Monday, June 17, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯೇತರ ರಾಜ್ಯಗಳಲ್ಲಿ ‘ಸೂಪರ್ ಸಿಎಂ’ ಆಗ ಹೊರಟ ರಾಜ್ಯಪಾಲರುಗಳಿವರು!

ತಮಿಳುನಾಡಿನ ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿ ಆರ್ ಬಾಲು ಅವರು ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಅವರನ್ನು ತಕ್ಷಣವೇ ಹಿಂಪಡೆಯಬೇಕು ಅಥವಾ ಪದಚ್ಯುತಗೊಳಿಸಬೇಕು ಎಂಬುದಾಗಿ ಒತ್ತಾಯಿಸುವಂತೆ ತಮ್ಮ ಮಿತ್ರ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಭಾರತದ ರಾಷ್ಟ್ರಪತಿಗಳಿಗೆ ಸಹಿ ಜ್ಞಾಪಕ ಪತ್ರಕ್ಕೆ ಸಹಿ ಹಾಕುವಂತೆ ಟಿ.ಆರ್.ಬಾಲು ಸಮಾನ ಮನಸ್ಕ ಪಕ್ಷಗಳ ಸದಸ್ಯರು ಮತ್ತು ಸಮಾನ ಮನಸ್ಕ ಸಂಸದರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಡಿಎಂಕೆ ಪಕ್ಷದ ಸಂಸದೀಯ ನಾಯಕ ಟಿ.ಆರ್.ಬಾಲು ಅವರು ಗುರುವಾರದೊಳಗೆ ಈ ಜ್ಞಾಪಕ ಪತ್ರಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಜ್ಞಾಪಕ ಪತ್ರಕ್ಕೆ ಸಹಿ ಹಾಕಲು ಕಾಂಗ್ರೆಸ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಆ ಮೂಲಕ ತಮಿಳುನಾಡು ಸರ್ಕಾರ ಮತ್ತು ಗವರ್ನರ್ ನಡುವಿನ ಮಸುಕಿನ ಗುದ್ದಾಟ ಈಗ ಅಧಿಕೃತವಾಗಿ ಹೊರಬಿದ್ದಿದೆ.

ರಾಜ್ಯಪಾಲರ ಪದಚ್ಯುತಿಗೆ ಡಿಎಂಕೆ ಪಟ್ಟು ಹಿಡಿದದ್ಯಾಕೆ?
PUC ಪರೀಕ್ಷಾ ಫಲಿತಾಂಶಗಳ ನಂತರವೇ ವೈದ್ಯಕೀಯ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಪ್ರವೇಶವನ್ನು ಕೈಗೊಳ್ಳುವಂತೆ ತಮಿಳುನಾಡು ಸರ್ಕಾರ ಹೊರಡಿಸಿದ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಪ್ರಸ್ತಾವನೆ ತಮಿಳುನಾಡು ವಿಧಾನ ಮಂಡಲದಲ್ಲೂ ಅಂಗೀಕರಿಸಿ ಅದು ರಾಜ್ಯಪಾಲರ ಕೈ ಸೇರಿತ್ತು ಎಂಬುದು ಪ್ರಮುಖ ಅಂಶ. ಆದರೆ ಈ ಪ್ರಸ್ತಾಪವನ್ನು ಮರು ಪರಿಶೀಲಿಸುವಂತೆ ರಾಜ್ಯಪಾಲ ಆರ್.ಎನ್.ರವಿಯವರು ಫೆಬ್ರವರಿ ತಿಂಗಳಿನಲ್ಲಿ ಅಸೆಂಬ್ಲಿಗೆ ಹಿಂದಿರುಗಿಸಿದ್ದಾರೆ. PUC ನಂತರದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ NEET ಪರೀಕ್ಷೆಗೆ ತಮಿಳುನಾಡು ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ಪರೋಕ್ಷವಾಗಿ ತಿರಸ್ಕರಿಸಿದ್ದು, ಇದು ಡಿಎಂಕೆ ಮತ್ತು ಮಿತ್ರಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಅಷ್ಟಕ್ಕೂ ತಮಿಳುನಾಡು ಸರ್ಕಾರ ಈ ಪ್ರಸ್ತಾವನೆ ಮುಂದಿಟ್ಟ ಹಿನ್ನೆಲೆಯನ್ನು ನೋಡುವುದಾದರೆ, NEET ನ ಪ್ರಶ್ನೆ ಪತ್ರಿಕೆಯು CBSE ಪಠ್ಯಕ್ರಮವನ್ನು ಆಧರಿಸಿದ್ದು, ಇದು ತಮಿಳುನಾಡು ರಾಜ್ಯ ಮಂಡಳಿಯ ಶೈಕ್ಷಣಿಕ ಪಠ್ಯಕ್ರಮಕ್ಕಿಂತ ಬಹುತೇಕ ಭಿನ್ನವಾಗಿದೆ. ಹಾಗಾಗಿ NEET ಪರೀಕ್ಷೆಯು ರಾಜ್ಯ ಮಂಡಳಿಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿ ಮಾಡುತ್ತದೆ ಎಂಬ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಈ ಪರೀಕ್ಷೆಯನ್ನು ವಿರೋಧಿಸಿ ಹೊಸ ಪ್ರಸ್ತಾವನೆ ಮುಂದಿಟ್ಟಿತ್ತು.

ತಮಿಳುನಾಡು ರಾಜ್ಯಪಾಲರ ಪದಚ್ಯುತಿ ಮನವಿಯನ್ನು ಮುಂದಿಟ್ಟುಕೊಂಡು ದಕ್ಷಿಣದ ಇತರೆ ರಾಜ್ಯಗಳ ರಾಜ್ಯಪಾಲ ಮತ್ತು ಸರ್ಕಾರಗಳ ಮಸುಕಿನ ಗುದ್ದಾಟವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಇಲ್ಲಿ ಕೇಂದ್ರ ಸರ್ಕಾರ ಪರೋಕ್ಷವಾಗಿ ರಾಜ್ಯಪಾಲರನ್ನು ಮುಂದಿಟ್ಟು ಬಿಜೆಪಿಯೇತರ ಸರ್ಕಾರವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಹೊರತುಪಡಿಸಿ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ಸಂಘರ್ಷ ಈ ಎಲ್ಲಾ ಅನುಮಾನಗಳಿಗೆ ಸಾಕ್ಷಿ ಒದಗಿಸುತ್ತಿವೆ.

ಕೇರಳದ 9 ವಿವಿ ಗಳ ಉಪಕುಲಪತಿಗಳ ರಾಜೀನಾಮೆಗೆ ಗವರ್ನರ್ ಪಟ್ಟು
ಇತ್ತೀಚೆಗೆ ಸುಪ್ರೀಂ ಕೋರ್ಟ್, ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ನೇಮಕವನ್ನು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ಕೇರಳ ರಾಜ್ಯಪಾಲ ಆರೀಫ್ ಖಾನ್ 9 ವಿವಿಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಈ ಪೈಕಿ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿವಿಯ ಉಪಕುಲಪತಿಗಳೂ ಇದ್ದರು. ವಿವಿಗಳ ಕುಲಪತಿಗಳೂ ಆಗಿರುವ ರಾಜ್ಯಪಾಲರು ಕಳೆದ ಅಕ್ಟೋಬರ್ 24 ರ ಒಳಗೆ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಇದು ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು. ರಾಜ್ಯಪಾಲರ ನಡೆ ಸಂಘಪರಿವಾರದ ಪಿತೂರಿಯಾಗಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ಕೇಸರೀಕರಣಗೊಳಿಸುವ ಅಜೆಂಡಾ ಆಗಿದೆ ಎಂದು ಕಮ್ಯುನಿಸ್ಟ್ ಪಕ್ಷ ಟೀಕಿಸಿತ್ತು.

ಹಾಗೆಯೇ ಕಳೆದ ಅಕ್ಟೋಬರ್ 25 ರಂದು ಕೇರಳ ಸರ್ಕಾರದ ಹಣಕಾಸು ಸಚಿವರನ್ನು ಅವರ ಸ್ಥಾನದಿಂದ ವಜಾಗೊಳಿಸಬೇಕು ಎಂದು ರಾಜ್ಯಪಾಲ ಆರೀಫ್ ಖಾನ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಪ್ರಾದೇಶಿಕತೆ ಮತ್ತು ಪ್ರಾಂಥೀಯತೆ ಹಿನ್ನೆಲೆಯಲ್ಲಿ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಇಲ್ಲಿನ ನೆಲದ ಬಗ್ಗೆ ಹೊಂದಿಕೊಳ್ಳಲು ಕಷ್ಟ ಆಗಬಹುದು ಎಂದಿದ್ದು ಆರೀಫ್ ಖಾನ್ ಅವರ ‘ವಜಾ’ ಪತ್ರಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂಬಂಧ ರಾಜ್ಯಪಾಲರ ಮನವಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರಸ್ಕರಿಸಿದ್ದರು.

ತೆಲಂಗಾಣದಲ್ಲೂ ಇದೆ ರಾಜ್ಯಪಾಲ ಮತ್ತು ಸರ್ಕಾರದ ಮಸುಕಿನ ಗುದ್ದಾಟ
ಈ ಹಿಂದೆ ತಮಿಳುನಾಡಿನ ಬಿಜೆಪಿ ಪಕ್ಷದ ಪ್ರಮುಖ ಮುಖಂಡರಾಗಿದ್ದ ತೆಲಂಗಾಣ ರಾಜ್ಯಪಾಲೆ ತಮಿಳ್ ಸಾಯಿ ಸೌಂದರರಾಜನ್ ಮತ್ತು ತೆಲಂಗಾಣ ಸರ್ಕಾರದ ಮಸುಕಿನ ಗುದ್ದಾಟ ಸಹ ಅಷ್ಟು ಗುಟ್ಟಾಗೇನು ಉಳಿದಿಲ್ಲ. ಇತ್ತೀಚೆಗೆ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ತೆಲಂಗಾಣ ಸರ್ಕಾರದ ಮೇಲಿರುವ ತಮ್ಮ ಅಸಮಾಧಾನವನ್ನು ರಾಜ್ಯಪಾಲೆ ತಮಿಳ್ ಸಾಯಿ ಸೌಂದರರಾಜನ್ ಹೊರಹಾಕಿದ್ದು ತೀರಾ ಹಳೆಯ ವಿಷಯವಲ್ಲ. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆಡಳಿತಾರೂಢ ಟಿಆರ್ಎಸ್ ಪಕ್ಷ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಜೊತೆಗೆ ತಾನು ಭಾಗವಹಿಸುವ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಬರದಂತೆ ಆಡಳಿತ ಪಕ್ಷ ತಡೆಯುತ್ತಿದೆ, ತನಗೆ ಸೂಕ್ತ ಭದ್ರತೆ ವ್ಯವಸ್ಥೆ ಕೂಡ ಸರ್ಕಾರ ಮಾಡಿಲ್ಲ ಎಂದು ತಮಿಳ್ ಸಾಯಿ ಸೌಂದರರಾಜನ್ ಆರೋಪಿಸಿದ್ದಾರೆ. ಜೊತೆಗೆ ರಾಜ್ಯಪಾಲರು ಇಲ್ಲಿಯವರೆಗೆ ಕರೆದ ಎರಡ್ಮೂರು ಔತಣಕೂಟಕ್ಕೂ ಸರ್ಕಾರದ ಪ್ರತಿನಿಧಿಗಳು ಗೈರು ಹಾಜರಾಗಿದ್ದು, ಇಲ್ಲೂ ಸಹ ಸರ್ಕಾರ ಮತ್ತು ರಾಜ್ಯಪಾಲರ ಸಂಬಂಧ ಸರಿ ಇಲ್ಲವಾಗಿದೆ.

ಇದಕ್ಕೆ ಟಿಆರ್ಎಸ್ ಪಕ್ಷ ಕೊಡುವ ಸಮಜಾಯಿಷಿ ಎಂದರೆ, ರಾಜ್ಯಪಾಲರು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೆ ತೊಡಕುಂಟು ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಸರ್ವಪಕ್ಷಗಳು ಅಂಗೀಕರಿಸಿದ ವಿಧೇಯಕಗಳನ್ನೂ ಮರುಪರಿಶೀಲನೆಗೆ ಒಡ್ಡಲಾಗುತ್ತಿದೆ. ರಾಜ್ಯಪಾಲರು ತಮ್ಮ ಹುದ್ದೆ ನಿರ್ವಹಿಸದೇ ಕೇಂದ್ರ ಬಿಜೆಪಿ ಸರ್ಕಾರದ ಪ್ರತಿನಿಧಿಯಂತೆ, RSS ಪ್ರತಿನಿಧಿಯಂತೆ ವರ್ತಿಸುವುದು ಆಡಳಿತಕ್ಕೆ ಸಮಸ್ಯೆ ಎದುರಾಗುತ್ತದೆ’ ಎಂಬ ರೀತಿಯಲ್ಲಿ ಸಮರ್ಥಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ಕೇಂದ್ರ ಬಿಜೆಪಿ ಸರ್ಕಾರ ಬೇಕಂತಲೇ ರಾಜ್ಯಪಾಲರ ಮೂಲಕ ತನ್ನ ಹಿಡನ್ ಅಜೆಂಡಾವನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಲು ಎಲ್ಲಾ ತಂತ್ರಗಳನ್ನ ರೂಪಿಸುತ್ತಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗುವ ಮಟ್ಟಿಗೆ, ಪಟ್ಟಣ ಪ್ರದೇಶದ ಮಕ್ಕಳಿಗೆ ಅನುವು ಮಾಡಿ ಕೊಡುವಂತಹ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯಪಾಲರ ಕಡೆಯಿಂದ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸುತ್ತಿರುವುದು ಸ್ಪಷ್ಟ.

ತಮಿಳುನಾಡು ಮತ್ತು ಕೇರಳದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ರಾಜ್ಯಪಾಲರು ಅನವಶ್ಯಕವಾಗಿ ಸರ್ಕಾರಗಳ ನಿರ್ಧಾರವನ್ನು ಮರುಪರಿಶೀಲನೆಗೆ ಬಿಟ್ಟಿರುವುದು ಸಹಜವಾಗಿಯೇ ರಾಜ್ಯಪಾಲರು ತಮ್ಮ ಸೀಮಿತ ರೇಖೆಯನ್ನು ದಾಟುತ್ತಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ವಿಶೇಷವಾಗಿ ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳನ್ನೇ ಗುರಿಯಾಗಿಸಿಕೊಂಡು ರಾಜ್ಯಪಾಲರು ತಮ್ಮ ತಕರಾರುಗಳನ್ನು ಮುಂದಿಡುತ್ತಿದ್ದಾರೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ದೇಶದ ಪ್ರಮುಖ ದಕ್ಷಿಣ ಭಾರತದ ರಾಜ್ಯಗಳಾಗಿದ್ದು, ಇಲ್ಲಿ ಬಿಜೆಪಿ ಎಲ್ಲಾ ರೀತಿಗಳಲ್ಲೂ ಅಧಿಕಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿದೆ.

ಕೇವಲ ಕರ್ನಾಟಕ ಒಂದು ರಾಜ್ಯವನ್ನು ಉದಾಹರಣೆಗೆ ತಗೆದುಕೊಂಡು ಹೇಳುವುದಾದರೆ, ಕಳೆದ ಎರಡು ವರ್ಷಗಳಿಂದ ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ಬಿಜೆಪಿ ತಂದ ನಿರ್ಧಾರಗಳು ಮತ್ತು ನಿಲುವುಗಳು ಸ್ಪಷ್ಟವಾಗಿ ಸಂಘ ಪರಿವಾರದ ಅಜೆಂಡಾವನ್ನು ಹೇರಲಾಗುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ತಂದ ಅದ್ವಾನ ಮತ್ತು ಅದರಿಂದ ಸರ್ಕಾರಿ ಶಾಲೆಗಳ ಮಕ್ಕಳಿಗಾದ ದ್ವಂದ್ವಗಳು ಇನ್ನೂ ಮುಗಿದಿಲ್ಲ.

ತಮಿಳುನಾಡಿನ ರಾಜ್ಯಪಾಲರು ಸಹ ಇತ್ತೀಚೆಗೆ ಸ್ಪಷ್ಟವಾಗಿ ಬಿಜೆಪಿ ವಕ್ತಾರರಂತೆ ವರ್ತಿಸಿದ್ದೂ ಸಹ ಡಿಎಂಕೆ ರಾಜ್ಯಪಾಲರನ್ನು ಗುರಿಯಾಗಿಸಿದ್ದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕಳೆದ ಜೂನ್‌ ತಿಂಗಳಲ್ಲಿ, “ಸನಾತನ ಧರ್ಮ ವಿವಿಧತೆಯಲ್ಲಿ ಏಕತೆಯನ್ನು ಎತ್ತಿಹಿಡಿಯುತ್ತದೆ” ಎಂದು ಹೇಳಿಕೆ ನೀಡುವ ಮೂಲಕ ರಾಜ್ಯಪಾಲ ರವಿ ಅವರು ತಮ್ಮ ಸಂವಿಧಾನಿಕ ಮಿತಿಯನ್ನು ಮೀರುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿತ್ತು. ನಂತರ ಆಗಸ್ಟ್‌ನಲ್ಲಿ, ಹಿಂಸಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು ಮತ್ತು ಬಂದೂಕು ಬಳಸುವವ ವಿರುದ್ಧ ಬಂದೂಕಿನಿಂದಲೆ ವ್ಯವಹರಿಸಬೇಕು ಎಂದು ಅವರು ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದರು. ಸಧ್ಯ ಈ ಎಲ್ಲಾ ಬೆಳವಣಿಗೆ ಹಿಂದೆ ಬಿಜೆಪಿ ತಾನು ಅಧಿಕಾರದಲ್ಲಿ ಇಲ್ಲದ ಕಡೆಗಳಲ್ಲಿ ರಾಜ್ಯಪಾಲರ ಮೂಲಕ ತನ್ನ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು