Thursday, July 24, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು ಭಾಗ 3 : ವಿದ್ಯಾರ್ಥಿ ರಾಜಕಾರಣದಿಂದ ಸಂಸತ್ತಿನವರೆಗೆ, ಪಿಕೆವಿ ಶ್ರಮಿಸಿದ ಹಾದಿ ಇದು

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಮೂರನೇ ಲೇಖನ

ಕಮ್ಯುನಿಸ್ಟ್ ನಾಯಕ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್ ಸದಾ ಸರಳ ಜೀವನವನ್ನು ನಡೆಸುತ್ತಿದ್ದವರು. ಸಮಾಜದ ಎಲ್ಲಾ ವರ್ಗಗಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದ ಮನುಷ್ಯ. ತನ್ನ ಆರು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿಯೂ, ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿಸಿಪಿಐಸಂಸದೀಯ ಪಕ್ಷದ ನಾಯಕರಾಗಿದ್ದರು.

ಹಿರಿಯ ಸಂಸದ ಮತ್ತು ಕಮ್ಯುನಿಸ್ಟ್ ನಾಯಕ ಪಿಕೆವಿ ಎಂದೇ ಜನಪ್ರಿಯರಾಗಿರುವ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್, ಮಾರ್ಚ್ 2, 1926 ರಂದು ಕೋಟ್ಟಯಂ ಜಿಲ್ಲೆಯ ಕಿಡಂಗೂರಿನಲ್ಲಿ ಜನಿಸಿದರು. ಏಪ್ರಿಲ್ 1977 ರಿಂದ ಅಕ್ಟೋಬರ್ 1978 ರವರೆಗೆ ಕೆ. ಕರುಣಾಕರನ್ ಮತ್ತು ಎ.ಕೆ. ಆಂಟನಿ ಅವರುಗಳ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅದರ ನಂತರ ಅಕ್ಟೋಬರ್ 29, 1978 ರಂದು ಕೇರಳದ ಒಂಬತ್ತನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದರು. ಆದರೆ, ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಸರಕಾರ ರಚಿಸಲು ಅನುಕೂಲಕರ ವಾತಾವರಣ ನಿರ್ಮಿಸಲೆಂದು ಒಂದು ವರ್ಷದೊಳಗೆ, ಅಕ್ಟೋಬರ್‌ 7, 1979 ರಂದು, ತನ್ನ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪಿಕೆವಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ತಾನು ವಾಸವಿದ್ದ ಪೆರುಂಬಾವೂರಿಗೆ ಸರಕಾರಿ ಸಾರಿಗೆ ಬಸ್ಸಿನಲ್ಲಿ ಹೋದ ಘಟನೆಯನ್ನು ಅವರ ಸಹೋದ್ಯೋಗಿಗಳು ನೆನೆಯುತ್ತಾರೆ. ಅಂತಹ ಸರಳ ವ್ಯಕ್ತಿತ್ವ ಅವರದ್ದಾಗಿತ್ತು.

ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಹಿರಿಯ ಕಾನೂನು ತಜ್ಞರಾದ ನ್ಯಾಯಮೂರ್ತಿ ವಿ.ಆರ್.‌ ಕೃಷ್ಣ ಅಯ್ಯರ್‌ ಆಡಿದ ಮಾತುಗಳು ಹೀಗಿವೆ:
“ಅವರು ಒಬ್ಬ ನಾಯಕನಾಗಿದ್ದಾಗಲೂ ನನ್ನ ಅತ್ಯುತ್ತುಮ ಸ್ನೇಹಿತರಾಗಿದ್ದರು ಮತ್ತು ಸಾರ್ವಜನಿಕ ವ್ಯಕ್ತಿಯಾಗಿ ಅತ್ಯಂತ ವಿನಯವಂತ ಮನುಷ್ಯರಾಗಿದ್ದರು. ಅವರ ಹವ್ಯಾಸಗಳು, ಜೀವನಶೈಲಿ, ರಾಜಕಾರಣ ಮತ್ತು ಕ್ರಾಂತಿಕಾರಿ ಸಂಘರ್ಷಗಳು ಅವರ ಯಶಸ್ಸಿನ ಗುಟ್ಟುಗಳಾಗಿದ್ದವು. ಅವೇ ಅವರನ್ನು ನಾನು ಇಷ್ಟಪಡುವಂತೆ ಮಾಡಿದ ಸಂಗತಿಗಳು. ಸಿಪಿಐ ಪಕ್ಷವು ಅವರಲ್ಲಿ ಸಮಾಜವಾದಿಯೊಬ್ಬನ ಚಿಂತನೆಯನ್ನೂ, ರಾಷ್ಟ್ರೀಯ ಸಮಸ್ಯೆಗಳ ಬಗೆಗಿನ ಅರಿವನ್ನೂ, ದ್ವಂದ್ವಾತ್ಮಕ ಭೌತವಾದದ ಚಿಂತನೆಯನ್ನೂ ಕಂಡುಕೊಂಡಿತ್ತು. ನನಗೆ ನೆನಪಿರುವಂತೆ ಒಮ್ಮೆ ಬರ್ನಾರ್ಡ್‌ ಶಾ ಹೀಗೆ ಬರೆದಿದ್ದರು. “ಏನೂ ತಿಳಿಯದ ಒಬ್ಬ ವ್ಯಕ್ತಿ. ಆದರೆ ಆತ ತನಗೆ ಎಲ್ಲವೂ ತಿಳಿದಿದೆ ಎಂದು ಭಾವಿಸಿರುತ್ತಾನೆ. ಆತಸ್ಪಷ್ಟವಾಗಿಒಬ್ಬರಾಜಕಾರಣಿಯೇಆಗಿರುತ್ತಾನೆ.” ಭಾರತವೆಂಬೋ ಇಂಡಿಯಾದ ರಾಜಕಾರಣದಲ್ಲಿ ಈ ಮಾತು ಖಂಡಿತವಾಗಿಯೂ ಇಂದು ಕೂಡ ಪ್ರಸ್ತುತವೇ ಆಗಿದೆ. ಒಮ್ಮೆ ಚರ್ಚಿಲ್‌ ಕೂಡ “ಪುಂಡರು, ಫಟಿಂಗರು ಮತ್ತು ಮೈಗಳ್ಳರು” ಎಂದು ಕಟುವಾಗಿಯೇ ಜರೆದಿದ್ದರು. ನಕಲಿ ರಾಜಕಾರಣಿಗಳು ಮತ್ತು ಬಲಾಢ್ಯ ಸಂಸತ್‌ ಸದಸ್ಯರ ಬಗ್ಗೆ ಹೇಳಲು ನಾನು ಕೂಡ ಅವೇ ಕಟು ಮಾತುಗಳನ್ನು ಮತ್ತೆ ಉಲ್ಲೇಖಿಸುತ್ತೇನೆ. ಕೆಲವರು ಅಧಿಕಾರದಲ್ಲಿದ್ದರೆ, ಇನ್ನು ಕೆಲವರು ಅಧಿಕಾರಕ್ಕಾಗಿ ಹಾತೊರೆಯುತ್ತದ್ದಾರೆ. ಆದರೆ ಅದಕ್ಕೆಲ್ಲ ವಿರುದ್ಧವಾಗಿ ಪಿಕೆವಿ ತಮ್ಮ ಬದುಕಿನುದ್ದಕ್ಕೂ ಹೇಗೆ ಉದಾತ್ತರಾಗಿದ್ದರು ಎಂಬುದನ್ನು ಸಾಧ್ಯವಾದಷ್ಟು ಗಟ್ಟಿದನಿಯಲ್ಲಿ ಹೇಳುತ್ತೇನೆ. ಅವರು ಅದೆಂತಹ ಮಾದರಿ ರಾಜಕಾರಣಿಯಾಗಿದ್ದರು. ನಮ್ಮ ಮುಂದಿನ ಪೀಳಿಗೆ ಅನುಸರಿಸಬಹುದಾದ ಮಾದರಿಯಾಗಿದ್ದರು. ಅವರು ಕಮ್ಯುನಿಸಮ್ಮಿನ ಸಾರವನ್ನು ಅರಿತಿದ್ದರು. ಸುಖಾಸುಮ್ಮನೆ ಸದ್ದುಗದ್ದಲ ಮಾಡುವ ವ್ಯಕ್ತಿ ಆಗಿರಲೇ ಇಲ್ಲ.”
ಆಲುವಾದ ಯೂನಿಯನ್‌ ಕ್ರಿಶ್ಚಿಯನ್‌ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಅವರು ರಾಜಕೀಯಕ್ಕೆ ಪ್ರವೇಶಿಸಿದ್ದರು. ದೇಶವು ಆಗ ಸ್ವಾತಂತ್ರ್ಯ ಹೋರಾಟದ ಉತ್ತುಂಗದಲ್ಲಿತ್ತು. ಎಲ್ಲ ಕಡೆಯಲ್ಲಿಯೂ ವಿದ್ಯಾರ್ಥಿಗಳು ಹೋರಾಟದ ಮುಂಚೂಣಿಯಲ್ಲಿರುತ್ತಿದ್ದ ಕಾಲವದು.

ಪಿಕೆವಿ ಅವರಿದ್ದ ತಿರುವಾಂಕೂರು ಪ್ರಾಂತ್ಯವು ರಾಜಾಡಳಿತ ಪ್ರದೇಶವಾಗಿತ್ತು. ಅದು ಬ್ರಿಟಿಷ್‌ ವಸಾಹತುಶಾಹಿಯ ಭಾಗವಾಗಿರಲಿಲ್ಲ. ಹಾಗಾಗಿಯೇ, ರಾಷ್ಟ್ರೀಯ ಹೋರಾಟದಿಂದ ಪ್ರಚೋದಿತವಾಗಿದ್ದರೂ ತಿರುವಾಂಕೂರಿನ ಪ್ರಸಿದ್ಧ ಹೋರಾಟವು ರಾಜಪ್ರಭುತ್ವವನ್ನು ಪ್ರಜಾಪ್ರಭುತ್ವವಾಗಿ ಬದಲಾಯಿಸುವ ಗುರಿಯನ್ನು ಹೊಂದಿತ್ತು.

ಯುಸಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತೀವ್ರವಾದಿ ಹೋರಾಟ ಮತ್ತು ಸಂಘರ್ಷಕ್ಕೆ ಅದಾಗಲೇ ಹೆಸರುವಾಸಿಯಾಗಿದ್ದರು. ಆ ಕಾಲದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಹಳ ಮಂದಗಾಮಿ ಮತ್ತು ಶ್ರೀಮಂತರ ಪರ ಎಂದು ತನ್ನ ಸಂಗಾತಿಗಳು ಗುರುತಿಸಿದ್ದ ಕಾರಣದಿಂದಲೇ 1945 ರಲ್ಲಿ ಪಿಕೆವಿ ಕಮ್ಯುನಿಸ್ಟ್‌ ಪಕ್ಷವನ್ನು (ಸಿಪಿಐ) ಸೇರುತ್ತಾರೆ. ಅವರು ಯುಸಿಸಿಯ ಯುನಿಟ್‌ ಕಾರ್ಯದರ್ಶಿ ಮತ್ತು ತಿರುವಾಂಕೂರು ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗುತ್ತಾರೆ. ಪ್ರಜಾಪ್ರಭುತ್ವವನ್ನು ಶಕ್ತಿಶಾಲಿಯಾಗಿ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯವಾದಿ ವಿದ್ಯಾರ್ಥಿ ಸಂಘಟನೆಯಾಗಿತ್ತು ಅದು. 1948 ರಲ್ಲಿ ಅಖಿಲ ಕೇರಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿಯೂ ಪಿಕೆವಿ ಆಯ್ಕೆಯಾಗುತ್ತಾರೆ.

ಈ ಕಾಲದಲ್ಲಿಯೇ ಅವರ ವಿರುದ್ಧ ಮೊದಲ ಅರೆಸ್ಟ್ ವಾರೆಂಟ್‌ ಹೊರಡುವುದು. ಅದು ರಾಜನ ವಿರುದ್ಧ ಮಾಡಿದ್ದ ಭಾಷಣದ ಕಾರಣಕ್ಕಾಗಿತ್ತು. 1947‌ ರಲ್ಲಿ ದೇಶ ಸ್ವತಂತ್ರಗೊಂಡರೂ ಸಿಪಿಐ ಪಕ್ಷವು ಬಡವರ ಹಕ್ಕುಗಳು ಮತ್ತು ಸಮಾಜವಾದಿ ನಾಡಿಗಾಗಿ ಹೋರಾಟವನ್ನು ಮುಂದುವರಿಸಲು ತೀರ್ಮಾನಿಸುತ್ತದೆ.

1948 ರಲ್ಲಿ ಸರಕಾರದ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಕರೆ ನೀಡುವ ಕಲ್ಕತ್ತಾ ಪ್ರಬಂಧವನ್ನು ಸಿಪಿಐ ಕೈಗೆತ್ತಿಕೊಂಡಾಗ ಪಕ್ಷವನ್ನು ದೇಶದಲ್ಲಿ ನಿಷೇಧಿಸಲಾಗುತ್ತದೆ. ಆಗ ಭೂಗತರಾದ ನೂರಾರು ಕಮ್ಯುನಿಸ್ಟ್‌ ಕಾರ್ಯಕರ್ತರಲ್ಲಿ ಪಿಕೆವಿ ಕೂಡ ಒಬ್ಬರಾಗಿದ್ದರು. ಆ ಕಾಲದಲ್ಲಿ ಪಿಕೆವಿ ಮತ್ತು ಸಂಗಾತಿಗಳು ರಾಜ್ಯಾದ್ಯಂತ ಅಜ್ಞಾತರಾಗಿ ಓಡಾಡಿದ್ದರು. ಆಗ ಅವರ ಗುಪ್ತನಾಮ “ವಲ್ಸನ್”‌ ಎಂದಾಗಿತ್ತು. ಅದು ಅವರ ಇಷ್ಟದ ಸಿಹಿತಿಂಡಿಯ ಹೆಸರೂ ಆಗಿತ್ತು.

ಇದೇ ಕಾಲದಲ್ಲಿ ಅವರು ಕೆ.ಪಿ. ಲಕ್ಷ್ಮಿಕುಟ್ಟಿಯಮ್ಮ ಅವರನ್ನು ಪೆರಂಬಾವೂರಿನ ಕೊಪ್ಪಿಳ್ಳಿಲ್‌ ಮನೆಯಲ್ಲಿ ವಿವಾಹವಾಗುವುದು. ವಧು ತನ್ನ ಕಾಲೇಜು ಬದುಕಿನ ಸಹಪಾಠಿಯೂ, ಆತ್ಮೀಯ ಗೆಳೆಯನೂ ಆಗಿದ್ದ ಪಿ. ಗೋವಿಂದ ಪಿಳ್ಳೆಯ ಸಹೋದರಿಯಾಗಿದ್ದ ಕಾರಣ, ಈ ವಿವಾಹವನ್ನು ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರು ಸೇರಿ ನಡೆಸಿದ್ದರು. ಗೋವಿಂದ ಪಿಳ್ಳೆ ನಂತರದಲ್ಲಿ ಸಿಪಿಐ(ಎಂ) ಪಕ್ಷದ ಪ್ರಮುಖ ನಾಯಕ ಮತ್ತು ಬುದ್ಧಿಜೀವಿಯಾಗಿ ಹೊರ ಹೊಮ್ಮಿದ್ದರು. ದೇಶಾಭಿಮಾನಿ ಪತ್ರಿಕೆಯ ಸಂಪಾದಕರೂ ಆಗಿದ್ದವರು.

ಅವರ ಭೂಗತ ಬದುಕಿನ ಕಾಲ ಬಹಳ ಕೆಟ್ಟ ಕಾಲವಾಗಿತ್ತು. ದಮನಕಾರಿ ಸರಕಾರ ಅವರ ಮನೆಯ ಮೇಲೆ ದಾಳಿ ನಡೆಸುತ್ತಿತ್ತು. ತನ್ನ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಕಿರುಕುಳ ನೀಡುತ್ತಿತ್ತು. ಈ ಕಾಲಾವಧಿಯು ಅವರ ಬದುಕಿನ ಅತ್ಯಂತ ಯಾತನಾಮಯ ಕಾಲವಾಗಿತ್ತು. ಅವರ ಮೊದಲ ಮಗುವಿಗೆ ಇನ್ನೂ ಎರಡು ವರ್ಷಗಳು ತುಂಬುವ ಮೊದಲೇ ಮಾರಕ ಅಪಘಾತವೊಂದು ಘಟಿಸಿತ್ತು. ಸರಕಾರ ಅವರ ಸ್ವಾತಂತ್ರ್ಯವನ್ನು ಎಷ್ಟರ ಮಟ್ಟಿಗೆ ಕಸಿದುಕೊಂಡಿತ್ತೆಂದರೆ, ತನ್ನ ಮಗುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲೂ ಅವರಿಂದ ಸಾಧ್ಯವಾಗಿರಲಿಲ್ಲ.

