Friday, June 14, 2024

ಸತ್ಯ | ನ್ಯಾಯ |ಧರ್ಮ

ಗಾಂಧಿ ಮತ್ತು ಸನಾತನ ಧರ್ಮ:

ಗಾಂಧಿ ಜಯಂತಿ ವಿಶೇಷ

ಗಾಂಧಿಯವರ ಪ್ರಕಾರ, ಹಿಂದೂ ಧರ್ಮದ ಮೂಲ ತತ್ವಗಳೆಂದರೆ, – ಸಹಿಷ್ಣುತೆ, ಒಳಗೊಳ್ಳುವಿಕೆ, ಕರುಣೆ, ಶಾಂತಿಯುತ ಸಹಬಾಳ್ವೆ, ಸತ್ಯ, ಅಹಿಂಸೆ, ಸೇವೆ, ಕ್ಷಮೆ, ಒಳ್ಳೆಯ ನಡತೆ, ಸೌಮ್ಯತೆ, ಸಂಯಮ, ಕಳ್ಳತನ ಮಾಡದಿರುವುದು, ಸ್ವಾಧೀನಪಡಿಸಿಕೊಳ್ಳದಿರುವುದು, ತೃಪ್ತಿ, ಸಹನೆ ಮತ್ತು ತ್ಯಾಗ ಮನೋಭಾವನೆ. ಇವತ್ತು ಆಕ್ರಮಣಕಾರಿಯಾಗಿ ಕಾಣುತ್ತಿರುವ ಹಿಂದುತ್ವವಾದಿಗಳಲ್ಲಿ ಈ ಗುಣಗಳು ಕಂಡು ಬಂದರೆ ಅವರಿಗೆ ಗಾಂಧಿಯವರ ಹೆಸರು ಹೇಳುವ ಅಧಿಕಾರವಾದರೂ ಬರುತ್ತದೆ – ಪುರುಷೋತ್ತಮ ಬಿಳಿಮಲೆ

ಬಿಜೆಪಿಯ ಹಲವರು ಈಗ ʼಮಹಾತ್ಮಾ ಗಾಂಧೀಜಿಯ ಸನಾತನ ಧರ್ಮʼ ಎಂಬ ಹೊಸ ರಾಗ ಸುರು ಮಾಡಿದ್ದಾರೆ. ಸನಾತನ ಧರ್ಮವನ್ನು ಗಾಂಧಿಯ ಹೆಸರು ಹೇಳಿ ರಾಜಕೀಯಗೊಳಿಸುವ ಹೊಸ ಹುನ್ನಾರವಿದು. ತಮಗೇ ತಮ್ಮದೇ ಆದ ನಾಯಕರಿಲ್ಲದೇ ಇದ್ದಾಗ ಅಥವಾ ಇದ್ದವರು ಸಾಕಾಗೋದಿಲ್ಲಾಂತ ಮನವರಿಕೆ ಆದಾಗ ಹೀಗೆ ಮಾಡುವುದು ಸಹಜ. ಬಿಜೆಪಿ / ಆರ್‌ ಎಸ್‌ ಎಸ್‌ ನವರಿಗೆ ಇದ್ದಕ್ಕಿದ್ದಂತೆ ಭಗತ್‌ ಸಿಂಗ್‌, ಅಂಬೇಡ್ಕರ್‌ ಮೊದಲಾದವರ ಅಗತ್ಯ ಯಾಕೆ ಬೀಳುತ್ತದೋ ಗೊತ್ತಾಗುತ್ತಿಲ್ಲ. ಸಂಘಟನೆಯೊಳಗೆ ಗೋಳ್ವಾಲ್ಕರ್‌, ಹೆಡಗೇವಾರ್‌ ಮೊದಲಾದವರನ್ನು ಇರಿಸಿಕೊಂಡು ಹೊರಗಡೆಗೆ ಅಂಬೇಡ್ಕರ್‌, ಮಹಾತ್ಮಾ ಗಾಂಧಿ ಮೊದಲಾದವರ ಹೆಸರು ಹೇಳುವುದು ಕೇವಲ ರಾಜಕೀಯ ಲಾಭಕ್ಕೆಂಬುವುದನ್ನು ಜನರೀಗ ಅರ್ಥಮಾಡಿಕೊಂಡಿದ್ದಾರೆ. ಈ ಸಾಲಿನಲ್ಲಿ ಅವರಿಗೆ ನುಂಗಲಾರದ ತುತ್ತಾಗಿರೋದು ಗಾಂಧೀಜಿ. ಆದರೆ ಗಾಂಧೀಜಿಯನ್ನು ಬಲಪಂಥೀಯರಿಗೆ ಜೀರ್ಣಿಸಿಕೊಳ್ಳುವುದು ಕಷ್ಟ ಅಥವಾ ಅಸಾಧ್ಯ.

ಗಾಂಧಿಯವರು ʼಸನಾತನ ಧರ್ಮವೇʼ ಹಿಂದೂ ಧರ್ಮಕ್ಕೆ ಯೋಗ್ಯವಾದ ಹೆಸರು ಎಂಬುದನ್ನು ಒಪ್ಪಿಕೊಂಡಿದ್ದರು. ಸನಾತನ ಧರ್ಮವನ್ನು ʼ ಹಿಂದೂ ಧರ್ಮʼ ಎಂದೂ ಅವರು ಕೆಲವು ಕಡೆಗಳಲ್ಲಿ ಕರೆದದ್ದುಂಟು. ಆದರೆ ಹಿಂದೂ ಧರ್ಮವನ್ನು ಅವರು ʼವೈದಿಕ ಧರ್ಮʼ ಎಂದೋ ʼಬ್ರಾಹ್ಮಣ ಧರ್ಮʼ ಎಂದೋ ಎಂದೂ ಕರೆಯಲಿಲ್ಲ. ಹಿಂದು ಧರ್ಮವು ಸತ್ಯ, ಅಹಿಂಸೆ ( ನಮ್ಮಲ್ಲಿ ಅಹಿಂಸೆ ಅಂತ ಏನೂ ಇರಲಿಲ್ಲ, ಅದಕ್ಕೆ ನಾನು ಅದನ್ನು ಹೊಸದಾಗಿ ಸೇರಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಅವರು ಒಮ್ಮೆ ನಗುತ್ತಾ ಹೇಳಿದ್ದುಂಟು) ಮೊದಲಾದ ಮೌಲ್ಯಗಳ ಮೇಲೆ ನಿಂತ ನೈತಿಕ ಧರ್ಮವೇ ಹೊರತು ಬರೇ ಕರ್ಮಕಾಂಡ ಕ್ರಿಯೆಗಳ ಮೇಲಾಗಲೀ ಆತ್ಮ ಚಿಂತನೆಯ ಕ್ರಿಯಾರಾಹಿತ್ಯದ ಮೇಲಾಗಲೀ ನಿಂತಿಲ್ಲ ಎಂಬುದನ್ನು ಅವರು ಮತ್ತೆ ಮತ್ತೆ ಹೇಳಿದ್ದಾರೆ. ʼ ಸನಾತನ ಧರ್ಮʼ ಎಂದು ಕರೆಯುವಾಗಲೂ ಅದು ಬರೇ ಸಂಸ್ಕೃತ ಗ್ರಂಥಗಳ ಮೇಲೆ ಆಧಾರಿತವಾಗಿರದೆ ಆನಂತರದ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಬಂದ ಗ್ರಂಥಗಳ ಮತ್ತು ಹಾಡುಗಳ ಆಧಾರದ ಮೇಲೆಯೂ ಅದು ಬೆಳೆಯಿತು ಎಂದು ಅವರು ನಂಬಿದ್ದರು. ಗಾಂಧೀಜಿಗೆ ತಮಿಳು ಭಾಷೆಯ ಮೇಲಿದ್ದ ಪ್ರೀತಿ ಮತ್ತು ಗೌರವ ಬಹಳ ವಿಶೇಷವಾಗಿತ್ತು ಮತ್ತು ಅದು ದಕ್ಷಿಣ ಆಫ್ರಿಕಾದಿಂದಲೇ ಬೆಳೆದು ಬಂದಿತ್ತು. ಇದು ೧೯ ಮತ್ತು ೨೦ನೇ ಶತಮಾನದುದ್ದಕ್ಕೂ ಕಾಣಿಸಿಕೊಂಡು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿದ್ದ ಸೈದ್ಧಾಂತಿಕ ನೆಲೆಯನ್ನು ರೂಪಿಸಿದ ಉದೀಯಮಾನ ವಿದ್ಯಾವಂತ ವರ್ಗದ ಚಿಂತನಾ ಕ್ರಮಗಳಿಗೆ ಅನುಗುಣವಾಗಿತ್ತು. ರಾಮಕೃಷ್ಣ ಪರಮಹಂಸ, ರಾಜಾ ರಾಮ್ ಮೋಹನ್ ರಾಯ್, ವಿವೇಕಾನಂದ, ರಾಜಾರಾಮ್‌ ಮೋಹನ್‌ ರಾಯ್‌,  ದಯಾನಂದ ಸರಸ್ವತಿ, ಈಶ್ವರಚಂದ್ರ ವಿದ್ಯಾಸಾಗರ್‌,  ರವೀಂದ್ರನಾಥ್‌ ಠಾಗೋರ್‌, ಕುವೆಂಪು ಮೊದಲಾದವರು ಈ ಗುಂಪಿನಲ್ಲಿ ಸೇರುವ ಇತರರರು. ಇವರೆಲ್ಲ ಕ್ರಾಂತಿಕಾರಿಗಳೇನೂ ಆಗಿರಲಿಲ್ಲ, ಬದಲು ಪರಿಷ್ಕರಣವಾದಿಗಳಾಗಿದ್ದರು. ಹಿಂದೂ ಧರ್ಮವನ್ನು ಆಧುನಿಕ ಕಾಲಕ್ಕೆ ಒಗ್ಗುವಂತೆ ಸುಧಾರಣೆ ಮಾಡಿ ಒಪ್ಪಿಕೊಳ್ಳಬೇಕೆಂದು ಅವರೆಲ್ಲರೂ ಭಾವಿಸಿದ್ದರು. ಇದನ್ನು ಆ ಕಾಲದ ಲೇಖಕರೂ ಸೇರಿದಂತೆ ಬಹುತೇಕ ಭಾರತೀಯರು ಒಪ್ಪಿಕೊಂಡಿದ್ದರು.

ಗಾಂಧೀಜಿಗೆ ತನ್ನನ್ನು ಹಿಂದೂ ಎಂದು ಕರೆಯಿಸಿಕೊಳ್ಳಲು ಸಂಕೋಚ ಇರಲಿಲ್ಲ. ಆದರೆ ಸನಾತನ ಧರ್ಮದ ಅನೇಕ ಮಾನದಂಡಗಳನ್ನು ಅವರು ಒಪ್ಪಿರಲಿಲ್ಲ. ಜಾತಿ ವೈಷಮ್ಯ ಮತ್ತು ಅಸ್ಪೃಶ್ಯತೆಯನ್ನು ಅವರು ಕಟುವಾಗಿಯೇ ಠೀಕಿಸಿದ್ದರು. ಗೋವಿನ ಬಗ್ಗೆ ಗಾಂಧೀಜಿಗೆ ಅಪಾರ ಪ್ರೀತಿಯಿತ್ತು. ಆದರೆ ಗೋಪೂಜೆಯೇ ಹಿಂದೂ ಧರ್ಮವೆಂದು ಅವರೆಂದೂ ಹೇಳಲಿಲ್ಲ. ಧರ್ಮಗ್ರಂಥಗಳ ಸ್ಥಗಿತ ಹೇಳಿಕೆಗಳನ್ನು ವೈಚಾರಿಕ ನೆಲೆಗಳಿಂದ ವಿಶ್ಲೇಷಿಸಬೇಕೆಂದು ಅವರು ಹೇಳುತ್ತಿದ್ದರು, ಆದರೆ ಧರ್ಮಗ್ರಂಥಗಳೇ ಅಪ್ರಸ್ತುತ ಎಂದು ಅವರು ಹೇಳಲಿಲ್ಲ. ತರ್ಕ ಮತ್ತು ವಿಶ್ವಾಸಗಳ ಮೇಲೆ ನಾಡನ್ನು ಗ್ರಹಿಸಿದವರು ಗಾಂಧಿ. ಅವರದೇ ಮಾತುಗಳು- ʼ ಇಂದಿನ ವೈಚಾರಿಕ ಯುಗದಲ್ಲಿ ಪ್ರತಿಯೊಂದು ಧರ್ಮ ಸೂತ್ರವೂ ತರ್ಕದ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ನ್ಯಾಯದ ಮಾನದಂಡಕ್ಕೆ ಒಳಪಡಬೇಕು. ಇಲ್ಲದಿದ್ದರೆ ಅದಕ್ಕೆ ವಿಶ್ವಮಾನ್ಯತೆ ದೊರೆಯಲಾರದು. ಯಾವುದೇ ತಪ್ಪುಗಳು ಧರ್ಮಗ್ರಂಥಗಳ ಆಧಾರದ ಮೇಲೆ ಸಮರ್ಥನೆಗೆ ಯೋಗ್ಯ ಆಗಬಾರದುʼ ( ಯಂಗ್‌ ಇಂಡಿಯಾ, ಫೆಬ್ರವರಿ ೨೬, ೧೯೨೯). ಒಂದು ವಿಷಯದ ಬಗ್ಗೆ ಒಬ್ಬ ಹೇಳಿದ ಸತ್ಯವು ಎಲ್ಲ ಕಾಲಕ್ಕೂ ಎಲ್ಲ ವಿಷಯಗಳಿಗೂ ಅನ್ವಯವಾಗಲಾರದು ಎಂಬ ಗಾಂಧೀಜಿಯ ನಂಬಿಕೆ ಅವರನ್ನು ಸಾಂಪ್ರದಾಯಕ ಸನಾತನಿಗಳಿಂದ ಬೇರೆಯಾಗಿಸುತ್ತದೆ. 

ಮೂಢನಂಬಿಕೆಗಳು ಮತ್ತು ಆಚರಣೆಗಳಲ್ಲಿ ಮುಳುಗಿರುವ ವಿಶೇಷ ಧಾರ್ಮಿಕ ರಾಷ್ಟ್ರೀಯತೆಯು ಸಾಮಾನ್ಯವಾಗಿ ಮಾನವ ಸಮಾಜಕ್ಕೆ ಮತ್ತು ನಿರ್ದಿಷ್ಟವಾಗಿ ಭಾರತೀಯ ಸಮಾಜಕ್ಕೆ ಹಾನಿಕಾರಕವಾಗಿದೆ ಎಂಬ ವಿಷಯದಲ್ಲಿ ಮಹಾತ್ಮಾ ಗಾಂಧಿಗೆ ಯಾವ ಸಂಶಯವೂ ಇರಲಿಲ್ಲ. ಹೀಗಾಗಿಯೇ ಅವರು ಮತ್ತು ನೆಹರೂ ೧೯೩೦ರ ದಶಕದಲ್ಲಿ ಹಿಂದೂ ಮಹಾ ಸಭಾ ಮುಂದಿಟ್ಟ ಬೇಡಿಕೆಗಳನ್ನು ತಿರಸ್ಕರಿಸಿದರು. ದೇವ ಪ್ರಭುತ್ವವು ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವುದನ್ನು ಅವರಿಬ್ಬರೂ ಒಪ್ಪಿಕೊಂಡಿರಲಿಲ್ಲ.

 ಈಗ ಇದ್ದಕ್ಕಿದ್ದಂತೆ ಧರ್ಮದ ವಿಷಯ ಮುನ್ನೆಲೆಗೆ ಬಂದಿದೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಹೀಗೆಂದೂ ಧಾರ್ಮಿಕ ಪುನರುತ್ಥಾನ ನಡೆದಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ಮೌಲ್ಯಗಳನ್ನು ಕಲಿಸಲಾಯಿತು ಮತ್ತು ಮೂಢನಂಬಿಕೆಗಳನ್ನು ನಾಶಮಾಡಲು ವೈಜ್ಞಾನಿಕ ಕ್ರಮಗಳ ಮೂಲಕ ಪ್ರಯತ್ನಿಸಲಾಯಿತು. ಆದರೂ ನಮ್ಮ ರಾಜಕೀಯವನ್ನು ಜಾತ್ಯತೀತಗೊಳಿಸುವ ಮತ್ತು ಮೂಢನಂಬಿಕೆಗಳಿಂದ ಧರ್ಮವನ್ನು ಮುಕ್ತಗೊಳಿಸುವ ಕೆಲಸಗಳು ನಡೆಯಬೇಕಾದಷ್ಟು ಪ್ರಮಾಣದಲ್ಲಿ ನಡೆಯಲೇ ಇಲ್ಲ. ಇದರ ಪರಿಣಾಮವಾಗಿ, ಬಹುತೇಕ ಭಾರತೀಯರ ಮನೋಧರ್ಮದಲ್ಲಿ ವೈಜ್ಞಾನಿಕ ಮತ್ತು ಆಧುನಿಕ ದೃಷ್ಟಿಕೋನ ಅಷ್ಟಾಗಿ ಬೆಳೆಯಲೇ ಇಲ್ಲ.  ನಾವೀಗ ಅದಕ್ಕೆ ಬೆಲೆ ತೆರುತ್ತಿದ್ದೇವೆ.

ವೇದಗಳು, ಉಪನಿಷತ್ತುಗಳು, ಪುರಾಣಗಳು ಮತ್ತು ಶಾಸ್ತ್ರಗಳಂತಹ ಪ್ರಾಚೀನ ಭಾರತೀಯ ಪಠ್ಯಗಳಲ್ಲಿ ಅಥವಾ ಅಲೆಕ್ಸಾಂಡರ್ ಆಕ್ರಮಣದ ಹಿಂದಿನ  ಯಾವುದೇ ಲಿಖಿತ ದಾಖಲೆಗಳಲ್ಲಿ ‘ಹಿಂದೂ’ ಎಂಬ ಪದವು ಕಂಡುಬರುವುದಿಲ್ಲ. ಸಿಂಧೂ ನದಿಯ ಪೂರ್ವದಲ್ಲಿ ವಾಸಿಸುವ ನಿವಾಸಿಗಳನ್ನು ಗ್ರೀಕರು ಹಿಂದೂಗಳು ಎಂದು ವಿವರಿಸಿದರು. ಏಕೆಂದರೆ ಗ್ರೀಕ್ ವರ್ಣಮಾಲೆಯಲ್ಲಿ ‘S’ ಅಕ್ಷರವು ಇಲ್ಲದೇ ಇರುವದರಿಂದ ಅದನ್ನು ಅವರು ‘H’ ಆಗಿ ಉಚ್ಚರಿಸಿದರು. ಈ ಅರ್ಥದಲ್ಲಿ ಸಿಂಧೂ ದಡದ ಜನರು ಅನುಸರಿಸುತ್ತಿದ್ದ ಧಾರ್ಮಿಕ ಆಚರಣೆಗಳನ್ನು ಹಿಂದೂ ಧರ್ಮ ಎಂದು ಕರೆಯಲಾಯಿತು. ಈಗ ಕೆಲವರು ಇದನ್ನೇ ಸನಾತನ ಧರ್ಮ ಎಂದು ಕರೆಯುತ್ತಿದ್ದಾರೆ. ಅದಾಗ್ಯೂ  ‘ಸನಾತನ ಧರ್ಮ’ ಎಂಬ ಪದವು ಯಾವುದೇ ಪ್ರಾಚೀನ ಧಾರ್ಮಿಕ ಗ್ರಂಥಗಳಲ್ಲಿ ಲಭ್ಯ ಇಲ್ಲ. ( ಅಸ್ಕೋ ಪರ್ಪೋಲಾ, ‘ದಿ ರೂಟ್ಸ್ ಆಫ್ ಹಿಂದೂಯಿಸಂ’ OUP 2015, p.3).

ಗಾಂಧೀಜಿ ಬದುಕಿದ್ದ ಕಾಲಕ್ಕಾಗುವಾಗ ʼಹಿಂದೂʼ ಪದವು ಅನೇಕ ರೂಪಾಂತರಗಳನ್ನು ಪಡೆದುಕೊಂಡಿತ್ತು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಗಾಂಧೀಜಿ ತನ್ನ ಕಾಲದ ಹಿಂದೂ ವ್ಯಾಖ್ಯಾನಗಳಿಂದ ತನಗೆ ಬೇಕಾದಷ್ಟನ್ನು ಪರಿಷ್ಕರಿಸಿ ಒಪ್ಪಿಕೊಂಡರೇ ವಿನಾ ಅದನ್ನು ಪೂರ್ತಿಯಾಗಿ ಕಣ್ಣುಮುಚ್ಚಿ ಸ್ವೀಕರಿಸಲಿಲ್ಲ. ಅವರು ಹೇಳುತ್ತಾರೆ- ʼ ಹಿಂದೂ ಧರ್ಮವು ಅತ್ಯಂತ ಸಹಿಷ್ಣುವಾದ ಧರ್ಮವಾಗಿದೆ ಮತ್ತು ಸಹಿಷ್ಣುತೆಯ ಪುರಾವೆಯು ಕ್ರಿಶ್ಚಿಯನ್ ಧರ್ಮ, ಜುದಾಯಿಸಂ, ಝೋರಾಸ್ಟ್ರಿಯನ್ ಮತ್ತು ಇಸ್ಲಾಂ ಧರ್ಮಗಳಂತಹ ವಿವಿಧ ಧರ್ಮಗಳ ಸ್ವೀಕಾರ ಮತ್ತು ಶಾಂತಿಯುತ ಸಹಬಾಳ್ವೆಯಲ್ಲಿದೆʼ. ಗಾಂಧಿಗೆ ತಿಳಿದಿರುವ ಹಿಂದೂ ಧರ್ಮವು ಸಹಿಷ್ಣುತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣಗಳನ್ನು ಹೊಂದಿತ್ತು. ತಮ್ಮ ಲೇಖನದ ಒಂದೆಡೆಯಲ್ಲಿ ಗಾಂಧೀಜಿ ತುಳಸಿದಾಸರನ್ನು ಉಲ್ಲೇಖಿಸುತ್ತಾರೆ-ʼ ʼ ಧರ್ಮದ ಮೂಲವು ಕರುಣೆಯಲ್ಲಿ ಹುದುಗಿದೆ, ಆದರೆ ಅಹಂಕಾರವು ದೇಹದ ಪ್ರೀತಿಯಲ್ಲಿ ಬೇರೂರಿದೆ. ದೇಹ ನಾಶವಾದರೂ ಕರುಣೆಯನ್ನು ಬಿಡಬಾರದುʼ. ಅವರ ಪ್ರಕಾರ ಧರ್ಮದ ಅತ್ಯಗತ್ಯ ಗುಣವೆಂದರೆ ಕರುಣೆ ಮತ್ತು ಹಿಂದೂ ಧರ್ಮವು ಅದನ್ನು ಹೊಂದಿತ್ತುʼ. ವೇದಗಳು, ಉಪನಿಷತ್ತುಗಳು, ಪುರಾಣಗಳು ಮತ್ತಿತರ ಗ್ರಂಥಗಳನ್ನು ಓದಿದ್ದರಿಂದ ಗಾಂಧಿಯವರು ತಮ್ಮನ್ನು ʼಸನಾತನಿ ಹಿಂದೂʼ ಎಂದು ಕರೆದುಕೊಂಡರು. ಆದರೆ, ಶಾಸ್ತ್ರಗಳ ಹೆಸರಿನಲ್ಲಿ ನಡೆಯುವ ಎಲ್ಲವನ್ನೂ ಅಧಿಕೃತವೆಂದು ನಂಬಬೇಕಾಗಿಲ್ಲ ಎಂಬ ವೈಚಾರಿಕ ಎಚ್ಚರವನ್ನೂ ಅವರು ಉಳಿಸಿಕೊಂಡಿದ್ದರು.  ಆಫ್ರಿಕಾದಲ್ಲಿ ತನ್ನ ಯೌವನದ ದಿನಗಳನ್ನು ಕಳೆದ, ಪಾಶ್ಚಾತ್ಯ ಚಿಂತನಾಕ್ರಮಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡಿದ್ದ ಗಾಂಧೀಜಿಗೆ ಆಧುನಿಕ ನೈತಿಕತೆಯ ಮೂಲಭೂತ ತತ್ವಗಳಿಗೆ ವಿರುದ್ಧವಾದ ಯಾವುದೇ ಧಾರ್ಮಿಕ ಅಂಶಗಳನ್ನು ತಿರಸ್ಕರಿಸಲು ಹೇವರಿಕೆ ಇರಲಿಲ್ಲ.  

ಹಿಂದೂ ಧರ್ಮವು ಸತ್ಯದ ನಿರಂತರ ಅನ್ವೇಷಣೆಯನ್ನು ಒಳಗೊಳ್ಳುತ್ತದೆಯೇ ವಿನಾ ಅದೊಂದು ಸಾಂಸ್ಥೀಕರಣಗೊಂಡ, ಸ್ಥಾವರರೂಪೀ ಪರಿಕಲ್ಪನೆ ಅಲ್ಲ ಎಂಬುದನ್ನು ಗಾಂಧಿ  ಮತ್ತೆ ಮತ್ತೆ ಹೇಳಿದ್ದರು.  ಜೊತೆಗೆ ಅವರದನ್ನು ಗಂಗಾನದಿಯೊಂದಿಗೆ ಹೋಲಿಸಿ ವಿವರಿಸಿದರು. ʼಗಂಗೆಯು ತಾನು ಹರಿಯುವ ಪ್ರದೇಶಗಳಲ್ಲಿ ಪ್ರಾದೇಶಿಕ ಪಾತ್ರವನ್ನು ನಿರ್ವಹಿಸುತ್ತದೆ, ಹಾಗೆಯೇ  ಹಿಂದೂ ಧರ್ಮದ ಶಾಸ್ತ್ರೀಯ ಗ್ರಂಥಗಳಾದ ಶಾಸ್ತ್ರಗಳು, ವೇದಗಳು, ಉಪನಿಷತ್ತುಗಳು, ಸ್ಮೃತಿಗಳು, ಪುರಾಣಗಳು ಮತ್ತು ಇತಿಹಾಸಗಳು ವಿವಿಧ ಕಾಲಘಟ್ಟಗಳಲ್ಲಿ ಆಯಾ ಕಾಲದ ಅಗತ್ಯಗಳಿಗಾಗಿ ಹುಟ್ಟಿಕೊಂಡವು, ಈ ಅರ್ಥದಲ್ಲಿ ಹಿಂದೂ ಧರ್ಮವು ಜಡವಲ್ಲ.  ಈ ಪ್ರತಿಯೊಂದು ಪಠ್ಯಗಳು ತಮ್ಮದೇ ಆದ ಕಾಲದಲ್ಲಿ ಎದುರಿಸಿದ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಹೊರಬಂದವಾದ್ದರಿಂದ ಅವುಗಳು ಪರಸ್ಪರ ವಿರೋಧಾಭಾಸಗಳನ್ನು ಹೊಂದಿವೆ ಮತ್ತು ಈ ಪಠ್ಯಗಳು ಹೊಸದಾಗಿ ಏನೂ ಹೇಳುವುದಿಲ್ಲ, ಬದಲು ಅವರ ಕಾಲದಲ್ಲಿ ಅಭ್ಯಾಸ ಮಾಡಿದ ಮಾರ್ಗವನ್ನು ಮಾತ್ರ ತೋರಿಸುತ್ತವೆʼ ಎಂದು ಅವರು ವಾದಿಸಿದರು. ಹಳತನ್ನೇ  ಜನರು ಎಲ್ಲಾ ಕಾಲಕ್ಕೂ ಅನ್ವಯಿಸಿದರೆ,  ಅವರು ಹತಾಶರಾಗಬಹುದು. ಪ್ರಾಣಿಬಲಿ, ಅಸ್ಪೃಶ್ಯತೆ ಮತ್ತು ಬಾಲ್ಯ ವಿವಾಹಗಳನ್ನು ಎತ್ತಿಹಿಡಿಯುವುದರಲ್ಲಿ ಅಥವಾ ಪುನರುಜ್ಜೀವನಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲʼ  ಎಂಬುದು ಅವರ ಅಭಿಪ್ರಾಯವಾಗಿತ್ತು.

ಒಬ್ಬ ವ್ಯಕ್ತಿಯು ದೇವರನ್ನು ನಂಬದಿರಬಹುದು ಮತ್ತು ಅವನು ಅಥವಾ ಅವಳು ಅಹಿಂಸಾತ್ಮಕ ಮಾರ್ಗಗಳ ಮೂಲಕ ಸತ್ಯವನ್ನು ಅನುಸರಿಸಿದರೆ ಇನ್ನೂ ಹಿಂದೂ ಆಗಿರಬಹುದುʼ ಎಂದು ಅವರು ಯಂಗ್‌ ಇಂಡಿಯಾದಲ್ಲಿ ಬರೆದಿದ್ದರು. ʼದೇವರಲ್ಲಿ ನಂಬಿಕೆಯಿಲ್ಲದಿರುವುದು ಒಬ್ಬ ಹಿಂದೂವನ್ನು ಹಿಂದೂ ಎಂದು ಪರಿಗಣಿಸಲು ಅಡ್ಡಿಯಾಗುವುದಿಲ್ಲʼ ಎಂಬ ಅವರ ಮಾತು ಬಹಳ ಮಹತ್ವದ್ದು. ವರ್ಣಾಶ್ರಮ ಧರ್ಮವನ್ನೂ ಅವರು ಹಲವು ಸಲ ಠೀಕಿಸಿದ್ದಾರೆ. ಅವರ ಮಟ್ಟಿಗೆ ʼವರ್ಣ ವ್ಯವಸ್ಥೆಯು ಶ್ರೇಣೀಕೃತವಾಗಿರಲಿಲ್ಲ ಮತ್ತು ಅವುಗಳನ್ನು ಪರಸ್ಪರ ಬದಲಾಯಿಸಬಹುದಾಗಿತ್ತು. ಮನುಸ್ಮೃತಿ ಹೇರಿದ ಕಟ್ಟುನಿಟ್ಟಿನ ವರ್ಣ ವ್ಯವಸ್ಥೆ ಮತ್ತು ಸಾಮಾಜಿಕ – ಧಾರ್ಮಿಕ ವಿಚಾರಗಳನ್ನೂ ಗಾಂಧೀಜಿ  ಇದ್ದಕ್ಕಿದ್ದಂತೆ ಸ್ವೀಕರಿಸಲಿಲ್ಲ.  ಏನಿದ್ದರೂ ಈ ವಿಷಯದಲ್ಲಿ ಅಂಬೇಡ್ಕರ್‌ ಅವರಿಗೆ ಇದ್ದ ಸ್ಪಷ್ಟತೆ ಗಾಂಧೀಜಿಗೆ ಇರಲಿಲ್ಲ. ಇಷ್ಟಿದ್ದರೂ ಒಂದು ವಿಷಯವನ್ನು ಮರೆಯಬಾರದು. ೧೯೩೩ರ ಹೊತ್ತಿಗೆ ವರ್ಣ ವ್ಯವಸ್ಥೆಯ ಬಗ್ಗೆ ಗಾಂಧಿಯವರ ದೃಷ್ಟಿಕೋನಗಳು ಬಹಳವಾಗಿ ಬದಲಾಗಿತ್ತು. ʼಜನನವು ವ್ಯಕ್ತಿಯ ವರ್ಣವನ್ನು ನಿರ್ಧರಿಸಲು ಸಾಧ್ಯವಿಲ್ಲʼ ಎಂಬ ವಾದವನ್ನು ಗಾಂಧಿ ಒಪ್ಪಿಕೊಂಡಿದ್ದರು ಮತ್ತು ಅತ್ಯಂತ ಅಸಹ್ಯಕರ ಆಚರಣೆಯಾಗಿ ಚಾಲ್ತಿಯಲ್ಲಿದ್ದ ಅಸ್ಪೃಶ್ಯತೆಯ ಆಚರಣೆಯನ್ನು ಅವರು ಪೂರ್ತಿಯಾಗಿ ತಿರಸ್ಕರಿಸಿದ್ದರು.

