Friday, December 12, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಬುಲ್ಡೋಜರ್‌ ಸದ್ದು: ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆಯೇ ಕ್ರಮಕ್ಕೆ ಸರ್ಕಾರ ಸಜ್ಜು

ಬೆಂಗಳೂರು: ದೇಶದಲ್ಲಿ ಇತ್ತಿಚೆಗೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕೇಳಿಬರುತ್ತಿದ್ದ ಬುಲ್ಡೋಜರ್‌ ರಾಜಕಾರಣ ಇದೀಗ ಕರ್ನಾಟಕದಲ್ಲೂ ಪ್ರಾರಂಭವಾಗುವ ಲಕ್ಷಣ ಕಂಡುಬಂದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಬೇರು ಕಡಿದು ಹಾಕಲು ಸರ್ಕಾರ ತೀರ್ಮಾನಿಸಿರುವ ಪರಿಣಾಮವಾಗಿ, ಡ್ರಗ್‌ ಪೆಡ್ಲರ್‌ಗಳು ವಾಸಿಸುವ ಅನಧಿಕೃತ ಮನೆಗಳ ಮೇಲೆ ಬುಲ್ಡೋಜರ್‌ ಹತ್ತಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ವಿಧಾನಪರಿಷತ್ತಿನಲ್ಲಿ ಘೋಷಿಸಿದರು.

ಮಾದಕ ವಸ್ತು ಮಾರಾಟಗಾರರ ಮನೆಗಳ ಮೇಲೆ ಬುಲ್ಡೋಜರ್‌ ಕ್ರಮ
ಎಂಎಲ್‌ಸಿ ಕೆ. ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್‌ ಅವರು, ಅನೇಕ ವಿದೇಶಿ ಪ್ರಜೆಗಳು—ವಿಶೇಷವಾಗಿ ಆಫ್ರಿಕನ್ ರಾಷ್ಟ್ರಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿ—ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವುದನ್ನು ಉಲ್ಲೇಖಿಸಿದರು.
“ಮಾದಕ ವಸ್ತು ಮಾರಾಟಗಾರರು ಬಾಡಿಗೆಗೆ ವಾಸಿಸುವ ಮನೆಗಳನ್ನು ಸಹ ನಾವು ಕೆಡವಲು ಸಿದ್ಧರಾಗಿದ್ದೇವೆ. ಮನೆ ಬಾಡಿಗೆ ನೀಡಿರುವ ಮನೆಮಾಲೀಕರನ್ನೂ ಗುರುತಿಸಲಾಗಿದೆ” ಎಂದು ಅವರು ತಿಳಿಸಿದರು.

ಅಷ್ಟೇ ಅಲ್ಲ, ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಪೊಲೀಸರು ಸಹ ಭಾಗಿಯಾಗಿರುವುದು ಪತ್ತೆಯಾದರೆ, ಸೇವೆಯಿಂದ ವಜಾಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಸ್ಪಷ್ಟಪಡಿಸಿದರು.

ಡ್ರಗ್ಸ್‌ ಮಾರುತ್ತಿದ್ದ 300 ವಿದೇಶಿ ಪ್ರಜೆಗಳ ಗಡೀಪಾರು
ರಾಜ್ಯದಲ್ಲಿ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವಿದೇಶಿ ನಾಗರಿಕರ ಮೇಲೆ ಗಟ್ಟಿಯಾದ ಕ್ರಮ ಹೇರಲಾಗುತ್ತಿದೆ. ಸಮಿತಿಯಲ್ಲಿ ಮಾತನಾಡಿದ ಪರಮೇಶ್ವರ್‌ ಅವರು,

— “ಡ್ರಗ್ಸ್‌ ಮಾರಾಟದ ಪ್ರಕರಣಗಳಲ್ಲಿ ಸಿಕ್ಕಿಬಿದ್ದ 300ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಈಗಾಗಲೇ ಗಡೀಪಾರು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

—“ಬಂಧನ ನಿಮಗೆ ಭಾರತದಲ್ಲೇ ಉಳಿಯಲು ಸಹಾಯವಾಗುತ್ತದೆ ಎಂದು ಕೆಲ ಪೆಡ್ಲರ್‌ಗಳು ಭಾವಿಸುತ್ತಿದ್ದಾರೆ; ಆದರೆ ನಾವು ಅವರನ್ನು ನೇರವಾಗಿ ಗಡೀಪಾರು ಮಾಡುತ್ತಿದ್ದೇವೆ” ಎಂದು ಹೇಳಿದರು.
ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್‌ಗಳ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬ ಉಂಟಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲೇ ಮೊದಲ ಆಂಟಿ-ನಾರ್ಕೋಟಿಕ್ಸ್‌ ಟಾಸ್ಕ್ ಫೋರ್ಸ್​
ರಾಜ್ಯದಲ್ಲಿ ಮಾದಕ ವಸ್ತುಗಳ ಹರಡುವಿಕೆಯನ್ನು ತಡೆಯಲು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ದೇಶದಲ್ಲೇ ಮೊದಲ ‘ಆಂಟಿ-ನಾರ್ಕೋಟಿಕ್ಸ್‌ ಟಾಸ್ಕ್ ಫೋರ್ಸ್’ ಸ್ಥಾಪಿಸಲಾಗಿದೆ. ಈ ತಂಡವು ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಕಾರ್ಯಚರಣೆಗಳನ್ನು ನಡೆಸುತ್ತಿದೆ.

ಕಾಂಗ್ರೆಸ್‌ನ ಬುಲ್ಡೋಜರ್‌ ನೀತಿ– ಹಿಂದಿನ ನಿಲುವಿಗೆ ವಿರುದ್ಧ?
ಬಿಜೆಪಿ ಸರ್ಕಾರಗಳು ಅನಧಿಕೃತ ಕಟ್ಟಡಗಳ ಮೇಲೆ ಬುಲ್ಡೋಜರ್‌ ಹತ್ತಿಸುವ ಕ್ರಮವನ್ನು ಅನುಸರಿಸುತ್ತಿವೆ ಎಂದು ಕಾಂಗ್ರೆಸ್‌ ವರ್ಷಗಳ ಕಾಲ ತೀವ್ರ ಟೀಕೆ ಮಾಡುತ್ತಾ ಬಂದಿತ್ತು. ಆದರೆ ಇದೇ ಕಾಂಗ್ರೆಸ್‌ ಸರ್ಕಾರ ಈಗ ಬುಲ್ಡೋಜರ್‌ ಕ್ರಮ ಜಾರಿಗೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ವರ್ಷ ಸುಪ್ರೀಂ ಕೋರ್ಟ್‌ ಹೇಳಿಕೆಗನುಗುಣವಾಗಿ, “ಅಪರಾಧಕ್ಕೆ ಸಂಬಂಧಿಸಿದ ಆರೋಪ ಮಾತ್ರ ಆಸ್ತಿಯನ್ನು ಕೆಡವಲು ಆಧಾರವಲ್ಲ; ಕಾನೂನು ಪ್ರಕ್ರಿಯೆ ಪಾಲಿಸಲೇಬೇಕು” ಎಂಬ ತೀರ್ಪು ಹೊರಬಿದ್ದಿತ್ತು. ಇದನ್ನು ನೆನಪಿಸುತ್ತಾ ವಿರೋಧ ಪಕ್ಷಗಳು ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಲು ಆರಂಭಿಸಿವೆ.

ಸರ್ಕಾರದ ದತ್ತಾಂಶ: ಡ್ರಗ್ ಪ್ರಕರಣಗಳಲ್ಲಿ ಏರಿಕೆ
ಗೃಹ ಇಲಾಖೆಯ ಪ್ರಕಟಿಸಿದ ವಿವರಗಳ ಪ್ರಕಾರ:

2024ರಲ್ಲಿ:
4,168 ಡ್ರಗ್ ಪ್ರಕರಣಗಳು
1,833 ಪ್ರಕರಣಗಳಲ್ಲಿ ಶಿಕ್ಷೆ

2025 (ನವೆಂಬರ್ 15ರ ವರೆಗೆ):
5,747 ಪ್ರಕರಣಗಳು
1,079 ಶಿಕ್ಷೆಗಳು

ಬೆಂಗಳೂರು ನಗರದ ಡಿಸೆಂಬರ್ ಮೊದಲ ವಾರದ ವರದಿ:
1,078 ಡ್ರಗ್ ಅಪರಾಧಗಳು
1,543 ಮಂದಿಯನ್ನು ಬಂಧನ
52 ವಿದೇಶಿ ನಾಗರಿಕರು
1,446.75 ಕೆಜಿ ಮಾದಕ ವಸ್ತು ವಶ
160 ಕೋಟಿ ರೂ ಮೌಲ್ಯದ ವಸ್ತುಗಳ ವಶಪಡಿಕೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page