Saturday, June 15, 2024

ಸತ್ಯ | ನ್ಯಾಯ |ಧರ್ಮ

ಆರ್ ಎಸ್ ಎಸ್ ಅಂಗ ಸಂಸ್ಥೆಗೆ ಗೋಮಾಳ ಮಂಜೂರು: ಆದೇಶ ತಡೆಹಿಡಿದ ಸರ್ಕಾರ

ಬೆಂಗಳೂರಿನಲ್ಲಿ RSS ಸಂಘಟನೆಗೆ ಸಂಬಂಧಿತ ಜನಸೇವಾ ಟ್ರಸ್ಟಿಗೆ ಮಂಜೂರು ಮಾಡಲಾಗಿದ್ದ 35.33 ಎಕರೆ ಗೋಮಾಳ ಭೂಮಿಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಡೆಹಿಡಿದಿದೆ.

ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯ ಕುರುಬರಹಳ್ಳಿಯಲ್ಲಿ 35.33 ಎಕರೆ ಗೋಮಾಳವನ್ನು ಜನಸೇವಾ ಟ್ರಸ್ಟಿಗೆ ನೀಡಿತ್ತು.

ಅಧಿಕಾರ ವಹಿಸಿಕೊಂಡ ಐದು ದಿನಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 25ರಂದು ಟಿಪ್ಪಣಿ ಹೊರಡಿಸಿ, ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿದ ಭೂಮಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ವಿವಿಧ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಿರುವ ಬಗ್ಗೆ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರ ಪ್ರಶ್ನೆಗೆ, ಜನಸೇವಾ ಟ್ರಸ್ಟಿಗೆ 35.33 ಎಕರೆ ಭೂಮಿಯನ್ನು ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ಸಿಎಂ ಟಿಪ್ಪಣಿಯನ್ನು ಉಲ್ಲೇಖಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಲಿಖಿತ ಉತ್ತರ ನೀಡಿದರು.

ಮುಖ್ಯಮಂತ್ರಿಯವರ ಅವರ ಟಿಪ್ಪಣಿ ಕೇವಲ ಜನಸೇವಾ ಟ್ರಸ್ಟಿಗೆ ಮಾತ್ರವಲ್ಲದೆ, ವಿಧಾನಸಭಾ ಚುನಾವಣೆಗೆ ಮುಂಚಿನ ತಿಂಗಳುಗಳಲ್ಲಿ ಮಾಡಿದ ಎಲ್ಲಾ ಹಂಚಿಕೆಗಳಿಗೂ ಅನ್ವಯಿಸುತ್ತದೆ ಎಂದು ಸಚಿವರು ಮಾಧ್ಯಮಗಳಿಗೆ ತಿಳಿಸಿದರು.

ಜನಸೇವಾ ಟ್ರಸ್ಟ್ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಜನಸೇವಾ ಟ್ರಸ್ಟ್ ಕಾರ್ಯದರ್ಶಿ ನಿರ್ಮಲ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ‘ಸರ್ಕಾರದ ಯಾವುದೇ ಮೂಲದಿಂದ ಟ್ರಸ್ಟಿಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಹೇಳಿದರು.

2019 ಮತ್ತು 2022ರ ನಡುವೆ, ಬಿಜೆಪಿ ಅಧಿಕಾರದಲ್ಲಿದ್ದಾಗ, ಒಂಬತ್ತು ಜಿಲ್ಲೆಗಳಲ್ಲಿ 252.36 ಎಕರೆ ಗೋಮಾಳ ಭೂಮಿಯನ್ನು ಆದಿಚುಂಚನಗಿರಿ ಮಠ, ಸಿದ್ಧಗಂಗಾ ಮಠ, ಇಸ್ಕಾನ್, ರಾಷ್ಟ್ರೋತ್ಥಾನ ಪರಿಷತ್, ಕರ್ನಾಟಕ ಲಾನ್ ಟೆನ್ನಿಸ್ ಅಸೋಸಿಯೇಷನ್, ಒಕ್ಕಲಿಗರ ಸಂಘ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ನೀಡಲಾಗಿದೆ.

“ನಾವು ಅವಸರದ ಹಂಚಿಕೆ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದೇವೆ, ಇದರಲ್ಲಿ ಅನರ್ಹ ಅನುದಾನವೂ ಸೇರಿದೆ” ಎಂದು ಕೃಷ್ಣ ಭೈರೇಗೌಡ ಹೇಳಿದರು. ಗೋಶಾಲೆಯ ಉದ್ದೇಶಕ್ಕಾಗಿ ಒಂದು ಸರ್ಕಾರೇತರ ಸಂಸ್ಥೆಗೆ 35 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ಗಮನಸೆಳೆದರು. ‘ಅರ್ಹತೆ ಮತ್ತು ಉದ್ದೇಶದ ಆಧಾರದ ಮೇಲೆ ನಾವು ಅನುದಾನವನ್ನು ಪರಿಶೀಲಿಸುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ನೋಡುತ್ತೇವೆ’ ಎಂದು ಅವರು ಹೇಳಿದರು.

2018ರಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗೋಮಾಳ ಭೂಮಿಗಳ ಮಂಜೂರಾತಿಗೆ ಹಸಿರು ನಿಶಾನೆ ತೋರಿಸಿದ್ದರು. ಕರ್ನಾಟಕ ಭೂಕಂದಾಯ ನಿಯಮಗಳ ಪ್ರಕಾರ ಪ್ರತಿ 100 ಜಾನುವಾರುಗಳಿಗೆ 30 ಎಕರೆ ಗೋಮಾಳ ಎಂದು ನಿಗದಿಪಡಿಸಬೇಕು. ಜಿಲ್ಲಾಧಿಕಾರಿಗಳು ಪೂರ್ವಾನುಮತಿಯೊಂದಿಗೆ ಮಾತ್ರ ಗೋಮಾಳ ಭೂಮಿಯನ್ನು ಕಡಿಮೆ ಮಾಡಬಹುದು. ಗೋಮಾಳ ಭೂಮಿಯನ್ನು ಮಂಜೂರು ಮಾಡದಂತೆ ವಿವಿಧ ಹೈಕೋರ್ಟ್ ತೀರ್ಪುಗಳು ಸರ್ಕಾರಕ್ಕೆ ಹೇಳಿವೆ ಎಂದು ಸಿಎಜಿ ಗಮನಸೆಳೆದಿತ್ತು. ಆದರೆ 2008ರ ಜನವರಿಯಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿ ನಗರ ವ್ಯಾಪ್ತಿಯಲ್ಲಿರುವ ಗೋಮಾಳ ಭೂಮಿ ಮಂಜೂರು ಮಾಡಲು ಅವಕಾಶ ನೀಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು