ಕಾನ್‌ಸ್ಟೇಬಲ್ ಮಗನಿಂದ ಎಸ್ಪಿ ಕಚೇರಿ ಹಿಂದೆಯೇ ಗಾಂಜಾ ದಂಧೆ – 9 ಮಂದಿಗೆ ಜೈಲು

ತುಮಕೂರು : ಒಂದೆಡೆ ತಂದೆ ಸಾರ್ವಜನಿಕರಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಆತನ ಮಗನೇ ಗ್ಯಾಂಗ್ ಕಟ್ಟಿಕೊಂಡು ಹೈಡ್ರೋ ಗಾಂಜಾ(Hydro cannabis) ಮಾರಾಟ ಮಾಡುತ್ತಿದ್ದ ಆಘಾತಕಾರಿ ಘಟನೆ ತುಮಕೂರಿನಲ್ಲಿ(Tumkur) ಬೆಳಕಿಗೆ ಬಂದಿದೆ. ಪೊಲೀಸರ ರಹಸ್ಯ ‘ಕ್ಯೂಆರ್ ಕೋಡ್’ (QR Code) ಯೋಜನೆಯಿಂದಾಗಿ ಪೊಲೀಸ್ ಸಿಬ್ಬಂದಿಯ ಪುತ್ರ ಸೇರಿದಂತೆ ಒಟ್ಟು 9 ಮಂದಿ ಆರೋಪಿಗಳು ಕಂಬಿ ಎಣಿಸುವಂತಾಗಿದೆ.

ರಹಸ್ಯ ಬಯಲು ಮಾಡಿದ ‘ಕ್ಯೂಆರ್ ಕೋಡ್’
ತುಮಕೂರು ಉಪವಿಭಾಗದ ಡಿವೈಎಸ್‌ಪಿ ಚಂದ್ರಶೇಖರ್ ಅವರು ನಗರದಲ್ಲಿ ಮಾದಕ ದಂಧೆ ತಡೆಯಲು ಕ್ಯೂಆರ್ ಕೋಡ್ ಜಾಗೃತಿ ಅಭಿಯಾನ ಆರಂಭಿಸಿದ್ದರು. ಸಾರ್ವಜನಿಕರು ಗುಪ್ತವಾಗಿ ಮಾಹಿತಿ ನೀಡಲು ಮತ್ತು ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಡಲು ಈ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಜುಲೈ 10ರಂದು ಈ ಕ್ಯೂಆರ್ ಕೋಡ್ ಮೂಲಕ ಪೊಲೀಸರಿಗೆ ಬಂದ ಗೌಪ್ಯ ಸುಳಿವನ್ನು ಬೆನ್ನಟ್ಟಿದ ತಿಲಕ್ ಪಾರ್ಕ್ ಪೊಲೀಸರಿಗೆ ಅಚ್ಚರಿಯ ಸತ್ಯ ಕಾದಿತ್ತು.

ಬಿಸಿಎ ವಿದ್ಯಾರ್ಥಿಯ ಕರಾಳ ದಂಧೆ!
ತುಮಕೂರು ಎಸ್ಪಿ ಕಚೇರಿಯ ಹಿಂದಿನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಿದ್ದ ಪೊಲೀಸ್ ಸಿಬ್ಬಂದಿ ರಘುನಾಥ್ ಅವರ ಪುತ್ರ, ಬಿಸಿಎ ವಿದ್ಯಾರ್ಥಿ ದಿಶಾಂತ್ (21) ಎಂಬಾತನೇ ಈ ಗಾಂಜಾ ಜಾಲದ ಮುಖ್ಯಸ್ಥ. ಈತ ಬೆಂಗಳೂರಿನಿಂದ ವ್ಯವಸ್ಥಿತವಾಗಿ ಸಾಮಾನ್ಯ ಗಾಂಜಾ ಹಾಗೂ ಅತ್ಯಂತ ದುಬಾರಿಯಾದ ‘ಹೈಡ್ರೋ ಗಾಂಜಾ’ ತರಿಸಿಕೊಂಡು ತುಮಕೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುತ್ತಿದ್ದ.

ಫಾರ್ಚ್ಯೂನರ್ ಕಾರು ಜಪ್ತಿ, 9 ಮಂದಿ ಜೈಲಿಗೆ!
ಪ್ರಕರಣದ ಸುಳಿವು ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ತಿಲಕ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿ ದಿಶಾಂತ್ ಸೇರಿದಂತೆ ಬೆಂಗಳೂರಿನ ಮಂಜುನಾಥ್ (35), ತುಮಕೂರಿನ ಸತೀಶ್ (37), ಪ್ರಮೋದ್ (28), ದರ್ಶನ್ (31) ಮತ್ತು ಅಮೋಘ್ (31) ಎಂಬ ಆರು ಮಂದಿಯನ್ನು ಮೊದಲ ಹಂತದಲ್ಲಿ ಬಂಧಿಸಿದರು. ಇವರಿಂದ ಫಾರ್ಚ್ಯೂನರ್ ಕಾರು ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಯಿತು.

ಬಂಧಿತರ ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿದ ಪೊಲೀಸರು, ಮತ್ತಷ್ಟು ಸುಳಿವುಗಳನ್ನಿಟ್ಟುಕೊಂಡು ಇನ್ನು ಮೂವರನ್ನು ಸೆರೆಹಿಡಿದಿದ್ದಾರೆ. ಇದರೊಂದಿಗೆ ಈ ಹೈಟೆಕ್ ಗಾಂಜಾ ದಂಧೆಗೆ ಸಂಬಂಧಿಸಿದಂತೆ ಈವರೆಗೆ ಒಟ್ಟು 9 ಮಂದಿ ಜೈಲುಪಾಲಾಗಿದ್ದಾರೆ. ತಿಲಕ್ ಪಾರ್ಕ್ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಜಾಲದಲ್ಲಿದ್ದ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು