ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಷಡ್ಯಂತ್ರ ನಡೆಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರವು ಈಗಾಗಲೇ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಬಡವರ ಅನ್ನಭಾಗ್ಯಕ್ಕೆ ಕತ್ತರಿ ಹಾಕುತ್ತಿದೆ. ಈಗ ಗೃಹಜ್ಯೋತಿ ಯೋಜನೆಯಲ್ಲಿ ಫಲಾನುಭವಿಗಳನ್ನು ಅನರ್ಹಗೊಳಿಸಲು ಹೊಸ ಹುನ್ನಾರ ನಡೆಸುತ್ತಿದೆ ಎಂದು ಟೀಕಿಸಿದ್ದಾರೆ.
ಈ ಹಿಂದೆ 30 ದಿನಗಳಿಗೊಮ್ಮೆ ವಿದ್ಯುತ್ ಮೀಟರ್ ರೀಡಿಂಗ್ ಪಡೆಯಲಾಗುತ್ತಿತ್ತು. ಆದರೆ ಈಗ ಅದನ್ನು 40 ದಿನಗಳಿಗೆ ಹೆಚ್ಚಿಸುವ ಮೂಲಕ ವಿದ್ಯುತ್ ಬಳಕೆಯ ಸರಾಸರಿ ಮಿತಿಯನ್ನು ಏರಿಸಲಾಗುತ್ತಿದೆ. ಇದರಿಂದಾಗಿ, ಹಲವು ಫಲಾನುಭವಿಗಳು 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದಂತೆ ಕಾಣುತ್ತದೆ ಮತ್ತು ಅವರನ್ನು ಯೋಜನೆಯಿಂದ ಹೊರಗಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.
“ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈಗ ಒಂದೊಂದೇ ಗ್ಯಾರಂಟಿ ಯೋಜನೆಯನ್ನು ಹಿಂಬಾಗಿಲಿನಿಂದ ಸ್ಥಗಿತಗೊಳಿಸಲು ಹೊರಟಿದೆ” ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.