Monday, June 17, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರದ ನಡೆ ರೈತರ ಆದಾಯ ಹೆಚ್ಚಿಸುವ ಕಡೆ: ಬೊಮ್ಮಾಯಿ

ಹಾವೇರಿ: ಹಾವೇರಿ ಜಿಲ್ಲೆ ರಚನೆಗೊಂಡು 25 ವರ್ಷ ಪೂರ್ಣಗೊಂಡಿರುವ ಹಿನ್ನಲೆ ವಿಜಯ ಕರ್ನಾಟಕ ದಿನಪತ್ರಿಕೆ ಹಮ್ಮಿಕೊಂಡಿದ್ದ ಹಾವೇರಿ ಜಿಲ್ಲೆ ʼರಜತ ಮಹೋತ್ಸವʼಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.  

ಸಮಾರಂಭದಲ್ಲಿ ಹಾಲು ಉತ್ಪಾದಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾರವಾಡ ಹಾಲು ಮಂಡಳದಲ್ಲಿ ಹಾವೇರಿ ಜಿಲ್ಲೆ ಅತಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಯಾಗಿದೆ. ಹಾಲು ಉತ್ಪಾದಕರ ಒಳಿತಿಗಾಗಿ ಹಾಗೂ ಅವರ ಮೌಲ್ಯ ವೃದ್ಧಿಸುವ ಸಲುವಾಗಿ ಹಾಗೂ ಅನೇಕ ಮಹನೀಯರ ನಿರಂತರ ಹೋರಾಟದಿಂದ ಹಾವೇರಿ ಜಿಲ್ಲಾ ಸಹಕಾರಿ ಒಕ್ಕೂಟ ಸ್ಥಾಪನೆಯಾಗಿದೆ. ಈ ಮೂಲಕ ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ಬಲ ಬಂದಂತಾಗಿದೆ ಎಂದು ಹೇಳಿದರು.

ಸರ್ಕಾರದ ಆಶಯದಂತೆ, ಹಾಲು ಉತ್ಪಾದಕರ ವರಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಹಾಲು ಉತ್ಪಾದಕರಿಂದ ಹಾಲು ಉತ್ಪಾದಕರಿಗಾಗಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಒಂದು ಪ್ರತ್ಯೇಕ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಅಂತಿಮ ಹಂತದಲ್ಲಿದೆ ಎಂದು ಬೊಮ್ಮಾಯಿ ಅವರು ತಿಳಿಸಿದರು.

ರೈತನ ಬದುಕಲ್ಲಿ ಹತ್ತು ಹಲವಾರು ಸಮಸ್ಯೆಗಳಿರುವುದು ನಮಗೆ ತಿಳಿದ ವಿಷಯವಾಗಿದೆ. ರೈತರಿಗೆ ಸರ್ಕಾರದ ಸವಲತ್ತುಗಳು, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೆರವಾಗಿ ತಲುಪಲು ನೇರ ನಗದು ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಈ ಮೂಲಕ ಸೋರಿಕೆಯನ್ನು ತಡೆಗಟ್ಟುವ ಮಹತ್ತರ ಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ ಎಂದು ಹೇಳಿದರು

ಮುಂದುವರೆದು ಮಾತನಾಡಿದ ಅವರು, ಹಾವೇರಿ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಯುವಕರಿಗೆ ಉದ್ಯೋಗವಕಾಶಗಳನ್ನು ಸೃಷ್ಟಿಸಲು ಒಂದು ಸಾವಿರ ಎಕರೆಯಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಿಸಲು ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಎಲ್ಲಾ ತರಹದ ಸೌಲಭ್ಯಗಳಿದ್ದು, ಜಿಲ್ಲೆಯನ್ನು ಔದ್ಯೋಗಿಕರಣಗೊಳಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು