ಇತ್ತೀಚೆಗೆ ಬಿಡುಗಡೆಯಾದ ಗ್ಲೋಬಲ್ ಟೆರರಿಸಂ ಇಂಡೆಕ್ಸ್ (GTI) 2025ರಲ್ಲಿ /ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ಥಾನ 2ನೇ ಸ್ಥಾನವನ್ನು ಗಳಿಸಿದೆ.
ಆಫ್ರಿಕಾದ ದೇಶ ಬುರ್ಕಿನಾ ಫಾಸೊ ಮೊದಲ ಸ್ಥಾನದಲ್ಲಿದ್ದರೆ, ಸಿರಿಯಾ ಮೂರನೇ ಸ್ಥಾನದಲ್ಲಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಪಾಕಿಸ್ತಾನದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಂಘಟನೆಯಾಗಿ ಹೊರಹೊಮ್ಮಿದೆ. ಭಯೋತ್ಪಾದಕ ದಾಳಿಗಳಲ್ಲಿ ಭಾರಿ ಹೆಚ್ಚಳ ಮತ್ತು ನಾಗರಿಕರ ಸಾವಿನ ಹೆಚ್ಚಳದಿಂದಾಗಿ ಪಾಕಿಸ್ತಾನ ಎರಡನೇ ಸ್ಥಾನಕ್ಕೆ ಏರಿದೆ.
ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಅಂಡ್ ಪೀಸ್ (ಐಇಪಿ) ಪ್ರಕಟಿಸಿದ ಇತ್ತೀಚಿನ ಜಿಟಿಐ ವರದಿಯು ಪ್ರಪಂಚದಾದ್ಯಂತದ 163 ದೇಶಗಳಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತದೆ. ಭಯೋತ್ಪಾದಕ ಘಟನೆಗಳ ಸಂಖ್ಯೆ, ಸಾವುನೋವುಗಳು, ಗಾಯಗಳು, ಒತ್ತೆಯಾಳುಗಳು ಮತ್ತು ಭಯೋತ್ಪಾದನೆಯ ಮೇಲಿನ ಪರಿಣಾಮದಂತಹ ಸೂಚಕಗಳ ಮೂಲಕ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.
ಕಳೆದ 5 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಸಾವುಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ, 2024ರಲ್ಲಿ ದೇಶಾದ್ಯಂತ ಭಯೋತ್ಪಾದಕ ದಾಳಿಗಳು ಶೇಕಡಾ 45 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. 2024ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಸಾವುಗಳಲ್ಲಿ ಶೇ. 52ರಷ್ಟು ಸಾವಿಗೆ ಪಾಕಿಸ್ತಾನಿ ತಾಲಿಬಾನ್ ಕಾರಣ. ಆ ದೇಶದ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ದಾಳಿಗಳು ವಿಶೇಷವಾಗಿ ಪ್ರಚಲಿತವಾಗಿವೆ. 96 ರಷ್ಟು ಭಯೋತ್ಪಾದಕ ದಾಳಿಗಳು ಮತ್ತು ಸಾವುಗಳು ಈ ಪ್ರದೇಶಗಳಲ್ಲಿ ಸಂಭವಿಸಿವೆ ಎಂದು ಅದು ಹೇಳಿದೆ.
ಈ ಪಟ್ಟಿಯಲ್ಲಿ ಭಾರತ 14 ನೇ ಸ್ಥಾನದಲ್ಲಿದೆ. ಟಾಪ್ -10 ದೇಶಗಳ ಪಟ್ಟಿಯನ್ನು ನೋಡಿದರೆ, ಅವು ಕ್ರಮವಾಗಿ – ಬುರ್ಕಿನಾ ಫಾಸೊ, ಪಾಕಿಸ್ತಾನ, ಸಿರಿಯಾ, ಮಾಲಿ, ನೈಜರ್, ನೈಜೀರಿಯಾ, ಸೊಮಾಲಿಯಾ, ಇಸ್ರೇಲ್, ಅಫ್ಘಾನಿಸ್ತಾನ ಮತ್ತು ಕ್ಯಾಮರೂನ್. ಡೆನ್ಮಾರ್ಕ್ ಅತ್ಯಂತ ಕಡಿಮೆ ಮಟ್ಟದ ಭಯೋತ್ಪಾದನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿದೆ.
ಭಾರತದ ನೆರೆಹೊರೆಯನ್ನು ಗಮನಿಸಿದರೆ, ಬಾಂಗ್ಲಾದೇಶವು 35 ನೇ ಸ್ಥಾನದಲ್ಲಿದ್ದು, ಅಮೆರಿಕ (34) ಗಿಂತ ಒಂದು ಸ್ಥಾನ ಕೆಳಗೆ ಇರುವುದು ಗಮನಾರ್ಹ. ಮ್ಯಾನ್ಮಾರ್ 11ನೇ ಸ್ಥಾನದಲ್ಲಿದೆ. ಆಶ್ಚರ್ಯಕರ ಸಂಗತಿಯೆಂದರೆ, ಇರಾಕ್, ಇರಾನ್ ಮತ್ತು ಪ್ಯಾಲೆಸ್ಟೈನ್‌ನಂತಹ ದೇಶಗಳು ಟಾಪ್ -10 ಪಟ್ಟಿಯಲ್ಲಿಲ್ಲ.