ಗಾಂಧಿಯವರು ಐತಿಹಾಸಿಕ ಹಿಂದೂ ಧರ್ಮ ಮತ್ತು ಗೀತೆಯು ಪ್ರತಿಪಾದಿಸಿದ ಹಿಂದೂ ಧರ್ಮದ ನಡುಣ ವ್ಯತ್ಯಾಸಗಳನ್ನು ಚೆನ್ನಾಗಿ ಅರಿತವರಾಗಿದ್ದರು. ಈ ತಿಳುವಳಿಕೆಯ ಮೂಲಕ ಅವರು ತಮ್ಮ ಅಹಿಂಸಾ ಮಾರ್ಗವನ್ನು ಬಲವಾಗಿ ಪ್ರತಿಪಾದಿಸಿಕೊಂಡರು. ʼಅಹಿಂಸೆಯು ಹಿಂದೂ ಧರ್ಮದ ವೈಭವದ ಅಂಶವಾಗಿದೆ ಮತ್ತು ಅದನ್ನು ಸನ್ಯಾಸಿಗಳು ಮಾತ್ರವಲ್ಲದೆ ಎಲ್ಲರೂ ಅನುಸರಿಸಬೇಕುʼ ಎಂದು ಕರೆನೀಡಿದ್ದರು.  ದಿನನಿತ್ಯದ ಹಿಂದೂ ಧರ್ಮದ ಕಾಯಿಲೆಗಳ ಕುರಿತಾದ ಒಂದು ಪತ್ರಕ್ಕೆ ಉತ್ತರವಾಗಿ, ಗಾಂಧಿಯವರು ಅನೇಕ ಮಠಗಳು ಮತ್ತು ಅವುಗಳ ಆಡಳಿತವು ಹಿಂದೂ ಧರ್ಮಕ್ಕೆ ಅವಮಾನಕರವಾಗಿದೆ ಎಂಬ ಟೀಕೆಯನ್ನು ಒಪ್ಪಿಕೊಂಡದ್ದಲ್ಲದೆ, ಈ ಮಠಗಳು ಮತ್ತು ದೇವಾಲಯಗಳು ಪಡೆದ ಹಣವು ಸೇವೆಯ ರೂಪದಲ್ಲಿ ಜನರಿಗೆ ಹಿಂತಿರುಗುವುದಿಲ್ಲ ಮತ್ತು ಈ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸಬೇಕು ಅಥವಾ ಸರಿಪಡಿಸಬೇಕುʼ ಎಂದೂ ಗುಡುಗಿದ್ದರು.

ಒಟ್ಟಿಂದ, ಗಾಂಧಿಯವರ ಪ್ರಕಾರ, ಹಿಂದೂ ಧರ್ಮದ ಮೂಲ ತತ್ವಗಳೆಂದರೆ, – ಸಹಿಷ್ಣುತೆ, ಒಳಗೊಳ್ಳುವಿಕೆ, ಕರುಣೆ, ಶಾಂತಿಯುತ ಸಹಬಾಳ್ವೆ, ಸತ್ಯ, ಅಹಿಂಸೆ, ಸೇವೆ, ಕ್ಷಮೆ, ಒಳ್ಳೆಯ ನಡತೆ, ಸೌಮ್ಯತೆ, ಸಂಯಮ, ಕಳ್ಳತನ ಮಾಡದಿರುವುದು, ಸ್ವಾಧೀನಪಡಿಸಿಕೊಳ್ಳದಿರುವುದು, ತೃಪ್ತಿ, ಸಹನೆ ಮತ್ತು ತ್ಯಾಗ ಮನೋಭಾವನೆ.

ಇವತ್ತು ಆಕ್ರಮಣಕಾರಿಯಾಗಿ ಕಾಣುತ್ತಿರುವ ಹಿಂದುತ್ವವಾದಿಗಳಲ್ಲಿ ಮೇಲಿನ ಗುಣಗಳು ಕಂಡು ಬಂದರೆ ಅವರಿಗೆ ಗಾಂಧಿಯವರ ಹೆಸರು ಹೇಳುವ ಅಧಿಕಾರವಾದರೂ ಬರುತ್ತದೆ.

ಪುರುಷೋತ್ತಮ ಬಿಳಿಮಲೆ,

ನಿವೃತ್ತ ಪ್ರಾಧ್ಯಾಪಕರು, ಜೆ.ಎನ್‌ ಯು

Related Articles

ಇತ್ತೀಚಿನ ಸುದ್ದಿಗಳು