Friday, June 14, 2024

ಸತ್ಯ | ನ್ಯಾಯ |ಧರ್ಮ

ಗಾಜಾಪಟ್ಟಿ ಈಗ ಅಕ್ಷರಶಃ ನರಕ!

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನದಲ್ಲಿ ಈಗ ಪರಿಸ್ಥಿತಿ ಕೈ ಮೀರಿದೆ. ಹಮಾಸ್ ನನ್ನು ಬಗ್ಗು ಬಡಿಯುವ ಇಸ್ರೇಲ್ ನ ಆವೇಶಕ್ಕೆ ಈಗ ಗಾಜಾಪಟ್ಟಿಯಲ್ಲಿ ಅಕ್ಷರಶಃ ನರಕಸದೃಶ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಸೈರನ್ ಶಬ್ದ, ನೆಲಕ್ಕುರುಳಿದ ಬಹು ಅಂತಸ್ತಿನ ಕಟ್ಟಡಗಳು ಎಲ್ಲಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲೆಲ್ಲ ಅಮಾಯಕರ ಹೆಣಗಳು ಭಯಾನಕ ವಾತಾವರಣ ಸೃಷ್ಟಿ ಮಾಡಿದೆ.

ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ಪರಿಣಾಮ ಭಯ ಆವರಿಸಿರುವ ಕಾರಣ ಅಮಾಯಕ ಜನ ಊರು ಬಿಟ್ಟು ಹೋಗಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಜನರು ಗಾಜಾಪಟ್ಟಿ ಬಿಟ್ಟು ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ತಾವು ಹುಟ್ಟಿ ಬೆಳದ ಊರು ಸ್ಥಳ ಬಿಟ್ಟು, ಜೀವ ಉಳಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಗಾಜಾಪಟ್ಟಿ ಒಳಗೆ ನರಳುತ್ತಿರುವ ಜನರಿಗೂ ಔಷಧದ ಕೊರತೆ ಎದುರಾಗಿದೆ.

ಈಗಾಗಲೇ ಗಾಜಾಪಟ್ಟಿ ತೊರೆಯಲು ಇಸ್ರೇಲ್ ಗಾಜಾ ನಿವಾಸಿಗಳಿಗೆ ಎರಡು ದಿನಗಳ ಗಡುವು ನೀಡಿತ್ತು. ಪರಿಸ್ಥಿತಿಯ ಭೀಕರತೆ ಅರಿತ ಹಲವು ಮಂದಿ ತಮ್ಮ ಜಾಗ ಖಾಲಿ ಮಾಡಿದ್ದರು. ಅಷ್ಟಾದರೂ ಮುಂದಿನ ನೆಲೆಯ ಬಗ್ಗೆ ದಿಕ್ಕು ಕಾಣದ ಮಂದಿ ಎಲ್ಲಿ ಹೋಗುವುದು ಎಂಬುದು ತೋಚದೇ ಅಲ್ಲೇ ಉಳಿದಿದ್ದರು.

ಈ ನಡುವೆ ಯಾವುದೇ ಪರಿಸ್ಥಿತಿ ಕೈಮೀರುವಂತೆ, ಆಕ್ರಮಣಕಾರಿ ದಾಳಿಗೆ ಇಸ್ರೇಲ್ ಕೈ ಹಾಕಬಾರದು ಎಂದು ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ ಇಸ್ರೇಲ್ ಇದ್ಯಾವುದನ್ನೂ ಲೆಕ್ಕಕ್ಕೆ ತಗೆದುಕೊಳ್ಳದೇ ಹಮಾಸ್ ಬೆನ್ನಿಗೆ ಬಿದ್ದು ಅಕ್ಷರಶಃ ಇಡೀ ಗಾಜಾವನ್ನು ಧ್ವಂಸ ಮಾಡಲು ಹೊರಟಿದೆ. ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ, ಕಟ್ಟಗಳ ಕೆಳಗೆ ಸಿಲುಕಿ ನರಳುತ್ತಿರುವ ಜನರಿಗೆ ಅನ್ನ, ನೀರು ಸಹ ಸಿಗದಿರುವುದು ನೋಡಿದರೆ ಎರಡನೇ ಮಹಾಯುದ್ಧದ ನೆನಪನ್ನು ಮತ್ತೆ ಮರುಕಳಿಸಿದೆ.

ಗಾಜಾದಲ್ಲಿ 4 ಆಸ್ಪತ್ರೆಗಳು ಈಗಾಗಲೇ ಕೆಲಸ ನಿಲ್ಲಿಸಿದ್ದು 21 ಆಸ್ಪತ್ರೆಗಳಿಗೆ ಮುಚ್ಚುವಂತೆ ಇಸ್ರೇಲ್‌ ಆದೇಶ ನೀಡಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ನಡುವೆ ರೋಗಿಗಳು ಹಾಗೂ ಚಿಕ್ಕ ಚಿಕ್ಕ ಮಕ್ಕಳ ನರಳಾಟ ಮುಂದುವರಿದಿದೆ.

