Home ಇನ್ನಷ್ಟು ಕೋರ್ಟು - ಕಾನೂನು ನಕಲಿ ವೈದ್ಯರಿಗೆ ಸರಿಯಾದ ಟ್ರೀಟ್‌ಮೆಂಟ್‌ ಕೊಡಿ: ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್

ನಕಲಿ ವೈದ್ಯರಿಗೆ ಸರಿಯಾದ ಟ್ರೀಟ್‌ಮೆಂಟ್‌ ಕೊಡಿ: ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್

0

ನಕಲಿ ವೈದ್ಯರ ಹಾವಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಗ್ರಾಮೀಣ ಭಾಗದ ಮುಗ್ಧ ಜನರು ಹಾಗೂ ಅಮಾಯಕರ ಜೀವಗಳೊಂದಿಗೆ ಚೆಲ್ಲಾಟ ಆಡುತ್ತಿರುವ ನಕಲಿ ವೈದ್ಯರು ಮತ್ತು ಕ್ಲಿನಿಕ್‌ಗಳನ್ನು ಗುರುತಿಸಿ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ತಾನು ನಡೆಸುತ್ತಿರುವ ಲಕ್ಷ್ಮೀ ಕ್ಲಿನಿಕ್‌ ಅನ್ನು ಕರ್ನಾಟಕ ವೈದ್ಯಕೀಯ ಖಾಸಗಿ ಕಂಪೆನಿಗಳ ಕಾಯ್ದೆ-2007ರಡಿ ನೋಂದಣಿ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ 10ನೇ ತರಗತಿ ಪಾಸಾಗಿರುವ ಕೆ.ಆರ್‌. ಪೇಟೆಯ ಡಾ| ಎ.ಎ. ಮುರಳೀಧರ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ತಮ್ಮನ್ನು ತಾವು ವೈದ್ಯರೆಂದು ಸ್ವಯಂ ಬಿಂಬಿಸಿಕೊಳ್ಳುವ ಈ ನಕಲಿ ವೈದ್ಯರು, ದೂರದ ಪ್ರದೇಶಗಳಲ್ಲಿ ಕ್ಲಿನಿಕ್‌ಗಳನ್ನು ತೆರೆದು ಅಮಾಯಕರನ್ನು ವಂಚಿಸುವುದರ ಜತೆಗೆ ಮುಗ್ಧ ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಇವುಗಳ ಬಗ್ಗೆ ಸರಕಾರಕ್ಕೆ ಮಾಹಿತಿ ಇಲ್ಲ ಎನ್ನಲಾಗದು. ಸರಕಾರ ತತ್‌ಕ್ಷಣ ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಯಾವುದೇ ವೈದ್ಯಕೀಯ ವಿಭಾಗದಲ್ಲಿ ಅಧ್ಯಯನ ಮಾಡಿರುವ ಅವರ ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ. ಅವರು ಹೊಂದಿರುವ ಏಕೈಕ ಪ್ರಮಾಣಪತ್ರವೆಂದರೆ ಭಾರತೀಯ ಪರ್ಯಾಯ ಔಷಧ ಮಂಡಳಿಯು 2001ರ ಜ.9ರಂದು ನೀಡಿದೆ ಎನ್ನಲಾದ ಪ್ರಮಾಣಪತ್ರ. ಆದರೆ ಇದರಲ್ಲಿ ಯಾವುದೇ ಅರ್ಹತೆಯನ್ನು ಸೂಚಿಸದ ಕಾರಣ ಪ್ರಮಾಣಪತ್ರವು ಯಾವುದೇ ವಿಶ್ವಾಸಾರ್ಹತೆ ಹೊಂದಿಲ್ಲ. ಅರ್ಜಿದಾರರು ಎಸೆಸೆಲ್ಸಿ ತನಕ ಮಾತ್ರ ಶಿಕ್ಷಣ ಪಡೆದಿರುವುದರಿಂದ ವೈದ್ಯ ಎಂದು ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.

You cannot copy content of this page

Exit mobile version