ರಾಂಚಿ: ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್‌ನಲ್ಲಿ ಜೆನ್-ಝೀ (Gen-Z) ಯುವಜನರ ಪ್ರತಿಭಟನೆ ತೀವ್ರಗೊಂಡಿದೆ.
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್‌ಸಿ) ಹಾಗೂ ಜಾರ್ಖಂಡ್ ಸಿಬ್ಬಂದಿ ನೇಮಕಾತಿ ಆಯೋಗ (ಜೆಎಸ್‌ಎಸ್‌ಸಿ) ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ರಾಂಚಿಯಲ್ಲಿ ನೂರಾರು ವಿದ್ಯಾರ್ಥಿಗಳು ವಾರಕ್ಕೂ ಹೆಚ್ಚು ಕಾಲದಿಂದ ಆಮರಣಾಂತ್ಯ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 14ನೇ ಜೆಪಿಎಸ್‌ಸಿ ಸಂಯೋಜಿತ ನಾಗರಿಕ ಸೇವೆಗಳ (ಕಾಂಬೈನ್ಡ್ ಸಿವಿಲ್ ಸರ್ವಿಸಸ್) ಪರೀಕ್ಷೆಗೆ ಸಂಬಂಧಿಸಿದ ವಿವಾದವು ಈ ಪ್ರತಿಭಟನೆಗೆ ತಕ್ಷಣದ ಕಾರಣವಾಗಿದ್ದರೂ, ರಾಜ್ಯದ ನೇಮಕಾತಿ ವ್ಯವಸ್ಥೆಯಲ್ಲಿ ವರ್ಷಗಳಿಂದ ನಡೆಯುತ್ತಿರುವ ವಿಳಂಬ, ಪಾರದರ್ಶಕತೆಯ ಕೊರತೆ ಹಾಗೂ ಅಕ್ರಮಗಳಿಗೆ ಈ ಹೋರಾಟವು ಕನ್ನಡಿ ಹಿಡಿದಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪ್ರತಿಭಟನೆಯ ಮೂಲ..
14ನೇ ಜೆಪಿಎಸ್‌ಸಿ ಸಂಯೋಜಿತ ನಾಗರಿಕ ಸೇವೆಗಳ ಪರೀಕ್ಷೆಗೆ ಸಂಬಂಧಿಸಿದ ವಿವಾದವೇ ಪ್ರಸ್ತುತ ಪ್ರತಿಭಟನೆಗೆ ತಕ್ಷಣದ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಯೋಗವು 103 ಖಾಲಿ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿತ್ತು. ಜುಲೈ ಆರಂಭದಲ್ಲಿ ಮೊದಲ ಹಂತದ (ಪ್ರಿಲಿಮಿನರಿ) ಪರೀಕ್ಷಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಮುಖ್ಯ ಪರೀಕ್ಷೆಗಾಗಿ 2,204 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ಫಲಿತಾಂಶ ಹೊರಬಿದ್ದ ತಕ್ಷಣವೇ ಅಭ್ಯರ್ಥಿಗಳು ಅಕ್ರಮಗಳು ನಡೆದಿವೆ ಎಂದು ಆರೋಪಿಸಲು ಶುರುಮಾಡಿದರು.
ವರ್ಗವಾರು ಅರ್ಹತಾ ಅಂಕಗಳನ್ನು (ಕಟ್‌ಆಫ್) ಪ್ರಕಟಿಸದಿರುವುದು ವಿದ್ಯಾರ್ಥಿಗಳು ಎತ್ತಿದ ಪ್ರಮುಖ ಆಕ್ಷೇಪಗಳಲ್ಲಿ ಒಂದಾಗಿದೆ. ಅಲ್ಲದೆ, ಬಿಡುಗಡೆ ಮಾಡಲಾದ ಮೆರಿಟ್ ಪಟ್ಟಿಯಲ್ಲಿ ಆಯೋಗದ ಸದಸ್ಯರ ಸಹಿ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇದು ಇಡೀ ಪ್ರಕ್ರಿಯೆಯ ಕುರಿತು ಅನುಮಾನಗಳಿಗೆ ಎಡೆಮಾಡಿಕೊಟ್ಟಿತು. ಆಯ್ಕೆಯಾದ ಅಭ್ಯರ್ಥಿಯೊಬ್ಬರಿಗೆ ಸೇರಿದ್ದು ಎನ್ನಲಾದ ಒಎಂಆರ್ ಉತ್ತರ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರೊಂದಿಗೆ ಈ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿತು.
