Tuesday, November 12, 2024

ಸತ್ಯ | ನ್ಯಾಯ |ಧರ್ಮ

ಕೊವಿಡ್‌ ಕಾಲದ ಇನ್ನೊಂದು ಹಗರಣ ತನಿಖೆಗೆ ಆದೇಶ ನೀಡಿದ ಸರ್ಕಾರ; ಸಂಕಷ್ಟದಲ್ಲಿ ಬಿಜೆಪಿ

ಜಸ್ಟೀಸ್‌ ಮೈಕಲ್‌ ಡಿ’ಕುನ್ಹಾ ಅವರ ವರದಿ ಬಿಜೆಪಿಯಲ್ಲಿ ಹುಟ್ಟಿಸಿರುವ ತಲ್ಲಣ ತಣ್ಣಗಾಗುವ ಮೊದಲೇ ಅದಕ್ಕೆ ಇನ್ನೊಂದು ಸಿಡಿಲು ಎರಗಿದೆ. ರಾಜ್ಯ ಸರ್ಕಾರವು ಯಡಿಯೂರಪ್ಪ ಕಾಲದಲ್ಲಿ ನಡೆದಿದೆ ಎನ್ನಲಾಗಿರುವ ಇನ್ನಷ್ಟು ಹಗರಣಗಳ ತನಿಖೆಗೆ ಮುಂದಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಲ್ಲಿ ಕೋವಿಡ್‌ 19ಕ್ಕೆ ಸಂಬಂಧಿಸಿದ ಔಷಧ, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ, ಈ ಸಾಂಕ್ರಾಮಿಕ ಮಹಾಮಾರಿಗೆ ತುತ್ತಾದ ಖಾಸಗಿ ಶಾಲಾ ಶಿಕ್ಷಕರಿಗೆ ಸರಕಾರದ ಅನುಮೋದನೆ ಇಲ್ಲದೆ ಪರಿಹಾರ ಒದಗಿಸಿರುವುದು ಒಳಗೊಂಡಂತೆ ನಡೆದಿದೆ ಎನ್ನಲಾದ ಹಲವು ಅಕ್ರಮಗಳ ಕುರಿತು ತನಿಖೆಗೆ ಸುಧೀರ್‌ ಕುಮಾರ್‌ ಅವರನ್ನು ಸರಕಾರ ನೇಮಿಸಿದೆ. 6 ತಿಂಗಳಲ್ಲಿ ಈ ಸಂಬಂಧ ವರದಿ ನೀಡಲು ಸೂಚಿಸಿದೆ.

ಈ ತನಿಖೆಗೆ ಅಗತ್ಯವಿರುವ ಮಾನವ ಸಂಪನ್ಮೂಲ, ಕಚೇರಿ, ವಾಹನ ಇತ್ಯಾದಿ ವ್ಯವಸ್ಥೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಲ್ಪಿಸಲು ನಿರ್ದೇಶನ ನೀಡಲಾಗಿದೆ. ಈ ಅಕ್ರಮಗಳ ಕುರಿತಾಗಿ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾಣ ಇ.ವಿ. ರಮಣರೆಡ್ಡಿ ವರದಿ ನೀಡಿದ್ದರು. ಅದನ್ನು ಪರಿಶೀಲಿಸಿ, ಹೆಚ್ಚಿನ ತನಿಖೆ/ ವಿಚಾರಣೆ ಮಾಡಿ ವರದಿ ಸಲ್ಲಿಸಲು ಸುಧೀರ್‌ ಕುಮಾರ್‌ ಅವರನ್ನು ನೇಮಿಸಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಸರಕಾರವು 450 ಕೋಟಿ ರೂ.ಗಳಲ್ಲಿ 315 ಹೊಸ ಬಸ್‌ಗಳನ್ನು ಖರೀದಿಸಲು ಅನುಮೋದನೆ ನೀಡಿದ್ದರೂ ಈ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿತ್ತು. ಸರಕಾರವು 47 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೆ, 37 ಆರೋಗ್ಯ ಕೇಂದ್ರಗಳಿಗೆ ಮಂಜೂರು ಮಾಡಲಾಗಿತ್ತು.

815 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಅನುಮೋದನೆ ನೀಡಿದ್ದರೂ ಅನುಷ್ಠಾನಗೊಳಿಸಿಲ್ಲ ಮತ್ತಿತರ ಅಕ್ರಮಗಳು ನಡೆದಿದೆ ಎನ್ನಲಾಗಿದೆ. ಮಂಡಳಿಯ ಕಳಪೆ ಕಾಮಗಾರಿಗಳ ಬಗ್ಗೆ ಸಿಎಜಿ ವರದಿ ಶಿಫಾರಸುಗಳನ್ನು ಮಾಡಿತ್ತು ಎಂದು ಹೇಳಲಾಗಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದಲ್ಲಿ 310.59 ಕೋಟಿ ರೂ. ವೆಚ್ಚದಲ್ಲಿ 6 ಜಿಲ್ಲೆಗಳಲ್ಲಿ 1 ಕೋಟಿ ಸಸಿ ನೆಟ್ಟಿರುವುದಾಗಿ ಸುಳ್ಳು ಲೆಕ್ಕ ತೋರಿಸಿ ಅನುದಾನ ದುರುಪಯೋಗ ನಡೆಸಿರುವುದರ ಸಹಿತ ಹಲವು ಆರೋಪಗಳು ಕೇಳಿಬಂದಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page