Sunday, June 16, 2024

ಸತ್ಯ | ನ್ಯಾಯ |ಧರ್ಮ

ಗೋಡೆಯಲೊಂದು ಬಿಕ್ಕಳಿಕೆ

ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಹಾದಿಬೀದಿ ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಈ ವಾಸನೆ ಹರಡಿದೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ…ಮುಂದೆ ಓದಿ ಲೇಖಕಿ ಸಿಹಾನ ಬಿ. ಎಂ ಅವರ ಮೈಂಡ್‌ ಬ್ಲಾಕ್‌ ಅಂಕಣ

ಹಾಡುಹಗಲಿನಲ್ಲಿ, ಉರಿಬಿಸಿಲಿನಲ್ಲಿ ಹಸಿ ಹಸಿ ಹಾದಿಯಲ್ಲಿ ಬದುಕಿನ ಓಘದಲ್ಲಿ ಮುಟ್ಟಿಸಿ ಕೊಳ್ಳಲಾಗದ ಅಂಟುಜಾಡ್ಯದ ಬೇರನ್ನು ಕಿತ್ತೆಸೆಯದಿದ್ದರೆ ಅದು ತಂದಿಡುವ ವಿಹ್ವಲತೆಗಳಿಗೆ ಇಲ್ಲಿ ಪ್ರತಿಯೊಬ್ಬರು ಸಾಕ್ಷಿಗಳಾಗುವರು. ಪ್ರತಿ ಬೆಳಗು ರಾತ್ರಿಗಳಲ್ಲಿ ಕಿತ್ತು ತಿನ್ನುವ ಹಸಿವು, ಬಡತನ, ನಿರುದ್ಯೋಗ, ಪೌಷ್ಟಿಕ ಆಹಾರಗಳ ಕೊರತೆ, ಗುಣಮಟ್ಟದ ಶಿಕ್ಷಣ ಎಟುಕದ ಸಮಸ್ಯೆಗಳು ಆಳೆತ್ತರ ಬೆಳೆದು ನಿಂತಿದ್ದರೂ ಮನುಷ್ಯ ತನ್ನವನನ್ನೇ ಕಿತ್ತು ತಿನ್ನಲು ಹೊರಟಿರುವನು. ಜಾತಿ, ಧರ್ಮದ ಹೆಸರಿನಲ್ಲಿ ಪರಸ್ಪರರ ನಡುವಿನ ಕಚ್ಚಾಟದಲ್ಲಿ ಉಳಿದವೆಲ್ಲವು ಗೌಣವಾಗುತ್ತಿವೆ. ಕೆಲ ವರುಷಗಳ ಹಿಂದೆ ಈ ಅಂಟುರೋಗ ಇಷ್ಟು ತೀವ್ರವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದನ್ನೇ ಕಾರಣವಾಗಿಟ್ಟು ಗದ್ದುಗೆಯನ್ನೇರುವ, ಉಳಿಸುವ ಹುನ್ನಾರ ನಡೆಯುತ್ತಿದೆ. ಈ ಗಾಳಿ  ಅಷ್ಟೇನು ಹಬ್ಬಿಲ್ಲದ ಕರಾವಳಿಯಲ್ಲೂ ಇಂದು ಇದು ಎದ್ದು ಕಾಣುತ್ತಿದೆ. ಹಿಂದೆ, ಮುಟ್ಟಿಸಿ ಕೊಳ್ಳದಿದ್ದರೂ, ಜೀತದಾಳುಗಳಾಗಿ ದುಡಿಸುತ್ತಿದ್ದರೂ, ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯು ಪರಾಕಾಷ್ಠೆಗೆ ತಲುಪಿರಲಿಲ್ಲ.

ಮಂಗಳೂರಿನ ಬಂದರಿನ ದಕ್ಕೆಯಲ್ಲಿ ವಲಸೆ ಕಾರ್ಮಿಕರಾಗಿ ಬಂದವರಲ್ಲಿ ಬಹುತೇಕ ಅಂತವರು ತುಂಬಿರುವರು. ಬಹುಕಷ್ಟದ ಹೊರುವ, ಶುಚಿತ್ವದ ಕೆಲಸಗಳಲ್ಲಿ, ದೊಡ್ಡ ದೊಡ್ಡ ಫ್ಯಾಕ್ಟರಿಯ ಒಳಗಡೆ ಕೊಳೆತು ಹೋಗುವಷ್ಟು ಕಾಲದ ದುಡಿಮೆಗಳಲ್ಲಿ, ಭದ್ರತೆಯ ಕೊರತೆಗಳಿರುವ ಕಂಪೆನಿಗಳಲ್ಲಿ ನಿರಂತರವಾಗಿ ವಲಸೆ ಕಾರ್ಮಿಕರನ್ನು ಗುರುತಿಸಬಹುದು. ಅಲ್ಲೂ ಇವರು ಜೀತದಾಳುಗಳ ರೀತಿಯಲ್ಲಿ ಕೂಡಿ ಹಾಕಿ ಮಾಲಕರ ಆಜ್ಞೆಗಳನ್ನು ಹಗಲು ರಾತ್ರಿಯೆನ್ನದೆ ಪಾಲಿಸುವಂತಹ ನಿಯಮಗಳಿಗೆ ಬದ್ಧರಾಗಿ ಇರುವರು.  ಅಭದ್ರತೆಯ ವ್ಯವಸ್ಥೆಗಳ ಕಾರಣದಿಂದ ಸಾವಿಗೀಡಾದವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಅಂತಹ ಹಲವಾರು ಸಾವುಗಳು ಸುದ್ದಿಯಾಗುವುದೇ ಇಲ್ಲ. ಅಸ್ಸಾಂ, ಜಾರ್ಖಂಡ್, ಬಂಗಾಳ, ಉತ್ತರ ಪ್ರದೇಶದಿಂದ ವಲಸೆ ಬಂದವರ ಸಂಖ್ಯೆ ಹೇರಳವಾಗಿದೆ. ಹಾಗೆ ಬಂದವರಲ್ಲಿ ಹಲವು ಜಾತಿ, ಧರ್ಮದವರೂ ಇದ್ದಾರೆ. ರೈಲುಗಳಲ್ಲಿ, ಬಸ್ಸುಗಳಲ್ಲಿ ಲೆಕ್ಕವಿಲ್ಲದಷ್ಟು ಯಾತ್ರಿಕರ ನಡುವೆ ಪ್ರಯಾಣಿಸುವಾಗಲೂ ಪಥಭ್ರಾಂತರು, ಜಾತಿಪಂಥ ಹೊತ್ತು ನಡೆಯುವವರು, ಸಿಡಿದೆದ್ದು ಬೀಳುವವರು, ಉರಿದುರಿದು ಬೀಳುವವರು ಇವರನ್ನು ಮುಟ್ಟಿಸಿಕೊಳ್ಳಬಾರದೆಂದು ಅಂತರ ಕಾಯ್ದುಕೊಂಡು ಪ್ರಯಾಣಿಸುವರೆಂಬ ಮಾತು ಹಿಂದೊಮ್ಮೆ ಕೇಳಿಸಿಕೊಂಡಿದ್ದೆ. ಅದೇ ವರ್ತನೆಯನ್ನು ಜೊತೆಯಾಗಿ ಕೆಲಸ ಮಾಡುವಾಗಲೂ ತೋರಿಸುತ್ತಿರುವುದು ಹಲವರ ಕಣ್ಣಿಗೂ ಬಿದ್ದಿದೆ. ಆದರೆ ಆ ಒಂದು ಮುಟ್ಟಬಾರದ, ಮುಟ್ಟಿಸಿಕೊಳ್ಳಲಾಗದ “ಅಂಟುಜಾಡ್ಯ”ಕ್ಕೆ ತಾವು ಅರ್ಹರೆಂಬ ಭಾವವನ್ನು ಇವರು ಇವರೊಳಗೆ ತುಂಬಿಸಿಕೊಂಡಿರುವುದು ವಿಪರ್ಯಾಸ!

ಬೇಕಾಬಿಟ್ಟಿ ಬೆಳೆದ ಈ ಗೋಡೆಯನ್ನು ನೋವುಂಡವರ ಗುಂಪು ಜೊತೆಯಾಗಿ ಹೊಡೆದುರುಳಿಸಿದರೆ ಗೋಡೆ ಕಟ್ಟಿದವರ ಗತ್ತು, ಗರ್ವ, ಅಹಂಕಾರ ನೆಲಕ್ಕಪ್ಪುವುದರಲ್ಲಿ ಸಂಶಯವಿಲ್ಲ. ಆದರೆ ಒಗ್ಗಟ್ಟಿನ ಕೊರತೆಯೇ ಬಹುದೊಡ್ಡ ಸವಾಲು. ಬೆಕ್ಕಿಗೆ ಗಂಟೆ ಕಟ್ಟುವವರ ಸಂಖ್ಯೆ ವಿರಳವಾಗಿರುವುದರಿಂದ ಗೋಡೆಯ ಮೇಲಿನ ಅಟ್ಟಹಾಸ, ದಬ್ಬಾಳಿಕೆ ಇನ್ನಷ್ಟು ಎತ್ತರಕ್ಕೇರಿದೆ. ಸುತ್ತಲು ಗಬ್ಬುವಾಸನೆ, ಮಬ್ಬುಗತ್ತಲು, ಬಟಾಬಯಲ ಬೆತ್ತಲು. ಕುಹಕ ಮಾತಿಗೆ, ವ್ಯಂಗ್ಯ ನೋಟಕ್ಕೆ, ಕುಟುಕು ನಡೆಗೆ ಜನ ಬೇಸತ್ತು ಹೋಗಿರುವರು. ಜಾತಿಯ ಕಾರಣದಿಂದ ಇವರೊಂದಿಗೆ ವ್ಯವಹರಿಸುವಂತಿಲ್ಲ. ಅವರ ಭೂಮಿಯನ್ನು ಖರೀದಿಸುವಂತಿಲ್ಲ. ಬಾಡಿಗೆಗೆ ಮನೆ ಕೊಡುವಂತಿಲ್ಲ. ಮದುವೆ, ಸಮಾರಂಭಗಳಿಗೆ ಆಮಂತ್ರಿಸುವಂತಿಲ್ಲ. ಈ ಮೌಢ್ಯದ ಗಾಳಿ ಉಳಿದವರಲ್ಲಿ ಹಾಸು ಹೊಕ್ಕಿರುವುದು ಬಲು ಖೇದಕರ. ಈ ಮಣ್ಣಿನ ಗುಣ ಅದಲ್ಲವಾದರೂ ಈ ಮಣ್ಣಿನವರೊಂದಿಗೆ ಜೊತೆಯಾಗಿ ಮೇಲು ಕೀಳೆಂಬ ಭಾವ ಅರಿತೋ ಅರಿಯದೆಯೋ ಹರಡಿರುವುದು ಸುತ್ತಮುತ್ತಲು ಕಾಣಬಹುದು. ಪರಕೀಯತೆ, ಅನಾಥ ಭಾವದೊಂದಿಗೆ ಬದುಕುತ್ತಿರುವ ಅವರಾದರೋ ಪ್ರೀತಿಗಾಗಿ ಹಂಬಲಿಸುವವರು. ಸಾಂತ್ವನದ ನುಡಿಗಳಿಗಾಗಿ ತವಕಿಸುವವರು. ಹಾಗೆ ಪ್ರೀತಿ ಎಲ್ಲಾದರು ಸಿಕ್ಕಿದೊಡನೆ ಅವರ ಖಾಲಿ ಕಣ್ಣುಗಳಲ್ಲಿ ಹೊಳಪು ತುಂಬುವುದು. ಅವರ ಆ ಹೊಳೆಯುವ ಕಂಗಳು ಈಗಲೂ ನನ್ನ ನೆನಪಿನಂಗಳದಲ್ಲಿದೆ.

ಇವರ ನೋವಿನ ಕತೆಗಳು ಅಲ್ಲಿ ಇಲ್ಲಿ ಕೇಳಿದರೂ ನಮ್ಮ ಸುತ್ತಮುತ್ತಲು ನಡೆದ ಕತೆಗಳಿಗೆ ತೂಕ ಹೆಚ್ಚು. ಜೊತೆಯಾಗಿ ಊಟಕ್ಕೆ ಕೂರಿಸಲೆತ್ನಿಸಿದರೆ ಕೂರದೆ ದೂರ ಓಡುವ ಇವರನ್ನು ಮತ್ತೊಮ್ಮೆ ಕೂರಿಸಿ ಜೊತೆಯಾಗಿಸಿದಾಗ ಪ್ರೀತಿಯ ಕಂಗಳಲ್ಲಿ ಭೀತಿಯನ್ನು ನೋಡಿದ್ದೇನೆ. ಎಲ್ಲಾದರು ಯಾರಾದರು ನೋಡಿ ಕೆಕ್ಕರಿಸುವರೇನೋ ಎಂಬ ಇವರ ಅಂಜಿಕೆಯ ನೋಟದ ಆಳವನ್ನು ಮರೆಯುವಂತಿಲ್ಲ. ” ಇಲ್ಲಣ್ಣಾ…ನಿಮ್ಜೊತೆ ಕೂತದ್ದನ್ನು ಯಾರಾದರು ನೋಡಿದರೆ ಮತ್ತೆ ನಮ್ಮೊಂದಿಗೆ ಸೇಡು ತೀರಿಸುವ ಅವರ ವರ್ತನೆ ನಿಮಗೆ ಗೊತ್ತಿಲ್ಲಣ್ಣಾ…” ಎಂದು ಅವರಾಗಿಯೇ ನಿರಾಕರಿಸಿದಾಗ ನೋವಾಗಿದ್ದೂ ಇದೆ. ಅಷ್ಟಕ್ಕೂ ಈ ವ್ಯವಸ್ಥೆಯನ್ನು ಹುಟ್ಟು ಹಾಕಿದ ಧರ್ಮವಾದರೂ ಯಾವುದು? ಈ ಜಾತಿ, ಧರ್ಮವನ್ನು ದೇವರು ಸೃಷ್ಟಿಸಿದರೇ? ಸಮಾನತೆಯನ್ನು ಪ್ರತಿಪಾದಿಸದ ಧರ್ಮ ಈ ಭೂಮಿಯ ಮೇಲೆ ಯಾಕಿರಬೇಕು? ಮನುಷ್ಯರನ್ನೆಲ್ಲರನ್ನು ಒಂದೇ ಎಂದು ನೋಡದ ಧರ್ಮವನ್ನು ಅಂಗೀಕರಿಸುವುದಾದರೂ ಯಾತಕೆ? ಮಾನವತೆಯಿಲ್ಲದ ಧರ್ಮ ಹುಟ್ಟಿ ಬೆಳೆದು ಮನುಷ್ಯನನ್ನು ನುಂಗುವ ಈ ಪರಿಗೆ ಮೇಲು ಕೀಳೆಂಬ ಪಟ್ಟಗಳನ್ನು ಇಟ್ಟವರ್ಯಾರು? ಧರ್ಮ, ಜಾತಿ, ವರ್ಣ, ಲಿಂಗದ ಕಾರಣವನ್ನು ಮುಂದಿಟ್ಟು ನಡೆಯುವ ಕ್ರೌರ್ಯಗಳನ್ನು ಇನ್ನೆಷ್ಟು ಕಾಲಗಳವರೆಗೆ ಸಹಿಸಿಕೊಳ್ಳಬೇಕು ?

ಬಾಲ್ಯಕಾಲದಲ್ಲಿ ನಮ್ಮನೆಗೆ ಬರುತ್ತಿದ್ದ ಮಾಧವಣ್ಣ, ಕುಂಡಣ್ಣ, ಅಕ್ಕು, ತನಿಯ, ಚೋಮ ಇವರೆಲ್ಲರು ಇದೀಗ ನೆನಪಾಗುತ್ತಿದ್ದಾರೆ. ಜಾತಿಗೂ, ವರ್ಣಕ್ಕೂ ತುಲನೆ ಮಾಡುತ್ತಾ ಹೀಯಾಳಿಸುವವರ ನಡುವೆ ಆಧರಿಸುವವರ ಕರೆ ಕೇಳಿದೊಡನೆ ಓಡೋಡಿ ಬರುವ ಇವರ ನಡಿಗೆಯ ವೇಗವನ್ನು ಆ ದಿನಗಳಲ್ಲಿ ಗಮನಿಸಿದ್ದೇನೆ. ನನಗಿನ್ನೂ ಈ ಅಂಟುಜಾಡ್ಯದ ಅರಿವಿಲ್ಲದ ಕಾಲವದು. ಈಗಿನಷ್ಟು ಸುದ್ದಿಗಳು ಆಗ ನನ್ನ ತಮಟೆಗೆ ಬಡಿದಿರಲಿಲ್ಲ. ಹಿತ್ತಲ ಕೆಲಸಕ್ಕೆ ಕುಂಡಣ್ಣನಾದರೆ, ಮರ ಹತ್ತಿ ಕಾಯಿ ಕೀಳಲು ಮಾದಣ್ಣನೇ ಬೇಕು. ಬೇರೆ ಯಾರಿಂದಲಾದರು ಆ ಕೆಲಸ ಮಾಡಿಸಿದರೆ ಅಮ್ಮನಿಗೆ ತೃಪ್ತಿಯಾಗದು. ಅವರ ಶುಚಿತ್ವ, ಶಿಸ್ತು, ಸಮಯ ಪಾಲನೆ, ಕರ್ತವ್ಯ ನಿಷ್ಠೆ ಮೆಚ್ಚುವಂತಹದು. ಕುಂಡಣ್ಣನ ಕೆಲಸದಲ್ಲಿ ವೇಗ ಕಮ್ಮಿಯಿದ್ದರೂ ಶುಚಿತ್ವ, ಅಚ್ಚುಕಟ್ಟುತನದಲ್ಲಿ ಉಳಿದವರನ್ನು ಮೀರಿಸುವ ಗುಣವಿತ್ತು. ಮಾಧವಣ್ಣ ತೆಂಗಿನ ಮರಕ್ಕೆ ಹತ್ತಿದನೆಂದರೆ  ಆ ತೆಂಗಿನಮರವೂ ಮಾಧವಣ್ಣನನ್ನು ಪ್ರೀತಿಸುವಂತಿತ್ತು ಗರಿಗಳ ವಾಲಾಟ. ಅಕ್ಕು ಅಮ್ಮನಿಗೆ ಆತ್ಮೀಯರಾಗಿದ್ದರು. ಮನೆಯಲ್ಲಿ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಿದರೆ ಅಕ್ಕುವಿಗೆ ಮತ್ತು ಆಕೆಯ ಮಕ್ಕಳಿಗೆ ತೆಗೆದಿರಿಸುವ ಅಮ್ಮನ ಪ್ರೀತಿಯನ್ನು ಹತ್ತಿರದಿಂದ ನೋಡಿದ್ದೇನೆ. ಅಮ್ಮ, ಅಪ್ಪನಲ್ಲಿ ಅವರ ಅಳಲು, ನೋವು, ಕಷ್ಟಗಳನ್ನು ಹೇಳಿ ಮನಸ್ಸು ಹಗುರಾಗಿಸುವ, ಅವರಿಗೆ ಹೆಗಲಾಗುತ್ತಿರುವ ಆ ಕ್ಷಣಗಳು ಅದೆಷ್ಟು ಸುಂದರ! ಜೀತದಾಳುವಿನಂತೆ ದುಡಿಯುವ ಅವರ ದುಡಿಮೆಯನ್ನು ನೋಡಿ ಅಮ್ಮ ಅಪ್ಪ ಮರುಗಿದ್ದೂ ಇದೆ. ಸಾಲ, ಬಡ್ಡಿಯ ಹೆಸರಿನಲ್ಲಿ ಮಕ್ಕಳಿಗೂ ಹಂಚಿ ಹೋಗುವ ಈ ಜೀತ ಅವರ ನಿತ್ಯ ಪಾಡಾದರೆ ನಮ್ಮ ಹೃದಯಕ್ಕೆ ಅದು ನೋವಿನ ಹಾಡು. ಕುಡಿತ, ದುಡಿಮೆ ಇದರಿಂದ ಒಂದಿಂಚು ಸುಧಾರಿಸದ ಇವರನ್ನು ನೋಡಿ ಹಲವಾರು ಬಾರಿ ತಿದ್ದಲು ನಡೆಸಿದ ಪ್ರಯತ್ನ ಈಗಲೂ ಕಣ್ಣ ಮುಂದಿದೆ. ಜೀತದಾಳಿಗೆ ಬಗ್ಗದ ಕುಂಡಣ್ಣ ಮತ್ತು ಮಾಧವಣ್ಣನ ಮೇಲೆ ಅಭಿಮಾನವಿದ್ದರೂ ಅವರ ಕುಡಿತದ ಮೇಲೆ ಅಸಮಾಧಾನವಿತ್ತು.

ಗವ್ವೆನ್ನುವ ಒಂಟಿತನದ ಪರಕೀಯ ಭಾವವನ್ನು ಕಳಚಿಕೊಳ್ಳಲು ವಿದ್ಯೆಯ ದಾರಿ ಅತೀ ಅಗತ್ಯ. ವಿದ್ಯೆಯ ಕೊರತೆ ಪ್ರತಿರೋಧದ ಶಕ್ತಿಯನ್ನು ಬೆಳೆಸುವುದಿಲ್ಲ. ಸ್ವಾವಲಂಬನೆ, ಸಬಲೀಕರಣದ ಪುಟಗಳೊಂದಿಗೆ ಸೇರಿಕೊಳ್ಳುವುದಿಲ್ಲ. ಬದಲಾವಣೆಯ ದಾರಿಗೆ ವಿವೇಚನೆಯನ್ನು ಬೆಳೆಸಲು ವಿದ್ಯೆ ಮುಖ್ಯ. ತರಗತಿಯ ಹೊರಗಿದ್ದು ಕಲಿತ ಅಂಬೇಡ್ಕರರು ಸಂವಿಧಾನ ಶಿಲ್ಪಿಯಾಗಿ ಬೆಳೆದ ಚರಿತ್ರೆ ಪ್ರತಿಯೊಬ್ಬರ ಎದೆಗಿಳಿಯುತ್ತಿದ್ದರೆ ಬದಲಾವಣೆಯ ದಾರಿ ಸುಗಮವಾಗುತ್ತಿತ್ತೇನೋ… ಮಡಿವಂತಿಕೆ, ಮೌಢ್ಯ ವ್ಯವಸ್ಥೆಯೊಂದಿಗೆ ರಾಜಿಯಾಗುತ್ತಾ ಹೊಂದಿಕೊಳ್ಳುವ ಮನಸ್ಥಿತಿಗೆ ವಿಷಾದವೂ ಇದೆ. ಪ್ರತಿರೋಧದ ಯುಕ್ತಿ, ಶಕ್ತಿಗಳಿಲ್ಲದೆ ಅಲ್ಲೇ ಹುದುಗಿ ಹೋಗುವವರ ವ್ಯಥೆಯೂ ಕಣ್ಣ ಮುಂದಿದೆ. ಎಷ್ಟರವರೆಗೆ  ತುಳಿತಕ್ಕೊಳಪಡುವರೋ ಅಷ್ಟರವರೆಗೆ ತುಳಿಯುತ್ತಲೇ ಇರುವರು. ಎದ್ದೇಳದಿದ್ದರೆ, ಎದ್ದು ನಡೆಯದಿದ್ದರೆ ನೀರಿನ ಕಾರಣಕ್ಕೋ, ಅಂಗಳಕ್ಕೆ ಕಾಲಿಟ್ಟ ಕಾರಣಕ್ಕೋ, ವ್ಯಾಪಾರ, ಶಿಕ್ಷಣದ ಹೆಸರಿನಲ್ಲಿ ಮರ್ದನಕ್ಕೆ ಗುರಿಯಾಗುತ್ತಲೇ ಇರುವರು. ದೇವಾಲಯದ ಕೋಲು ಮುಟ್ಟಿದನೆಂದು, ನೀರು ಕುಡಿದನೆಂದು, ತೋಟದೊಳಗೆ ಬಂದನೆಂಬ ಕಾರಣಕ್ಕೆ ಹಲ್ಲೆಗೊಳಗಾದವರ ಕಣ್ಣೀರು ಇನ್ನೂ ಆರಿಲ್ಲ.

ಸುತ್ತ ಸುಟ್ಟ ಗಾಯಗಳ ವಾಸನೆ. ಸೀದು ಹೋದ, ಕರಟಿ ಹೋದ ದುರ್ನಾತ. ಈಗ ಬೀದಿಬೀದಿಯಲ್ಲೆಲ್ಲ ಈ ವಾಸನೆ ಹರಡಿದೆ. ಕೇರಿ ಕೇರಿ ಇರಲಿ, ಬಯಲು, ಮರ, ಗಿಡ, ರಸ್ತೆ, ಅಂಗಡಿ, ಶಾಲೆ, ಕಾಲೇಜು, ಮನೆಮನೆಗಳಲ್ಲೂ ಇದು ಹಬ್ಬಿದೆ. ಪರಿಚಿತರು ಅಪರಿಚಿತರಾಗುತ್ತಿದ್ದಾರೆ. ಬೆಂಕಿ ಹೊತ್ತಿದೆ. ಸುಡುವವರ ಮುಂದೆ ಆರಿಸುವವರ ಸಂಖ್ಯೆ ವಿರಳವಾಗುತ್ತಿದೆ. ಒಗ್ಗೂಡುವಿಕೆಯ ನೀರಿನ ಕೊರತೆಯು ಬೆಂಕಿಯನ್ನು ಆರಿಸುವುದಿಲ್ಲ. ಪರಸ್ಪರರ ಮೇಲೆ ಆರೋಪ, ಪ್ರತ್ಯಾರೋಪಗಳು ಹೆಚ್ಚುತ್ತಿರುವುದು ಒಗ್ಗಟ್ಟಿಗೆ ಮಾರಕ. ಅವರಿಗದುವೇ ಬೇಕಾಗಿರುವುದು.

ಹಿಂದಿನಿಂದಲೂ ಹೀಗೆ. ತುಳಿಯುವುದಕ್ಕೆ, ಉಸಿರುಗಟ್ಟಿಸುವುದಕ್ಕೆ, ಹೊಡೆಯುವುದಕ್ಕೆ, ರಕ್ತ ಕುಡಿಯುವುದಕ್ಕೆ, ಕತ್ತು ಹಿಸುಕುವುದಕ್ಕೆ, ಸುಟ್ಟು ಬಿಡುವುದಕ್ಕೆ, ಜೀವ ಕೊಲ್ಲುವುದಕ್ಕೆ ಜಾತಿ, ಧರ್ಮ ಬೇಕಿತ್ತು. ಅದೀಗ ಸರಾಗವಾಗಿ ನಡೆಯುತ್ತಿದೆ. ಹಸಿರು, ಉಸಿರು ಕಳೆದ ಈ ನೆಲದ ಸೊಬಗನ್ನು ಸಂಪೂರ್ಣವಾಗಿ ಕೆಸರುಮಯ ಮಾಡುವ ಪರಿಯಿದು. ಹಸಿರು ಬಯಲನ್ನು ಮರುಭೂಮಿಯಾಗಿಸುವ ಸೃಷ್ಟಿಯಿದು. ಯಾರದೋ ಸುಖದ ಪರಿಕಲ್ಪನೆಗೆ ಕಟ್ಟಿದ ಈ ಗೋಡೆಯನ್ನು ಉರುಳಿಸುವವರೆಗೆ ಈ ಬಿಕ್ಕಳಿಕೆಗೆ ಕೊನೆಯಿಲ್ಲ. ಅದು ಸ್ವಸ್ಥ ಸಮಾಜದ ಶಾಂತಿಯನ್ನು ನುಂಗುವ ಬಿಕ್ಕಳಿಕೆಯೆಂಬುದನ್ನು ಮರೆಯದಿರಿ.

ಸಿಹಾನ ಬಿ.ಎಂ

ಉದಯೋನ್ಮುಖ ಲೇಖಕಿ, ಕವಯಿತ್ರಿ            

Related Articles

ಇತ್ತೀಚಿನ ಸುದ್ದಿಗಳು