ಹಿಂದಿನ ಸರ್ಕಾರದ ಯಡವಟ್ಟಿನ ಕಾರಣಕ್ಕೆ ಅವಧಿ ಮುಗಿದರೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯಲೇ ಇಲ್ಲ. ಇವೆಲ್ಲವನ್ನೂ ಸರಿಪಡಿಸಿ ಕೊನೆಯ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸಧ್ಯದಲ್ಲೇ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸಿದೆ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇನ್ನು ಕೇವಲ ಎರಡ್ಮೂರು ತಿಂಗಳಲ್ಲೇ ಚುನಾವಣೆ ನಡೆಯಲಿದೆ. ಸರ್ಕಾರ ಈಗಾಗಲೇ ಅದರ ತಯಾರಿಯಲ್ಲಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಗಿದ ಎಂಟೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೂ ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಈ ಹಿಂದಿನ ಸರ್ಕಾರ ಬಹಳಷ್ಟು ಗೊಂದಲ ಸೃಷ್ಟಿಸಿ, ಚುನಾವಣೆಯನ್ನೇ ನಡೆಸಲಿಲ್ಲ. ಅವರಿಗೆ ಚುನಾವಣೆ ನಡೆಸುವ ಇಚ್ಛೆಯೇ ಇರಲಿಲ್ಲ. ನಾವು ಅಧಿಕಾರ ವಿಕೇಂದ್ರೀಕರಣದ ಪರವಾಗಿರುವವರು. ಹಿಂದಿನ ಸರ್ಕಾರ ಮೀಸಲಾತಿಯಲ್ಲಿ ದೊಡ್ಡ ಸಮಸ್ಯೆ ಮಾಡಿದೆ. ಅದೆಲ್ಲವನ್ನು ಇದೀಗ ಸರಿಪಡಿಸಿ ಚುನಾವಣೆ ಮಾಡುತ್ತೇವೆ ಎಂದರು.