ಅರ್ಹತೆ ಪಡೆಯಲು ಅಗತ್ಯವಿದ್ದ 144 ಅಂಕಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಎಂದರೆ ಕೇವಲ 48 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದರೂ ಸಹ, ಆ ಅಭ್ಯರ್ಥಿಯನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಆ ಒಎಂಆರ್ ಶೀಟ್‌ನ ಅಧಿಕೃತತೆ ಇನ್ನೂ ದೃಢಪಟ್ಟಿಲ್ಲವಾದರೂ, ಈ ಘಟನೆಯಿಂದಾಗಿ ಅಕ್ರಮಗಳ ತನಿಖೆಗೆ ಒತ್ತಾಯ ಹೆಚ್ಚಾಯಿತು. ಈ ಆರೋಪಗಳ ಹಿನ್ನೆಲೆಯಲ್ಲಿ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಸಿಟ್) ರಚಿಸುವಂತೆ ರಾಜ್ಯ ಸಿಐಡಿಗೆ ಜಾರ್ಖಂಡ್ ಸರ್ಕಾರ ಆದೇಶಿಸಿದೆ. ಆದರೆ ತಮ್ಮ ಹೋರಾಟ ಕೇವಲ 14ನೇ ಜೆಪಿಎಸ್‌ಸಿ ಪರೀಕ್ಷೆಗೆ ಮಾತ್ರ ಸೀಮಿತವಾಗಿಲ್ಲ ಎಂದು ವಿದ್ಯಾರ್ಥಿ ನಾಯಕರು ಹೇಳುತ್ತಿದ್ದಾರೆ.
ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಹಾಗೂ ಇತರ ರಾಜ್ಯ ನೇಮಕಾತಿ ಸಂಸ್ಥೆಗಳು ನಡೆಸುವ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳು, ಪರೀಕ್ಷೆಗಳ ವಿಳಂಬ ಹಾಗೂ ಪಾರದರ್ಶಕತೆಯ ಕೊರತೆಯಂತಹ ವಿಷಯಗಳ ಕುರಿತು ವರ್ಷಗಳಿಂದ ಶೇಖರಣೆಗೊಂಡಿದ್ದ ಅಸಮಾಧಾನವೇ ಈ ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದ್ದಾರೆ.
ಸಿಜೆಪಿ ಬೆಂಬಲ
ವಿದ್ಯಾರ್ಥಿಗಳ ಈ ಚಳವಳಿಗೆ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಸಹ ಬೆಂಬಲ ಪ್ರಕಟಿಸಿದೆ. ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ ಮತ್ತು ಅಶುತೋಷ್ ರಾಂಕಾ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ಪಕ್ಷ ತಿಳಿಸಿದೆ. ಈ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ ಅವರು, ಜೆಪಿಎಸ್‌ಸಿ ಹಾಗೂ ಜೆಎಸ್‌ಎಸ್‌ಸಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಕುರಿತು ಅಭ್ಯರ್ಥಿಗಳ ಆತಂಕಗಳನ್ನು ಚರ್ಚಿಸಿದ್ದಾರೆ.
ವಾಂಗ್ಚುಕ್ 2.0
ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ನಡೆಸಿದ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿವೆ. ಈ ನಡುವೆ ಜಾರ್ಖಂಡ್‌ನಲ್ಲಿ ಮತ್ತೊಬ್ಬ ಸೋನಮ್ ವಾಂಗ್ಚುಕ್ ಎಂಬಂತೆ ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹತೋ ಅವರ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಪ್ರಿಲಿಮಿನರಿ ಪತ್ರಿಕೆಯಲ್ಲಿ ನಡೆದ ಅಕ್ರಮಗಳ ವಿರುದ್ಧ ಅವರು ಕಳೆದ ರವಿವಾರ ರಾತ್ರಿಯಿಂದ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ದೇವೇಂದ್ರ ಮಾತನಾಡಿ, “ಕೆಲವು ವಾರಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಜುಲೈ 5 ರಂದು ಪರೀಕ್ಷಾ ಫಲಿತಾಂಶ ಬಂದಾಗಿನಿಂದಲೂ ಪರೀಕ್ಷೆಯಲ್ಲಿ ನಡೆದ ಅಕ್ರಮಗಳು ಹೊರಬರುತ್ತಿವೆ. ಜುಲೈ 25 ರಿಂದ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದೇನೆ,” ಎಂದು ತಿಳಿಸಿದ್ದಾರೆ. ಈ ಪರೀಕ್ಷೆಯ ಕುರಿತು ಸಿಬಿಐ ಹಾಗೂ ಈಡಿ ತನಿಖೆ ನಡೆಸಬೇಕೆಂದು ದೇವೇಂದ್ರ ಒತ್ತಾಯಿಸಿದ್ದಾರೆ.
