ಬೆಂಗಳೂರು: ಕೇಂದ್ರದ ನರೇಂದ್ರ ಮೋದಿ ಸರಕಾರದ ಜನ ವಿರೋಧಿ, ಕಾರ್ಪೊರೇಟ್ ಪರ ನೀತಿಗಳಿಗೆ ಎದುರಾಗಿ, ಕಾರ್ಮಿಕ ಕಾಯ್ದೆಗಳನ್ನು ರದ್ದುಗೊಳಿಸಿ, ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೆ ತಂದಿರುವುದನ್ನು ವಿರೋಧಿಸಿ, ಅಪಾಯಕಾರಿ ವಿದ್ಯುತ್ ಮಸೂದೆ, ಬೀಜ ಮಸೂದೆಗಳ ವಿರುದ್ಧ, ಉದ್ಯೋಗ ಖಾತ್ರಿ ಯೋಜನೆಯನ್ನು ಮರು ಸ್ಥಾಪಿಸಲು ಒತ್ತಾಯಿಸಿ ಫೆಬ್ರವರಿ 12, 2026 ರಂದು ದೇಶವ್ಯಾಪಿ ಮಹಾ ಮುಷ್ಕರ ನಡೆಯಲಿದೆ. ದೇಶದ ಪ್ರಧಾನ ಕಾರ್ಮಿಕ ಸಂಘಟನೆಗಳು, ರೈತ, ಕೂಲಿಕಾರ ಸಂಘಟನಗಳು ಈ ಮಹಾ ಮುಷ್ಕರಕ್ಕೆ ಕರೆ ನೀಡಿವೆ. ಅಂದು ಇಡೀ ದೇಶ ಸ್ಥಬ್ದಗೊಳ್ಳುವ ಸಾಧ್ಯತೆ ಇದೆ.
ದೇಶವ್ಯಾಪಿ ನಡೆಯುವ ದುಡಿಯುವ ಜನರ ಈ ಮಹಾ ಮುಷ್ಕರದ ಸಿದ್ದತೆಯ ಭಾಗವಾಗಿ ಕರ್ನಾಟಕದ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ, ರೈತ, ಕೂಲಿಕಾರರ ಸಂಘಗಳು ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ರಾಜ್ಯ ಮಟ್ಟದ ಜಂಟಿ ಸಮಾವೇಶ ನಡೆಸಿದವು. ಫೆಬ್ರವರಿ 12 ರ ಮಹಾ ಮುಷ್ಕರವನ್ನು ಯಶಸ್ಸುಗೊಳಿಸುವುದಾಗಿ ಘೋಷಿಸಿದವು.
