Saturday, June 15, 2024

ಸತ್ಯ | ನ್ಯಾಯ |ಧರ್ಮ

ತವರು ತೊರೆದ ಗಂಗೆ

ಈ ವರೆಗೆ…

ಬಳೆಗಾರ ಭದ್ರಪ್ಪ ಮೋಹನನ ಬಗ್ಗೆ ಹೇಳಿದ ಸತ್ಯಗಳನ್ನು ಕೇಳಿ ಕಂಗಾಲಾದ ಅಪ್ಪ ಮಗ ಚಂದ್ರಹಾಸನ ಮೇಲೆ ಅತೀವ ಸಿಟ್ಟಾಗುತ್ತಾನೆ. ತನ್ನ ಮೇಲೆ ಅಪ್ಪನಿಗೆ ಸಂಶಯ ಬಂದಿರುವುದು ತಿಳಿದ ಕೂಡಲೇ ಪೂನಾದಿಂದ ಕೆಲಸಕ್ಕೆ ಕರೆಬಂದಿದೆ ಎಂದು ಹೇಳಿ ಮೋಹನ ಗಂಗೆಯನ್ನು ಕರೆದುಕೊಂಡು ಬೆಂಗಳೂರು ತಲಪುತ್ತಾನೆ. ಬೆಂಗಳೂರಿನಲ್ಲಿ ಏನು ನಡೆಯಿತು? ಓದಿ , ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತೊಂದನೆಯ ಕಂತು.

ಮರು ದಿನ ಬೆಳ್ಳಂಬೆಳಗ್ಗೆಯೇ ಹೊರಟು ನಿಂತಿದ್ದ ಅಳಿಯ ಮಗಳನ್ನು ಕಂಡು ಅಪ್ಪನಿಗ್ಯಾಕೊ ಕಸಿವಿಸಿ ಆಯಿತು.”ಇದ್ಯಾಕಪ್ಪ ಏನೊಂದು ಸುಳಿವು ಕೊಡ್ದೆ ಹಿಂಗೆ ಗಂಗೂನು ಹೊಂಡುಸ್ಕೊಂಡು ನಿಂತಿದೆಯಲ್ಲ” ಎಂದು ಮೋಹನನನ್ನು ಕೇಳಿದ.”ರಾತ್ರಿ ಗಡಿಬಿಡಿಲಿ ಹೇಳೋದನ್ನೇ ಮರೆತುಬಿಟ್ಟಿದ್ದೆ ಮಾವ. ನಿನ್ನೆ ಸೋಪಾನ್ ಪೇಟೆಯಿಂದ ಪೂನದ ನನ್ನ ಆಫೀಸ್ಗೆ ಟ್ರಂಕ್ ಕಾಲ್ ಮಾಡಿದ್ದೆ. ಇನ್ನೊಂದೆರಡು ದಿನದಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳೇ ಬೇಕು ಅಂತ ಆರ್ಡರ್ ಮಾಡಿದ್ದಾರೆ. ಇನ್ನು ತಡ ಮಾಡಿದ್ರೆ ಕೆಲ್ಸಕ್ಕೆ ತೊಂದ್ರೆ ಆಗುತ್ತೆ. ಹಾಗಾಗಿ ಇವತ್ತು ಬೆಂಗ್ಳೂರಿಗೆ ಹೋಗಿ ನನ್ಗೆ ಕೆಲ್ಸ ಕೊಡ್ಸಿರೊ ಇಂಜಿನಿಯರ್ ಮನೆಯಲ್ಲಿ  ಉಳಿದು, ನಾಳೆ ಬೆಳಗ್ಗೆ ಮೊದಲನೆ ಟ್ರೈನ್ಗೆ  ಪೂನಕ್ಕೊರಡ್ತಿವಿ ಎಂದ.

ಎಷ್ಟೇ ಪ್ರಯತ್ನಿಸಿದರು ಅಪ್ಪನಿಗೆ ಯಾಕೋ ಮೋಹನನ ಮಾತಿನ ಮೇಲೆ ನಂಬಿಕೆಯೇ ಬರಲಿಲ್ಲ. “ಹಿಂಗೆ ಇದ್ಕಿದ್ದಂಗೆ ಹೆಂಡ್ರು ಕಟ್ಕೊಂಡು ಪೂನುಕ್ಕೊಂಟಿದಿಯಲ್ಲ ಅಲ್ಲಿ ಉಳ್ಕೊಳೊ ವ್ಯವಸ್ಥೆ ಏನ್ ಮಾಡಿಕೊಂಡಿದ್ದೀಯಪ್ಪ” ಎಂದು ಅನುಮಾನದಿಂದಲೇ ಕೇಳಿದ. ಮೋಹನ ಯಾವ ಅಳುಕು ಇಲ್ಲದೆ ನಿರಾತಂಕವಾಗಿ “ಅಲ್ಲಿ ನನ್ ಫ್ರೆಂಡ್ಸ್ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಮಾವ ಏನು ಚಿಂತೆ ಮಾಡೋ ಹಾಗಿಲ್ಲ.  ಹೋಗಿ ಸಂಸಾರ ಹುಡೋದೊಂದೇ ಬಾಕಿ ಎಂದು ಮೀಸೆಯ ಮರೆಯಲ್ಲಿಯೇ ನಕ್ಕ”. ಯಾಕೋ ಮೋಹನನ ಆ ನಗು ಅಪ್ಪನನ್ನು  ಇರಿದಂತಾಯ್ತು. ಹೇಳಲಾರದ ಸಂಕಟದಲ್ಲಿ ಒದ್ದಾಡುತ್ತಿದ್ದ ಅಪ್ಪ ಒಂದು ನಿರ್ಧಾರಕ್ಕೆ ಬಂದವನಂತೆ  “ಒಂದು ಕೆಲ್ಸ ಮಾಡಪ್ಪ ಮೊದ್ಲು ನೀನು ಅಲ್ಲ್ ಹೋಗಿ ಎಲ್ಲಾನು ನೇರ್ಪ್ ಮಾಡ್ಕೊ. ವಸಿ ದಿನ ಬುಟ್ಟು  ನಾನೆ ಗಂಗುನ್ ಕರ್ಕೊಂಡ್ ಬಂದು ಬುಡ್ತೀನಿ. ನನ್ ಜೀವುಕ್ಕು ಒಂದಿಷ್ಟು ನೆಮ್ದಿ ಆಯ್ತದೆ ಏನಂತಿ..?” ಎಂದು ಮೋಹನನ ಉತ್ತರಕ್ಕಾಗಿ ಎದುರು ನೋಡಿದ. 

ಅನಿರೀಕ್ಷಿತವಾದ ಮಾವನ ಈ ನಿರ್ಧಾರಕ್ಕೆ ಏನು ಹೇಳಬೇಕೆಂದು ತೋಚದೆ ಪೇಚಾಡುತ್ತಿದ್ದ ಮೋಹನನ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಚಂದ್ರಹಾಸ, “ನಿಂಗೇನರ ಬುದ್ಧಿಗಿದ್ದಿ ಐತೆನಪ್ಪ ಮದ್ವೆಯಾಗಿ ವಾರವೂ ಕಳ್ದಿಲ್ಲ ಆಗ್ಲೇ ಹೆಂಡ್ರು ಬುಟ್ಟು ಒಂಟಿಯಾಗಿರು ಅಂದ್ರೆ ಹೆಂಗ್ ಇದ್ದಾರು ಪಾಪ. ಅಲ್ದನೆಯ  ಪೂನುಕ್ಕೋಗ್ಬೇಕು ಅಂತ್ಲೆ ತಾನೆ ಇಷ್ಟು ಆತ್ರುವಾಗಿ ಅವ್ರು ಮದುವೆಯಾಗಿದ್ದು. ಎಲ್ಲಾನು ಅನುಮಾನುಸ್ತ ಕೂತ್ಕಬ್ಯಾಡ  ಕಟ್ಕೊಂಡ್ ಮೇಲೆ ಅವರ್ ಹೆಂಡ್ರುನಾ ಅವರು ಬಾಳುಸ್ಕೊತರೆ ಸುಮ್ನಿರಪ್ಪ. ತಡಮಾಡ್ಕಬ್ಯಾಡಿ ನಡಿರಿ ಬಾವ ಕತ್ಲಾಗೊದ್ರೊಳ್ಗೆ ಬೆಂಗ್ಳೂರು ಸೇರ್ಕೊಳಿ” ಎಂದು ಹೇಳಿ ಚಂದ್ರಹಾಸ ಮೋಹನನ ಹಾದಿಯನ್ನು ಸುಗಮಗೊಳಿಸಿದ.  

ಬೆಂಗಳೂರು ನೋಡುವ ಖುಷಿಯಲ್ಲಿದ್ದ ಗಂಗೆ, ಕರೆದ ಅಕ್ಕಪಕ್ಕದ ಕೆಲವು ಮನೆಗಳಿಗೆ ಹೋಗಿ ಮಡಿಲಕ್ಕಿ ಹಾಕಿಸಿಕೊಂಡು ಜಿಂಕೆಮರಿಯಂತೆ ಬಂದು ಎಲ್ಲರ ಕಾಲಿಗೂ ನಮಸ್ಕರಿಸಿದಳು. ಯಾಕೋ ಅಪ್ಪನೆದುರು ಬಂದು ನಿಂತಾಗ ಮಾತ್ರ ಅವಳ ಕಣ್ಣು ಹನಿ ಗೂಡಿತು. ಮೊದಲ ಬಾರಿಗೆ ಅಪ್ಪನನ್ನು ಗಟ್ಟಿಯಾಗಿ ತಬ್ಬಿ “ನಾನು ಚೆನ್ನಾಗಿರ್ತೀನಿ ಯೋಚ್ನೆ ಮಾಡ್ಬೇಡಿ ಕಂಡ್ರಪ್ಪ. ಯಾರು ಏನಂದ್ರು ಮನಸಿಗಾಕೊಬ್ಯಾಡಿ. ಮನುಸ್ಕೊಂಡು ಊಟ ಬುಟ್ಟು, ಒಬ್ರೆ ಹೋಗಿ ಹೊಲುದ್ ಮನೆಲಿ ಇರ್ಬೇಡಿ. ಹೊತ್ತುಗ್ ಸರಿಯಾಗ್ ಊಟ ಮಾಡಿ ಆರೋಗ್ಯ ನೋಡ್ಕೊಳಿ” ಎಂದು ಬಿಕ್ಕಿದಳು. ಅದುವರೆಗೂ ಮಗಳ ಭವಿಷ್ಯ ನೆನೆದು ಆತಂಕದಿಂದ ಒದ್ದಾಡುತ್ತಿದ್ದ ಅಪ್ಪನ ಎದೆ ಬಿರಿದಂತಾಯ್ತು. ಒಳಗೆ ಹೆಪ್ಪುಗಟ್ಟಿದ್ದ ಅವನ ದುಃಖ ಕಟ್ಟೆಯೊಡೆದು ಉಸಿರು ಕಟ್ಟಿತು.  ಮಾತು ಹೊರಬರದೆ ದೇಹದ ಶಕ್ತಿ ಇಂಗಿದಂತಾಗಿ ಎದೆ ಹಿಡಿದು  ಕುಳಿತ. ಅಪ್ಪನಿಗೆ ತನ್ನಮೇಲಿದ್ದ ಅದಮ್ಯ ಪ್ರೀತಿಯನ್ನು ಅರಿತಿದ್ದ ಗಂಗೆ  ಒಳಗೋಡಿ ನೀರು ತಂದು ಕುಡಿಸಿ ಸಂತೈಸಿದಳು. ಅಪ್ಪನ ಬಗಲಲ್ಲಿಯೇ ನಿಂತಿದ್ದ ಅವ್ವನ ಕೈ ಹಿಡಿದು “ಅಪ್ಪುನ್ನ ಚನ್ನಾಗ್ ನೋಡ್ಕೊಳವ್ವ  ಗಂಡ್ಮಕ್ಳು ಗಂಡ್ಮಕ್ಳು ಅಂದ್ಕೊಂಡು  ಅಪ್ಪುನ್ನ ಕಡ್ಗಣುಸ್ ಬ್ಯಾಡ” ಎಂದು ಬೇಡಿ ಕೊಂಡು ಭಾರವಾದ ಮನಸ್ಸಿನಿಂದಲೇ ಮೋಹನನ ಹಿಂದೆ ಹೆಜ್ಜೆಹಾಕಿದಳು.

ಗಂಗೆ ಮೋಹನನೊಂದಿಗೆ ಬಂದು ಬೆಂಗಳೂರು ತಲುಪುವ ವೇಳೆಗಾಗಲೇ ಸೂರ್ಯ ಮುಳುಗಿ ಆಗಸದಲ್ಲಿ ಹಾಲಿನಂತಹ ಚಂದ್ರಮ ತನ್ನ ನಗುಮುಖ ತೋರಿದ್ದ. ಏಳೆಂಟು ತಾಸಿನ ಪ್ರಯಾಣದಿಂದ ತುಸು ಬಳಲಿದ್ದ ಗಂಗೆಯ ಆಯಾಸವೆಲ್ಲ, ಆ ಮಾಯಾ ನಗರಿಯ ತಳುಕು ಬಳುಕನ್ನು ಕಂಡು ಹಾರಿ ಹೋಯಿತು. ಬಿಟ್ಟ ಬಾಯಿ ಬಿಟ್ಟಂತೆ ಕಣ್ಣೆವೆ ಮಿಟುಕಿಸದೆ ಸುತ್ತಲೂ ನೋಡುತ್ತಾ ನಿಂತು ಬಿಟ್ಟಳು. ಮೋಹನ ಅವಳ ಮನಸ್ಸು ತಣಿಯುವವರೆಗೂ ಅಲ್ಲಿಯೇ ಒಂದಷ್ಟು ಸುತ್ತಾಡಿಸಿ “ಬೆಂಗ್ಳೂರು ಇಷ್ಟ ಆಯ್ತಾ ಗಂಗೂ” ಎಂದು ಕೇಳಿದ. ಅವನ ಮಾತಿಗೆ ತಲೆದೂಗಿದ ಗಂಗೆ “ಅದುಕ್ಕೆ ಮತೆಯಾ ನಮ್ಮೂರ್ ಹುಡುಗ್ರು ಬಾಯಿ ಎತ್ತಿದ್ರೆ ಸಾಕು ಬೆಂಗ್ಳೂರ್ಗೊಯ್ತಿವಿ ಅಂತ ತಾರಾಡದು” ಎಂದಳು.

ಅವಳ ಮಾತಿಗೆ ದನಿಗೂಡಿಸಿದ ಮೋಹನ, “ಹೌದು ಬೆಂಗ್ಳೂರು ಎಂತವ್ರುನ್ನು ಅಟ್ರ್ಯಾಕ್ಟ್ ಮಾಡಿಬಿಡುತ್ತೆ  ಗಂಗು. ಇಲ್ಲಿ ಮನಸ್ಸು ಮಾಡಿದ್ರೆ ಹೇಗೆ ದುಡಿಬಹುದು ಗೊತ್ತಾ, ವರ್ಷ ಅನ್ನೋದ್ರೊಳಗೆ ಕಾರು, ಬಂಗ್ಲೆನೆಲ್ಲ ಮಾಡ್ಕೊಂಡು ರಾಯಲ್ ಆಗಿ ಜೀವನ ಮಾಡಬಹುದು. ನೀನೊಬ್ಳು ನನಗೆ ಸರಿಯಾಗಿ ಸಾತ್ ಕೊಟ್ಟೆ ಅಂದ್ರೆ ನಾವು ಕೂಡ ರಾಜರಾಣಿ ತರ ಬದುಕ್ಬಹುದು ಗಂಗೂ ಎಂದ. ಸಾತ್ ಎನ್ನುವ ಪದ ಅರ್ಥವಾಗದೆ ತಲೆಕೆರೆದುಕೊಳ್ಳುತ್ತಾ ನಿಂತ ಗಂಗೆ  “ಸಾತು….! ಹಂಗಂದ್ರೆ ಏನು..? ನಂತವು ಅದು ಐತ  ಅದುನ್ನ್ ಕೊಟ್ರೆ ನೀವು ಹಿಂಗೆ ದೊಡ್ಡ್ ಮನೆ ಕಟ್ಬೋದ..? ಎಂದು ಆಶ್ಚರ್ಯದಿಂದ ಕೇಳಿದಳು. ಅವಳ ಮುಗ್ಧತೆ ಕಂಡು ಹಣೆ ಚಚ್ಚಿ ಕೊಂಡ ಮೋಹನ “ನಾನೊಬ್ಬ  ನಿನ್ನ ಹತ್ರ ಮಾತಾಡ್ತೀನಲ್ಲ…? ಬಾ  ಬೇಗ ಹೋಗೋಣ  ನಮ್ ಇಂಜಿನಿಯರ್ ಎಲ್ಲಿಗಾದ್ರೂ ಹೋಗ್ಬಿಟ್ರೆ ಕಷ್ಟ” ಎಂದು ಹೇಳಿ ಆಟೋ ಹಿಡಿದು ಅಡ್ರೆಸ್ ಹೇಳಿದ. 

ಮೇಲಿನಿಂದ ಕೆಳಗಿನವರೆಗೂ ಗಂಗೆಯನ್ನು ಎವೆ ಮುಚ್ಚದೆ  ನುಂಗುವಂತೆ ನೋಡಿದ ಆಟೋದವ “ಓ…ಹಳ್ಳಿಮಾಲು ಹೊಸ್ದು ಅನ್ನೊ ಹಂಗ್ ಕಣ್ತದೆ” ಎಂದು ಮೋಹನನಿಗೆ ಮಾತ್ರ ಕೇಳುವಂತೆ ಪಿಸುಗುಟ್ಟಿದ. ಆಟೋದವನ ಬಿರು ನೋಟಕ್ಕೆ ಗಂಗೆಯ ಕೋಪ ಉಕ್ಕೇರಿ ” ಅಯ್ಯೋ..ಬಿಕ್ನಾಸಿ ನಿಂಗ್ಯಾರು ಅಕ್ಕ ತಂಗಿರಿಲ್ವ ಹಂಗ್ ನೋಡ್ತಿಯಲ. ನೀವೇನ್ರಿ ಅವನು ಅಷ್ಟು ಕೆಟ್ನಾಗಿ ನೋಡ್ತಿದ್ರು ತೆಪ್ಪುಗಿದ್ದೀರಿ ಕೆಪಾಲುಕ್ಕೊಂದು ಹಾಕಿ ಹೇಳ್ತಿನಿ” ಎಂದು ಬುಸುಗುಟ್ಟಿದಳು. “ಇದು ಬೆಂಗ್ಳೂರು, ಎಲ್ಲಾ ತರದ ಜನ್ರು ಇರ್ತಾರೆ ಅದಕ್ಕೆಲ್ಲ ತಲೆ ಕೆಡುಸ್ಕೊಬಾರ್ದು ಗಂಗು” ಎಂದು ಗಂಗೆಯನ್ನು ಸಮಾಧಾನಿಸಿದ ಮೋಹನ, ಆಟೋದವನತ್ತ ತಿರುಗಿ “ಈ ಅಧಿಕ ಪ್ರಸಂಗನೆಲ್ಲಾ ಬಿಟ್ಟು ನಿನ್ನ ಕೆಲ್ಸ ಏನು ಅದನ್ನ ಮಾತ್ರ ಮಾಡಪ್ಪ ಸಾಕು” ಎಂದು ಖಾರವಾಗಿಯೇ ಹೇಳಿ ಆಟೋ ಹತ್ತಿ ಕುಳಿತ. 

ಸಂದುಗೊಂದು ಕೊಂಕಣ ಮೈಲಾರಗಳನ್ನೆಲ್ಲ ಸುತ್ತಿ ಬಳಸಿ ತುಸು ಜನ ಸಂದಣಿ ತಗ್ಗಿದ್ದ ಒಂದು ದೊಡ್ಡ ಬಂಗಲೆಯ ಮುಂದೆ ಬಂದು ನಿಂತಿತು ಆಟೊ. ಅರ್ಧ ಮನೆಯೇ ಮುಚ್ಚುವಂತಿದ್ದ ದೊಡ್ಡ ಕಂಪೌಂಡಿನ ಒಳಗೆ ಗಂಗೆ ಕಾಲಿಟ್ಟಿದ್ದೆ ತಡ, ಎಲ್ಲಿತ್ತೊ ಹುಡುಗಿಯರ ದಂಡು ಓಡಿ ಬಂದು ಗಂಗೆಯ ಸುತ್ತಾ ಮುತ್ತಿಗೆ ಹಾಕಿತು. ಅವಳ ಮೈ ಕೈಯನ್ನೆಲ್ಲಾ ಮುಟ್ಟಿ ತಟ್ಟಿ ಸವರಿ ” ನಮ್ಮ ಮೋನಣ್ಣಂದು ಸಲೆಕ್ಷನ್ ಅಂದ್ರೆ ಸಲೆಕ್ಷನ್ನಪ. ಹುಡ್ಗಿ ಬಹಳ ಚೆನ್ನಾಗಿದ್ದಾಳೆ ಮೋನಣ್ಣ” ಎಂದು ಕೊಂಡಾಡಿದರು. ಅ ಮಾತಿಗೆ ನಾಚಿದ  ಗಂಗೆ “ನಿಮ್ಗಳಷ್ಟೇನಲ್ಲ  ಬುಡಿ” ಎಂದು ಹೇಳಿ ಮೋಹನನತ್ತ ಸರಿದು “ಇದೇನೀ….. ಈ ನರಿ ಹೆಣ್ಮಕ್ಳು…..! ಒಬ್ರುಗಿಂತ ಒಬ್ರು ಕಣ್ಣು ಕುಕ್ಕೊ ಹಂಗ್ ಅವ್ರೆ” ಎಂದು ಆಶ್ಚರ್ಯ ಚಕಿತಳಾಗಿ ಕೇಳಿದಳು. “ಇವ್ರೆಲ್ಲ ನಮ್ಮ ಇಂಜಿನಿಯರ್ ಮಕ್ಳು. ನೋಡು ನಾನು ತೆಗೆದು ಕೊಟ್ಟಿರೊ ಬಟ್ಟೆ ಹಾಕ್ಕೊಂಡು ನಿಂತ್ರೆ ನೀನು ಇವರ್ಗಿಂತ್ಲು ಬ್ಯೂಟಿಫುಲ್ ಆಗಿ  ಕಾಣ್ತಿ ಗಂಗು.  ನಾಳೆ ನಿನ್ನೂ ಹೀಗೆ ರೆಡಿಮಾಡ್ತಿನಿ. ಈಗ ಸಧ್ಯಕ್ಕೆ ಇಲ್ಲಿ ಯಾರ್ ಜೊತೆನೂ ಮಾತಾಡೋದಕ್ಕೆ ಹೋಗ್ಬೇಡ ಸುಮ್ನೆ ಬಾ ನನ್ ಹಿಂದೆ” ಎಂದು ಗಂಗೆಯನ್ನು  ಆ ಬಂಗಲೆಯ ಒಳ ಕರೆದು ಕೊಂಡು ಹೋದ. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಹಿಂದಿನ ಸಂಚಿಕೆ ಓದಿದ್ದೀರಾ? ಮೋಹನನ ಮೋಸದ ಜಾಲಕ್ಕೆ ಸಿಲುಕಿದ ಗಂಗೆ

Related Articles

ಇತ್ತೀಚಿನ ಸುದ್ದಿಗಳು