Wednesday, June 19, 2024

ಸತ್ಯ | ನ್ಯಾಯ |ಧರ್ಮ

ಗಂಡಾಳ್ವಿಕೆಯ ಸಮಾಜದಲ್ಲಿ ಹೆಣ್ಣಿನ ಚಾರಿತ್ರ್ಯವಧೆ

ವರ್ತಮಾನದಲ್ಲಿ ಜಾತಿ, ಧರ್ಮಗಳ ಸಂಘರ್ಷ ಒಂದೆಡೆಯಾದರೆ, ಹೆಣ್ಣನ್ನು ಇನ್ನಿಲ್ಲದಂತೆ ದ್ವೇಷಿಸಿ ದೂಷಿಸುವ ವ್ಯವಸ್ಥೆ ಇನ್ನೊಂದೆಡೆ ನಿರ್ಮಾಣವಾಗಿದೆ ಎನ್ನುವುದು ಯುವ ಪತ್ರಕರ್ತ ಆಕಾಶ್‌ ಆರ್‌ ಎಸ್‌ ಅವರ ಆತಂಕ. ಮಹಿಳಾಪರವಾಗಿ ಯೋಚಿಸುವ, ಚಿಂತಿಸುವ ಇಂತಹ ಯುವ ಮನಸುಗಳು ಹಿಂಸಾರಹಿತ ಸಮಾಜ ನಿರ್ಮಾಣದಲ್ಲಿ ಒಂದು ಭರವಸೆ

ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಅಸ್ತಿತ್ವವನ್ನು ಕೀಳು ಮಟ್ಟದಲ್ಲಿ ಕಾಣುವಂತ ಮನಸ್ಥಿತಿಗಳೇ ಹೆಚ್ಚಾಗಿದ್ದು, ಸಮಾಜದ ಕೇಂದ್ರ ಬಿಂದುವಾದಂತಹ ವ್ಯಕ್ತಿಗಳೇ ಇಂತಹ ಮನಸ್ಥಿತಿಯುಳ್ಳವರು ಎನ್ನುವುದು ದುರಂತದ ಸಂಗತಿಯಾಗಿದೆ. ಅಲ್ಲದೆ ಇದೆಲ್ಲದರ ನಡುವೆಯೂ ಕೂಡ ಎಲ್ಲೋ ಒಂದು ಕಡೆ ಪುರುಷ ಪ್ರಧಾನ ವ್ಯವಸ್ಥೆಯು ಗಟ್ಟಿಯಾಗುತ್ತಿದೆ ಎಂದರೂ ತಪ್ಪಾಗಲಾರದು. 

ಭಾರತ ದೇಶಕ್ಕೆ ಸಂವಿಧಾನ ಬಂದು ೭೨ ವರ್ಷಗಳು ಕಳೆದಿವೆ. ಸಂವಿಧಾನದಿಂದ ಸಮಾಜದಲ್ಲಿ ಅನೇಕ ಬದಲಾವಣೆಗಳು ಕೂಡ ಆಗಿವೆ. ಆದರೆ ಬದಲಾಗದ ಅದೆಷ್ಟೋ ಸಮಸ್ಯೆಗಳು ಇನ್ನೂ ಕೂಡ ನಮ್ಮ ನಡುವೆಯೇ ಬೀಡು ಬಿಟ್ಟಿರುವುದು ಆತಂಕದ ಸಂಗತಿ. ವರ್ತಮಾನದಲ್ಲಿ ಜಾತಿ, ಧರ್ಮಗಳ ಸಂಘರ್ಷ ಒಂದೆಡೆಯಾದರೆ, ಹೆಣ್ಣನ್ನು ಇನ್ನಿಲ್ಲದಂತೆ ದ್ವೇಷಿಸಿ ದೂಷಿಸುವ ವ್ಯವಸ್ಥೆ ಇನ್ನೊಂದೆಡೆ ಆಳವಾಗಿ ಬೇರೂರಿದೆ. ಅನಾದಿ ಕಾಲದಿಂದಲೂ ಹೆಣ್ಣನ್ನು ಇಂತಹ ಒಂದು ಚೌಕಟ್ಟಿನಲ್ಲಿ ಕೂಡಿ ಹಾಕಿ ಅವಳನ್ನು ಮನಸೋ ಇಚ್ಛೆ ನಿಂದಿಸುವಂತ ವಾತಾವರಣ ನಿರ್ಮಾಣವಾಗಿದೆ. ಮನುವಿನ ಮನುಸ್ಮೃತಿಯಿಂದ ಪ್ರೇರಿತಗೊಂಡ ಮನಸುಗಳು ಇಂತಹ ಧೋರಣೆಗಳನ್ನು ಬೆಳೆಸಿಕೊಳ್ಳುವಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಪುಷ್ಟಿ ಕೊಡುತ್ತಾ ಸಾಗಿದ್ದು, ಹೆಣ್ಣನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಶೋಷಣೆ ಮಾಡುತ್ತಿವೆ.

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” (ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ)ಎನ್ನುವ ಮಾತುಗಳು ಪ್ರಸ್ತುತ ಸಮಾಜಲ್ಲಿ ಬರೀ ಡಂಭಾಚಾರವಾಗಿದೆ. ಹೆಣ್ಣು ಯಾವಾಗಲು ಗುಲಾಮಳಾಗಿರಬೇಕು ಎಂದು ಸದಾ ಹಂಬಲಿಸುವ ವ್ಯವಸ್ಥೆ ಒಂದಲ್ಲ ಒಂದು ರೀತಿಯಲ್ಲಿ ಅವಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಲೆ ಬಂದಿದೆ. ಹೆಣ್ಣಿನ ಹುಟ್ಟಿನಿಂದ ಹಿಡಿದು ಆಕೆ ಮಣ್ಣಿಗೆ ಸೇರುವವರೆಗೂ ಅವಳನ್ನು ಈ ವ್ಯವಸ್ಥೆ ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಅವಳ ಅಸ್ತಿತ್ವವನ್ನೇ  ಅಣುಕಿಸುವಂತಿದೆ.

ಹೆಣ್ಣು ಈ ಜಗದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣನ್ನು ಅತ್ಯಾಚಾರ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು, ಅವಳನ್ನು ದೈವ ಮನೋಭಾವನೆಯಿಂದ ಕಾಣಬೇಕು ಎನ್ನುವ ಮಾತುಗಳು ಬರೀ ನಾಲಿಗೆಗಳ ನಡುವೆ ಮಾತ್ರ ಹೊರಳಾಡುವ ಪದವಾಗಿದ್ದು, ಅದನ್ನು ಪಾಲಿಸುವಲ್ಲಿ ಮಾತ್ರ ಈ ವ್ಯವಸ್ಥೆ ಅಣುಕು ಪ್ರದರ್ಶನ ತೋರುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗಷ್ಟೇ ಪ್ರಜಾವಾಣಿಯಲ್ಲಿ ಪ್ರಕಟವಾದ ಮೈಸೂರಿನ ಗಣಪತಿ ಆಶ್ರಮದ ಸಚ್ಚಿದಾನಂದ ಸ್ವಾಮಿಗಳು ಹೆಣ್ಣು ಗಂಡಿನ ಗುಲಾಮಳಾಗಿದ್ದರೆ ಮಾತ್ರ ಪತಿವ್ರತೆಯಾಗಿರಲು ಸಾಧ್ಯ ಎಂದು ನೇರವಾಗಿ ಹೇಳುವ ಮೂಲಕ ಪುರುಷ ಪ್ರಧಾನ ವ್ಯವಸ್ಥೆ ಇನ್ನೂ ಹೆಚ್ಚು ಕ್ರಿಯಾಶೀಲವಾಗಿದೆ ಎಂಬ ಸೂಚನೆ ನೀಡಿದ್ದಾರೆ. ನಂತರದಲ್ಲಿ ಕ್ಷಮೆಯಾಚಿಸಿದರೇನೋ ಸರಿ. ಆದರೆ ಹೆಣ್ಣನ್ನು ಹೀಗೆ ಸರಾಗವಾಗಿ ಜರಿಯುವ ಮನಸ್ಥಿತಿ ಇದೆಯೆಲ್ಲಾ ಅದು ಹೆಣ್ಣು ಕುಲಕ್ಕೆ ಮತ್ತು ಸಮಾಜಕ್ಕೆ ಯಾವತ್ತಿದ್ದರೂ ಅಪಾಯವೇ.

ಗಂಡಾಳ್ವಿಕೆ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆಗಳು ಹಾಗೂ ಹೆಣ್ಣನ್ನು ತುಚ್ಛವಾಗಿ ನಿಂದಿಸುವ ಪದಬಳಕೆಗಳು ಹೊಸದೇನಲ್ಲ. ಕಳೆದ ಒಂದು ವರ್ಷದ ಹಿಂದೆ ಗುಜರಾತಿನ ಬುಜ್‌ ನಲ್ಲಿರುವ ಸ್ವಾಮಿನಾರಾಯಣ ಮಂದಿರದ ಕೃಷ್ಣಸ್ವರೂಪ್ ದಾಸ್‌ಜೀ ತಮ್ಮ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ “ಮುಟ್ಟಾದ ಹೆಣ್ಣು ಅಡುಗೆ ಮಾಡಿದರೆ ಅವಳು ಮುಂದಿನ ಜನ್ಮದಲ್ಲಿ ವೇಶ್ಯೆಯಾಗಿ ಹುಟ್ಟುತ್ತಾಳೆ” ಎಂದಿದ್ದರು. ಪತಂಜಲಿಯ ಬಾಬಾ ರಾಮದೇವ್ ಇತ್ತೀಚೆಗೆ “ಹೆಣ್ಣು ಬಟ್ಟೆ ಹಾಕದೆ ಇದ್ದರು ಕೂಡ ಚೆನ್ನಾಗಿ ಕಾಣುತ್ತಾಳೆ” ಎಂದಿದ್ದಾರೆ. ಇನ್ನು ಸಿನಿಮಾ ರಂಗದಲ್ಲಿ ಮುಗಿಲೆತ್ತರಕ್ಕೆ ಬೆಳೆಯಲು ಹಾತೊರೆಯುವ ನಟಿಯನ್ನು  ಟ್ರೋಲ್‌ ಮಾಡುವುದು  ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಕೂಡ ಅವರನ್ನು ನಿಂದಿಸುವುದು ಇವೆಲ್ಲವನ್ನು ಗಮನಿಸಿದರೆ ಪುರುಷ ಪ್ರಧಾನ ವ್ಯವಸ್ಥೆ ಹೆಣ್ಣನ್ನು ಭೋಗದ ವಸ್ತುವೆಂಬಂತೆ ಬಿಂಬಿಸುತ್ತಿರುವುದು ಎದ್ದು ಕಾಣುತ್ತಿದೆ. ಇಲ್ಲಿ ಒಳಗಿನ ಮನಸ್ಥಿತಿ ಹೆಣ್ಣಿನ ಚಾರಿತ್ರ್ಯ ವಧೆಯೇ ಆಗಿರುತ್ತದೆ. 

ಹೆಣ್ಣು ಸಮಾಜದಲ್ಲಿ ದೈಹಿಕವಾಗಿ  ಶೋಷಣೆಗೆ ಒಳಗಾಗುವುದಕ್ಕಿಂತ ಮಾನಸಿಕವಾಗಿ ಶೋಷಣೆಗೆ ಒಳಗಾಗಿರುವುದೇ ಹೆಚ್ಚಾಗಿದೆ. ಅವಳನ್ನು ಒಂದಲ್ಲ ಒಂದು ಕಾರಣದಿಂದ ಈ ವ್ಯವಸ್ಥೆ ಹಂಗಿಸುತ್ತಲೇ ಬಂದಿದೆ. ಅವಳು ಈ ಸಮಾಜಕ್ಕೆ ವರವೆಂದು ಕಾಣುವುದಕ್ಕಿಂತ ಶಾಪವೆಂದು ಗ್ರಹಿಸುವ ಮನುಷ್ಯರೇ ಹೆಚ್ಚಾಗಿದ್ದಾರೆ. ವಯಸ್ಸಿಗೆ ಬಂದರೆ ಅವಳನ್ನು ಪುರುಷನ ಸಮಾನವಾಗಿ ಕುಳಿತುಕೊಳ್ಳಲೋ ಅಥವಾ ತಲೆಎತ್ತಿ ನಡೆಯಲೋ ಬಿಡದಂತ ವಾತಾವರಣವನ್ನು ಕೂಡ ನಿರ್ಮಿಸಿದ್ದಾರೆ. ಗಂಡನ್ನು ಪ್ರಶ್ನಿಸದೇ ನಿತ್ಯವೂ ಹೆಣ್ಣನ್ನು ಮಾತ್ರ ಪ್ರಶ್ನಿಸುವ ಈ ವ್ಯವಸ್ಥೆ ಅವಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗುತ್ತಿದೆ“. ಅವನು ಗಂಡು ಏನಾದರೂ ಮಾಡಲಿ ಬಿಡು, ನೀನು ಹೆಣ್ಣು ಮರ್ಯಾದೆಯಿಂದ ಇರಬೇಕು”, “ಅಣ್ಣ, ಅಪ್ಪನ ಜೊತೆ ಸರಿಸಮಾನವಾಗಿ ಕೂರ ಬಾರದು”, “ಸಾಕು ನೀನು ಓದಿದ್ದು, ಎಷ್ಟೇ ಓದಿದರು ಗಂಡನ ಮನೆಯಲ್ಲಿ ಮುಸುರೆ ತಿಕ್ಕಬೇಕು” ಎಂದೆಲ್ಲ ಹೆಣ್ಣು ಗಂಡಿನ ನಡುವೆ ತಾರತಮ್ಯ ಮಾಡುತ್ತದೆ. ಅವಳು ಮುಟ್ಟಾದರೆ ಸಾಕು ಅದನ್ನು ಸಂಪ್ರದಾಯದ ಕಟ್ಟಳೆಯೊಳಗೆ ಹಾಕಿ ನೀನು ಅದನ್ನು ಮುಟ್ಟಬೇಡ ಇದನ್ನು ಮುಟ್ಟಬೇಡ ಮೈಲಿಗೆ ಆಗುತ್ತದೆ  ಎನ್ನುತ್ತಾ ಅವಳನ್ನು ಅಸ್ಪೃಶ್ಯಳನ್ನಾಗಿ ನೋಡುತ್ತದೆ. ಹೆಣ್ಣಿಗೆ ಮುಟ್ಟು ಎನ್ನುವುದು ದೇವರ ವರದಾನ, ಅದು ದೇಹದ ಸಹಜ ಕ್ರಿಯೆ ಎಂಬುದನ್ನು ತಿಳಿಯದೆ ಮಾನವ ಕುಲ ಅವಳನ್ನು ಮಡಿ ಮೈಲಿಗೆ ಎಂದು ದೂರ ಇಡುವುದು ಹೀನ ಕೃತ್ಯವಾಗಿದೆ. ಆದರೆ ವಿಪರ್ಯಾಸವೆಂದರೆ ಮಹಿಳೆಯರನ್ನು ನಿಂದಿಸಿದರೆ ಅವರ ಪರವಾಗಿ ಮಹಿಳಾ ವೇದಿಕೆಗಳಾಗಲಿ, ಎಡ-ಬಲ ಪಂಥಗಳಾಗಲಿ ಬೀದಿಗಿಳಿದಿದ್ದು ಅಥವಾ ಪ್ರಶ್ನಿಸಿದ್ದು ಮಾತ್ರ ವಿರಳ. 

ಬಾಬಾಸಾಹೇಬ ಅವರು ಕಾನೂನು ಸಚಿವರಾದ ಅವಧಿಯಲ್ಲಿ ಹೆಣ್ಣಿಗೆ ಗಂಡಿನ ಸರಿಸಮಾನವಾಗಿ ಅಧಿಕಾರ ಸಿಗಬೇಕೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.  ಆದರೆ ಈಗ ಅವರ ಸಮಾನತೆಯ ಕನಸನ್ನು ಹೊಸಕಿ ಹಾಕುವಲ್ಲಿ ಅನೇಕ ಹುನ್ನಾರಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು.  ವೈದಿಕ ಪರಂಪರೆಯ ಆಚರಣೆಗಳು ಹೆಣ್ಣನ್ನು ಶೋಷಣೆಯ ನೆರಳಲ್ಲೇ ಬದುಕುವಂತೆ ಮಾಡುತ್ತಿವೆ ಎನ್ನುವುದು ಹೆಣ್ಣು ಗಂಡು ಸಮಾನತೆಯಲ್ಲಿ ನಂಬಿಕೆ ಇಟ್ಟ ಎಲ್ಲರ ಆತಂಕವಾಗಿದೆ. ಹೆಣ್ಣು ಗಂಡಿನ ಜೀವನದುದ್ದಕ್ಕೂ  ಗೆಳತಿಯಾಗಿ, ಪ್ರೇಯಸಿಯಾಗಿ, ಮಡದಿಯಾಗಿ, ತಾಯಿಯಾಗಿ ಸಾಕಿ ಸಲಹುವವಳು. ಗಂಡ ಹೆಂಡತಿಯನ್ನು ಗುಲಾಮಳಾಗಿ ಕಾಣದೆ, ಗೆಳತಿಯಾಗಿ ಸ್ವೀಕರಿಸಬೇಕು ಎಂದಿದ್ದಾರೆ ಬಾಬಾಸಾಹೇಬರು. ಆದರೆ ಇದನ್ನೆಲ್ಲ ಅರಿಯುವಲ್ಲಿ ಈ ವ್ಯವಸ್ಥೆ ಸೋತಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಆಕಾಶ್ ಆರ್ ಎಸ್

ಪತ್ರಕರ್ತರು.

Related Articles

ಇತ್ತೀಚಿನ ಸುದ್ದಿಗಳು