ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಜನರ ಪ್ರೀತಿ, ವಿಶ್ವಾಸ ಹಾಗೂ ಭರವಸೆಗಳಿಗೆ ಧಕ್ಕೆಯಾಗದಂತೆ ನಡೆದುಕೊಂಡಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದ್ದಾರೆ.
ಕರ್ನಾಟಕ ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಇಂದು ಸೋಮವಾರ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಮೂಲಕ ರಾಜ್ಯ ಸರ್ಕಾರ ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾರಿಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳಿಂದಾಗಿ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿವೆ. ಸರ್ಕಾರದ ಈ ನಿರ್ಣಯದಿಂದ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿರುವುದು ಜಾಗತಿಕ ದಾಖಲೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
2023ರ ಜೂನ್ 11ರಂದು ಚಾಲನೆಗೊಂಡ ಶಕ್ತಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ನಾರಿಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ 3.5 ಕೋಟಿ ಮಹಿಳೆಯರು ಪಡೆಯುತ್ತಿದ್ದಾರೆ. ರಾಜ್ಯದ 1.60 ಕೋಟಿ ಜನರು ‘ಗೃಹಜ್ಯೋತಿ’ ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೀಡುವ ‘ಗೃಹಲಕ್ಷ್ಮಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿವರೆಗೆ ₹11,037 ಕೋಟಿಯನ್ನು ವರ್ಗಾಯಿಸಲಾಗಿದೆ ಎಂದು ಗೆಹಲೋತ್ ಹೇಳಿದರು.
ರಾಜ್ಯಕ್ಕೆ ದೇಶೀಯ ಮತ್ತು ವಿದೇಶಿಯ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಸರ್ಕಾರ ಅಧಿಕಾರ ವಹಿಸಿಕೊಂಡ 8 ತಿಂಗಳಲ್ಲಿ ₹77 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ರಾಜ್ಯಕ್ಕೆ ಬಂದಿದೆ. ಅಲ್ಲದೆ, ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಅನುದಾನ ಹಂಚಿಕೆ ಮತ್ತು ತೆರಿಗೆ ಪಾವತಿ ಕುರಿತು ಮಾತನಾಡಿರುವ ರಾಜ್ಯಪಾಲ ಗೆಹಲೋತ್, ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ವಿವರಿಸಿದ್ದಾರೆ.
ಕರ್ನಾಟಕವು 2023ರ ಮುಂಗಾರು ಅವಧಿಯಲ್ಲಿ 240 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಈ ಪೈಕಿ 196 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ವರ್ಗೀಕರಿಸಲಾಗಿದೆ. ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು 31 ಜಿಲ್ಲೆಗಳಿಗೆ ₹324 ಕೋಟಿ ಬಿಡುಗಡೆ ಮಾಡಿದೆ ಎಂದು ರಾಜ್ಯಪಾಲರು ಹೇಳಿದರು.