿವರ್ಷ ಮುಂದುವರಿಸಿಕೊಂಡು ಬರುತ್ತಿರುವ ಪರಂಪರೆಯಾಗಿದೆ. ಪ್ರತಿಯೊಂದು ರಕ್ಷಾಬಂಧನದಂದು KYS ಸ್ವಯಂಸೇವಕರು ದೆಹಲಿ ಮತ್ತು ಹರಿಯಾಣದಾದ್ಯಂತ ತೆರಳಿ, ಕೋಮು ಸೌಹಾರ್ದದ ದಾರಗಳನ್ನು ಕಟ್ಟುತ್ತಾರೆ. ಈ ಮೂಲಕ ರಕ್ಷಾಬಂಧನವನ್ನು ಕೇವಲ ಕುಟುಂಬದ ಬಂಧಗಳಿಗೆ ಸೀಮಿತಗೊಳಿಸದೆ, ಸಹೋದರತ್ವ, ಐಕ್ಯತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಾರ್ವಜನಿಕ ಘೋಷಣೆಯಾಗಿ ರೂಪಿಸುತ್ತಾರೆ.

ಆಗಸ್ಟ್ 28, 2026 ರಂದು ರಕ್ಷಾಬಂಧನದ ಅಂಗವಾಗಿ ‘ಸೌಹಾರ್ದ ಕೆ ಧಾಗೇ’ (ಸೌಹಾರ್ದದ ದಾರಗಳು) ಅಭಿಯಾನದ ಭಾಗವಾಗಿ ಜಾಮಾ ಮಸೀದಿಯಲ್ಲಿ ರಾಖಿ ಕಟ್ಟುತ್ತಿರುವ ಕ್ರಾಂತಿಕಾರಿ ಯುವ ಸಂಘಟನೆ (KYS) ಸದಸ್ಯರು. ಚಿತ್ರ: ವಿಶೇಷ ವ್ಯವಸ್ಥೆ The Wire

ದೀರ್ಘಕಾಲದಿಂದ KYS ಸದಸ್ಯೆಯಾಗಿರುವ ಮುದಿತಾ ಅವರ ಪ್ರಕಾರ, ಈ ವರ್ಷದ ಅಭಿಯಾನದಲ್ಲಿ ಸುಮಾರು 70 ಸದಸ್ಯರು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು. ಜಾಮಾ ಮಸೀದಿಯ ಮೆಟ್ಟಿಲುಗಳು ಮತ್ತು ಪ್ರವೇಶದ್ವಾರಗಳ ಬಳಿ ಸುಮಾರು 5,000 ಜನರ ಕೈಗಳಿಗೆ ಅವರು ಸೌಹಾರ್ದದ ದಾರಗಳನ್ನು ಕಟ್ಟಿದರು. ಜನರಿಂದ ದೊರೆತ ಪ್ರತಿಕ್ರಿಯೆ ಅತ್ಯಂತ ಸಕಾರಾತ್ಮಕವಾಗಿತ್ತು ಎಂದು ಅವರು ಹೇಳುತ್ತಾರೆ.

ಜಾಮಾ ಮಸೀದಿಯನ್ನೇ ಏಕೆ ಆಯ್ಕೆ ಮಾಡಲಾಯಿತು? “ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅಲ್ಲದೆ, ಎಲ್ಲ ಧರ್ಮಗಳು ಮತ್ತು ವಿವಿಧ ವರ್ಗಗಳಿಗೆ ಸೇರಿದ ಜನರು ಅಲ್ಲಿ ಕಾಣಸಿಗುತ್ತಾರೆ.”

KYS ದೇಶಾದ್ಯಂತ ಕಾರ್ಯನಿರ್ವಹಿಸುವ ಯುವಜನ ಮತ್ತು ವಿದ್ಯಾರ್ಥಿ ಸಂಘಟನೆಯಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಗ್ರಾಮೀಣ ಭಾಗದ ಬಡವರೊಂದಿಗೆ ಕೆಲಸ ಮಾಡುತ್ತದೆ. ಸಮಾಜದ ಅಂಚಿನಲ್ಲಿರುವ ವರ್ಗಗಳ ಹಕ್ಕುಗಳ ಪರವಾಗಿ ಅದು ಧ್ವನಿ ಎತ್ತುತ್ತದೆ. ಪದವಿ ವಿದ್ಯಾರ್ಥಿಯಾಗಿದ್ದಾಗಲೇ ಈ ಸಂಘಟನೆಗೆ ಸೇರ್ಪಡೆಯಾದ ಮುದಿತಾ ಅವರ ದೃಷ್ಟಿಯಲ್ಲಿ, ಪ್ರತಿ ವರ್ಷ ನಡೆಯುವ ಈ ಅಭಿಯಾನವು ಭಾರತೀಯ ಸಮಾಜದಲ್ಲಿನ ಧ್ರುವೀಕರಣದ ನಡುವೆಯೂ ಇನ್ನೂ ಜೀವಂತವಾಗಿರುವ ಮಾನವೀಯ ಮೌಲ್ಯಗಳ ಪ್ರಬಲ ನೆನಪಾಗಿದೆ.


ಆಗಸ್ಟ್ 28, 2026 ರಂದು ರಕ್ಷಾಬಂಧನದ ಅಂಗವಾಗಿ ‘ಸೌಹಾರ್ದ ಕೆ ಧಾಗೇ’ (ಸೌಹಾರ್ದದ ದಾರಗಳು) ಅಭಿಯಾನದ ಭಾಗವಾಗಿ ಜಾಮಾ ಮಸೀದಿಯಲ್ಲಿ ರಾಖಿ ಕಟ್ಟುತ್ತಿರುವ ಕ್ರಾಂತಿಕಾರಿ ಯುವ ಸಂಘಟನೆ (KYS) ಸದಸ್ಯರು. ಚಿತ್ರ: ವಿಶೇಷ ವ್ಯವಸ್ಥೆ The Wire

“ನಮ್ಮ ದೇಶದ ಗಂಗಾ-ಜಮುನಿ ತೆಹ್‌ಜೀಬ್ (ಗಂಗಾ – ಯಮುನಾ ಸಂಸ್ಕೃತಿ) ಇನ್ನೂ ಜೀವಂತವಾಗಿದ್ದು, ಅದು ಗಟ್ಟಿಯಾಗಿ ಉಳಿದಿರುವುದನ್ನು ನೋಡುವುದು ಸಂತಸದ ಸಂಗತಿ. ಪ್ರತಿ ವರ್ಷ ಈ ಅಭಿಯಾನವು ಸಾಮಾನ್ಯ ಜನರು ಪರಸ್ಪರ ಶಾಂತಿ ಮತ್ತು ಸೌಹಾರ್ದದಿಂದ ಬದುಕಲು ಬಯಸುತ್ತಾರೆ ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕಳೆದ ಒಂದು ದಶಕದಲ್ಲಿ ಹೆಚ್ಚಾಗುತ್ತಿರುವ ಕೋಮು ದ್ವೇಷವು ಸಮಾಜದಿಂದ ಸಹಜವಾಗಿ ಹುಟ್ಟಿಕೊಂಡದ್ದಲ್ಲ. ರಾಜಕೀಯ ಲಾಭಕ್ಕಾಗಿ ಜನರನ್ನು ವಿಭಜಿಸಲು ಬಯಸುವವರು ಅದನ್ನು ಬೆಳೆಸಿ, ಮತ್ತಷ್ಟು ತೀವ್ರಗೊಳಿಸುತ್ತಿದ್ದಾರೆ. ಆದರೆ ನಾವು ಬೀದಿಗಳಲ್ಲಿ ಕಾಣುವುದು ಇದಕ್ಕಿಂತ ಸಂಪೂರ್ಣ ಭಿನ್ನವಾದದ್ದು — ಏಕತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಆಳವಾದ ಬಯಕೆ,” ಎಂದು ಅವರು ಹೇಳುತ್ತಾರೆ.

ಸಾಂಪ್ರದಾಯಿಕವಾಗಿ, ರಕ್ಷಾಬಂಧನದಂದು ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿ ಕಟ್ಟುತ್ತಾರೆ. ಅದಕ್ಕೆ ಪ್ರತಿಯಾಗಿ ಸಹೋದರನು ತನ್ನ ಸಹೋದರಿಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ಪುನರುಚ್ಚರಿಸುತ್ತಾನೆ. ಆದರೆ ‘ಸೌಹಾರ್ದ ಕೆ ಧಾಗೇ’ ವಿಭಿನ್ನ ಸಂದೇಶವನ್ನು ಹೊತ್ತು ತರುತ್ತವೆ: ಲಿಂಗ, ಧರ್ಮ ಅಥವಾ ಯಾವುದೇ ಸಂಘಟನೆಯೊಂದಿಗಿನ ಸಂಬಂಧವನ್ನು ಲೆಕ್ಕಿಸದೆ, ಯಾರಾದರೂ ಯಾರಿಗಾದರೂ ಈ ದಾರವನ್ನು ಕಟ್ಟಬಹುದು. ಇಲ್ಲಿ ಈ ದಾರವು ರಕ್ಷಣೆಯ ಸಂಕೇತವಾಗಿರದೆ, ಸಮಾನರಾಗಿ ಒಟ್ಟಾಗಿ ಬದುಕುವ ಸಾಮೂಹಿಕ ಬದ್ಧತೆಯ ಸಂಕೇತವಾಗುತ್ತದೆ.

ಆಗಸ್ಟ್ 28, 2026 ರಂದು ರಕ್ಷಾಬಂಧನದ ಅಂಗವಾಗಿ ‘ಸೌಹಾರ್ದ ಕೆ ಧಾಗೇ’ (ಸೌಹಾರ್ದದ ದಾರಗಳು) ಅಭಿಯಾನದ ಭಾಗವಾಗಿ ಜಾಮಾ ಮಸೀದಿಯಲ್ಲಿ ಕ್ರಾಂತಿಕಾರಿ ಯುವ ಸಂಘಟನೆ (KYS) ಸದಸ್ಯರ ಕೈಗೆ ರಾಖಿ ಕಟ್ಟುತ್ತಿರುವ ಮುಸ್ಲಿಂ ವ್ಯಕ್ತಿ. ಚಿತ್ರ: ವಿಶೇಷ ವ್ಯವಸ್ಥೆ The Wire

“ಹಿಂದೂ, ಮುಸ್ಲಿಂ, ಸಿಖ್, ಈಸಾಯಿ — ಆಪಸ್ ಮೇ ಸಬ್ ಭಾಯಿ ಭಾಯಿ (ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರೈಸ್ತರು ಎಲ್ಲರೂ ಸಹೋದರರು)” ಎಂದು ಸ್ವಯಂಸೇವಕರೊಬ್ಬರು ಹಿಡಿದಿರುವ ಫಲಕದಲ್ಲಿ ಬರೆಯಲಾಗಿತ್ತು.

“ಪ್ರತಿ ರಕ್ಷಾಬಂಧನದಂದು ಭಾರತೀಯರಾದ ನಮ್ಮ ಮೂಲಭೂತ ಏಕತೆಯ ಬಗ್ಗೆ ಸಾವಿರಾರು ಜನರೊಂದಿಗೆ ಮಾತನಾಡುವ ಅವಕಾಶ ನಮಗೆ ಸಿಗುತ್ತದೆ. ಸಂತಸದ ಸಂಗತಿಯೆಂದರೆ, ಎಲ್ಲರೂ ಇದನ್ನು ಒಪ್ಪುತ್ತಾರೆ,” ಎಂದು ಮುದಿತಾ ಹೇಳುತ್ತಾರೆ. ಈ ಸೌಹಾರ್ದದ ಪ್ರಯತ್ನಕ್ಕೆ ಇದುವರೆಗೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಯಾರೂ ಅವರನ್ನು ತಡೆಯಲು ಪ್ರಯತ್ನಿಸಿಲ್ಲ — ಪೊಲೀಸರೂ ಕೂಡ.

ರೋಹಿತ್ ಕುಮಾರ್ ಅವರು ಶಿಕ್ಷಣತಜ್ಞರಾಗಿದ್ದು, ಅವರನ್ನು letsempathize@gmail.com ಮೂಲಕ ಸಂಪರ್ಕಿಸಬಹುದು. ಇದು ದಿ ವೈರ್‌ನಲ್ಲಿ ಪ್ರಕಟವಾಗಿರುವ From Jantar Mantar to Jama Masjid, Gen Z’s Common Thread of Love ವರದಿಯ ಕನ್ನಡಾನುವಾದ

Related Articles

ಇತ್ತೀಚಿನ ಸುದ್ದಿಗಳು