Thursday, February 19, 2026

ಸತ್ಯ | ನ್ಯಾಯ |ಧರ್ಮ

ಗೋಲ್ಗೋತಿಯಾ ಯೂನಿವರ್ಸಿಟಿ ಮತ್ತು ಛಪ್ಪನ್‌ ಇಂಚ್‌ ಸಾಹೇಬರು!

“..ಮೊನ್ನೆಯಷ್ಟೇ ಮಾಜಿ ಸೇನಾಧಿಕಾರಿ ಬರೆದ ಪುಸ್ತಕದಿಂದಾಗಿ ‘ಚೀನಾ’ ಎಂದರೆ ಬೆಚ್ಚಿಬೀಳುತ್ತಿದ್ದ ಸಾಹೇಬರಿಗೆ ಈಗ ಚೀನಾದ ನಾಯಿಮರಿಯೊಂದು ಅಟಕಾಯಿಸಿಕೊಂಡಿದೆ. ಅದ್ಯಾವ ನಾಯಿಮರಿ ಅಂತೀರಾ..” ಓದಿ, ಮಾಚಯ್ಯ ಎಂ ಹಿಪ್ಪರಿಗಿ ಅವರ ಬರಹದಲ್ಲಿ

ನಿಮಗೆ ಮಹಾಭಾರತದ ಶಿಶುಪಾಲನ ಕಥೆ ಗೊತ್ತಲ್ಲವಾ? ಕೃಷ್ಣನ ಸೋದರತ್ತೆ ಶ್ರುತಶ್ರವೆಯ ಮಗ. ತನ್ನ ಮಗ ನೂರು ತಪ್ಪು ಮಾಡಿದ್ರೂ ನೀನು ಕ್ಷಮಿಸಬೇಕು ಎಂದು ಸೋದರಳಿಯ ಕೃಷ್ಣನ ಬಳಿ ಆಕೆ ಮಾತು ತೆಗೆದುಕೊಂಡಿರುತ್ತಾಳೆ. ಅದಕ್ಕೆ ಕಟ್ಟುಬಿದ್ದು ನೂರು ತಪ್ಪು ಮಾಡುವವರೆಗೆ ಸುಮ್ಮನಿದ್ದು, ನೂರಾ ಒಂದನೇ ತಪ್ಪಿಗೆ ಕಾದಿದ್ದವನಂತೆ ಶಿಶುಪಾಲನನ್ನು ಶ್ರೀಕೃಷ್ಣ ಕೊಂದು ಹಾಕುತ್ತಾನೆ.

ಈಗ ಆ ಶಿಶುಪಾಲ ನೆನಪಾಗಲು ಕಾರಣವಿದೆ. ಅದ್ಯಾಕೋ ನಮ್ಮ ಛಪ್ಪನ್‌ ಇಂಚ್ ಸಾಹೇಬರ ನಸೀಬು ಕೂಡಾ ಅವನಂತೆಯೇ ಆಗಿರುವಂತಿದೆ. ಇಷ್ಟುದಿನ ಮುಟ್ಟಿದ್ದೆಲ್ಲ ದಕ್ಕಿಸಿಕೊಳ್ಳುತ್ತಿದ್ದ ಸಾಹೇಬರ ಅದೃಷ್ಟ ಖಾಲಿಯಾಗಿ, ಈಗ ಮುಟ್ಟದಿದ್ದದ್ದೂ ಕೂಡಾ ಎದ್ದುಬಂದು ಹಣೆಗೆ ಬಡಿವಂತಾಗಿದೆ ಕಣ್ರೀ ಪಾಪಾ!

ಮೊನ್ನೆಯಷ್ಟೇ ಮಾಜಿ ಸೇನಾಧಿಕಾರಿ ಬರೆದ ಪುಸ್ತಕದಿಂದಾಗಿ ‘ಚೀನಾ’ ಎಂದರೆ ಬೆಚ್ಚಿಬೀಳುತ್ತಿದ್ದ ಸಾಹೇಬರಿಗೆ ಈಗ ಚೀನಾದ ನಾಯಿಮರಿಯೊಂದು ಅಟಕಾಯಿಸಿಕೊಂಡಿದೆ. ಹೌದು, ರೋಬೋಟ್‌ ನಾಯಿಮರಿ!

