Thursday, June 20, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳನ್ನು ನಿಷೇಧಿಸಿ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ (HC Mahadevappa) ಅವರ ನಿರ್ದೇಶನದ ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ (KREIS) ಸಂಸ್ಥೆಯು ನಡೆಸುತ್ತಿರುವ ಶಾಲಾ-ಕಾಲೇಜುಗಳಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಆಯ್ದ ಹಬ್ಬಗಳನ್ನು ಮಾತ್ರ ಶಾಲೆಗಳಲ್ಲಿ ಆಚರಿಸಲಾಗುತ್ತಿದೆಯೆಂದು ಹಲವಾರು ಆಕ್ಷೇಪಣೆಗಳು ವ್ಯಕ್ತವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

government bans all religious festivals at residential schools: ಫೆಬ್ರವರಿ 1ರಂದು ಬರೆದ ಪತ್ರದಲ್ಲಿ ಸಮಾಜ ಕಲ್ಯಾಣ ಸಚಿವರು ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸುವುದನ್ನು ನಿಲ್ಲಿಸುವಂತೆ ವಸತಿ ಶಾಲೆಗಳಿಗೆ ತಿಳಿಸಿದ್ದರು.

“ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ/ ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಣೆ ಮಾಡಬೇಕಾಗಿರುತ್ತದೆ. ಆದರೆ ಕೆಲವು ರಾಷ್ಟ್ರೀಯ ಹಬ್ಬಗಳಲ್ಲದೇ ಇತರೆ ಧಾರ್ಮಿಕ ಹಬ್ಬಗಳಾದ ಯುಗಾದಿ, ರಂಜಾನ್, ಕ್ರಿಸ್‌ಮಸ್, ಈದ್ ಮಿಲಾದ್, ಸಂಕ್ರಾಂತಿ ಇತರೆ ಹಬ್ಬಗಳನ್ನು ಆಚರಣೆ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಆದ್ದರಿಂದ ಮಾನ್ಯ ಸಚಿವರು, ಸಮಾಜ ಕಲ್ಯಾಣ ಇಲಾಖೆ ರವರು ಉಲ್ಲೇಖಿತ ಟಿಪ್ಪಣಿಯಲ್ಲಿ ಅನುಮೋದಿಸಿರುವಂತೆ ಸಂಘದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ಶಾಲೆ ಕಾಲೇಜುಗಳಲ್ಲಿ ಈ ಕೆಳಕಂಡ ರಾಷ್ಟ್ರೀಯ ಹಬ್ಬ, ನಾಡಹಬ್ಬ ಮತ್ತು ಜಯಂತಿಗಳನ್ನು ಮಾತ್ರ ಆಚರಿಸುವುದು.” ಎಂದು ಪತ್ರದಲ್ಲಿ ತಿಳಿಸಲಾಗಿದೆ

KREIS ಶಾಲಾ/ಕಾಲೇಜುಗಳಲ್ಲಿ ಈ ಕೆಳಕಂಡ ಹಬ್ಬಗಳನ್ನು ಅನುಮತಿಸಲಾಗಿದೆ

1 ಗಣರಾಜ್ಯೋತ್ಸವ

2 ಸ್ವಾತಂತ್ರ್ಯ ದಿನಾಚರಣೆ

3 ಮಹಾತ್ಮ ಗಾಂಧಿ ಜಯಂತಿ

4 ಕನ್ನಡ ರಾಜ್ಯೋತ್ಸವ

5 ಡಾ ಬಿಆರ್ ಅಂಬೇಡ್ಕರ್ ಜಯಂತಿ

6 ವಾಲ್ಮೀಕಿ ಜಯಂತಿ

7 ಕನಕದಾಸರ ಜಯಂತಿ

8 ಬಸವ ಜಯಂತಿ

9 ಸಂವಿಧಾನ ದಿನ

10 ಯೋಗ ದಿನ

ಸರ್ಕಾರಿ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಹಬ್ಬಗಳನ್ನು ಆಚರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೆಆರ್‌ಇಐಎಸ್ ಪ್ರಾಂಶುಪಾಲರು ಮತ್ತು ಶಾಲಾ ಕಾಲೇಜು ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.

ರಾಜ್ಯಾದ್ಯಂತ ಕೆಲವು ವಸತಿ ಶಾಲೆಗಳಲ್ಲಿ ಆಚರಿಸಲಾದ ಆಯ್ದ ಉತ್ಸವಗಳಿಗೆ ಹಲವಾರು ಜನರು ಆಕ್ಷೇಪಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ವಿಚಾರವನ್ನು ಸಮಾಜ ಕಲ್ಯಾಣ ಸಚಿವರ ಗಮನಕ್ಕೆ ತರಲಾಗಿದ್ದು, ಕೆಆರ್‌ಇಐಎಸ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಎಲ್ಲ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು