Thursday, June 13, 2024

ಸತ್ಯ | ನ್ಯಾಯ |ಧರ್ಮ

ಬನವಾಸಿ ಪೊಲೀಸ್‌ ಠಾಣೆಯಲ್ಲಿ ಗಣೇಶ ಉತ್ಸವ ಆಚರಣೆ: ಪೊಲೀಸರಿಂದ ಡಿಜೆ ಡ್ಯಾನ್ಸ್‌

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ಸಿಬ್ಬಂದಿಗಳು ವೈಭವದ ಗಣೇಶ ಉತ್ಸವ ಆಚರಿಸಿ ಡಿಜೆ ಹಾಕಿಕೊಂಡು ಡ್ಯಾನ್ಸ್‌ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ದಿನಾಂಕ 19-09-2023ರಿಂದ 23-09-2023ರ ವರೆಗೆ ʼಶ್ರೀ ಮಂಗಲಮೂರ್ತಿಯ ಉತ್ಸವʼವನ್ನು ಬನವಾಸಿ ಪೊಲೀಸ್‌ ಠಾಣೆಯಲ್ಲಿ ಆಚರಿಸಲಾಗಿದೆ. ಇದರೊಂದಿಗೆ ದಿ 25-05-2023ರಂದು ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಗಿದೆ. ಅಂದೇ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಗಳು ಡಿಜೆ ಹಾಕಿಕೊಂಡು ಡ್ಯಾನ್ಸ್‌ ಮಾಡಿಕೊಂಡು ಮೆರವಣಿಗೆ ಮಾಡಿ ಸಂಭ್ರಮಿಸಿದ್ದಾರೆ.

ಈ ಉತ್ಸವ ಆಚರಣೆಯು ಬನವಾಸಿ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಚಂದ್ರಕಲಾ ಪತ್ತಾರ್‌ ಅವರ ನೇತೃತ್ವದಲ್ಲಿ ನಡೆದಿದೆ. ಆಚರಣೆಯ ಸಂದರ್ಭದಲ್ಲಿ ಎಲ್ಲಾ ಪೊಲೀಸ್‌ ಸಿಬ್ಬಂದಿಗಳು ಸಮೂಹ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಈ ಸಂಬಂಧ ಪೀಪಲ್‌ ಮೀಡಿಯಾ ಎಸ್‌ ಐ ಚಂದ್ರಕಲಾ ಪತ್ತಾರ್‌ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ʼಕಳೆದ 30 ವರ್ಷಗಳಿಂದಲೂ ಇಲ್ಲಿ ಹೀಗೆ ಗಣೇಶ ಉತ್ಸವ ಆಚರಿಸಿಕೊಂಡು ಬರಲಾಗಿದೆ. ಅದರಂತೆ ಈ ಸಲವೂ ಆಚರಣೆ ನಡೆದಿದೆʼ ಎಂದರು.

ಹೀಗೆ ಒಂದು ಸರ್ಕಾರಿ ಸಂಸ್ಥೆಯಲ್ಲಿ ಧಾರ್ಮಿಕ ಆಚರಣೆಗೆ ಸಂವಿಧಾನವು ಅವಕಾಶ ಕಲ್ಪಿಸುತ್ತದೆಯೇ? ಗಣೇಶ ಉತ್ಸವದಂತೆ ಬುದ್ಧ ಪೂರ್ಣಿಮೆ, ರಂಜಾನ್‌, ಕ್ರಿಸ್ಮಸ್‌, ಗುರುನಾನಕ್‌ ಜಯಂತಿ ಆಚರಿಸಲಾಗುತ್ತದೆಯೇ? ಈ ಮೂಲಕ ಸರ್ವಧರ್ಮ ಸಮನ್ವಯ ಕಾಪಾಡಲಾಗುತ್ತಿದೆಯೇ?ʼ ಎಂಬ ಪ್ರಶ್ನೆಗೆ ಉತ್ತರಿಸದ ಅಧಿಕಾರಿಗಳು ಕರೆ ಸಂಪರ್ಕ ಕಡಿತಗೊಳಿಸಿದರು. ಈ ಕುರಿತು ಕಾರವಾರ ಪೊಲೀಸ್‌ ವರಿಷ್ಟಾಧಿಕಾರಿಗಳಿಗೆ ಸ್ಪಷ್ಟನೆಗಾಗಿ ಕೇಳಲಾಗಿದ್ದರೂ ಸ್ಪಷ್ಟ ಉತ್ತರ ಸಿಗಲಿಲ್ಲ.