ಪಿಕೆವಿ ಅವರ ಮೊದಲ ಬಂಧನ ನಡೆಯುವುದು 1950 ರ ದಶಕದ ಆರಂಭದಲ್ಲಿ. ವಿದ್ಯಾರ್ಥಿ ಹೋರಾಟದ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು. ತನ್ನ ವಿದ್ಯಾರ್ಥಿ ಸಂಗಾತಿಗಳು ಮತ್ತು ಕೆಲವು ಪುಡಿ ಅಪರಾಧಿಗಳ ಜೊತೆಗೆ ತಿಂಗಳುಗಳ ಕಾಲ ಅವರು ಲಾಕ್‌ಅಪ್‌ ಕೋಣೆಯಲ್ಲಿ ಕಳೆದಿದ್ದರು. ಅಲ್ಲಿರುವಾಗಲೇ ಮಗ ಜನಿಸಿದ ಸುದ್ದಿಯನ್ನು ಒಬ್ಬ ಸಂದೇಶವಾಹಕ ತಂದು ಮುಟ್ಟಿಸಿದ್ದ. ಇದನ್ನು ತಿಳಿದ ಒಬ್ಬ ಕರುಣಾಮಯಿ ಇನ್ಸ್‌ಪೆಕ್ಟರ್‌ ಅವರನ್ನು ಬಿಡುಗಡೆ ಮಾಡಿದ್ದ.

1951 ರಲ್ಲಿ ಸಿಪಿಐ ಮೇಲಿನ ನಿಷೇಧವನ್ನು ತೆರವುಗೊಳಿಸಲಾಗುತ್ತದೆ. ಹಾಗಾಗಿ ಅದು ಕಾನೂನಾತ್ಮಕ ಕೆಲಸಗಳನ್ನು ಮತ್ತೆ ಕೈಗೆತ್ತಿಕೊಳ್ಳುತ್ತದೆ. ಆ ಹೊತ್ತಿಗಾಗಲೇ ಪಿಕೆವಿ ರಾಜಕಾರಣದಲ್ಲಿ ಅದೆಷ್ಟು ಆಳವಾಗಿ ತೊಡಗಿಕೊಂಡಿದ್ದರೆಂದರೆ, ಅವರು ಆಲ್‌ ಕೇರಳ ಸ್ಟೂಡೆಂಟ್ಸ್‌ ಫೆಡರೇಷನ್‌ ಅಧ್ಯಕ್ಷರಾಗಿದ್ದರು. ಹಾಗಾಗಿಯೇ ಅವರಿಗೆ ತಿರುವನಂತಪುರದ ಸರಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ವ್ಯಾಸಂಗವನ್ನು ಮುಂದುವರಿಸಲೂ ಸಾಧ್ಯವಾಗುವುದಿಲ್ಲ.

ಅವರು ತಿರುವಾಂಕೂರು ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೇರಳ ಯೂತ್ ಫೆಡರೇಷನ್‌, ಆಲ್‌ ಇಂಡಿಯಾ ಸ್ಟೂಂಡೆಟ್ಸ್‌ ಫೆಡರೇಷನ್‌ (ಎಐಎಸ್‌ಎಫ್)‌ ಮತ್ತು ಆಲ್‌ ಇಂಡಿಯಾ ಯೂತ್ ಫೆಡರೇಷನ್‌ (ಎಐವೈಎಫ್)‌ ಸಂಘಟನೆಗಳ ಅಧ್ಯಕ್ಷರಾಗಿದ್ದರು. ವರ್ಲ್ಡ್‌ ಫೆಡರೇಷನ್‌ ಆಫ್‌ ಡೆಮಾಕ್ರಟಿಕ್‌ ಯೂತ್‌ ಸಂಘಟನೆಯ ಉಪಾಧ್ಯಕ್ಷರೂ ಆಗಿದ್ದರು.

ಪಿಕೆವಿ ಮತ್ತು ಖ್ಯಾತ ಚಲನಚಿತ್ರ ನಟ ಬಲರಾಜ್ ಸಹಾನಿ ಅವರುಗಳು ಆಲ್‌ ಇಂಡಿಯಾ ಯೂತ್ ಫೆಡರೇಷನ್‌ ಕಲ್ಪನೆಯ ಬೆನ್ನಿಗೆ ನಿಂತಿದ್ದವರು. ದೆಹಲಿಯ ಪ್ರಖರ ಯುವ ನಾಯಕ ಗುರು ರಾಧಾ ಕಿಶನ್, ದೆಹಲಿಯಲ್ಲಿ ಎಐವೈಎಫ್‌ನ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುವಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದರು. ಅವರ ಈ ಪ್ರಯತ್ನಗಳ ಪ್ರತಿಫಲವಾಗಿ ದೇಶದಾದ್ಯಂತದ ಹಲವಾರು ಯುವ ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವೀಕ್ಷಕರು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 1964 ರಲ್ಲಿ ಪಕ್ಷವು ಇಬ್ಭಾಗವಾದಾಗ ಪಿಕೆವಿ ಸಿಪಿಐನಲ್ಲಿಯೇ ಉಳಿದುಕೊಳ್ಳುತ್ತಾರೆ. 1982 ರಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ.

ಪಿಕೆವಿ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುವುದು 1957 ರಲ್ಲಿ ತಿರುವಲ್ಲಾದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ. ತಿರುವಲ್ಲಾ ಸಾಮಾನ್ಯವಾಗಿ ಕಮ್ಯುನಿಸ್ಟ್‌ ವಿರೋಧಿ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿದ್ದರೂ, ತನ್ನ ವಿದ್ಯಾರ್ಥಿ ಮತ್ತು ಯುವಜನ ನಾಯಕನೆಂಬ ಗುರುತು ಮತ್ತು ಅದರ ಪ್ರಭಾವದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿ ಸಂಸದರಾಗಿ ಚುನಾಯಿತರಾಗುತ್ತಾರೆ.

ಅದಾಗಲೇ ಅನುಭವಿ ಸಂಸದನಾಗಿದ್ದ ಪಿಕೆವಿ, 1962 ರಲ್ಲಿ ಮೂರನೇ ಲೋಕಸಭೆಗೆ ಅಂಬಲಪ್ಪುಳ ಮತ್ತು 1967 ರಲ್ಲಿ ನಾಲ್ಕನೇ ಲೋಕಸಭೆಗೆ ಪೀರುಮೇಡುವಿನಿಂದ ಆಯ್ಕೆಯಾಗುತ್ತಾರೆ. ಯುವ ಸಂಸದನಾಗಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಪಿಕೆವಿ ಯಶಸ್ವಿಯಾಗುತ್ತಾರೆ. ಮೊರಾರ್ಜಿ ದೇಸಾಯಿ ಅವರಂತಹ ಹಿರಿಯರು ಕೂಡ ಅತ್ಯುತ್ತಮ ಸಂಸದನೆಂದು ಕೊಂಡಾಡುವಷ್ಟರ ಮಟ್ಟಿಗೆ ಅವರು ಬೆಳೆಯುತ್ತಾರೆ.

1982 ರಿಂದ 2004 ರವರೆಗೆ ಪಿಕೆವಿ ಚುನಾವಣಾ ರಾಜಕಾರಣದಿಂದ ದೂರವುಳಿಯುತ್ತಾರೆ. ಈ ಕಾಲದಲ್ಲಿ ಅವರು ತಮ್ಮ ಶ್ರಮವನ್ನೆಲ್ಲ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದರು. ಈ ಕಾಲಾವಧಿಯಲ್ಲಿ ಅವರು ಬಹುತೇಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿದ್ದರು. ಒಬ್ಬ ಸಮರ್ಥ ಸಂಘಟಕನೆಂಬ ಖ್ಯಾತಿ ಪಡೆದಿದ್ದ ಪಿಕೆವಿ, ರಾಜಕೀಯ ನಾಯಕನಾಗುವುದರ ಜೊತೆಗೆ ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಸಂಕೀರ್ಣವಾಗುತ್ತಿರುವ ರಾಜಕೀಯ ಸನ್ನಿವೇಶದಲ್ಲಿ, ಪಕ್ಷದ ಕೇಂದ್ರದಲ್ಲಿ ಅವರ ಸಹಾಯ ಮತ್ತು ಮಾರ್ಗದರ್ಶನ ಲಭ್ಯವಾಗಿಸಲು 2004 ರ ಚುನಾವಣೆಯಲ್ಲಿ ತಿರುವನಂತಪುರದಿಂದ ಸ್ಪರ್ಧಿಸುವಂತೆ ಪಕ್ಷ ಅವರನ್ನು ಕೇಳಿಕೊಳ್ಳುತ್ತದೆ. ಆದರೆ ಅವರು ಮೊದಲಿಗೆ ಇದರಿಂದ ಹಿಮ್ಮೆಟ್ಟುತ್ತಾರೆ. 40 ಮತ್ತು 50 ರ ದಶಕದಲ್ಲಿ ಸಂಸತ್ತಿನಲ್ಲಿ ದೀರ್ಘ ಕಾಲ ಕೆಲಸ ಮಾಡಿದ್ದ ಅವರು, ಕಳೆದ ಎರಡು ದಶಕಗಳಿಂದ ಸಂಸದೀಯ ಬದುಕಿನಿಂದ ದೂರವುಳಿದಿದ್ದರು. ಹಾಗಾಗಿಯೇ ಮತ್ತೊಮ್ಮೆ ಅದನ್ನು ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ.

