Wednesday, August 28, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 30 : ನೇಪಾಳ ಪ್ರಾಯೋಜಕತ್ವದ ಜಾಗತಿಕ ಹಿಂದೂಸ್ತಾನ್

ಸರ್‌ ಸಿ.ಪಿ. ಸ್ವತಂತ್ರ ತಿರುವಾಂಕೂರ್‌ ದೇಶವನ್ನು ಘೋಷಿಸಿಕೊಂಡಾಗ ಅದನ್ನು ಅಭಿನಂದಿಸಿಕೊಂಡು ಅವರಿಗೆ ಬಂದ ಮೊದಲ ಟೆಲಿಗ್ರಾಂ ಸಂದೇಶಗಳಲ್ಲಿ ಒಂದು ಸಾವರ್ಕರ್‌ ಅವರದ್ದಾಗಿತ್ತು.

೧೯೨೭ರಲ್ಲಿ ಗಾಂಧಿ ರತ್ನಗಿರಿ ಜಿಲ್ಲೆಗೆ ಬರುತ್ತಾರೆ. ಸಾವರ್ಕರ್‌ ಬ್ರಿಟಿಷರಿಗೆ ನೀಡಿದ ಮಾತನ್ನು ಸಾಸಿವೆ ಗಾತ್ರಕ್ಕೂ ತಪ್ಪಿಸದಿರಲು ಗಾಂಧಿಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದ ಕಾಲವದು. ಅದರ ಜೊತೆಗೆ ಬ್ರಿಟಿಷ್‌ ಆಡಳಿತಕ್ಕೆ ಅತ್ಯಂತ ಸಹಾಯಕವಾಗುವ ರೀತಿಯಲ್ಲಿ ಭಾರತದ ಬಹುತ್ವದ ಜನಜೀವನದ ಮೇಲೆ ಆಳ ಗಾಯಗಳನ್ನುಂಟು ಮಾಡುವ ಶುದ್ಧಿಚಳುವಳಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಕಾಲವೂ ಆಗಿತ್ತು. ತನ್ನ ಭಾಷಣದಲ್ಲಿ ಗಾಂಧಿ ಹೀಗೆ ಹೇಳಿದರು. ʼನನ್ನ ಬಳಿ ಶುದ್ಧಿಚಳುವಳಿಯಲ್ಲಿ ಭಾಗವಹಿಸಲು ಕೇಳಿಕೊಂಡರು. ಅದು ಹೇಗೆ ತಾನೆ ಸಾಧ್ಯವಿದೆ? ಅದರ ಇನ್ನೊಂದು ಮುಖವಾದ ಹಿಂದೂ-ಮುಸ್ಲಿಂ ಮತಾಂತರವೂ ಕೊನೆಯಾಗಬೇಕೆಂದು ಬಯಸುವವನು ನಾನು. ಯಾವುದಾದರು ಒಂದು ಧರ್ಮದಲ್ಲಿ ವಿಶ್ವಾಸವಿಟ್ಟು ಬದುಕಿದರೆ ಮಾತ್ರವೇ ಒಬ್ಬ ವ್ಯಕ್ತಿ ಉತ್ತಮನಾಗುತ್ತಾನೆ ಮತ್ತು ಮೋಕ್ಷ ಸಾಧಿಸುತ್ತಾನೆ ಎಂದು ನಂಬುವುದೇ ಅಸಂಬದ್ಧ. ಒಬ್ಬನ ಗುಣನಡತೆ ಮತ್ತು ಮೋಕ್ಷವು ಆತನ ಹೃದಯಶುದ್ಧಿಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ನಾನು ಹಿಂದೂಗಳೊಂದಿಗೆ ಹೇಳಿದೆ. ನಿಮಗೆ ಇಷ್ಟ ಬಂದ ಕೆಲಸ ಮಾಡಿರಿ. ಆದರೆ, ನನ್ನಂತಹ ಒಬ್ಬನ ಬಳಿ, ಅತ್ಯಂತ ವಿವೇಕಯುತವಾಗಿ ಯೋಚಿಸಿದ ನಂತರವೇ ತೀರ್ಮಾನ ಕೈಗೊಳ್ಳುವ ವ್ಯಕ್ತಿಯ ಬಳಿ, ಆತನಿಂದ ಅಸಾಧ್ಯವಾದ ಕೆಲಸವನ್ನು ಮಾಡಲು ಹೇಳದಿರಿ. ಒಬ್ಬನ ಕಾರ್ಯಕ್ಷಮತೆ ಏನೇ ಆಗಿದ್ದರೂ ಅದು ಸೀಮಿತವೇ ಆಗಿದೆ. ನಾನು ಮಾಡುತ್ತಿರುವುದೆಲ್ಲವೂ ನನ್ನ ಮಿತಿಯೊಳಗೆ ನಿಂತುಕೊಂಡೇ ಆಗಿದೆ. ಅದರಾಚೆಗೆ ನನ್ನಿಂದ ಏನೂ ಸಾಧ್ಯವಿಲ್ಲ. ಒಂದೇ ಸಮಯಕ್ಕೆ ನೂರು ಕೆಲಸಗಳನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ. ಅರ್ಧ ಡಜನ್‌ ಕೆಲಸಗಳನ್ನೂ ಮಾಡಲಾಗದು. ನಾನು ಅಂದುಕೊಳ್ಳುವುದೇನೆಂದರೆ ಒಂದು ಸಮಯಕ್ಕೆ ಒಂದೇ ಒಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಸಾಧ್ಯವಿರುವ ಹಾಗೆ ಅನುಗ್ರಹೀತನಾಗಿದ್ದೇನೆ ನಾನೆಂದು. ಸಾಧ್ಯವಾದ ಅತ್ಯಂತ ಉದಾತ್ತ ಸಂಘಟನೆ ಚರಕವೆಂಬುದರಿಂದ ನಿಮ್ಮಿಂದ ನೀಡಲು ಸಾಧ್ಯವಾಗುವುದರಲ್ಲಿ ಅತ್ಯಂತ ಉತ್ತಮ ಸಹಾಯಗಳನ್ನು ನನಗೆ ನೀಡಿರಿ.ʼ

ಶುದ್ಧಿಚಳುವಳಿಯಂತಹ ಹಿಂದುತ್ವ ಚಟುವಟಿಕೆಗಳನ್ನು ಎಂದಿನಂತೆ ತನ್ನದೇ ಆದ ಉತ್ತಮ ಭಾಷೆಯಲ್ಲಿ ವಿರೋಧಿಸಿದ ನಂತರ ಜಿಲ್ಲಾಬಂಧಿಯಾಗಿ ಬದುಕುತ್ತಿದ್ದ ಸಾವರ್ಕರನ್ನು ಭೇಟಿಯಾಗಲು ಗಾಂಧಿ ಬರುತ್ತಾರೆ. ಜೊತೆಗೆ ಕಸ್ತೂರ್‌ಬಾ ಕೂಡ ಇದ್ದರು. ಸಾವರ್ಕರ್‌ ಶುದ್ಧಿಚಳುವಳಿಯ ಕುರಿತು ಮಾತನಾಡಲು ಶುರು ಮಾಡುತ್ತಿದ್ದಂತೆ ಒಬ್ಬನಿಗೆ ಧರ್ಮ ನಷ್ಟವಾಗುತ್ತದೆ ಎಂಬ ಸಂಗತಿಯೇ ಅಸಂಬದ್ಧವೆಂದು ಗಾಂಧಿ ಹೇಳುತ್ತಾರೆ. ಶ್ರೀನಾರಾಯಣ ಗುರುವನ್ನು ನೆನಪಿಸುವ ಹಾಗೆ. ಯಾವ ವ್ಯಕ್ತಿಯ ಮೇಲೂ ಆತನ/ಆಕೆಯ ನಂಬಿಕೆಯನ್ನು ಬದಲಾಯಿಸುವಂತೆ ನಿರ್ಬಂಧಿಸಬಾರದು. ಅದನ್ನು ಅವರಿಚ್ಛೆಗೆ ಬಿಟ್ಟು ಕೊಡಬೇಕು.

ಸಾವರ್ಕರ್‌ ಅವರ ಪತ್ನಿ ಯಮುನಾರನ್ನು ಗಾಂಧಿ ಹೊಗಳುತ್ತಾರೆ. ʼಪತಿಗೆ ೫೦ ವರ್ಷಗಳ ಜೈಲು ಶಿಕ್ಷೆ ಘೋಷಿಸಿದಾಗ ಉಂಟಾದ ಆಘಾತವನ್ನು ಎದುರಿಸಲು ಇನ್ನಿಲ್ಲದ ಧೈರ್ಯ ತೋರಿಸಿದ ಆ ಮಹಾ ಮಹಿಳೆಯ ಎದುರು ನಾವು ತಲೆ ಬಾಗಬೇಕು.ʼ

ಹದಿನೆಂಟು ವರ್ಷಗಳ ನಂತರ ನಡೆದ ಅವರಿಬ್ಬರ ಭೇಟಿ ಹೀಗೆ ಕೊನೆಯಾಗುತ್ತದೆ. ಅದರ ನಂತರ ಅವರಿಬ್ಬರು ಭೇಟಿಯಾಗುವುದೂ ಇಲ್ಲ. ಈ ಭೇಟಿಯಲ್ಲೂ ಗಾಂಧಿ ಅತ್ಯಂತ ಗೌರವದಿಂದಲೇ ತನ್ನ ಸೈದ್ಧಾಂತಿಕ ವಿರೋಧಿಯ ಜೊತೆಗೆ ನಡೆದುಕೊಳ್ಳುತ್ತಾರೆ. ಗಾಂಧಿಯ ದೃಷ್ಟಿಯಲ್ಲಿ ಸಾವರ್ಕರ್‌ ಒಬ್ಬ ಶತ್ರುವೋ ದ್ವೇಷಿಸಬೇಕಾದ ವ್ಯಕ್ತಿಯೋ ಆಗಿರಲಿಲ್ಲ. ಆದರೆ, ಹಿಂದುತ್ವ ಎಂಬ ಸಿದ್ಧಾಂತ ಗಾಂಧಿಯ ಒಟ್ಟು ಮೌಲ್ಯಗಳ ಜೊತೆಗೆ ಹೊಂದಿಕೊಳ್ಳುವ ಸಂಗತಿಯಾಗಿರಲಿಲ್ಲ. ಸಾವರ್ಕರ್‌ ನೇರ ಉಲ್ಟಾ ಆಗಿದ್ದರು. ತನ್ನ ಚಿತ್ಪಾವನ ಬ್ರಾಹ್ಮಣ ಕ್ಷಾತ್ರ ಮೌಲ್ಯಗಳ ಮೇಲೆ ನಿಂತುಕೊಂಡೇ ಸದಾ ಗಾಂಧಿಯನ್ನು ಎದುರಿಸುತ್ತಿದ್ದರು. ಗಾಂಧಿಯ ಮೇಲೆ ನಿರಂತರವಾಗಿ ದ್ವೇಷ ಹರಡುವ ಕೆಲಸವನ್ನು ಮಾಡುತ್ತಲೇ ಬಂದರು. ಕೊನೆಗೆ ನಾಥುರಾಮ್‌ ವಿನಾಯಕ್‌ ಗೋಡ್ಸೆ ಮತ್ತು ಸಹಚರರು ಗಾಂಧಿಯನ್ನು ಕೊಂದಾಗ ಆ ಪ್ರಕರಣದಲ್ಲಿ ಆರೋಪಿಯಾಗಿ ಕೆಲಕಾಲ ಜೈಲುವಾಸ ಅನುಭವಿಸುವ ಮಟ್ಟಿಗೆ ಆ ದ್ವೇಷವನ್ನು ಹಾಗೆಯೇ ನೆಲೆನಿಲ್ಲಿಸಿದ್ದರು.

ತನ್ನ ಕ್ಷಮಾಪಣಾ ಪತ್ರಗಳ ಮುಂದುವರಿಕೆಯೆಂಬಂತೆ, ಜಿಲ್ಲಾಬಂಧನವನ್ನು ಹಿಂಪಡೆಯಲು ೧೯೨೮ರಿಂದಲೇ ಸಾವರ್ಕರ್‌ ಮನವಿ ಪತ್ರಗಳನ್ನು ಬರೆಯುತ್ತಾರೆ. ಆದರೆ ಅದು ನಿರಾಕರಿಸುತ್ತಲೇ ಬಂದಿತು. ೧೯೨೯ ಆಗಸ್ಟ್‌ ೨೭ ಮತ್ತು ೨೮ ರಂದು ಡಾಕಾದಲ್ಲಿ ಎನ್‌.ಸಿ. ಕೇಲ್ಕರ್ ಎಂಬ ಚಿತ್ಪಾವನ ಬ್ರಾಹ್ಮಣ ಅಧ್ಯಕ್ಷತೆ ವಹಿಸಿದ್ದ ಬಂಗಾಲ್‌ ಪ್ರಾಂತ್ಯದ ಹಿಂದೂ ಮಹಾಸಭಾ ಸಮ್ಮೇಳನವು ಸಾವರ್ಕರ್‌ ಬಿಡುಗಡೆ ಆಗ್ರಹಿಸಿ ಬ್ರಿಟಿಷ್‌ ಸರಕಾರಕ್ಕೆ ಮನವಿ ಸಲ್ಲಿಸುತ್ತದೆ. ಇದು ಕೂಡ ನಿರಾಕರಿಸಲ್ಪಟ್ಟಿತು.

ರಾಜಕೀಯ ಖೈದಿಗಳಿಗೆ ಸಹಾಯಧನ ನೀಡುವ ಬ್ರಿಟಿಷ್‌ ಆಡಳಿತದಲ್ಲಿದ್ದ ನಿಯಮವನ್ನು ಬಳಸಿಕೊಂಡು ತನಗೂ ಸಹಾಯಧನ ದೊರೆಯಬೇಕೆಂದು ೧೯೨೪ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಸಂದರ್ಭದಲ್ಲಿಯೇ ಸಾವರ್ಕರ್ ಮನವಿ ನೀಡಿದ್ದರು. ವರ್ಷಕ್ಕೆ ನೂರು ರೂಪಾಯಿ ಪಡೆದುಕೊಳ್ಳುವ ಅವಕಾಶ ಬ್ರಿಟಿಷರ ಆ ನಿಯಮದಲ್ಲಿತ್ತು. ಆದರೆ ಆ ಮನವಿಯನ್ನು ಬ್ರಿಟಿಷ್‌ ಸರಕಾರ ತಿರಸ್ಕರಿಸಿತು. ಆದರೆ ೧೯೨೯ರಲ್ಲಿ ಸಾವರ್ಕರ್‌ ಮನವಿಯ ಮೇರೆಗೆ ಇರಬೇಕು, ಬ್ರಿಟಿಷ್‌ ಸರಕಾರ ಅದನ್ನು ಪುನರ್‌ ಪರಿಶೀಲಿಸುತ್ತದೆ. ಸಾವರ್ಕರ್‌ ಅವರ ಬ್ರಿಟಿಷ್‌ ಅನುಕೂಲ ಮನಸ್ಥಿತಿಗೆ ಸಂತೋಷಗೊಂಡೇ ಇರಬೇಕು, ತಿಂಗಳಿಗೆ ೬೦ ರೂಪಾಯಿಗಳ ಭತ್ಯೆ ನೀಡಲು ಬ್ರಿಟಿಷ್‌ ಸರಕಾರ ತೀರ್ಮಾನಿಸುತ್ತದೆ. ಆ ಕಾಲಕ್ಕೆ ಅದು ದೊಡ್ಡ ಹಣವೇ ಆಗಿತ್ತು. ಒಂದು ಪವನ್‌ ಚಿನ್ನಕ್ಕೆ ಬೆಲೆ ೧೯ ರೂಪಾಯಿಗಿಂತಲೂ ಕೆಳಗಿತ್ತು ಎಂಬುದನ್ನು ನೆನಪಿಡಬೇಕು. ಅಂದಿನ ಆರ್ಥಿಕ ವ್ಯವಸ್ಥೆಯ ಮಾನದಂಡವೂ ಚಿನ್ನದ ಬೆಲೆಯೇ ಆಗಿತ್ತು. ಅಂದರೆ, ಸುಮಾರು ಮೂರು ಪವನ್‌ಗಿಂತಲೂ ಹೆಚ್ಚು ಚಿನ್ನದ ಬೆಲೆಯನ್ನು ಬ್ರಿಟಿಷ್‌ ಸರಕಾರ ಪ್ರತಿ ತಿಂಗಳು ಭತ್ಯೆಯಾಗಿ ಸಾವರ್ಕರ್‌ಗೆ ನೀಡುತ್ತಿತ್ತು. ವರ್ಷಕ್ಕೆ ೧೦೦ ರೂಪಾಯಿ ಎಂಬ ನಿಯಮವನ್ನು ಮುರಿದು ತಿಂಗಳಿಗೆ ೬೦ ರೂಪಾಯಿ ಎಂಬ ಲೆಕ್ಕದಲ್ಲಿ ವರ್ಷಕ್ಕೆ ೭೨೦ ರೂಪಾಯಿಗಳು ೧೯೨೯ ಆಗಸ್ಟ್‌ ೧ರಿಂದ ಬ್ರಿಟಿಷ್‌ ಸರಕಾರ ಸಾವರ್ಕರ್‌ಗೆ ನೀಡತೊಡಗಿತ್ತು. ತಿಲಕ್‌ ಅವರಿಂದ ಹಿಡಿದು ಗಾಂಧಿಯ ತನಕದ ರಾಜಕೀಯ ಖೈದಿಗಳಿಗೆ ಬ್ರಿಟಿಷರಿಂದ ಭತ್ಯೆ ಪಡೆಯುವುದನ್ನು ಯೋಚಿಸಲೂ ಸಾಧ್ಯವಿರಲಿಲ್ಲ. ಸಾವರ್ಕರ್‌ ಬರೆದ ಕ್ಷಮಾಪಣಾ ಪತ್ರಗಳು ಜೈಲಿನಿಂದ ಹೊರಬರಲು ನಡೆಸಿದ ತಂತ್ರಗಳೆಂದು ವಾದಿಸುವವರು ಎರಡು ರೀತಿಯಲ್ಲಿ ಸೋಲುತ್ತಾರೆ. ಒಂದು, ಬಿಡುಗಡೆಗೊಂಡ ನಂತರ ಬ್ರಿಟಿಷ್‌ ಅನುಕೂಲಕರ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂಬ ವಾಸ್ತವವನ್ನು ತಳ್ಳಿ ಹಾಕಲು ಅವರ ಬಳಿ ಯಾವ ಸಾಕ್ಷಿಗಳೂ ಇಲ್ಲ. ಎರಡನೆಯದು, ಈ ಭತ್ಯೆಯನ್ನು ನ್ಯಾಯೀಕರಿಸಲು ಅವರಿಂದ ಸಾಧ್ಯವಾಗುವುದೇ ಇಲ್ಲ. ೧೯೩೭ರಲ್ಲಿ ಜಿಲ್ಲಾಬಂಧನವನ್ನೂ ಮೊಟಕುಗೊಳಿಸಿ ಸಾವರ್ಕರ್‌ ಸಂಪೂರ್ಣ ಬಿಡುಗಡೆ ಹೊಂದುವ ತನಕ ಈ ಭತ್ಯೆ ಯಾವ ತಡೆಯೂ ಇಲ್ಲದೆ ಮುಂದುವರಿದಿತ್ತು.

೧೯೩೧ರಲ್ಲಿ ಸಾವರ್ಕರ್‌ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ರತ್ನಗಿರಿ ಹಿಂದೂಸಭಾವು ಅಖಿಲ ಭಾರತ ಗೂರ್ಖಾ ಲೀಗ್‌ನ ಅಧ್ಯಕ್ಷನಾಗಿದ್ದ ಠಾಕೂರ್‌ ಚಂದನ್‌ ಸಿಂಗ್‌ ಮತ್ತು ನೇಪಾಳವನ್ನು ಆಳುತ್ತಿದ್ದ ರಾಜಕುಟುಂಬದ ಪ್ರತಿನಿಧಿಯಾಗಿದ್ದ ಹೇಮಚಂದ್ರ ಶಂಶೇರ್‌ ಜಂಗ್‌ ಅವರನ್ನೂ ರತ್ನಿಗಿರಿಗೆ ಆಹ್ವಾನಿಸುತ್ತದೆ. ಚಂದನ್‌ ಸಿಂಗ್‌ ತರುಣ್‌ ಗೂರ್ಖಾ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. ಮಹಾರಾಷ್ಟ್ರದ ಬ್ರಾಹ್ಮಣ ರಾಜಕಾರಣ ತಿಲಕರ ಕಾಲದಲ್ಲಿಯೇ ನೇಪಾಳದೊಂದಿಗೆ ಸಂಪರ್ಕ ಹೊಂದಲು ಪ್ರಯತ್ನಿಸುತ್ತಿದ್ದ ಸಂಗತಿಯನ್ನು ನಾವು ಚರ್ಚಿಸಿದೆವು. ಹಿಂದೂ ದೇಶವಾಗಿದ್ದ ನೇಪಾಳದೊಂದಿಗೆ ಸೇರಿಕೊಂಡು ಸಶಸ್ತ್ರ ಹೋರಾಟದ ಮೂಲಕ ಭಾರತವನ್ನು ಹಿಂದೂಸ್ತಾನ ಮಾಡುವುದು ಅವರ ಗುರಿಯಾಗಿತ್ತು. ವಾಸುಕಾಕ ಜೋಷಿ, ಪ್ರಸಿದ್ಧ ನಾಟಕಕಾರ ಮತ್ತು ತಿಲಕ್‌ ಜೈಲಿನಲ್ಲಿದ್ದಾಗ ಕೇಸರಿಯ ಜವಾಬ್ದಾರಿ ಹೊತ್ತಿದ್ದ ಕೆ.ಪಿ. ಖಾದಿಲ್ಕರ್‌, ಕೋಲಾಪುರ ಸಂಸ್ಥಾನದ ಹನುಮಂತ ರಾವ್‌ ಮುರ್ಕಿ ಭಾವಿಕರ್‌ ಮೊದಲಾದ ತಿಲಕ್‌ವಾದಿಗಳು ನೇಪಾಳಕ್ಕೆ ಬೇಟಿ ನೀಡಿ ಅಲ್ಲಿ ಆಯುಧ ನಿರ್ಮಾಣ ಕಾರ್ಖಾನೆಯನ್ನು ನಿರ್ಮಿಸಿದ್ದರು. ಬರೋಡ ಇತ್ಯಾದಿ ಸಣ್ಣ ಸಂಸ್ಥಾನಗಳು ಮತ್ತು ಪ್ರಸಿದ್ಧ ಸರ್ಕಸ್‌ ಕಂಪೆನಿ ಛಾತ್ರೇ ಸರ್ಕಸ್ಸಿನ ಮಾಲೀಕರಾಗಿದ್ದ ಕಾಶಿನಾಥ್‌ ಪಂತ್‌ ಛಾತ್ರೇ ಆ ಯೋಜನೆಯ ಆರ್ಥಿಕ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಆದರೆ, ಈ ಯೋಜನೆಯ ವಾಸನೆ ಬ್ರಿಟಿಷರಿಗೆ ಸಿಕ್ಕಿದ ಕಾರಣ ಅದನ್ನು ಕೈಬಿಡಬೇಕಾಗಿ ಬಂದಿತ್ತು.

ಝಾನ್ಸಿಯ ರಾಣಿ ಮತ್ತು ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಯಕಿಯೂ ಆಗಿದ್ದ ಲಕ್ಷ್ಮೀಬಾಯಿಯ ಸಂಬಂಧಿಯಾಗಿದ್ದ ಮಾತಾಜಿ ತಪಸ್ವಿನಿ ಎಂಬವರು ತಿಲಕರಿಗೆ ನೇಪಾಳದ ರಾಜನ ಪರಿಚಯ ಮಾಡಿಸಿದ್ದರು. ನೇಪಾಳದ ರಾಜನಿಗೆ ಖಲೀಫನ ಸಮವಾದ ಸ್ಥಾನ ನೀಡಿ ಹಿಂದೂರಾಷ್ಟ್ರ ಕಟ್ಟುವ ಯೋಜನೆಯನ್ನು ಸಾವರ್ಕರ್‌ ಹಾಕಿಕೊಂಡಿದ್ದರು. ೧೯೨೩ರಲ್ಲಿ ಬ್ರಿಟಿಷರೊಂದಿಗೆ ಮಾಡಿಕೊಂಡ ಒಪ್ಪಂದಂತೆ ನೇಪಾಳವು ಸ್ವತಂತ್ರ ಸಂಸ್ಥಾನವಾಗಿ ಬದಲಾಗಿತ್ತು. ಅದನ್ನು ಅನುಮೋದಿಸಿಕೊಂಡು ರತ್ನಗಿರಿ ಹಿಂದೂಸಭಾವು ೧೯೨೪-೨೫ರ ರಕ್ಷಾಬಂಧನ ಹಬ್ಬದ ಸಮಯದಲ್ಲಿ ನೇಪಾಳದ ರಾಜನಿಗೆ ರಾಖಿಗಳನ್ನು ಕಳಿಸಿಕೊಟ್ಟಿತ್ತು. ಅದಕ್ಕೆ ಪ್ರತಿಯಾಗಿ ರಾಜನಿಂದ ಸಂದೇಶವೂ ಲಭಿಸಿತ್ತು. ೧೯೨೬ರ ಹಿಂದೂ ಮಹಾಸಭಾದ ಅಖಿಲ ಭಾರತ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಲು ಬಾಬಾರಾವ್‌ ನೇಪಾಳದ ರಾಜನನ್ನು ಆಮಂತ್ರಿಸಿದರಾದರೂ ಕಾರಣಾಂತರಗಳಿಂದ ರಾಜ ಅದರಲ್ಲಿ ಭಾಗವಹಿಸಲಿಲ್ಲ. ಬದಲಿಗೆ ಹಿಂದೂಗಳ ಪ್ರಗತಿಯು ನನ್ನ ಪ್ರಗತಿ, ಹಿಂದೂಗಳ ಹಿನ್ನಡೆಯು ನನ್ನ ಹಿನ್ನಡೆ ಎಂಬ ಸಾಲುಗಳಿರುವ ರಾಜನ ಸಂದೇಶವನ್ನು ಆ ಸಮ್ಮೇಳನದಲ್ಲಿ ಓದಲಾಯಿತು.

ನೇಪಾಳದ ರಾಜನನ್ನು ಖಲೀಫನ ಪದವಿಗೇರಿಸಲು ಬೇಕಾದ ಒಂದೊಂದೇ ಕೆಲಸಗಳನ್ನು ಸಾವರ್ಕರ್‌ ಮತ್ತು ಸಂಘ ನಡೆಸುತ್ತಿದ್ದರು. ಹಿಂದೂ ಸಂಘಟನಾ ಚಳುವಳಿ ಮತ್ತು ನೇಪಾಳ ಎಂಬ ಹೆಸರಿನಲ್ಲಿ ೧೯೩೭ರಲ್ಲಿ ಸಾವರ್ಕರ್‌ ಒಂದು ಲೇಖನಗಳ ಸಂಗ್ರಹ ಹೊರತಂದರು. ಅದರ ಮುನ್ನುಡಿಯನ್ನು ಬಾಬಾರಾವ್‌ ಬರೆದಿದ್ದರು. ಬಾಬಾರಾವ್‌ ಅದರಲ್ಲಿ ಹೀಗೆ ಬರೆದರು.

ʼನೇಪಾಳವೆಂಬುದು ಹಿಂದೂ ಸಂಘಟನೆಯೆಂಬ ಬತ್ತಳಿಕೆಯಲ್ಲಿರುವ ರಾಮಬಾಣ. ಆದರೆ ಆ ಬಾಣಕ್ಕೆ ಈಗ ಚೂರು ತುಕ್ಕು ಹಿಡಿದಿದೆ. ಮತ್ತು ಅದರ ಒಡೆಯನಿಗೆ ಅದರ ಉಪಯೋಗ ಮತ್ತು ಶಕ್ತಿಯ ಕುರಿತು ಮರೆತೇ ಹೋಗಿದೆ. ಉಪಭೂಂಖಡದ ಮೇಲೆ ಹಿಂದೂ ಪತಾಕೆಯನ್ನು ಹಾರಿಸಬೇಕಾದರೆ, ಒಂದು ಕೋಟಿಯಷ್ಟು ಹಿಂದೂಗಳ ಪ್ರಜ್ಞೆಯನ್ನು ಜಾಗೃತಗೊಳಿಸಲು, ಅವರನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪಿಸಲು ಮತ್ತು ಸಾಂಸ್ಕೃತಿಕ ಏಕತೆಯಾಗಿ ಜೋಡಿಸಲು ನೇಪಾಳ ದೊಡ್ಡದೊಂದು ಜವಾಬ್ದಾರಿ ವಹಿಸಬೇಕಾಗಿದೆ. ಬ್ರಿಟಿಷರು ನೇಪಾಳದ ರಾಜತಾಂತ್ರಿಕ ಸ್ಥಾನವನ್ನು ಅರ್ಥಮಾಡಿಕೊಂಡರು. ಪೆರ್ಸಿವಲ್‌ ಲಾಂಡನ್‌ನಂತಹ ಲೇಖಕರು ಅದರ ಭೌಗೋಳಿಕ ರಾಜಕಾರಣ, ಇತಿಹಾಸ ಮತ್ತು ಧಾರ್ಮಿಕ ಸನ್ನಿವೇಶಗಳ ಕುರಿತು ಬೃಹತ್ತಾದ ಎರಡು ಸಂಪುಟಗಳ ಪುಸ್ತಕಗಳನ್ನು ಬರೆದರು. ಆದರೆ, ಭಾರತೀಯರಾದ ನಾವು ನೇಪಾಳನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟೆವು.ʼ

೧೯೩೧ರ ಸೆಪ್ಟೆಂಬರ್‌ ೨೨ರಂದು ನಡೆದ ರತ್ನಗಿರಿ ಹಿಂದೂಸಭಾದ ಸಮ್ಮೇಳನದಲ್ಲಿ ಮೇಲೆ ಹೇಳಿದ ಇಬ್ಬರು ನೇಪಾಳ ಪ್ರತಿನಿಧಿಗಳು ಭಾಗವಹಿಸಿದರು. ಅಲ್ಲಿ ನೇಪಾಳ ಮತ್ತು ಹಿಂದೂ ಸಂಘಟನಾ ಚಳುವಳಿಗಳಲ್ಲಿ ಅದರ ಪಾತ್ರ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಅವರು ಅಲ್ಲಿ ಮಾತ್ರವಲ್ಲ ಈ ವಿಷಯದ ಕುರಿತು ಮಾತನಾಡಿರುವುದು. ನಾಗಪುರ, ಅಮರವಾತಿ ಮೊದಲಾದ ಕಡೆಗಳಲ್ಲೂ ಅವರು ಮಾತನಾಡುತ್ತಾರೆ. ಹಿಂದೂಸಭಾದ ಸಮ್ಮೇಳನದಲ್ಲಿ ಸಾವರ್ಕರ್‌ ರೂಪಿಸಿದ್ದ ಹಿಂದೂರಾಷ್ಟ್ರದ ಧ್ವಜವಾದ ಕಾವಿ ಭಗವಾಧ್ವಜವನ್ನು ಹಾರಿಸಲಾಯಿತು.

ʼನೇಪಾಳ ಮತ್ತು ಜಾಗತಿಕ ಹಿಂದೂ ಚಳುವಳಿಯ ಏಕೈಕ ಹಿಂದೂ ಚಕ್ರವರ್ತಿʼ ಎಂದು ಸಾವರ್ಕರ್‌ ನೇಪಾಳದ ರಾಜನನ್ನು ಕರೆದಿದ್ದರು.

ಯುವ ಇತಿಹಾಸಕಾರ ಮನು ಎಸ್‌ ಪಿಳ್ಳೆ ಅವರು ಮಿಂಟ್‌ ಲಾಂಜ್‌ ಅಲ್ಲಿ ೨೦೧೮ ಮೇ ೨೮ರಂದು ಬರೆದ ಸಾವರ್ಕರ್‌ ಅವರ ತಡೆಯಲ್ಪಟ್ಟ ಜನಾಂಗೀಯ ಕನಸು ಎಂಬ ಲೇಖನದಲ್ಲಿ ನೇಪಾಳದ ನಾಯಕತ್ವದಲ್ಲಿ ಸಾವರ್ಕರ್‌ ಪ್ರಯೋಗಿಸಲು ಯೋಜಿಸಿದ್ದ ಹಿಂದೂ ಸಾಮ್ರಾಜ್ಯದ ಯೋಜನೆಯ ಕುರಿತು ಇನ್ನಷ್ಟು ವಿವರಗಳು ಲಭಿಸುತ್ತವೆ. ೧೯೪೦ರಲ್ಲಿ ಖೈಬರ್‌ ಮೇಲ್‌ ಅಲ್ಲಿ ಸಾವರ್ಕರ್‌ ಬರೆದ ಲೇಖನವನ್ನು ಅದು ಬೊಟ್ಟು ಮಾಡಿ ತೋರಿಸುತ್ತದೆ. ಹೈದರಾಬಾದಿನ ಮುಸ್ಲಿಂ ರಾಜನಾಗಿದ್ದ ನಿಜಾಮನಿಗೆ ಭಾರತದ ಚಕ್ರವರ್ತಿಯಾಗುವ ಅರ್ಹತೆಯಿದೆಯೆಂದು ಗಾಂಧಿ ನೀಡಿದ ಹೇಳಿಕೆ ಈ ಲೇಖನ ಬರೆಯಲು ಸಾವರ್ಕರನ್ನು ಉದ್ರೇಕಿಸಿತ್ತು. ಅಂದು ಭಾರತದಲ್ಲಿದ್ದ ೫೬೫ ಸಂಸ್ಥಾನಗಳಲ್ಲಿ ೪೬೪ ಕೂಡ ಸಣ್ಣ ಪುಟ್ಟ ಸಂಸ್ಥಾನಗಳಾಗಿದ್ದವು. ೧೦೦೦ ಚದರ ಮೈಲಿಗಿಂತ ಕಡಿಮೆ ಭೌಗೋಳಿಕ ವ್ಯಾಪ್ತಿಯನ್ನು ಹೊಂದಿದ್ದವು ಅವು. ಅತ್ಯಂತ ದೊಡ್ಡ ಸಂಸ್ಥಾನ ನಿಜಾಮನ ಹೈದರಾಬಾದ್‌ ಆಗಿತ್ತು. ಅದನ್ನು ಮುಂದಿಟ್ಟುಕೊಂಡು ಗಾಂಧಿ ಅಂತಹದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಸಾವರ್ಕರ್‌ ಅದನ್ನು ವಿರೋಧಿಸುವುದು ತನ್ನ ಮನಸ್ಸಿಲ್ಲಿರುವ ಹಿಂದೂ ಸಾಮ್ರಾಜ್ಯವೆಂಬ ಕಲ್ಪನೆಯನ್ನು ಮುಂದಿಟ್ಟುಕೊಂಡಾಗಿತ್ತು. ನಿಜಾಮನಲ್ಲ, ಹಿಂದೂ ಸಂಸ್ಥಾನಗಳು (ಹೈಂದವ ವಿಶ್ವಾಸ ಮತ್ತು ಅಭಿಮಾನದ ಕಾವಲಾಳುಗಳು, ಹಿಂದೂ ಸಾಮ್ರಾಜ್ಯದ ಶಕ್ತಿ ಕೇಂದ್ರಗಳು ಎಂದು ಸಾವರ್ಕರ್)‌ ಭಾರತದ ಭವಿಷ್ಯದ ಹಾದಿಯನ್ನು ನಿರ್ಣಯಿಸುವವರು ಎಂಬುದು ಸಾವರ್ಕರ್‌ ಲೇಖನದ ತಿರುಳಾಗಿತ್ತು ಎಂದು ಮನು ಹೇಳುತ್ತಾರೆ.

ಆಂತರಿಕ ಯುದ್ಧವೇನಾದರು ಶುರುವಾಗುವುದೇ ಆದರೆ, ಉತ್ತರಕ್ಕೆ ಉದಯಪುರ ಮತ್ತು ಗ್ವಾಲಿಯರ್ ಸಂಸ್ಥಾನಗಳಿಂದಲೂ, ದಕ್ಷಿಣಕ್ಕೆ ಮೈಸೂರು ಮತ್ತು ತಿರುವಾಂಕೂರು ಮೊದಲಾದ ಸಂಸ್ಥಾನಗಳಿಂದಲೂ ಹಿಂದೂ ಸೈನಿಕ ಕ್ಯಾಂಪುಗಳು ರೂಪುಗೊಳ್ಳಲಿವೆ ಎಂದು ಸಾವರ್ಕರ್‌ ವಾದಿಸುತ್ತಾರೆ. ಪಶ್ಚಿಮದಿಂದ ಬರುವ ಮುಸ್ಲಿಂ ಗೋತ್ರವರ್ಗದ ಜನರನ್ನು ಪಂಜಾಬಿನ ಸಿಕ್ಖರು ತಡೆಯುತ್ತಾರೆ. ಸ್ವತಂತ್ರ ನೇಪಾಳ ʼಹೈಂದವ ವಿಶ್ವಾಸದ ಕಾವಲಾಳು ಮತ್ತು ಹೈಂದವ ಸೈನ್ಯದ ಅಧಿಪತಿಯಾಗಿʼ ಎದ್ದು ನಿಲ್ಲುತ್ತದೆ. ʼಹಿಂದೂಸ್ತಾನ್‌ ಎಂಬ ಸಾಮ್ರಾಜ್ಯದ ಸಿಂಹಾಸನಕ್ಕೇರುವ ದಾಳವಾಗಲುʼ ನೇಪಾಳಕ್ಕೆ ಸಾಧ್ಯವಿದೆಯೆಂದು ಸಾವರ್ಕರ್‌ ಸೇರಿಸುತ್ತಾರೆ. ನೇಪಾಳವು ಭಾರತದ ಮೇಲೆ ನಡೆಸಲಿರುವ ದಾಳಿಗೆ ಶಕ್ತಿ ತುಂಬಲು ಭಾರತದ ಹಿಂದೂಗಳು ತಯಾರಾಗಿರಬೇಕೆಂದೂ ಕೊನೆಗೆ ಎಲ್ಲರು ಸೇರಿಕೊಂಡು ಹಿಂದೂರಾಷ್ಟ್ರವನ್ನು ಕಟ್ಟಬೇಕೆಂದೂ ಹೇಳುತ್ತಾರೆ. ೧೯೪೪ರಲ್ಲಿ ಜೈಪುರದ ರಾಜನಿಗೆ ಬರೆದ ಪತ್ರದಲ್ಲಿ ಹಿಂದೂ ಮಹಾಸಭಾದ ನಿಲುವನ್ನು ಸಾವರ್ಕರ್‌ ಸ್ಪಷ್ಟಪಡಿಸುತ್ತಾರೆ. ‘ಹಿಂದೂ ಸಂಸ್ಥಾನಗಳ ಬೆನ್ನಿಗೆ ನಿಲ್ಲುತ್ತೇವೆ. ಕಾಂಗ್ರೆಸ್ಸಿನವರು, ಕಮ್ಯುನಿಸ್ಟರು ಮತ್ತು ಮುಸ್ಲಿಮರ ವಿರುದ್ಧ ಆ ಸಂಸ್ಥಾನಗಳ ಅಭಿಮಾನವನ್ನೂ ಸ್ಥಿರತೆಯನ್ನೂ ಶಕ್ತಿಯನ್ನೂ ಕಾಯುತ್ತೇವೆ.ʼ ʼಹಿಂದೂ ಸಂಸ್ಥಾನಗಳು ಹೈಂದವ ಶಕ್ತಿಯ ಕೇಂದ್ರಗಳು.ʼ ಎಂದೂ ಸಾವರ್ಕರ್‌ ಬರೆಯುತ್ತಾರೆ.

ನೇಪಾಳ ಮತ್ತು ಹಿಂದೂ ಸಂಸ್ಥಾನಗಳು ಸೇರಿಕೊಂಡು ನಿರ್ಮಿಸಲಿರುವ ಸಾವರ್ಕರ್‌ ಕಲ್ಪನೆಯ ಹಿಂದೂರಾಷ್ಟ್ರದ ಮೇಲೆ ಹಲವು ಸಂಸ್ಥಾನಗಳ ರಾಜರುಗಳು ನಂಬಿಕೆಯಿಟ್ಟಿದ್ದರು. ದೇಶೀ ಸಂಸ್ಥಾನಗಳಲ್ಲಿಯೇ ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರಗತಿ ಸಾಧಿಸಿದ್ದ ಬರೋಡ ಮತ್ತು ಮೈಸೂರು ತರದ ಸಂಸ್ಥಾನಗಳು ಕೂಡ ಹಿಂದೂ ಮಹಾಸಭಾದ ಸಮ್ಮೇಳನಗಳಿಗೆ ಆರ್ಥಿಕ ನೆರವು ನೀಡುತ್ತಿದ್ದವು.

ಸಾವರ್ಕರ್‌ ಅವರ ದೃಷ್ಟಿಕೋನದಲ್ಲಿ ಹಿಂದೂ ಸಂಸ್ಥಾನಗಳೆಲ್ಲವೂ ಪರಸ್ಪರ ಬಂಧಿತರಾಗಿರುವುದರಿಂದ ಅವರ ನಡುವಿನ ಒಗ್ಗಟ್ಟು ಸುಲಭ ಸಾಧ್ಯವಿತ್ತು. ತಿರುವಾಂಕೂರು ಸಂಸ್ಥಾನ ʼಪದ್ಮನಾಭʼನದ್ದು. ಪದ್ಮನಾಭನ ವಿಗ್ರಹವು ನೇಪಾಳದಿಂದ ತಂದ ಸಾಲಿಗ್ರಾಮದಿಂದ ಮಾಡಿರುವುದು. ಬರೋಡದ ಮರಾಠಿ ರಾಜರು ಮಧ್ಯ ಭಾರತದ ಇಂಡೋರ್‌, ಗ್ವಾಲಿಯರ್‌ ಮೊದಲಾದ ಸಂಸ್ಥಾನಗಳೊಂದಿಗೆ ರಾಜಕೀಯ ಸಂಬಂಧದವನ್ನು ಹೊಂದಿದ್ದರು. ಜೊತೆಗೆ, ತಮಿಳುನಾಡಿನ ತಂಜಾವೂರಿನ ತನಕ ಹಬ್ಬಿಕೊಂಡಿದ್ದ ಮರಾಠಾ ಸಾಮ್ರಾಜ್ಯದ ಅಧಿಪತಿಯಾಗಿದ್ದ ಶಿವಾಜಿಯ ಉತ್ತರಾಧಿಕಾರಿಗಳೂ ಆಗಿದ್ದರು. ಮೈಸೂರಿನ ರಾಜರು ಕನ್ನಡಿಗರಾಗಿದ್ದರೂ ಅವರು ರಜಪೂತ ವಧುಗಳನ್ನು ಹುಡುಕುತ್ತಿದ್ದವರು.

ಸಾವರ್ಕರ್‌ ಅವರ ಹಿಂದೂಸ್ತಾನ್‌ ಒಂದು ಆಧುನಿಕ ಕಲ್ಪನೆ ಆಗಿರಲೇ ಇಲ್ಲವೆಂದು ಇದರಿಂದ ಸ್ಪಷ್ಟವಾಗುತ್ತದೆ. ಅದು ರಾಜರುಗಳು ಮತ್ತು ಚಕ್ರವರ್ತಿಗಳು ಆಡಳಿತ ನಡೆಸುವ ರಾಷ್ಟ್ರವೊಂದರ ಭಿನ್ನ ಅವತರಣಿಕೆ ಮಾತ್ರವಾಗಿತ್ತು. ದೇಶವಿಭಜನೆ ನಡೆಯುವುದನ್ನು ತಡೆಯಲು ಶ್ರಮಿಸಿದ ವ್ಯಕ್ತಿಯೆಂದು ಅಭಿಮಾನಿಗಳು ಬಾಯ್ತುಂಬಾ ಕರೆಯುವ ಅದೇ ಸಾವರ್ಕರ್‌ ತಿರುವಾಂಕೂರ್‌ ಸಂಸ್ಥಾನವು ಇಂಡಿಯನ್‌ ಯೂನಿಯನ್‌ ಜೊತೆ ಸೇರಲು ನಿರಾಕರಿಸಿ ಸ್ವತಂತ್ರ ದೇಶವಾಗಿ ಘೋಷಿಸಿಕೊಳ್ಳಲು ಶ್ರಮಿಸಿದಾಗ ಅದನ್ನು ಶ್ಲಾಘಿಸಲು ಎಲ್ಲರಿಗಿಂತ ಮೊದಲು ಓಡಿ ಬರುತ್ತಾರೆ. ಬ್ರಿಟಿಷರಿಗೆ ಮತ್ತು ಅಮೆರಿಕನ್ನಿಗೆ ಕಡಲ ತೀರದ ಥೋರಿಯಂ ನೀಡಿ ಅವರನ್ನು ಸಂಪ್ರೀತಿಗೊಳಿಸಲು ಸರ್‌ ಸಿ.ಪಿ. ಯತ್ನಿಸಿದ್ದರು. ಸರ್‌ ಸಿ.ಪಿ. ಸ್ವತಂತ್ರ ತಿರುವಾಂಕೂರ್‌ ದೇಶವನ್ನು ಘೋಷಿಸಿಕೊಂಡಾಗ ಅದನ್ನು ಶ್ಲಾಘಿಸಿಕೊಂಡು ಅವರಿಗೆ ಬಂದ ಮೊದಲ ಟೆಲಿಗ್ರಾಂ ಸಂದೇಶಗಳಲ್ಲಿ ಒಂದು ಸಾವರ್ಕರ್‌ ಅವರದ್ದಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page