Home ದೆಹಲಿ ದೆಹಲಿಯಲ್ಲಿ ಪೊಲೀಸರ ಸೋಗಿನಲ್ಲಿ ಬಂದ ಮೂವರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ರ ಆರೋಪ; ಓರ್ವ ಅರೆಸ್ಟ್

ದೆಹಲಿಯಲ್ಲಿ ಪೊಲೀಸರ ಸೋಗಿನಲ್ಲಿ ಬಂದ ಮೂವರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ರ ಆರೋಪ; ಓರ್ವ ಅರೆಸ್ಟ್

0

ನವದೆಹಲಿ: ದೆಹಲಿಯ ಕಲ್ಕಾಜಿ ಮಂದಿರದ ಸಮೀಪದ ಆಸ್ತಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿ ಮೇಲೆ ಮೂವರು ವ್ಯಕ್ತಿಗಳು ಪೊಲೀಸರ ಸೋಗಿನಲ್ಲಿ ಬಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 21ರ ಸೋಮವಾರ ಸಂಜೆ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಈ ಪ್ರಕರಣದಲ್ಲಿ ಪೊಲೀಸರ ಪ್ರಕಾರ, ಬಾಲಕಿ ತನ್ನ 17 ವರ್ಷದ ಸ್ನೇಹಿತನೊಂದಿಗೆ ಸೋಮವಾರ ಸಂಜೆ ಸುಮಾರು 7 ಗಂಟೆಗೆ ಕಲ್ಕಾಜಿ ಮಂದಿರಕ್ಕೆ ತೆರಳಿದ್ದಳು. ದೇವರ ದರ್ಶನದ ಬಳಿಕ ರಾತ್ರಿ ಸುಮಾರು 7.30ರ ವೇಳೆಗೆ ಇಬ್ಬರೂ ಮಂದಿರದ ಸಮೀಪದಲ್ಲಿರುವ ಆಸ್ತಾ ಕುಂಜ್ ಪಾರ್ಕ್‌ಗೆ ತೆರಳಿದ್ದರು.

ಈ ವೇಳೆ 25ರಿಂದ 30 ವರ್ಷದೊಳಗಿನ ಮೂವರು ವ್ಯಕ್ತಿಗಳು ಅವರ ಬಳಿ ಬಂದಿದ್ದಾರೆ. ತಾವು ಪೊಲೀಸರು ಎಂದು ಪರಿಚಯಿಸಿಕೊಂಡ ಆರೋಪಿಗಳು ಬಾಲಕಿ ಮತ್ತು ಆಕೆಯ ಸ್ನೇಹಿತನನ್ನು ಬೆದರಿಸಿದ್ದಾರೆ ಎನ್ನಲಾಗಿದೆ. ಬಳಿಕ ಬಾಲಕಿಯನ್ನು ಆಕೆಯ ಸ್ನೇಹಿತನಿಂದ ಪ್ರತ್ಯೇಕಿಸಿ, ಪಾರ್ಕ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ರಾತ್ರಿ ಸುಮಾರು 8.45ಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಮಾಹಿತಿ ಬಂದಿದ್ದು, ಅಮರ್ ಕಾಲೋನಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳದಲ್ಲಿ ಅಪರಾಧ ತನಿಖಾ ಹಾಗೂ ವಿಧಿವಿಜ್ಞಾನ ತಂಡಗಳು ಪರಿಶೀಲನೆ ನಡೆಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ.

ಪೊಲೀಸರ ಮೇಲೆ ಗುಂಡಿನ ದಾಳಿ; ಆಸಿಫ್ ಬಂಧನ
ಪ್ರಕರಣದ ತನಿಖೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ವೇಳೆ ಆಗ್ನೇಯ ದೆಹಲಿ ವಿಶೇಷ ಸಿಬ್ಬಂದಿಗೆ ಆರೋಪಿಗಳಲ್ಲಿ ಒಬ್ಬನ ಚಲನವಲನದ ಕುರಿತು ಮಾಹಿತಿ ಲಭಿಸಿತ್ತು. ಅಮರ್ ಕಾಲೋನಿಯ ಡಿಎಂ ಆಫೀಸ್ ರಸ್ತೆಯ ಬಳಿ ಪೊಲೀಸರು ಆರೋಪಿಯನ್ನು ಹಿಡಿಯಲು ಮುಂದಾದಾಗ ಆತ ಪೊಲೀಸರತ್ತ ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿದಾಳಿ ನಡೆಸಿದ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಆಸಿಫ್ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಆತ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

You cannot copy content of this page

Exit mobile version