Saturday, August 9, 2025

ಸತ್ಯ | ನ್ಯಾಯ |ಧರ್ಮ

ಗಾಜಾ ವಶಕ್ಕೆ ಇಸ್ರೇಲ್ ಸಂಪುಟ ಒಪ್ಪಿಗೆ; ಇಸ್ರೇಲ್‌ಗೆ ಸೇನಾ ಉತ್ಪನ್ನಗಳನ್ನು ರಫ್ತು ಮಾಡದಿರಲು ಜರ್ಮನಿ ನಿರ್ಧಾರ

ಟೆಲ್ ಅವೀವ್: ಗಾಜಾವನ್ನು ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್‌ನ ಭದ್ರತಾ ಸಂಪುಟವು ಅನುಮೋದನೆ ನೀಡಿದೆ. ಸರ್ಕಾರದ ಪೂರ್ಣ ಪ್ರಮಾಣದ ಸಂಪುಟದ ಅನುಮೋದನೆ ದೊರೆತರೆ, ಈ ಯೋಜನೆಯು ತಕ್ಷಣವೇ ಜಾರಿಗೆ ಬರಲಿದೆ. ಇಸ್ರೇಲ್ ಈಗಾಗಲೇ ಗಾಜಾ ಗಡಿಗೆ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ಕಳುಹಿಸಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತಿವೆ ಎಂಬ ವರದಿಗಳು ಬಂದಿವೆ.

ಹಮಾಸ್ ಸಂಘಟನೆಯನ್ನು ನಾಶಪಡಿಸುವುದು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವುದು, ಗಾಜಾವನ್ನು ಸೈನ್ಯರಹಿತ ಪ್ರದೇಶವನ್ನಾಗಿ ಮಾಡುವುದು, ಗಾಜಾಕ್ಕೆ ಇಸ್ರೇಲ್ ಭದ್ರತೆ ಒದಗಿಸುವುದು, ಮತ್ತು ಗಾಜಾವನ್ನು ತಾತ್ಕಾಲಿಕ ಸರ್ಕಾರಕ್ಕೆ ಹಸ್ತಾಂತರಿಸುವುದು – ಈ ಐದು ಅಂಶಗಳೊಂದಿಗೆ ಇತ್ತೀಚಿನ ಯೋಜನೆಯನ್ನು ರೂಪಿಸಲಾಗಿದೆ.

ಗಾಜಾವನ್ನು ವಶಪಡಿಸಿಕೊಳ್ಳುವುದು ತಮ್ಮ ಉದ್ದೇಶವಲ್ಲ, ಹಮಾಸ್ ಉಗ್ರರ ಬಳಿ ಇರುವ ತಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸಿಕೊಂಡು, ಆ ಪ್ರದೇಶವನ್ನು ತಾತ್ಕಾಲಿಕ ಸರ್ಕಾರಕ್ಕೆ ಹಸ್ತಾಂತರಿಸುವುದೇ ತಮ್ಮ ಗುರಿ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಗಾಜಾವನ್ನು ವಶಪಡಿಸಿಕೊಳ್ಳುವ ಯೋಜನೆ ತಪ್ಪು ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಹೇಳಿದ್ದಾರೆ. ಈ ಕ್ರಮವು ಮತ್ತಷ್ಟು ರಕ್ತಪಾತಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಪ್ಪಿಸಲು ಈ ಯೋಜನೆಯನ್ನು ತಕ್ಷಣ ಹಿಂಪಡೆಯಬೇಕೆಂದು ಅವರು ಸಲಹೆ ನೀಡಿದ್ದಾರೆ.

ಮತ್ತೊಂದೆಡೆ, ಇಷ್ಟು ದಿನ ಇಸ್ರೇಲ್ ಅನ್ನು ಬಲವಾಗಿ ಬೆಂಬಲಿಸುತ್ತಿದ್ದ ಜರ್ಮನಿ, ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಇಸ್ರೇಲ್‌ಗೆ ಸೇನಾ ಉತ್ಪನ್ನಗಳನ್ನು ರಫ್ತು ಮಾಡಬಾರದೆಂದು ನಿರ್ಧರಿಸಲಾಗಿದೆ ಎಂದು ಜರ್ಮನ್ ಚಾನ್ಸೆಲರ್ ಫ್ರೆಡರಿಕ್ ಮೆರ್ಜ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page