Friday, June 14, 2024

ಸತ್ಯ | ನ್ಯಾಯ |ಧರ್ಮ

ನೋಟು ನಿಷೇಧವೆಂಬ ಸರಕಾರಿ ಕ್ರೌರ್ಯ

ನೋಟು ನಿಷೇಧದಂಥ ಒಂದು ಕ್ರೂರ ನಿರ್ಧಾರವನ್ನು ತೆಗೆದುಕೊಳ್ಳುವಾಗಲೂ ನಮ್ಮನ್ನು ಆಳುವವರ ಅಸಂವೇದನಾಶೀಲ ಮನೋಭಾವ ಹೇಗಿತ್ತು ಎಂಬುದಕ್ಕೆ ಅತ್ಯುತ್ತಮ ರೂಪಕವೆಂದರೆ, ನೋಟು ನಿಷೇಧದ ಮಾರನೆಯ ದಿನ ಜಪಾನ್ ಪ್ರವಾಸದಲ್ಲಿ ಮೋದಿಯವರು ಆಡಿದ “ಘರ್ ಮೇ ಶಾದೀ ಹೆ, ಪೈಸಾ ನಹೀ ಹೆ, ಹ ಹ ಹ…” ಎಂದ ಮಾತುಗಳು. ಅದನ್ನು ಮರೆಯುವುದಾದರೂ ಹೇಗೆ?! – ಶ್ರೀನಿವಾಸ ಕಾರ್ಕಳ

ಆಕೆ ಮಾತು ಬಾರದ ಮೂಕಿ. ಅವರಿವರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಬ್ಯಾಂಕು ವ್ಯವಹಾರಗಳೆಲ್ಲ ಈ ಬಡಪಾಯಿಗಳಿಗೆ ಹೇಗೆ ಗೊತ್ತಿರುವುದು ಸಾಧ್ಯ? ಹಣ ನಗದು ರೂಪದಲ್ಲಿ ತಮ್ಮ ಬಳಿ ಇದ್ದರೇ ಹಳ್ಳಿಯ ಮಂದಿಗೆ ಒಂದು ಬಗೆಯ ಧೈರ್ಯ ಮತ್ತು ನೆಮ್ಮದಿಯಲ್ಲವೇ? ಹಾಗಾಗಿ ಸಂಬಳವಾಗಿ ದೊರೆತ ನಗದನ್ನೆಲ್ಲ ಹಾಗೆಯೇ ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದಳು ಆಕೆ. ಅನೇಕ ವರ್ಷಗಳ ದುಡಿಮೆಯ ಹಣ ಆಕೆಯ ಬಳಿ ಸಂಗ್ರಹವಾಗಿತ್ತು.

ಒಮ್ಮೆ ಬೆಂಗಳೂರಿನಲ್ಲಿದ್ದ ಆಕೆಯ ಮಗಳು ಹಳ್ಳಿಯಲ್ಲಿದ್ದ ತಾಯಿಯನ್ನು ನೋಡಲು ಬಂದಳು. ಮಾತಿನ ನಡುವೆ ಹಣದ ವಿಷಯ ಬಂದಿತು. “ನಿನ್ನ ಬಳಿ ಇದ್ದ ಹಣ ಎಲ್ಲಿರಿಸಿದ್ದಿ? ಅವನ್ನು ಬದಲಾಯಿಸಿದ್ದಿಯಾ?” ಎಂದು ಮಗಳು ಕೇಳಿದಳು. ತಾಯಿಗೆ ಅರ್ಥವಾಗಲಿಲ್ಲ. ಕೇಳಿದ್ದು ಮಗಳಲ್ಲವೇ? ಯಾವ ಅಳುಕೂ ಇಲ್ಲದೆ ಆಕೆ ತನ್ನ ಬಳಿ ಇದ್ದ ಹಣದ ಗಂಟು ತೋರಿಸಿದಳು. ಅದರಲ್ಲಿ 500 ರುಪಾಯಿಗಳ ಅನೇಕ ಹಳೆಯ ನೋಟುಗಳಿದ್ದವು. ಹೌಹಾರಿದ ಮಗಳು, “ಅಯ್ಯೋ! ಅಮ್ಮಾ ಈ ನೋಟುಗಳು ಈಗ ನಡೆಯುವುದಿಲ್ಲ, ಇದನ್ನು ಯಾಕೆ ಬದಲಾಯಿಸಲಿಲ್ಲ?” ಎಂದು ಕೇಳಿದಳು. “ನಡೆಯುವುದಿಲ್ಲ?!.. ಅಂದರೆ ಏನು? ನಾನು ಚಿಕ್ಕಂದಿನಿಂದಲೂ ಇಂತಹ ನೋಟುಗಳನ್ನು ಬಳಸುತ್ತಲೇ ಇದ್ದೇನೆ, ಇದು ನಡೆಯುವುದಿಲ್ಲ ಎಂದರೆ ಏನು ಅರ್ಥ? ಹೋಗು ಹೋಗು.. ನೀನು ಸುಳ್ಳು ಹೇಳುತ್ತಿದ್ದಿ” ಅಂದಳು. ಅಮ್ಮನಿಗೆ ಹೇಗೆ ವಿವರಿಸಿ ಹೇಳುವುದು ಎಂದು ಮಗಳಿಗೆ ತಿಳಿಯಲಿಲ್ಲ.

ಆನಂತರ ಸ್ಥಳೀಯ ಬ್ಯಾಂಕಿನವರನ್ನು ಸಂಪರ್ಕಿಸಿದರೆ, “ತುಂಬಾ ತಡವಾಯಿತು, ಇನ್ನು ಏನೂ ಮಾಡಲಾಗದು” ಎಂದು ಕೈ ಚೆಲ್ಲಿದರು. ಆ ಮುದುಕಿಯ ಬಳಿ ಇದ್ದ ಸುಮಾರು ಒಂದು ಲಕ್ಷದಷ್ಟು ಹಣದ ನೋಟುಗಳು ಬೆಲೆ ಕಳೆದುಕೊಂಡ ಕೇವಲ ಕಾಗದದ ತುಣುಕುಗಳಾಗಿ ಹೋದವು. ಆಕೆಯ ಕಷ್ಟ ಮತ್ತು ದುಃಖವನ್ನು ಯಾರ ಬಳಿ ಹೇಳಬೇಕು? ಹೀಗೆ ಈ ದೇಶದ ಕೋಟ್ಯಂತರ ಮಂದಿಯನ್ನು ಕಷ್ಟಕ್ಕೆ ದೂಡಿದುದು, ಈ ದೇಶದ ಆರ್ಥಿಕ ಬೆನ್ನೆಲುಬನ್ನು ಮುರಿದುಹಾಕಿದುದು, ದೇಶದ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8, 2016 ರ ರಾತ್ರಿ ಎಂಟು ಗಂಟೆಗೆ ಟಿವಿ ಪರದೆಯಲ್ಲಿ ಕಾಣಿಸಿಕೊಂಡು ಘೋಷಿಸಿದ ನೋಟು ನಿಷೇಧದ ನಿರ್ಧಾರ.

ಆರ್ಥಿಕ ಆಘಾತ

ಇಂದಿಗೆ ಸರಿಯಾಗಿ ಏಳು ವರ್ಷಗಳ ಹಿಂದೆ ಆಗಿನ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಮೂರು ಗಂಟೆಗಳ ಸಮಯ ಕೊಟ್ಟು, ಏಕಾಏಕಿಯಾಗಿ 500 ಮತ್ತು 1000 ರುಪಾಯಿ ನೋಟುಗಳನ್ನು ನಿಷೇಧಿಸಿದ್ದು ಸರಿಯಷ್ಟೇ? ಆನಂತರ ದೇಶದಲ್ಲಿ ಉಂಟಾದ ಕೋಲಾಹಲವನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಇಡೀ ದೇಶವೇ ಬ್ಯಾಂಕಿನ ಬಾಗಿಲಿನಲ್ಲಿ ಬಂದು ನಿಂತಿತು. ಕೋಟಿಗಟ್ಟಲೆ ಜನ ತಮ್ಮದೇ ಹಣಕ್ಕಾಗಿ ಕ್ಯೂಗಳಲ್ಲಿ ಕಾದು ಹೈರಾಣಾದರು. ದಿನಕ್ಕೆ ಒಬ್ಬರಿಗೆ ಇಂತಿಷ್ಟೇ ನೋಟು ಕೊಡುವುದಾಗಿ ಬ್ಯಾಂಕುಗಳು ಹೇಳುವ ವಿಚಿತ್ರ ವಿದ್ಯಮಾನಕ್ಕೂ  ದೇಶ ಸಾಕ್ಷಿಯಾಯಿತು. ಆಸ್ಪತ್ರೆಗಳ ಬಿಲ್ ಪಾವತಿಸಲಾಗದೆ ಜನರು ನರಳಿದರು. ಹಿರಿಯ ನಾಗರಿಕರು ಬ್ಯಾಂಕ್ ಬಾಗಿಲಲ್ಲಿ ಕಾದು ಕಾದು, ಅನೇಕರು ಅಲ್ಲಿಯೇ ಅಸು ನೀಗಿದರು.

ಲಕ್ಷಗಟ್ಟಲೆ ಸಣ್ಣ ವ್ಯಾಪಾರ ವಹಿವಾಟುಗಳು ಬಾಗಿಲು ಹಾಕಿಕೊಂಡವು. ಕೋಟಿಗಟ್ಟಲೆ ಮಂದಿ ಉದ್ಯೋಗ ಕಳೆದುಕೊಂಡರು. ಇಂಡಿಯಾದ ಬೆಳವಣಿಗೆ ಕಥಾನಕಕ್ಕೆ ಮಾರಕ ಹೊಡೆತ ಬಿದ್ದಿತು. ಜನರು ಮನೆಗಳಲ್ಲಿ ಜೋಪಾನವಾಗಿ ಸಂಗ್ರಹಿಸಿದ್ದ ಉಳಿತಾಯ ಹಣ ನಾಶವಾಯಿತು. 2016 ರ ಬಳಿಕ ಕಪ್ಪು ಹಣ ಇಲ್ಲವಾಯಿತೇ? ಭಯೋತ್ಪಾದನೆ ನಕ್ಸಲ್ ಚಟುವಟಿಕೆ ಇಲ್ಲವಾಯಿತೇ? ನಕಲಿ ನೋಟುಗಳ ಸಂಖ್ಯೆ ಕಡಿಮೆಯಾಯಿತೇ? ವಾಸ್ತವ ಬೇರೆಯೇ ಹೇಳುತ್ತದೆ. ಆರ್ ಬಿ ಐ ಹೇಳುವ ಪ್ರಕಾರ, ಒಂದೇ ವರ್ಷದಲ್ಲಿ 500 ರ ನಕಲಿ ನೋಟುಗಳ ಸಂಖ್ಯೆ 14% ದಷ್ಟು ಹೆಚ್ಚಾಯಿತು. 86.4% ನೋಟುಗಳನ್ನು ಒಂದೇ ಏಟಿಗೆ ನೋಟು ನಿಷೇಧದ ಮೂಲಕ ಇಲ್ಲವಾಗಿಸಲಾಯಿತು. ಇದರಿಂದ ನಗದು ರಹಿತ ಆರ್ಥಿಕತೆಯಾಯಿತೇ? 2016 ರ ಬಳಿಕ ನಗದು ಚಲಾವಣೆ ಬರೋಬ್ಬರಿ 83% ಹೆಚ್ಚಾಯಿತು!

ಆದರೆ ದೇಶದ ಹೆಚ್ಚಿನ ಮಾಧ್ಯಮಗಳು ಸರಕಾರದ ತುತ್ತೂರಿಯಾಗಿದ್ದುದರಿಂದ ಸರಕಾರಕ್ಕೆ ಸತ್ಯ ಹೇಳಿ, ಅದರ ಕಿವಿ ಹಿಂಡುವ ಕೆಲಸವನ್ನು ಮಾಡಲೇ ಇಲ್ಲ. ಸರಕಾರದ ಭಕ್ತರು ಪ್ರಧಾನಿಗಳ ನಿರ್ಧಾರವನ್ನು ಕೊಂಡಾಡಿದರೆ, ಅನೇಕ ಆರ್ಥಿಕ ತಜ್ಞರೂ ಇದೇ ಹಾದಿಯಲ್ಲಿ ನಡೆದರು. ಇದರಿಂದ ಉತ್ತೇಜಿತರಾದ ಪ್ರಧಾನಿಗಳು ತಪ್ಪುಗಳ ಮೇಲೆ ತಪ್ಪು ಮಾಡುತ್ತಾ ಸಾಗಿದರು. ಆದರೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮಾತ್ರ ನೋಟು ನಿಷೇಧದ ಈ ಅವಿವೇಕಿ ಮತ್ತು ದುಷ್ಟ ನಿರ್ಧಾರವನ್ನು ಇದು “Organized loot and legalized plunder (ಯೋಜನಾಬದ್ಧ ಲೂಟಿ ಮತ್ತು ಕಾನೂನು ಬದ್ಧ ದರೋಡೆ) ಅಂದರು.

ಆರ್ಥಿಕತೆಯ ನಾಶ

2011 ಮತ್ತು 2016 ರ ನಡುವೆ ದೇಶದ ಜಿಡಿಪಿ ಬೆಳವಣಿಗೆ ದರ ನಿರಂತರವಾಗಿ 5.2% ದರದಲ್ಲಿ ಏರುತ್ತಾ ಹೋಗಿತ್ತು. ನೋಟು ನಿಷೇಧದ 2016 ರಿಂದ ಅದು ಇಳಿಮುಖವಾಯಿತು. 4% ಗೆ ಇಳಿಯಿತು!

“ನೋಟು ನಿಷೇಧವು ಅನೌಪಚಾರಿಕ ವಲಯದ ಮೇಲೆ ಪ್ರತಿಕೂಲ ಪರಿಣಾಮದೊಂದಿಗೆ ಬೆಳವಣಿಗೆಯ ಮೇಲೆ ತೀವ್ರ ಸ್ವರೂಪದ ಮತ್ತು ದೀರ್ಘಾವಧಿಯ ದುಷ್ಪರಿಣಾಮ ಉಂಟುಮಾಡಿದೆ” ಎಂದಿದೆ ಆಗಸ್ಟ್ 2018 ರ ಐಎಂಎಫ್ ವರದಿ.

“ನೋಟು ನಿಷೇಧದಿಂದ ಗ್ರಾಹಕ ಖರೀದಿ ಭಾರೀ ಕುಸಿದಿದೆ. ಬಡ ಕುಟುಂಬಗಳು ಸಾಲದ ಸುಳಿಯಲ್ಲಿ ಸಿಲುಕಿವೆ” ಎಂದಿದೆ ಬ್ರೌನ್ ಯುನಿವರ್ಸಿಟಿಯ ಅಧ್ಯಯನ.

MSME ವಲಯವು ನಗದು ಆರ್ಥಿಕತೆಯನ್ನು ಅವಲಂಬಿಸಿದ್ದು, ಅದು ಭಾರೀ ಪ್ರಮಾಣದಲ್ಲಿ ಉದ್ಯೋಗ ಒದಗಿಸುತ್ತದೆ. ನೋಟು ನಿಷೇಧದಿಂದ ಅದು ಸರ್ವನಾಶವಾಯಿತು. ಸಣ್ಣ ಸಂಸ್ಥೆಗಳಲ್ಲಿ 60% ಉದ್ಯೋಗ ನಷ್ಟವಾಗಿದೆ, 50% ರೆವಿನ್ಯೂ ನಷ್ಟವಾಗಿದೆ, ದೊಡ್ಡ ಸಂಸ್ಥೆಗಳಲ್ಲಿ 2% ಉದ್ಯೋಗ ನಷ್ಟ, 3% ರೆವಿನ್ಯೂ ನಷ್ಟವಾಗಿದೆ ಎಂದಿದೆ ಆಲ್ ಇಂಡಿಯಾ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಪ್ರಕಾರ ಜನವರಿ ಎಪ್ರಿಲ್ 2017 ರ ನಡುವೆ 15 ಲಕ್ಷ ಉದ್ಯೋಗ ನಷ್ಟವಾಯಿತು.

ಅನೌಪಚಾರಿಕ ವಲಯಕ್ಕೆ ತೀವ್ರ ಪೆಟ್ಟು ಆಯಿತು. ಎಸ್ ಬಿ ಐ ವರದಿ ಪ್ರಕಾರ 55% ನಿರ್ಮಾಣ ಕಾರ್ಮಿಕರು, 71% ರಸ್ತೆ ಬದಿ ಅಂಗಡಿಗಳು ಅರ್ಧದಷ್ಟು ವ್ಯಾಪಾರ ನಷ್ಟ ಅನುಭವಿಸಿದವು. ರಾಂಚಿಯಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಕಾರ್ಮಿಕರ ಉದ್ಯೋಗದಲ್ಲಿ 40% ದಷ್ಟು ಇಳಿಕೆಯಾದುದು ಕಂಡುಬಂತು. ದಿಲ್ಲಿ ಸಮೀಕ್ಷೆಯ ಪ್ರಕಾರ 60% ಆದಾಯ ಕುಸಿತವಾಯಿತು.

ಕೋಟಿಗಟ್ಟಲೆ ರೈತರು ನಗದು ಕೊರತೆಯಿಂದ ತೀವ್ರ ಸಂಕಷ್ಟ ಅನುಭವಿಸಿದರು, ಬೀಜ ಮತ್ತು ರಸಗೊಬ್ಬರ ಖರೀದಿಸುವುದು ಕಷ್ಟವಾಯಿತು, ಕೃಷಿ ಕಾರ್ಮಿಕರಿಗೆ ಸಂಬಳ ಕೊಡುವುದು ಅಸಾಧ್ಯವಾಯಿತು. ಇವೆಲ್ಲ ನೋಟು ನಿಷೇಧದ ಪರಿಣಾಮ ಎಂದಿದೆ ಸ್ಥಾಯೀ ಸಮಿತಿಯ ವರದಿಯನ್ನು ಒಪ್ಪಿಕೊಳ್ಳುತ್ತಾ ಕೇಂದ್ರ ಕೃಷಿ ಸಚಿವಾಲಯ.

ವೈಫಲ್ಯ

ನೋಟು ನಿಷೇಧದಿಂದ ಕಪ್ಪು ಹಣ ಪತ್ತೆಯಾಗಲಿದೆ ಎನ್ನಲಾಗಿತ್ತು. ಆದರೆ 99.3% ರಷ್ಟು ನಿಷೇಧಿತ ನೋಟುಗಳು ಆರ್ ಬಿ ಐಗೆ ಮರಳಿದವು. ಹಾಗಾದರೆ ಕಪ್ಪು ಹಣದ ಬೊಗಳೆ ಏನಾಯಿತು?

0.0002% ನೋಟು ಮಾತ್ರ ನಕಲಿ ಎನಿಸಿಕೊಂಡಿತು. ನೋಟು ನಿಷೇಧದಿಂದ ಗ್ರಾಹಕ ವಿಶ್ವಾಸ ಸಕಾರಾತ್ಮಕತೆಯಿಂದ ನಕಾರಾತ್ಮಕತೆಗೆ ತಿರುಗಿತು ಎಂದಿದೆ ಆರ್ ಬಿ ಐ ಸಮೀಕ್ಷೆ.

ನಗದುರಹಿತ ಆರ್ಥಿಕತೆ ಆಗಲಿಲ್ಲ. ಮಾರ್ಚ್ 2013ರ ನೋಟು ಚಲಾವಣೆಯು ಜಿಡಿಪಿಯ 12.7% ರಷ್ಟು ಇದೆ. ನೋಟು ನಿಷೇಧದ ವರ್ಷದ ಹಿಂದಿನ  ವರ್ಷ ಇದ್ದುದು 12.1%. ಯುಪಿಐ ವ್ಯವಹಾರ ಸಣ್ಣ ಸಣ್ಣ ವ್ಯವಹಾರಗಳಲ್ಲಿ ಹೆಚ್ಚಿದೆ ನಿಜ. ಆದರೆ, ನಗದು ಚಲಾವಣೆ ಇಳಿದಿಲ್ಲ ಎಂಬದುನ್ನು ಗಮನಿಸಬೇಕು.

ನಕಲಿ ನೋಟುಗಳ ಹಾವಳಿ ಅತಿಯಾಗಿದೆ ಎಂಬ ನೆಪದಲ್ಲಿ 2023 ರ ಮೇ ತಿಂಗಳಲ್ಲಿ ಆರ್ ಬಿ ಐ ಯು 2000 ನೋಟು ಹಿಂದೆ ಪಡೆದಿದೆ. 2016 ರಲ್ಲಿ ಚಲಾವಣೆಗೆ ಬಿಟ್ಟ ನೋಟುಗಳಿವು. ಈ ನೋಟುಗಳನ್ನು ಬದಲಾಯಿಸಲು ಈಗ ಆರ್ ಬಿ ಐ ಕಚೇರಿಗಳ ಮುಂದೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಕ್ಯೂ ನಿಂತಿದ್ದಾರೆ.

ತಜ್ಞರ ಸಲಹೆ ಪಡೆಯಲೇ ಇಲ್ಲ

ಆರ್ ಬಿ ಐ ಸಲಹೆ ಧಿಕ್ಕರಿಸಿ ಗಡಿಬಿಡಿಯಲ್ಲಿ, ಅಸಮರ್ಥವಾಗಿ ಮತ್ತು ಅಸಮರ್ಪಕವಾಗಿ ನೋಟು ನಿಷೇಧದ ಕೆಲಸ ಮಾಡಲಾಗಿತ್ತು.

“ಕಪ್ಪು ಹಣ ಇರುವುದು ಚಿನ್ನದಲ್ಲಿ ಮತ್ತು ರಿಯಲ್ ಎಸ್ಟೇಟ್ ನಲ್ಲಿ ಹೊರತು ನಗದಿನಲ್ಲಲ್ಲ” ಎಂದು ಆರ್ ಬಿ ಐ ಯ ಸೆಂಟ್ರಲ್ ಬೋರ್ಡ್ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ  ಮೋದಿ ಸರಕಾರ ತನಗೆ ಎಲ್ಲವೂ ಗೊತ್ತಿದೆ ಎನ್ನುವ ದುರಹಂಕಾರದಲ್ಲಿ ಆರ್ ಬಿ ಐ ಸಲಹೆ  ಧಿಕ್ಕರಿಸಿ ನೋಟು ನಿಷೇಧದೆಡೆಗೆ ಮುನ್ನಡೆಯಿತು. ವಿನಾಶಕ್ಕೆ ಕಾರಣವಾಯಿತು.

ಎ ಟಿ ಎಂ ಗಳು ವಿಫಲವಾದವು. ಯಾಕೆಂದರೆ ಹೊಸ ನೋಟುಗಳು ಮಶೀನ್ ನಲ್ಲಿ ಫಿಟ್ ಆಗಲಿಲ್ಲ.

ಹೊಸ ನೊಟುಗಳ ಮರು ಮುದ್ರಣಕ್ಕೆ ಆರ್ ಬಿ ಐ ಹೆಚ್ಚುವರಿ 4500 ಕೋಟಿ ರುಪಾಯಿ ವ್ಯಯಿಸಿತು. ನೆನಪಿರಲಿ, ಇದು ತೆರಿಗೆದಾರರ ಹಣದ ಸಂಪೂರ್ಣ ಅಪವ್ಯಯ.

ಸರಕಾರ ‘ಯೋಚಿಸಿ ಕೆಲಸ ಮಾಡುವ ಬದಲು, ಕೆಲಸ ಮಾಡಿ ಯೋಚಿಸಿತು’. ಪರಿಣಾಮ ನೋಟು ನಿಷೇಧ ಸಂಬಂಧ 50 ದಿನಗಳಲ್ಲಿ ಕನಿಷ್ಠ 74 ನೋಟಿಫಿಕೇಶನ್ ಗಳನ್ನು ನೀಡಲಾಯಿತು.

ನೋಟು ನಿಷೇಧದ ತುಘಲಕ್ ನಿರ್ಧಾರದಿಂದ ನೂರಾರು ಮಂದಿ ಬಡಪಾಯಿಗಳು ಸತ್ತರು. ಆರ್ಥಿಕತೆ ನಾಶವಾಯಿತು. ಬೆರಳೆಣಿಕೆಯ ಮಂದಿ ಬಿಲಿಯಾಧಿಪತಿಗಳಾದರು. ಬಡವರು ಇನ್ನಷ್ಟು ಬಡವರಾದರು, ಜೀವನವನ್ನೂ ಕಳೆದುಕೊಂಡರು, ಜೀವನೋಪಾಯವನ್ನೂ ಕಳೆದುಕೊಂಡರು.

ಯಾವ ರೀತಿಯಲ್ಲಿ ನೋಡಿದರೂ 2016 ರ ಈ ನೋಟು ನಿಷೇಧದ ನಿರ್ಧಾರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ. ಅದರ ದುಷ್ಪರಿಣಾಮವನ್ನು ದೇಶ ಈಗಲೂ ಅನುಭವಿಸುತ್ತಿದೆ, ಇನ್ನು ದಶಕ ದಶಕಗಳ ಕಾಲವೂ ಅನುಭವಿಸಲಿವೆ. ಆದರೆ ಇಂತಹ ಒಂದು ಕ್ರೂರ ನಿರ್ಧಾರವನ್ನು ತೆಗೆದುಕೊಳ್ಳುವಾಗಲೂ ನಮ್ಮನ್ನು ಆಳುವವರ ಅಸಂವೇದನಾಶೀಲ ಮನೋಭಾವ ಹೇಗಿತ್ತು ಎಂಬುದಕ್ಕೆ ಅತ್ಯುತ್ತಮ ರೂಪಕವೆಂದರೆ, ನೋಟು ನಿಷೇಧದ ಮಾರನೆಯ ದಿನ ಜಪಾನ್ ಪ್ರವಾಸದಲ್ಲಿ ಮೋದಿಯವರು ಆಡಿದ “ಘರ್ ಮೇ ಶಾದೀ ಹೆ, ಪೈಸಾ ನಹೀ ಹೆ, ಹ ಹ ಹ…” ಎಂದ ಮಾತುಗಳು. ಅದನ್ನು ಮರೆಯುವುದಾದರೂ ಹೇಗೆ?!

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ-ನೋಟು ನಿಷೇಧ ಬೃಹನ್ನಾಟಕಕ್ಕೆ ಏಳನೇ ವಾರ್ಷಿಕೋತ್ಸವ

Related Articles

ಇತ್ತೀಚಿನ ಸುದ್ದಿಗಳು