Wednesday, April 9, 2025

ಸತ್ಯ | ನ್ಯಾಯ |ಧರ್ಮ

ಎಚ್ಎಎಲ್ ನೌಕರರಿಂದ ಗೋಡ್ಸೆ ನಾಟಕ!

“ಗಾಂಧಿಜಿಯವರನ್ನ ಕೊಂದವರು ಯಾರು?? ಅಂದ್ರೆ ನಮ್ಮ ಕಣ್ಣ ಮುಂದೆ ಬರೋದು ಬರೀ ಗೋಡ್ಸೆ…. ಗೋಡ್ಸೆ ಅನ್ನೋ ಹೆಸರು ಕೇಳಿದ ತಕ್ಷಣ ಒಂದು ವರ್ಗಕ್ಕೆ ಮನಸ್ಸು ಅರಳತ್ತೆ, ಅದೇ ಮತ್ತೊಂದು ವರ್ಗಕ್ಕೆ ಕೆರಳತ್ತೆ….. ಎರಡು ವರ್ಗಗಳ ನಡುವೆ ನಡೆಯುವ ಸಂಘರ್ಷದಲ್ಲಿ ನಲುಗಿ ಹೋದ ಪ್ರೇಮ ಕಥೆಯೇ.. ಗೋಡ್ಸೆ… ಒಂದು ಪ್ರೇಮದ ಕಥೆ,” ಎಂಬ ಟಿಪ್ಪಣಿಯೊಂದಿಗೆ “ಗೋಡ್ಸೆ- ಒಂದು ಪ್ರೇಮ ಕಥೆ” ಎಂಬ ನಾಟಕದ ಆಮಂತ್ರಣ ಪತ್ರ ಹೊರಬಂದಿದೆ.

ರಾಜು ಭಂಡಾರಿ ಎಂಬವರು ರಚಿಸಿದ, ಭೈ ಈ ಹುತ್ತೇಶ್ ನಿರ್ದೇಶನದ, ಶ್ರೀ ನಂದಿ ಕಲಾ ಸಂಘ ಅರ್ಪಿಸುವ ಈ ನಾಟಕವನ್ನು ಏಪ್ರಿಲ್ 10 ಗುರುವಾರದಂದು ಸಂಜೆ 6:30 ಕ್ಕೆ ಕಲಾಗ್ರಾಮ ಮಲ್ಲತ್ತಹಳ್ಳಿ ಎಚ್ ಎ ಎಲ್ ಕಲಾವಿದರು ಪ್ರದರ್ಶನ ಮಾಡಲಿದ್ದಾರೆ. “ಗೋಡ್ಸೆಯ ಅಪರೂಪದ ಪ್ರೇಮ ಕಥೆಗೆ ಸಾಕ್ಷಿಯಾಗೋಣ…” ಎಂಬ ಆಮಂತ್ರಣವನ್ನು ನೀಡಲಾಗಿದ್ದು, ಈ ನಾಟಕಕ್ಕೆ “ಪ್ರವೇಶ ಉಚಿತ-ಚಿಂತನೆ ಖಚಿತ,” ಎಂದು ಹೇಳಲಾಗಿದೆ.

ಈ ನಾಟಕದ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಭಾಗವಹಿಸಲಿದ್ದಾರೆ. ತಮ್ಮ ಕೋಮುವಾದಿ ನಿಲುವಿಗೆ ಟೀಕೆಗಳಿಗೆ ಗುರಿಯಾಗಿದ್ದ ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದಾಗ “ಟಿಪ್ಪು ನಿಜಕನಸುಗಳು” ನಾಟಕ ರಚಿಸಿ ಪ್ರದರ್ಶಿಸಿ ವಿರೋಧಕ್ಕೆ ಗುರಿಯಾಗಿದ್ದರು. “ಗಾಂಧಿ ವಿರುದ್ಧ ಪೋಕ್ಸೋ ದಾಖಲಾಗುತ್ತಿತ್ತು,” ಎಂದು ಮಹಾತ್ಮ ಗಾಂಧಿಯ ಬಗ್ಗೆ, ಹಾಗೆಯೇ ಸಾಣೇಹಳ್ಳಿ ಶ್ರೀಗಳ ಬಗ್ಗೆ ಕೂಡ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದ ಅಡ್ಡಂಡ, ಚುನಾವಣೆಯ ಸಂದರ್ಭದಲ್ಲಿ ಉರಿಗೌಡ ಹಾಗೂ ನಂಜೇಗೌಡ ಎಂಬ ಸುಳ್ಳು ಐತಿಹಾಸಿಕ ಪಾತ್ರಗಳನ್ನು ಕಟ್ಟಿ, ಒಕ್ಕಲಿಗ ಹಾಗೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈಹಾಕಿದ್ದರು. ಈ ನಿರೂಪಣೆಯನ್ನು ಬಿಜೆಪಿ ಬಳಸಿಕೊಂಡರೂ, ಅಂತಿಮವಾಗಿ ಈ ವಿವಾದ ಬಿಜೆಪಿಗೆ ಮುಖಭಂಗವನ್ನು ಉಂಟು ಮಾಡಿತ್ತು. ಅಡ್ಡಂಡ ಕಾರ್ಯಪ್ಪರ ಈ ಕೃತ್ಯಕ್ಕೆ ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಗೋಡ್ಸೆಯ ಪ್ರೇಮಕತೆಯನ್ನು ಹೇಳಲು ಹೊರಟಿರುವುದಾಗಿ ಎಚ್‌ಎಎಲ್‌ ನ ನೌಕರರು “ಗೋಡ್ಸೆ- ಒಂದು ಪ್ರೇಮ ಕಥೆ” ನಾಟಕ ಆಡಿ ತೋರಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಅಡ್ಡಂಡ ಕಾರ್ಯಪ್ಪ, ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ನಟ ಸುನೀಲ್‌ ಪುರಾಣಿಕ್‌, ರವೀಂದ್ರ ರೇಷ್ಮೆ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮವು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಎಚ್‌ಎಎಲ್‌ನ ಲಲಿತಕಲಾ ಸಂಘ ಹಾಗೂ ಕನ್ನಡ ಸಂಘದ ಸಹಯೋಗದೊಂದಿಗೆ ನಡೆಯಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page