ಗೋಲ್ಗೋತಿಯಾ ಯೂನಿವರ್ಸಿಟಿಯವರು ಚೀನಾದಿಂದ ರೋಬೋಟ್‌ ನಾಯಿಮರಿಯನ್ನು ಖರೀದಿಸಿ ತಂದು, ದಿಲ್ಲಿಯಲ್ಲಿ ನಡೆದ ಎಐ ಸಮ್ಮೇಳನದಲ್ಲಿ ‘ಇದನ್ನು ನಾವೇ ರಿಸರ್ಚ್‌ ಮಾಡಿ ತಯಾರಿಸಿದ್ದು’ ಅಂತ ಪುಂಗಲು ಹೋಗಿ ಜಗತ್ತಿನ ಮುಂದೆ ಇಡೀ ದೇಶದ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕಿದ್ದಾರೆ. ಈಗ ದೇಶ ಅಂದ್ರೆ ಸಾಹೇಬ್ರೇ ಅಲ್ವಾ!! ನಮ್ಮ ಬೆಂಗಳೂರಿನ ಡೈಪರ್‍‌ ಬೇಬಿ ಅವತ್ತು ಘಂಟಾಘೋಷವಾಗಿ ಸಾರಲಿಲ್ಲವೇ, “if you are with SAHEBRU, you are with India; If you are against SAHEBRU, you are anti-Indian… ಅಷ್ಟೆ!”

ಈಗ ಗೋಲ್ಗೋತಿಯಾ ಯೂನಿವರ್ಸಿಟಿ ಮಾಡಿದ ಯಡವಟ್ಟಿಗೆ ಪಾಪಾ, ಸಾಹೇಬ್ರು ಮುಖ ಕೆಳಗೆ ಆಗಬೇಕಿದೆ. ಇನ್‌ಫ್ಯಾಕ್ಟ್‌, ಸಾಹೇಬ್ರು ಮುಖ ಕೆಳಗೆ ಹಾಕಲೇಬೇಕು. ಯಾಕಂದ್ರೆ ಗೋಲ್ಗೋತಿಯಾ ಯೂನಿವರ್ಸಿಟಿಗೂ, ಸಾಹೇಬ್ರು ಪ್ರತಿನಿಧಿಸುವ ಪಕ್ಷಕ್ಕೂ ಇರುವ ಗಾಢ ನಂಟು ಅಂತದ್ದು. ಉತ್ತರ ಪ್ರದೇಶದ ನೊಯ್ಡಾದಲ್ಲಿರುವ ಆ ವಿವಿಯ ಸೃಷ್ಟಿಕರ್ತ ಸುನೀಲ್‌ ಗೋಲ್ಗೋತಿಯಾ, ಸಾಹೇಬ್ರ ಪಕ್ಷದೊಂದಿಗೆ ನಿಕಟ ಒಡನಾಟವಿಟ್ಟುಕೊಂಡಿರುವ ಮನುಷ್ಯ. ಈ ವಿವಿ ಅಸ್ತಿತ್ವಕ್ಕೆ ಬಂದಿದ್ದು 2011ರಲ್ಲಿ. ಅದರ ಮಾತೃಸಂಸ್ಥೆಯಾದ ಶ್ರೀಮತಿ ಶಕುಂತಲಾ ಎಜುಕೇಷನಲ್‌ ಅಂಡ್‌ ವೆಲ್‌ಫೇರ್‍‌ ಟ್ರಸ್ಟ್‌ 1998ರಲ್ಲೆ ಶುರುವಾಗಿತ್ತಾದರೂ, ಸಣ್ಣಪುಟ್ಟ ಶಿಕ್ಷಣ ಸಂಸ್ಥೆಗಳನ್ನಷ್ಟೆ ನಡೆಸುತ್ತಿತ್ತು. ಯೂನಿವರ್ಸಿಟಿ ಸಾಹಸಕ್ಕೆ ಗೋಲ್ಗೊತಿಯಾ ಕುಟುಂಬ ಕೈಹಾಕಿದ್ದು 2011ರಲ್ಲಿ. 2012ರಲ್ಲಿ ಮೊದಲ ವಿದ್ಯಾರ್ಥಿಗಳ ಬ್ಯಾಚ್‌ ಪ್ರವೇಶ ಪಡೆದಿತ್ತು.

