Wednesday, September 10, 2025

ಸತ್ಯ | ನ್ಯಾಯ |ಧರ್ಮ

“ನನಗೆ ವಿಷ ಕೊಟ್ಟುಬಿಡಿ ಸ್ವಾಮಿ”: ನ್ಯಾಯಾಧೀಶರ ಮುಂದೆ ಅಂಗಲಾಚಿದ ನಟ ದರ್ಶನ್

ಬೆಂಗಳೂರು, ಸೆ. 9: “ಜೈಲಿನಲ್ಲಿ ಬದುಕಲು ಆಗುತ್ತಿಲ್ಲ. ನನಗೆ ಬೆಳಕನ್ನೇ ನೋಡಲು ಆಗುತ್ತಿಲ್ಲ. ಕೈಗಳೆಲ್ಲಾ ಫಂಗಸ್ ಆಗಿದೆ. ನಾನು ಏನು ಕೇಳಿದರೂ ಅಧಿಕಾರಿಗಳು ಕೊಡುತ್ತಿಲ್ಲ. ದಯವಿಟ್ಟು ನನಗೆ ಮಾತ್ರ ವಿಷ ಕೊಟ್ಟುಬಿಡಿ.”

ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರು ನ್ಯಾಯಾಧೀಶರ ಮುಂದೆ ಇಂತಹ ವಿಚಿತ್ರ ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ಮತ್ತು ಇತರ ಆರೋಪಿಗಳನ್ನು ಬೆಂಗಳೂರಿನ 57ನೇ ಹೆಚ್ಚುವರಿ ಸಿಸಿಎಚ್ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು.

ತಮಗೆ ಹಾಸಿಗೆ, ದಿಂಬು, ಕುಡಿಯುವ ನೀರು ಮತ್ತು ಊಟ-ತಿಂಡಿ ಒದಗಿಸುವಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಯುತ್ತಿದ್ದಾಗ, ಪ್ರಕರಣದ ಎರಡನೇ ಆರೋಪಿ ದರ್ಶನ್ ಮೊದಲು ಕೈ ಎತ್ತಿ, ಜೈಲಿನಲ್ಲಿ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

“ನನಗೆ ಮಾತ್ರ ವಿಷ ಕೊಡಿ”

ದರ್ಶನ್ ನ್ಯಾಯಾಧೀಶರಿಗೆ, “ಸ್ವಾಮಿ, ನನಗೆ ಸ್ವಲ್ಪ ವಿಷ ಕೊಟ್ಟುಬಿಡಿ. ಇಲ್ಲಿಂದಲೇ ಆದೇಶ ಮಾಡಿ. ಒಂದು ತಿಂಗಳಿನಿಂದ ನಾನು ಸೂರ್ಯನ ಬೆಳಕನ್ನೇ ನೋಡಿಲ್ಲ. ನನ್ನ ಕೈಗಳೆಲ್ಲ ಫಂಗಸ್ ಆಗಿದೆ. ನ್ಯಾಯಾಲಯ ಈ ಬಗ್ಗೆ ಆದೇಶ ನೀಡಬೇಕು. ನನಗೆ ಮಾತ್ರ ವಿಷ ಕೊಡಿ, ಬೇರೆಯವರಿಗೆ ಬೇಡ” ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ನೀವು ಹೇಳಿದಂತೆ ಆದೇಶ ನೀಡಲು ಸಾಧ್ಯವಿಲ್ಲ. ಯಾವುದೇ ನ್ಯಾಯಾಲಯವು ಆರೋಪಿ ಅಥವಾ ಅಪರಾಧಿಗೆ ವಿಷ ಕುಡಿಯಲು ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಇಲ್ಲಿಂದಲೇ ಆದೇಶ ನೀಡಿ ಎಂದು ನೀವು ಹೇಳುವಂತೆಯೂ ಇಲ್ಲ” ಎಂದು ಬುದ್ಧಿವಾದ ಹೇಳಿದರು. ದರ್ಶನ್ ತಮ್ಮ ಮಾತು ಮುಂದುವರಿಸಲು ಮುಂದಾದಾಗ, ನ್ಯಾಯಾಧೀಶರು, “ನಿಮ್ಮ ಮನವಿ ಅರ್ಜಿಯಲ್ಲಿ ಏನಿದೆಯೋ ಅದರ ವಿಚಾರಣೆ ಮಾತ್ರ ನಡೆಸುತ್ತೇವೆ. ವಿಷ ಕುಡಿಯಿರಿ ಎಂದು ನ್ಯಾಯಾಲಯವಾಗಲಿ ಅಥವಾ ದೇಶದ ಯಾವುದೇ ನ್ಯಾಯಾಧೀಶರಾಗಲಿ ಹೇಳಲು ಸಾಧ್ಯವಿಲ್ಲ. ಇಂತಹ ಮನವಿಗಳನ್ನು ಮಾಡಬಾರದು” ಎಂದು ತಿಳಿಸಿದರು.

ನ್ಯಾಯಾಧೀಶರ ಮಾತಿಗೆ ದರ್ಶನ್ “ಸರಿ ಸ್ವಾಮಿ” ಎಂದು ಪ್ರತಿಕ್ರಿಯಿಸಿ ಮೌನಕ್ಕೆ ಶರಣಾದರು. ನ್ಯಾಯಾಧೀಶರು, “ನೀವು ಸಲ್ಲಿಸಿದ ಅರ್ಜಿಯ ಬಗ್ಗೆ ಮಧ್ಯಾಹ್ನ ಆದೇಶ ನೀಡಲಾಗುತ್ತದೆ. ಹೀಗೆಲ್ಲಾ ಕೇಳುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page