ಆದರೂ ಕೂಡ ಕೊನೆಗೆ ಪಕ್ಷದ ನಿರ್ಧಾರಕ್ಕೆ ತಲೆ ಬಾಗುತ್ತಾರೆ. ತನ್ನ ವೃದ್ಧಾಪ್ಯ, ಹೃದಯದ ಶಸ್ತ್ರಚಿಕಿತ್ಸೆ ಮತ್ತು ಕಾಡುತ್ತಿದ್ದ ಮಧುಮೇಹದ ಹೊರತಾಗಿಯೂ ಅವರು ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾರೆ. ಪಕ್ಷವು ಅವರಿಗೆ ತನ್ನ ವೈಯಕ್ತಿಕ ಆದ್ಯತೆಗಳಿಗಿಂತ ಬಹಳ ಮೇಲಿನದ್ದಾಗಿತ್ತು. 37 ವರ್ಷಗಳ ಅಂತರದ ನಂತರ, ತಿರುವನಂತಪುರದಿಂದ ಅವರು 14 ನೇ ಲೋಕಸಭೆಗೆ ಮತ್ತೆ ಚುನಾಯಿತರಾಗುತ್ತಾರೆ. ಅದೂ ಕೂಡ ಗಣನೀಯ ಬಹುಮತದೊಂದಿಗೆ.

ಇಂತಹ ಕಮ್ಯುನಿಸ್ಟ್ ನಾಯಕ ಪಡಯಾಟ್ಟು ಕೇಶವ ಪಿಳ್ಳೆ ವಾಸುದೇವನ್ ನಾಯರ್ ಸದಾ ಸರಳ ಜೀವನವನ್ನು ನಡೆಸುತ್ತಿದ್ದವರು. ಸಮಾಜದ ಎಲ್ಲಾ ವರ್ಗಗಳಿಗೂ ಸುಲಭವಾಗಿ ಲಭ್ಯವಾಗುತ್ತಿದ್ದ ಮನುಷ್ಯ. ತನ್ನ ಆರು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿಯೂ, ನಾಲ್ಕು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ಲೋಕಸಭೆಯಲ್ಲಿ ಸಿಪಿಐ ಸಂಸದೀಯ ಪಕ್ಷದ ನಾಯಕರಾಗಿದ್ದರು.

ಕೆಪಿಎಸಿ ತರದ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಗಳ ಚುಕ್ಕಾಣಿಯನ್ನೂ ಅವರು ಹಿಡಿದಿದ್ದರು. ಪ್ರತಿಷ್ಠಿತ ವಯಲಾರ್‌ ರಾಮವರ್ಮ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1954-57 ರಲ್ಲಿ ಜನಯುಗಂ ದಿನಪತ್ರಿಕೆಯ ಮತ್ತು ಸಿಪಿಐ ರಾಜ್ಯ ಘಟಕದ ನವಯುಗಂ ವಾರಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುವ ಮೂಲಕ ಪತ್ರಿಕೋದ್ಯಮದಲ್ಲೂ ತಮ್ಮ ಹೆಗ್ಗುರುತನ್ನು ಮೂಡಿಸಿದವರು. ಅದ್ಭುತ ಬರಹಗಾರನಾಗಿದ್ದ ಪಿಕೆವಿ ರಾಜಕೀಯ ಮತ್ತು ಜೀವನ ಚರಿತ್ರೆಗಳ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಜುಲೈ 12, 2005 ರಂದು ತಮ್ಮ 79 ನೇ ವಯಸ್ಸಿನಲ್ಲಿ ಪಿಕೆವಿ ನಿಧನರಾದರು. ಅವರ ಪತ್ನಿ ಲಕ್ಷ್ಮಿಕುಟ್ಟಿಯಮ್ಮ, ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page