Saturday, May 17, 2025

ಸತ್ಯ | ನ್ಯಾಯ |ಧರ್ಮ

ಕೆಲಸದ ಸ್ಥಳದಲ್ಲಿ ಮಹಿಳೆಯರ ಪ್ರಗತಿಗೆ ಲಿಂಗ ತಾರತಮ್ಯ ಅಡ್ಡಿ: ಭಾರತ, ನೈಜೀರಿಯಾ ಮತ್ತು ಕೀನ್ಯಾದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದ ಮೆಕಿನ್ಸೆ ವರದಿ

ದೆಹಲಿ: ಭಾರತದಲ್ಲಿ ಲಿಂಗ ತಾರತಮ್ಯ ಸಮಸ್ಯೆ ಎನ್ನುವುದು ಎಲ್ಲಾ ವಲಯಗಳಲ್ಲೂ ಕಳವಳಕಾರಿ ಮಟ್ಟದಲ್ಲಿದೆ. ಎಷ್ಟೇ ಸರ್ಕಾರಗಳು ಬದಲಾದರೂ ಈ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ. ಸರ್ಕಾರಿ ಮೇಲ್ವಿಚಾರಣೆ ಇರುವ ಔಪಚಾರಿಕ ವಲಯದಲ್ಲೂ ಇದೇ ಪರಿಸ್ಥಿತಿ ಇದೆ. ಲಿಂಗ ತಾರತಮ್ಯದಿಂದಾಗಿ ಮಹಿಳೆಯರು ಹಿಂದುಳಿಯುತ್ತಿದ್ದಾರೆ. ಭಾರತ, ನೈಜೀರಿಯಾ ಮತ್ತು ಕೀನ್ಯಾದಂತಹ ದೇಶಗಳಲ್ಲಿ ಔಪಚಾರಿಕ ವಲಯಗಳಲ್ಲಿ ಜೆಂಡರ್‌ ಗ್ಯಾಪ್ ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ಮೆಕಿನ್ಸೆ ವರದಿ ಹೇಳುತ್ತದೆ.

1.4 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ನೇಮಿಸಿಕೊಂಡಿರುವ 324 ಸಂಸ್ಥೆಗಳ ದತ್ತಾಂಶವನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ. ಇದು ಸಾಂಸ್ಥಿಕ ಅಡೆತಡೆಗಳು ಮತ್ತು ನಿರ್ದಿಷ್ಟ ಸವಾಲುಗಳನ್ನು ಎತ್ತಿ ತೋರಿಸಿದೆ.

ಈ ವರದಿಯ ಪ್ರಕಾರ, ಭಾರತದಲ್ಲಿ ಈ ಪರಿಸ್ಥಿತಿಗಳು ತೀವ್ರ ಕಳವಳಕಾರಿಯಾಗಿವೆ. ಮಹಿಳೆಯರು ಆರಂಭಿಕ ಹಂತದಿಂದ ವ್ಯವಸ್ಥಾಪಕ ಹುದ್ದೆಗಳವರೆಗೆ ತಮ್ಮ ಪ್ರಗತಿಗೆ ಅಡ್ಡಿಯಾಗುವ ಕಠಿಣ ಹಂತವನ್ನು ಎದುರಿಸುತ್ತಿದ್ದಾರೆ. ಭಾರತದ ಔಪಚಾರಿಕ ಖಾಸಗಿ ವಲಯದ ಮಹಿಳೆಯರು ತಮ್ಮ ವೃತ್ತಿಜೀವನವನ್ನು ಮುಂದುವರಿಸುವಲ್ಲಿ ಸವಾಲುಗಳನ್ನು ಎದುರಿಸುತ್ತಾರೆ.

ಅವರಿಗೆ ಆರಂಭಿಕ ಹಂತದಿಂದ ವ್ಯವಸ್ಥಾಪಕ ಹುದ್ದೆಗಳವರೆಗೆ ಬಡ್ತಿಗೆ ಅವಕಾಶಗಳು ಸಿಗುತ್ತಿಲ್ಲ. ಇದು ಅವರ ವೃತ್ತಿಜೀವನದ ಪ್ರಗತಿಯನ್ನು ಸೀಮಿತಗೊಳಿಸುತ್ತಿದೆ. ವಿಶ್ವವಿದ್ಯಾಲಯಗಳ ಪದವೀಧರರಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರಿದ್ದರೂ, ಹಿರಿಯ ಹಂತಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆಯಾಗಿದೆ. ಆರಂಭಿಕ ಅಡೆತಡೆಗಳು, ಕಾರ್ಯಪಡೆಯಲ್ಲಿನ ತೀವ್ರ ಕುಸಿತವು ಔಪಚಾರಿಕ ವಲಯದಲ್ಲಿ ಮುನ್ನಡೆಯದಂತೆ ಮಹಿಳೆಯರನ್ನು ತಡೆಯುತ್ತಿದೆ.

ವಿಶ್ವವಿದ್ಯಾನಿಲಯದ ಪದವೀಧರರಲ್ಲಿ ಮಹಿಳೆಯರು ಶೇಕಡಾ 48ರಷ್ಟಿದ್ದರೂ, ಅವರು ಪ್ರವೇಶ ಮಟ್ಟದ ಕೆಲಸಗಳಲ್ಲಿ ಕೇವಲ ಶೇಕಡಾ 33ರಷ್ಟನ್ನು ಮಾತ್ರ ಪ್ರತಿನಿಧಿಸುತ್ತಾರೆ ಎಂಬುದು ಗಮನಾರ್ಹ. ಈ ಪ್ರಾತಿನಿಧ್ಯವು ವ್ಯವಸ್ಥಾಪಕ ಮಟ್ಟದಲ್ಲಿ ಮತ್ತಷ್ಟು ಕುಸಿತವನ್ನು ಕಾಣುತ್ತಿದೆ.

ಕೇವಲ 24 ಪ್ರತಿಶತ ಮಹಿಳೆಯರಷ್ಟೇ ಮಾತ್ರ ಅಂತಹ ಸ್ಥಾನಗಳಲ್ಲಿದ್ದಾರೆ. ಈ ಮಟ್ಟದಲ್ಲಿ ಪುರುಷರು ಬಡ್ತಿ ಪಡೆಯುವ ಸಾಧ್ಯತೆ 2.1 ಪಟ್ಟು ಹೆಚ್ಚು ಎಂದು ವರದಿಯಾಗಿದೆ. ಇದು ಅಭಿವೃದ್ಧಿ ಅವಕಾಶಗಳಲ್ಲಿನ ವ್ಯವಸ್ಥಿತ ಲಿಂಗ ಅಸಮಾನತೆಗಳನ್ನು ಎತ್ತಿ ತೋರಿಸುತ್ತದೆ.

ಭಾರತೀಯ ಖಾಸಗಿ ವಲಯದಲ್ಲಿ ಸಿ-ಸೂಟ್ ಹುದ್ದೆಗಳಲ್ಲಿ ಮಹಿಳೆಯರು ಕೇವಲ 17 ಪ್ರತಿಶತವನ್ನು ಮಾತ್ರ ಹೊಂದಿದ್ದಾರೆ. ಇದು ಹಿರಿಯ ನಾಯಕತ್ವಕ್ಕೆ ಮಹಿಳೆಯರಿಗೆ ಇರುವ ಸೀಮಿತ ಪ್ರವೇಶವನ್ನು ಎತ್ತಿ ತೋರಿಸುತ್ತದೆ. ಮಹಿಳೆಯರು ತಡವಾಗಿ ಉದ್ಯೋಗಕ್ಕೆ ಪ್ರವೇಶಿಸುವಲ್ಲಿ ವಯಸ್ಸು ಕೂಡ ಪ್ರಮುಖ ಅಂಶವಾಗುತ್ತಿದೆ.

ಮಹಿಳೆಯರು ಪುರುಷರಿಗಿಂತ ಬಹಳ ತಡವಾಗಿ ಉದ್ಯೋಗಕ್ಕೆ ಸೇರುತ್ತಾರೆ. ಈ ನಿಟ್ಟಿನಲ್ಲಿ, ಆರಂಭದಲ್ಲಿ ಪುರುಷರ ಸರಾಸರಿ ವಯಸ್ಸು 32 ವರ್ಷಗಳು, ಆದರೆ ಮಹಿಳೆಯರ ವಯಸ್ಸು 39 ವರ್ಷಗಳು. ಅಂದರೆ ಸರಾಸರಿ ವಯಸ್ಸಿನ ಅಂತರ ಏಳು ವರ್ಷಗಳು. ಈ ಅಸಮಾನತೆಗಳು ಕೆಲವು ವಲಯಗಳಲ್ಲಿ ಇನ್ನೂ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ.

ಹಣಕಾಸು ಸೇವೆಗಳಲ್ಲಿ ಆರಂಭಿಕ ಹಂತದ ಹುದ್ದೆಗಳಲ್ಲಿ ಮಹಿಳೆಯರು ಶೇಕಡಾ 31ರಷ್ಟು ಇದ್ದಾರೆ. ಆದರೆ, ಕೇವಲ ಮಾತ್ರ ಸಿ-ಸೂಟ್‌ ಮಟ್ಟದಲ್ಲಿ ಇವರ ಸಂಖ್ಯೆ ಕೇವಲ ಶೇ. 13ರಷ್ಟು ಎಂಬುದು ಗಮನಾರ್ಹ. ಕಾನೂನು ವೃತ್ತಿಯೂ ಸಹ ಇದೇ ರೀತಿಯ ಕುಸಿತವನ್ನು ತೋರಿಸುತ್ತಿದೆ. ಆರಂಭಿಕ ಹಂತದ ಹುದ್ದೆಗಳಲ್ಲಿ ಮಹಿಳೆಯರ ಪ್ರಮಾಣ ಶೇ 51 ರಷ್ಟು. ಆದರೆ ಹಿರಿಯ ನಾಯಕತ್ವದಲ್ಲಿ ಅವರ ಪಾಲು ಕೇವಲ ಶೇ. 32 ರಷ್ಟು ಮಾತ್ರ.

ಸಾಮಾಜಿಕ ವಿಜ್ಞಾನಿಗಳು ಮತ್ತು ಕಾರ್ಯಕರ್ತರು ‘ಸರ್ಕಾರಗಳು ಅವರನ್ನು ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಕೆಲಸ ಮಾಡುವ, ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳು ಮತ್ತು ಜವಾಬ್ದಾರಿಗಳನ್ನು ಎದುರಿಸುತ್ತಿರುವ ಮಹಿಳೆಯರ ಸಮಸ್ಯೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳುತ್ತಾರೆ.

ಮಹಿಳಾ ಸಬಲೀಕರಣ ಸಾಧಿಸಲು ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಸರ್ಕಾರಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸುತ್ತಾರೆ. ಈ ನಿಟ್ಟಿನಲ್ಲಿ ಔಪಚಾರಿಕ ವಲಯದ ಸಂಸ್ಥೆಗಳಿಗೂ ಆದೇಶಗಳನ್ನು ನೀಡಬೇಕು ಎಂದು ಅವರು ಹೇಳುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page