ಪಟ್ಟು ಬಿಡದ ಹಮಾಸ್

ಇಷ್ಟಾದರೂ ಹಮಾಸ್ ಮಾತ್ರ ತಮ್ಮ ಹಠ ಸಾಧನೆಗೆ ಇನ್ನಿಲ್ಲದ ಕಸರತ್ತು ಮಾಡಲು ಹೊರಟಿದ್ದಾರೆ. ಇಸ್ರೇಲ್ ನ ದಾಳಿಗೆ ಇಡೀ ಗಾಜಾದಲ್ಲಿ ಆಹಾರ ಮತ್ತು ಔಷಧಕ್ಕೆ ತತ್ವಾರ ಆಗಿರುವಾಗ, ಪ್ಯಾಲೆಸ್ತೇನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ನಿರಾಶ್ರಿತರ ರಕ್ಷಣಾ ಶಿಬಿರದ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ಅಪಾರ ಪ್ರಮಾಣದ ಇಂಧನ ಮತ್ತು ಔಷಧೀಯ ಪರಿಕರಗಳನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದ್ದು, ಗಾಜಾಪಟ್ಟಿ ಸಮೀಪದ ಪೂರ್ವದಲ್ಲಿ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣ ಇಂಧನ ಮತ್ತು ವೈದ್ಯಕೀಯ ಉಪಕರಣಗಳನ್ನು ಹಮಾಸ್ ಉಗ್ರ ಸಂಘಟನೆ ಕದ್ದಿದೆ ಎಂದು ಆರೋಪಿಸಿದೆ.

ಆದರೆ ಹಮಾಸ್ ಮೇಲೆ ಜಾಗತಿಕವಾಗಿ ತಪ್ಪು ಅಭಿಪ್ರಾಯ ರೂಪಿಸುವ ಕಾರಣಕ್ಕೆ ಇಸ್ರೇಲ್ ಇಂತಹದ್ದೊಂದು ಸುಳ್ಳು ಮಾಹಿತಿಯನ್ನು ರವಾನೆ ಮಾಡುತ್ತಿದೆ ಎಂದು ಪ್ಯಾಲೆಸ್ತೇನ್ ಪರ ನಿಂತವರ ಅಭಿಪ್ರಾಯವಾಗಿದೆ. ಅದಕ್ಕೆ ಸರಿಯಾಗಿ ಇಸ್ರೇಲ್ ಈ ಆಹಾರ ಮತ್ತು ಔಷಧಿ ಕದ್ದ ಪ್ರಕರಣವನ್ನು ಹಮಾಸ್ ತಲೆಗೆ ಕಟ್ಟಲು ಪ್ರಯತ್ನಿಸಿದೆ. ಆದರೆ ವಿಶ್ವಸಂಸ್ಥೆಯ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಈ ಒಂದು ಆರೋಪವನ್ನು ತಳ್ಳಿ ಹಾಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು, ನಮ್ಮ ಶಿಬಿರಗಳಿಂದ ಯಾವುದೇ ಲೂಟಿ ಆಗಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಚಿತ್ರಗಳು ತಪ್ಪು ಅಭಿಪ್ರಾಯ ಸೃಷ್ಟಿಸುತ್ತಿವೆ ಎಂದು ಸ್ಪಷ್ಟನೆ ನೀಡಿದೆ.

ಈ ಒಂದು ಬೆಳವಣಿಗೆ ಇಟ್ಟುಕೊಂಡು ಇಸ್ರೇಲ್ ಸೇನೆ ಇನ್ನಷ್ಟು ಬಿಗಿಯಾಗಿ ತನ್ನ ಕಾರ್ಯಾಚರಣೆ ಮುಂದುವರೆಸಬಹುದು ಎನ್ನಬಹುದು. ಸ್ವತಃ ಪ್ಯಾಲೆಸ್ತೇನಿಯರ ರಕ್ಷಣೆಗೆ ನಿಂತ ವಿಶ್ವಸಂಸ್ಥೆಯ ಶಿಬಿರಕ್ಕೂ ದಾಳಿ ಮಾಡಿದ ಹಮಾಸ್ ಉಗ್ರರನ್ನು ಬಿಡುವ ಮಾತೇ ಇಲ್ಲ ಎಂದು ಇಸ್ರೇಲ್ ನಿರ್ಧಾರ ತಗೆದುಕೊಂಡರೆ, ಪರಿಸ್ಥಿತಿ ಇನ್ನಷ್ಟು ಭೀಕರತೆ ಪಡೆದುಕೊಳ್ಳಲಿದೆ.

ಇನ್ನೊಂದು ಕಡೆ ಪ್ಯಾಲೆಸ್ತೇನ್ ಪರವಾಗಿ ರಷ್ಯಾ ತನ್ನ ಬೆಂಬಲ ಸೂಚಿಸಿದ್ದು, ಇಸ್ರೇಲ್ ಪರವಾಗಿ ಅಮೇರಿಕಾ ನಿಂತಿದೆ. ಈ ನಡುವೆ ಯುದ್ಧ ನಿಲ್ಲಿಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂಬ ಕೂಗು ಸಹ ಶಾಂತಿಪ್ರಿಯರದ್ದಾಗಿವೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಕದನ ಕೇವಲ ಅವೆರಡು ದೇಶಗಳ ನಡುವಿನ ಕದನವಾಗಿರದೇ ವಿಶ್ವ ಮಟ್ಟದಲ್ಲಿ ಪ್ರತಿಷ್ಠೆ ಪ್ರದರ್ಶನದ ಕಣವಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು