Saturday, June 15, 2024

ಸತ್ಯ | ನ್ಯಾಯ |ಧರ್ಮ

ಕೋರ್ಟ್‌ ಆವರಣದಲ್ಲೇ ಪಾಕಿಸ್ಥಾನ ಪರ ಘೋಷಣೆ ಕೂಗಿದ ವಿಚಾರಣಾಧೀನ ಖೈದಿ ಜಯೇಶ್‌ ಪೂಜಾರಿ

ಬೆಳಗಾವಿ, ಜೂನ್ 12: ಮಂಗಳೂರು ಮೂಲದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ.‌ ಪಾಕಿಸ್ತಾನ್ ಪರ ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಸೇರಿ ಕೋರ್ಟ್ ಒಳಗಡೆಯೇ ಧರ್ಮದೇಟು ನೀಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಸೇರಿದಂತೆ ಹಲವಾರು ಕೇಸುಗಳನ್ನು ಎದುರಿಸುತ್ತಿರುವ ಜಯೇಶ್ ಪೂಜಾರಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದು ಇಂದು ಕೋರ್ಟಿಗೆ ಹಾಜರುಪಡಿಸಲು ಕರೆತಂದಿದ್ದಾಗ ಕೃತ್ಯ ನಡೆದಿದೆ. ಕೋರ್ಟ್ ಒಳ ಭಾಗದಲ್ಲೇ ವಕೀಲರು, ಸಾರ್ವಜನಿಕರು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿದ್ದಾರೆ. ಏಟು ಬೀಳುತ್ತಿದ್ದಂತೆ ಆರೋಪಿಯನ್ನು ರಕ್ಷಣೆ ಮಾಡಿ ಪೊಲೀಸರು ಹೊರಗಡೆ ಕರೆದುಕೊಂಡು ಹೋಗಿದ್ದಾರೆ. 

ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದನು. ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಬೆದರಿಕೆ ಕರೆ ಮಾಡಿದ್ದನು. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿದ್ದರು.

ತನಿಖೆ ವೇಳೆ ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್​​ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದನು ಎಂದು ಪತ್ತೆಯಾಗಿತ್ತು. ಅಲ್ಲದೆ ಈತನಿಗೆ ಭಯೋತ್ಪಾದಕ ಅಫ್ಸರ್ ಪಾಷಾ ನಂಟಿರುವುದು ಪತ್ತೆಯಾಗಿತ್ತು.

ಆರೋಪಿ ಜಯೇಶ್ ಪೂಜಾರಿ ಮೂಲತಃ ಮಂಗಳೂರಿನ ಪುತ್ತೂರಿನವನಾಗಿದ್ದು ಮುಂಬೈನಲ್ಲಿದ್ದು ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು