ಮಡಿಕೇರಿ: ಕೊಡಗಿನ ಪ್ರವಾಸಿ ತಾಣಗಳ ಪೈಕಿ ಪ್ರಾಕೃತಿಕ ಸೌಂದರ್ಯದಿಂದ ಶ್ರೀಮಂತವಾಗಿರುವ ಮಡಿಕೇರಿ ತಾಲ್ಲೂಕಿನ ಮಾಂದಲಪಟ್ಟಿ ಪ್ರಾಕೃತಿಕ ತಾಣಕ್ಕೆ ಕೊನೆಗೂ ಅಭಿವೃದ್ಧಿ ಯೋಗ ಒದಗಿ ಬಂದಿದೆ.ಕರ್ನಾಟಕ ಸರ್ಕಾರದ ಒಂದು ಜಿಲ್ಲೆ ಒಂದು ತಾಣ ಯೋಜನೆ ಅಡಿಯಲ್ಲಿ ಅಭಿವೃದ್ಧಿಗಾಗಿ ಗುರುತಿಸಲಾದ ಸ್ಥಳಗಳ ಪೈಕಿ ಮಾಂದಲ್ ಪಟ್ಟಿಯೂ ಸ್ಥಾನ ಪಡೆದುಕೊಂಡಿದ್ದು, ಇಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ರೂಪರೇಷೆ ಸಿದ್ಧವಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಮುತುವರ್ಜಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ದೇಶದ ಪ್ರಮುಖ ಪ್ರವಾಸಿತಾಣವಾಗಿ ಕೊಡಗು ಗುರುತಿಸಿಕೊಂಡಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ಹೋಗುತ್ತವೆ. 2018ರ ಪ್ರಾಕೃತಿಕ ದುರಂತ ಮತ್ತು ನಂತರದ ಬೆಳವಣಿಗೆಗಳು ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಪ್ರವಾಸೋದ್ಯಮದ ಮೇಲೆ ಹೊಡೆತ ನೀಡಿದ್ದರೂ ನಂತರದ ದಿನಗಳಲ್ಲಿ ಸಂಪೂರ್ಣ ಚೇತರಿಸಿಕೊಂಡಿದೆ.ಮಾಂದಲ್ ಪಟ್ಟಿಯಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ಭಟ್ಟರ ಸೂಪರ್ ಹಿಟ್ ಸಿನಿಮಾ ‘ಗಾಳಿಪಟ’ದಲ್ಲಿ ಮುಗಿಲ್‌ಪೇಟೆ ಎಂದು ಗುರುತಿಸಿಕೊಂಡು ಪ್ರಸಿದ್ಧಿಗೆ ಬಂದಿರುವ ಸ್ಥಳವೇ ಮಾಂದಲ್ ಪಟ್ಟಿ. ನಂತರ ಹಲವು ಸಿನಿಮಾಗಳಲ್ಲೂ ಇಲ್ಲಿಯ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಸೆರೆ ಹಿಡಿಯಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಾಂದಲ್ ಪಟ್ಟಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬರುತ್ತಿದೆ.
ಮಡಿಕೇರಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವಮಾಂದಲ್ ಪಟ್ಟಿ ಪುಷ್ಪ ಗಿರಿ ವನ್ಯಜೀವಿ ವಲಯಕ್ಕೆ ಸೇರಿದೆ. 2024-29ರ ಕರ್ನಾಟಕ ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಇಲಾಖೆಯಿಂದ
ನೂತನ ಪ್ರವಾಸಿ ತಾಣಗಳನ್ನು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಪಡೆಯುವ ಮೂಲಕ ಗುರುತಿಸಲಾಗುತ್ತಿದೆ. ಅಲ್ಲದೆ ಅವುಗಳ ಅಭಿವೃದ್ಧಿಗೆ ಆಯವ್ಯಯದಲ್ಲಿ ಇಲಾಖೆಗೆ ಒದಗಿಸುವ ಅನುದಾನದ ಲಭ್ಯತೆಗೆ ಅನುಗುಣವಾಗಿ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ತೆಗೆದು ಕೊಳ್ಳಲಾಗಿದೆ. ಇದರ ಜತೆಗೆ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಜಿಲ್ಲೆಯಲ್ಲೂ ಒಂದು ಜಿಲ್ಲೆ ಒಂದು ತಾಣ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.