Tuesday, October 14, 2025

ಸತ್ಯ | ನ್ಯಾಯ |ಧರ್ಮ

ಗಾಜಾ ಕದನ ವಿರಾಮ: 20 ಜೀವಂತ ಒತ್ತೆಯಾಳುಗಳ ಬಿಡುಗಡೆ

ದೀರ್ ಅಲ್-ಬಲಾಹ್ (ಗಾಜಾ ಪಟ್ಟಿ): ಕದನ ವಿರಾಮ ಒಪ್ಪಂದದ ಅಡಿಯಲ್ಲಿ ಹಮಾಸ್ ಸಂಘಟನೆಯು ಗಾಜಾದಲ್ಲಿ ಒತ್ತೆಯಾಳುಗಳಾಗಿದ್ದ ಕೊನೆಯ 20 ಜನರನ್ನು ಸೋಮವಾರ ಬಿಡುಗಡೆ ಮಾಡಿದೆ. ಮೊದಲು ಮುಂಜಾನೆ ಏಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್, ನಂತರ ಕೆಲವು ಗಂಟೆಗಳ ನಂತರ ಉಳಿದ 13 ಒತ್ತೆಯಾಳುಗಳನ್ನು ಹಸ್ತಾಂತರಿಸಿತು.

ಈ ಬಿಡುಗಡೆಯಾದ 20 ಮಂದಿ ತಮ್ಮ ಕುಟುಂಬಗಳನ್ನು ಸೇರಿದ್ದು, ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ. ಉಳಿದ 28 ಒತ್ತೆಯಾಳುಗಳ ಮೃತದೇಹಗಳನ್ನೂ ಹಮಾಸ್ ಶೀಘ್ರದಲ್ಲೇ ಹಸ್ತಾಂತರಿಸುವ ನಿರೀಕ್ಷೆಯಿದೆ. ಮೊದಲ ಹಂತದ ಒತ್ತೆಯಾಳುಗಳ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಸುದ್ದಿ ಇಸ್ರೇಲ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ‘ಹೋಸ್ಟೇಜಸ್ ಸ್ಕ್ವೇರ್’ನಲ್ಲಿ ನೆರೆದಿದ್ದ ಕುಟುಂಬಸ್ಥರು ಸಂತೋಷದ ಕಣ್ಣೀರು ಹಾಕಿದರು. ಒತ್ತೆಯಾಳುಗಳು ಕುಟುಂಬಗಳನ್ನು ಸೇರುತ್ತಿರುವ ಫೋಟೋಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ.

ಪ್ಯಾಲೆಸ್ಟೀನಿಯನ್ ಕೈದಿಗಳ ಬಿಡುಗಡೆ:

ಇದೇ ವೇಳೆ, ಇಸ್ರೇಲ್‌ನ ಜೈಲುಗಳಲ್ಲಿದ್ದ ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಹೊತ್ತ ಬಸ್‌ಗಳು ವೆಸ್ಟ್‌ಬ್ಯಾಂಕ್‌ನ ರಾಮಲ್ಲಾ ಮತ್ತು ಗಾಜಾಪಟ್ಟಿಗೆ ಬಂದಿವೆ ಎಂದು ಹಮಾಸ್‌ನ ಕೈದಿಗಳ ಕಚೇರಿ ತಿಳಿಸಿದೆ. ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ ಇಸ್ರೇಲ್ 1,900ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿದೆ.

ಜಾಗತಿಕ ನಾಯಕರ ಪ್ರತಿಕ್ರಿಯೆಗಳು:

ಡೊನಾಲ್ಡ್ ಟ್ರಂಪ್ (ಅಮೆರಿಕ ಅಧ್ಯಕ್ಷ): “ಶಾಂತಿ ಸ್ಥಾಪನೆ ಒಪ್ಪಂದಕ್ಕೆ ಬದ್ಧನಾಗಿದ್ದೇನೆ. ಎರಡು ವರ್ಷಗಳ ಯುದ್ಧವು ಇಂದು ಅಂತ್ಯಕಂಡಿದೆ.”

ಕಿಯರ್ ಸ್ಟಾರ್ಮರ್ (ಬ್ರಿಟನ್ ಪ್ರಧಾನಿ): “ಕದನ ವಿರಾಮದ ಬಳಿಕ ಒತ್ತೆಯಾಳುಗಳ ಬಿಡುಗಡೆಯಾಗಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈ ನಿಟ್ಟಿನಲ್ಲಿ ಅವಿರತ ರಾಜತಾಂತ್ರಿಕ ಪ್ರಯತ್ನ ಮಾಡಿದ ಅಮೆರಿಕ, ಈಜಿಪ್ಟ್, ಕತಾರ್ ಮತ್ತು ಟರ್ಕಿಗೆ ಧನ್ಯವಾದಗಳು.”

ನರೇಂದ್ರ ಮೋದಿ (ಭಾರತದ ಪ್ರಧಾನಿ): “ಎರಡು ವರ್ಷಗಳ ಸೆರೆ ನಂತರ ಎಲ್ಲಾ ಒತ್ತೆಯಾಳುಗಳ ಬಿಡುಗಡೆ ಸ್ವಾಗತಾರ್ಹ. ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಡೊನಾಲ್ಡ್ ಟ್ರಂಪ್ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಭಾರತ ಬೆಂಬಲ ನೀಡಿತ್ತು.”

ಇಸ್ರೇಲ್‌ನಲ್ಲಿ ಡೊನಾಲ್ಡ್ ಟ್ರಂಪ್‌ಗೆ ಭವ್ಯ ಸ್ವಾಗತ:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲ್‌ಗೆ ಭೇಟಿ ನೀಡಿದರು. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದದ ಯಶಸ್ಸನ್ನು ಕಂಡು ಸಂಭ್ರಮಿಸಿದರು. ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜಾಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್‌ಗೆ ಭವ್ಯ ಸ್ವಾಗತ ನೀಡಿದರು. ಹೋಸ್ಟೇಜಸ್ ಸ್ಕ್ವೇರ್‌ನಲ್ಲಿ ನೆರೆದಿದ್ದ ಜನರು ಟ್ರಂಪ್ ಅವರನ್ನು ಕಂಡು ಘೋಷಣೆಗಳನ್ನು ಕೂಗಿದರು.

ಶಾಂತಿಸ್ಥಾಪನೆಗೆ ಕರೆ: ಟೆಲ್ ಅವೀವ್‌ನಲ್ಲಿ ಇಸ್ರೇಲ್ ಸಂಸದರಿಗೆ ಕರೆ ನೀಡಿದ ಟ್ರಂಪ್, “ಯುದ್ಧಭೂಮಿಯಲ್ಲಿ ಸಾಧಿಸುವುದಕ್ಕೆ ಏನೂ ಇಲ್ಲ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕಾರ್ಯೋನ್ಮುಖರಾಗಿ” ಎಂದು ಹೇಳಿದರು. “ಇಸ್ರೇಲ್ ಶಸ್ತ್ರ ಬಳಸಿ ಪಡೆಯಬೇಕಾಗಿದ್ದನ್ನು ನಮ್ಮ ನೆರವಿನಿಂದ ಪಡೆದುಕೊಂಡಿದೆ” ಎಂದರು.

ಸಂಘರ್ಷದಿಂದ ನಲುಗಿರುವ ಗಾಜಾವನ್ನು ಮರುಸ್ಥಾಪಿಸುವುದಾಗಿ ಟ್ರಂಪ್ ಭರವಸೆ ನೀಡಿದರು ಮತ್ತು ಭಯೋತ್ಪಾದನೆ ಹಾಗೂ ಹಿಂಸಾಚಾರದ ಹಾದಿಯನ್ನು ಬದಲಿಸುವಂತೆ ಪ್ಯಾಲೆಸ್ಟೀನಿಯನ್ನರನ್ನು ಒತ್ತಾಯಿಸಿದರು. ಟ್ರಂಪ್ ಅವರು ಇಸ್ರೇಲ್‌ನಲ್ಲಿ ಒತ್ತೆಯಾಳುಗಳ ಕುಟುಂಬಗಳನ್ನು ಭೇಟಿ ಮಾಡಿದ ನಂತರ ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಮಾಹಿತಿ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page