ಈ ಸುನೀಲ್‌ ಗೋಲ್ಗಾತಿಯಾನ ಪೊಲಿಟಿಕಲ್‌ ಲಿಂಕ್‌ ಎಂತದ್ದೆಂದರೆ, ಶುರುವಾಗಿ ಕೇವಲ ಎರಡೇ ವರ್ಷಕ್ಕೆ, ಅಂದರೆ 2014ರಲ್ಲಿ ದೇಶದ ಅತ್ಯುತ್ತಮ ಖಾಸಗಿ ಯೂನಿವರ್ಸಿಟಿ ಎಂಬ ಪ್ರಶಸ್ತಿ ಒಲಿದುಬಂತು! ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು ಯಾರು ಅಂತೀರಾ? ಗುಜರಾತಿನ ಸಿಎಂ ಆಗಿದ್ದ, ಭಾವಿ ಪ್ರಧಾನಿಯೆಂದು ಬಹುಪಾಲು ನಿಕ್ಕಿಯಾಗಿದ್ದ ನಮ್ಮ ಛಪ್ಪನ್‌ ಇಂಚ್‌ ಸಾಹೇಬರು!

ಅದಾಗಿ, ನಮ್ಮ ಸಾಹೇಬರು ಪ್ರಚಂಡ ಬಹುತದಿಂದ ಗೆದ್ದು ಪ್ರಧಾನಿಯಾದ್ರಲ್ವಾ… ಆಗುತ್ತಿದ್ದಂತೆಯೇ ಮೇಕ್‌ ಇನ್‌ ಇಂಡಿಯಾವನ್ನೂ ಘೋಷಣೆ ಮಾಡಿದ್ರಲ್ವಾ.. ಆಗ ನೋಡಿ 2015ರಲ್ಲಿ ನಡೆದ ಮೇಕ್‌ ಇನ್‌ ಇಂಡಿಯಾ ಕಾನ್‌ಕ್ಲೇವ್‌ನಲ್ಲಿ ಇದೇ ಗೋಲ್ಗಾತಿಯಾ ಯೂನಿವರ್ಸಿಟಿಗೆ ` Excellence in Academics’ ಅಂತ ಪ್ರಶಸ್ತಿಯನ್ನು ನೀಡಲಾಯ್ತು. ನೀಡಿದ್ದ್ಯಾರು? ನಮ್ಮ ಘನತೆವೆತ್ತ ರಕ್ಷಣಾ ಸಚಿವರು!! ಅದೇ ಕಣ್ರಿ, ಮಾಜಿ ಸೇನಾಧಿಕಾರಿ ಪುಸ್ತಕದ ಕೇಂದ್ರಬಿಂಧು ರಾಜನಾಥ್‌ ಸಿಂಗರು!

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥರಿಗಂತೂ ಈ ಸುನೀಲ್‌ ಗೊಲ್ಗೊತೀಯಾ ಅಗ್ದೀ ಆತ್ಮೀಯ ವ್ಯಕ್ತಿ. ಗಂಟೆಗಟ್ಟಲೆ ಸಿಎಂ ಕ್ಯಾಬಿನ್‌ನಲ್ಲಿ ಕೂತು ಹರಟಬಲ್ಲಷ್ಟು ಗಳಸ್ಯ. ಪಕ್ಷದ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ತರಹದ ವ್ಯಕ್ತಿ ಈ ಸುನೀಲನ ಕೈಗೆ ತಮ್ಮ ಪಕ್ಷದ ಪ್ರಣಾಳಿಕೆ ಕೊಟ್ಟು ಅವರ ಮುಂದೆ ವಿಧೇಯ ವಿದ್ಯಾರ್ಥಿಯಂತೆ ಕೈಕಟ್ಟಿ ನಿಲ್ಲುತ್ತಾನೆಂದರೆ ಈತನ ಪ್ರಭಾವ ಇನ್ನೆಂತದ್ದಿರಬೇಡ.

ಇಷ್ಟೆಲ್ಲಾ ಆಪ್ತನಾಗಿ, ಅಷ್ಟೆಲ್ಲಾ ಅನುಕೂಲ ಪಡೆದುಕೊಂಡ ಮೇಲೆ ಕಿಂಚಿತ್ತು ಸಾಹೇಬರ ಋಣ ತೀರಿಸುವುದು ಬೇಡವೇ. ಅಂತಹ ಯಡಬಿಡಂಗಿ ಸಾಹಸಗಳಿಗೂ ಈ ಯೂನಿವರ್ಸಿಟಿ ಮುಂದಾಗಿದ್ದುಂಟು. 2020ರಲ್ಲಿ ಕೊರೊನಾ ಉಲ್ಬಣಿಸಿದಾಗ, ನಮ್ಮ ಸಾಹೇಬರು ತಮ್ಮ ಪ್ರಜಾರತ್ನಗಳಿಗೆ ಗೃಹಬಂಧನದಲ್ಲೆ ತಟ್ಟೆ, ಲೋಟ ಬಡಿದು ಒಂದೀಟು ಮನರಂಜನೆ ಮಾಡಿಕೊಳ್ಳಿ ಅಂತ ಹೇಳಿದ್ದು ನಿಮಗೆ ನೆನಪಿರಬೇಕಲ್ಲವೇ? ಆಗ ಕೆಲವರು ಸಾಹೇಬರ ಬೇಜವಾಬ್ಧಾರಿಯನ್ನು ಲೇವಡಿ ಮಾಡಿದ್ದರು. ಆಗ ಎಂಟ್ರಿಯಾಯ್ತು ನೋಡಿ ಈ ವಿವಿ. ಗೋಲ್ಗೋತಿಯಾ ಯೂನಿವರ್ಸಿಟಿಯ ಧರ್ಮೇಂದ್ರ ಕುಮಾರ್‍‌ ಎಂಬ ರಿಸರ್ಚ್‌ ಸ್ಕಾಲರ್ ಒಬ್ಬ ‘ಹೀಗೆ ತಟ್ಟೆ ಲೋಟ ಬಡಿಯುವುದರಿಂದ ಉದ್ಭವವಾಗುವ ಶಬ್ಧದ ಅಲೆಗಳು ಅದ್ಭುತ ತರಂಗಾಂತರ ಹೊಂದಿದ್ದು, ಆ ತರಂಗಕ್ಕೆ ತುತ್ತಾಗಿ ಕೊರೊನೊ ವೈರಸ್‌ ವಿಲವಿಲ ಒದ್ದಾಡಿ ಪ್ರಾಣಬಿಡುತ್ತೆ’ ಎಂಬ ಹೈಲಿ ಸೈಂಟಿಫಿಕ್‌ ಹೈಪಾಥಿಸಿಸ್‌ ಒಂದನ್ನು ಮುಂದಿಟ್ಟ. ವಿವಿ ಅದನ್ನು ಹೆಮ್ಮೆಯಿಂದ ಪ್ರಕಟಿಸಿತು. ಭಕ್ತರು ಅದನ್ನು ನೋಬೆಲ್‌ ಪುರಸ್ಕೃತ ಸಂಶೋಧನೆಯಂತೆ ಪ್ರಚಾರಕೊಟ್ಟ ಸಾಹೇಬರ ದೂರದೃಷ್ಟಿ, ದೈವದೃಷ್ಟಿಯನ್ನು ಸಿಕ್ಕಪಾಟ್ಟೆ ಕೊಂಡಾಡಿದ್ದಾಯ್ತು.

ಅದಾಗಿ, 2024ರ ಚುನಾವಣೆ ವೇಳೆ ಬಂದಾಗ, ಸಾಹೇಬರ ಓವರ್‍‌ ಕಾನ್ಫಿಡೆನ್ಸು ಕೈಕೊಡುವ ಸೂಚನೆಗಳು ಸಿಗಲಾರಂಭಿಸಿದ್ದವು. ಆಗ ಕಾಂಗ್ರೆಸ್‌ ಮೇಲೆ ಇಲ್ಲಸಲ್ಲದ ಆರೋಪಗಳ ಸುರಿಮಳೆಗೈಯಲಾಯಿತು. ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲು ಕಾಂಗ್ರೆಸ್‌ ಮಸಲತ್ತು ನಡೆಸಿದೆ ಅನ್ನೋದು ಅಂತಹ ಮಾಸ್ಟರ್‍‌ಸ್ಟ್ರೋಕ್‌ ಸ್ಟ್ರಾಟಜಿಯಲ್ಲಿ ಒಂದು. ಆ ಸ್ಟ್ರಾಟಜಿಯನ್ನು ಪಬ್ಲಿಕ್‌ ಸೆಂಟಿಮೆಂಟ್‌ ಆಗಿ ಬದಲಿಸಲು ಸಾಹೇಬರ ಪಾರ್ಟಿಗೆ ನೆರವಾಗಿದ್ದೇ ಈ ಗೋಲ್ಗಾತಿಯಾ ಯೂನಿವರ್ಸಿಟಿ.

ತಮ್ಮ ಒಂದಷ್ಟು ಸ್ಟೂಡೆಂಟುಗಳ ಕೈಗೆ ಫ್ಲೆಕ್ಸ್, ಬ್ಯಾನರ್, ಪ್ಲೆಕಾರ್ಡು ಕೊಟ್ಟು ದಿಲ್ಲಿಯ ಕಾಂಗ್ರೆಸ್‌ ಕಚೇರಿ ಮುಂದೆ ಪ್ರತಿಭಟಿಸಲು ಕಳಿಸಿಕೊಟ್ಟಿತ್ತು. ಕಾಂಗ್ರೆಸ್‌ಗೆ ಧಿಕ್ಕಾರ ಕೂಗುತ್ತಿದ್ದ ಆ ವಿದ್ಯಾರ್ಥಿಗಳ ಮುಖಕ್ಕೆ ಮೈಕ್ ಹಿಡಿದು, “ನೀವು ಕಾಂಗ್ರೆಸ್ ಪ್ರಣಾಳಿಕೆ ಓದಿದ್ದೀರಾ?” “ನೀವು ಹಿಡಿದಿರುವ ಪ್ಲೆಕಾರ್ಡಿನಲ್ಲಿರುವ ಅರ್ಬನ್‌ ನಕ್ಸಲರು ಅಂದ್ರೆ ಯಾರು?” “ನೀವು ಪ್ರತಿಭಟಿಸುತ್ತಿರುವ ಉದ್ದೇಶವೇನು?” ಎಂಬಿತ್ಯಾದಿ ಕಾಮನ್‌ಸೆನ್ಸ್‌ ಪ್ರಶ್ನೆ ಕೇಳಿದಾಗ, ಪಾಪಾ.. ಕಣ್ರೀ…. ಕಣ್ಣುಬಾಯಿ ಬಿಟ್ಟುಕೊಂಡು ಪೆಕರು ಪೆಕರಾಗಿ ಉತ್ತರಕೊಟ್ಟು ನಗೆಪಾಟಲಿಗೆ ಈಡಾಗಿದ್ದವು.

ಅದೇ ಗೋಲ್ಗೋತೀಯಾ ಯೂನಿವರ್ಸಿಟಿ ಇವತ್ತು ಚೀನಾ ನಾಯಿಯನ್ನು ಸಾಹೇಬರ ಮೇಲೆ ಛೂಬಿಟ್ಟಿದೆ! 150 ಕೋಟಿ ಹೂಡಿಕೆಯೊಂದಿಗೆ ಶುರುವಾದ ಈ ಯೂನಿವರ್ಸಿಟಿ ಇವತ್ತು 52 ಎಕರೆಯ ಬೃಹತ್‌ ಕ್ಯಾಂಪಸ್‌ನಲ್ಲಿ 3000 ಕೋಟಿ ರೂಪಾಯಿಯ ಸಾಮ್ರಾಜ್ಯವಾಗಿ ಬೆಳೆದುನಿಂತಿದೆ. ವರ್ಷಕ್ಕೆ 119 ಕೋಟಿ ವಹಿವಾಟು ನಡೆಸುತ್ತಿದೆ. ಇದೆಲ್ಲಾ ಹೇಗೆ ಸಾಧ್ಯವಾಯ್ತು ಅಂತೀರಾ? ಹೇಳಿದ್ದನ್ನೆ ಮತ್ತೆ ಹೇಳಲು ನನಗೂ ಪುರಸೊತ್ತಿಲ್ಲ, ಕೇಳುವ ವ್ಯವಧಾನ ನಿಮಗೂ ಇಲ್ಲ…

ಈಗ ಹೇಳಿ, ಚೀನಾ ರೊಬೊಟ್‌ ನಾಯಿಯನ್ನು ಕಡತಂದು ತನ್ನ ಸೃಷ್ಟಿಯೆಂದು ಪುಂಗಿದ ತಪ್ಪಿಗೆ ತಲೆತಗ್ಗಿಸಬೇಕಾದದ್ದು ಗೋಲ್ಗೋತಿಯಾ ಯೂನಿವರ್ಸಿಟಿ ಮಾತ್ರವಾ? ಅಥವಾ ನಮ್ಮ ಛಪ್ಪನ್‌ ಇಂಚ್‌ ಸಾಹೇಬರ ಸಮಸ್ತ ಬಳಗವಾ?

Related Articles

ಇತ್ತೀಚಿನ ಸುದ್ದಿಗಳು

You cannot copy content of this page