ಭಾರತದ ಸಂವಿಧಾನವು ಸ್ಪಷ್ಟವಾಗಿ ಧರ್ಮನಿರಪೇಕ್ಷತೆಯನ್ನು ತಿಳಿಸುತ್ತದೆ. ಸರ್ಕಾರಿ ಸಂಸ್ಥೆಗಳು ಯಾವುದೇ ಒಂದು ಧರ್ಮದ ಆಚರಣೆಯನ್ನು ಆಚರಿಸುವುದು ಸಂವಿಧಾನಕ್ಕೆ ವಿರುದ್ಧದ ಕ್ರಮವಾಗಿರುತ್ತದೆ. ಸಂವಿಧಾನದ 25 ರಿಂದ 28ನೇ ವಿಧಿಗಳು ಧಾರ್ಮಿಕ ಸ್ವಾತಂತ್ರ್ಯ ಕುರಿತು ತಿಳಿಸಿದ್ದು ಸಂವಿಧಾನದ ಪೀಠಿಕೆಯು ಭಾರತದ ಧರ್ಮನಿರಪೇಕ್ಷತೆ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಬಹುಸಂಸ್ಕೃತಿಗಳ ಭಾರತದಲ್ಲಿ ಧಾರ್ಮಿಕ ಆಚರಣೆಗಳು ವೈಯಕ್ತಿಕ ನೆಲೆಯಲ್ಲಿ ನಡೆಯುವುದಕ್ಕೆ ಸಂವಿಧಾನ ಅವಕಾಶ ಮಾಡಿಕೊಡುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಅಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಸಂಸ್ಥೆ ಯಾವುದೇ ಧರ್ಮ ಮತ್ತು ದೇವರ ಕುರಿತಂತೆ ಅಂತರ ಕಾಪಾಡಿಕೊಂಡು ತಟಸ್ಥತೆ ಅನುಸರಿಸಬೇಕೆಂದು ಸಂವಿಧಾನ ಹಾಗೂ ಹಲವಾರು ಸುಪ್ರೀಂ ಕೋರ್ಟಿನ ತೀರ್ಪುಗಳು ಸ್ಪಷ್ಟಪಡಿಸಿವೆ.
ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಸಾರ್ವಜನಿಕ ಸೇವೆಗೆ ಸೇರುವ ಯಾವುದೇ ಸಾರ್ವಜನಿಕ ಸೇವಕರು (publiv servants) ಸಂವಿಧಾನದ ಜಾತ್ಯತೀತ ನಿಲುವಿಗೆ ಬದ್ಧವಾಗಿರಬೇಕೆಂದಿದ್ದರೂ ಅನೇಕ ಸಂದರ್ಭಗಳಲ್ಲಿ ಸರ್ಕಾರಿ ಸಂಸ್ಥೆಗಳು ಧಾರ್ಮಿಕ ಒಲವಿನ ಸಂಸ್ಥೆಗಳಾಗಿ ಕೆಲಸ ಮಾಡುವುದು ನಡೆಯುತ್ತಿದೆ.

ಈ ಕುರಿತು ಸರ್ಕಾರದ ಉನ್ನತ ಅಧಿಕಾರಿಗಳು ಸೂಕ್ತ ನಿರ್ದೇಶನಗಳನ್ನು ಹೊರಡಿಸುವ ಅಗತ್ಯವಿದೆ. ಒಂದು ವೇಳೆ ಅಂತಹ ನಿರ್ದೇಶನಗಳಿದ್ದೂ ಇಂತಹ ಘಟನೆಗಳು ನಡೆದಿದ್ದರೆ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಬೇಕಾದುದೂ ಅನಿವಾರ್ಯ. ಈ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು