Tuesday, March 3, 2026

ಸತ್ಯ | ನ್ಯಾಯ |ಧರ್ಮ

ಗ್ಯಾರಂಟಿಗೆ ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಿಸುತ್ತಾ ಸರ್ಕಾರ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇದರ ಮಧ್ಯೆ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರವು (State Government) ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಮೇಲೆ ಹೆಚ್ಚುವರಿ ಮಾರಾಟ ತೆರಿಗೆ ಅಥವಾ ಸೆಸ್ ವಿಧಿಸಲು ಗಂಭೀರ ಚಿಂತನೆ ನಡೆಸುತ್ತಿದೆಯಂತೆ.

ಮಹತ್ವಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ, ಬೇರೆ ಬೇರೆ ಮೂಲಗಳಿಂದ ಆದಾಯ ಸರಿದೂಗಿಸಲು ಭಾರೀ ಸರ್ಕಸ್‌‍ ನಡೆಸುತ್ತಿದೆ. ಹೀಗಾಗಿಯೇ ಆರ್ಥಿಕವಾಗಿ ಸಿರಿವಂತರು ಗ್ಯಾರಂಟಿ ಯೋಜನೆಗಳನ್ನು ಪಡೆಯದೇ ಉದಾರತೆ ತೋರಿ ಎಂದು ಸಚಿವರು ಪ್ರತಿನಿತ್ಯ ಹೇಳುತ್ತಿದ್ದಾರೆ. ಇದರ ನಡುವೆಯೇ ಗ್ಯಾರಂಟಿಗೆ ಹಣ ಹೊಂದಿಸಲು ಇಂಧನ ಸೆಸ್‌‍ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ದರ ಏರಿಕೆ ಯಾಕೆ?
ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗೆ ಗ್ಯಾರಂಟಿ ಯೋಜನೆಗಳಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಬರ್ಡನ್​ ಆಗುತ್ತಿದೆ ಎಂದು ಇದೇ ಮಾತನ್ನೇ ಹೇಳಿದ್ದರು.

ಇದರ ಮಧ್ಯೆ ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹೊಸ ಆದಾಯದ ಮೂಲಗಳನ್ನು ಹುಡುಕುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಇಂಧನ ದರದ ಮೇಲೆ ಕನಿಷ್ಠ 1 ರೂಪಾಯಿ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾಪ ಮುಂದಿದೆ ಎನ್ನಲಾಗಿದೆ.

ಹಿಂದೆಯೂ ದರ ಹೆಚ್ಚಿಸಿದ್ದ ಸರ್ಕಾರ
ಈ ಹಿಂದೆ ರಾಜ್ಯ ಸರ್ಕಾರ 2025ರ ಏಪ್ರಿಲ್‌ 2ರಂದು ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ದರವನ್ನು ಕ್ರಮವಾಗಿ 2 ರೂಪಾಯಿಗೆ ಏರಿಕೆ ಮಾಡಿತ್ತು. ಕರ್ನಾಟಕದಲ್ಲಿ ಪ್ರಸ್ತುತ ಡೀಸೆಲ್‌ ಮೇಲಿನ ಮಾರಾಟ ತೆರಿಗೆ 21.77 ರೂಪಾಯಿ ಇದ್ದರೆ ಅದೇ ರೀತಿ ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯು 18 ರೂಪಾಯಿ ಇದೆ. ಹೊಸದಾಗಿ ಮಾರಾಟ ತೆರಿಗೆ ಹೆಚ್ಚಳ ಮಾಡಿದರೆ ವಾಹನ ಸವಾರರ ಜೀಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.

ಸಾರ್ವಜನಿಕರ ವಿರೋಧದ ಭೀತಿ
ಬಜೆಟ್ ಅಧಿವೇಶನಕ್ಕೆ ಕೇವಲ 3 ದಿನಗಳು ಬಾಕಿ ಇವೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಜನರಿಗೆ ಇಂಧನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಈ ನಿರ್ಧಾರವು ಸರ್ಕಾರದ ವಿರುದ್ಧ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಕೂಡ ಕೆಲ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಆದಾಯ ಖೋತಾ

ಸರ್ಕಾರದ ಸ್ವಂತ ತೆರಿಗೆ ಮೂಲಗಳಿಂದ ವಾರ್ಷಿಕ ಗುರಿಯಷ್ಟು ಆದಾಯ ಸಂಗ್ರಹವಾಗುವುದು ಕಷ್ಟಸಾಧ್ಯವೆನಿಸಿದೆ. ಗುರಿ ತಲುಪಲು ಮಾರ್ಚ್‌ ಅಂತ್ಯದೊಳಗೆ 48,306 ಕೋಟಿ ರೂಪಾಯಿ ಸಂಗ್ರಹವಾಗಬೇಕಿದ್ದು, ಅಬಕಾರಿ ಇಲಾಖೆ ಹೊರತುಪಡಿಸಿ ಉಳಿದ ಮೂರು ಮೂಲಗಳಿಂದ ವಾರ್ಷಿಕ ಗುರಿ ಸಾಧನೆ ಅನುಮಾನವೆನಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page