Wednesday, October 30, 2024

ಸತ್ಯ | ನ್ಯಾಯ |ಧರ್ಮ

ಕೊಲೆಗಡುಕರಿಗೆ ಭವ್ಯ ಸ್ವಾಗತ l ನವಭಾರತದ ಆತಂಕಕಾರಿ ಬೆಳವಣಿಗೆ

ಇದೇ ತಿಂಗಳ 9ರಂದು ಗೌರಿ ಲಂಕೇಶ್‌ ಹಂತಕರೆಂದು ಆಪಾದಿಸಲಾಗಿರುವ ಪರಶುರಾಮ್‌ ವಾಘ್‌ಮೋರೆ ಮತ್ತು ಮನೋಹರ್‌ ಯಾದವೆ ಅವರಿಗೆ ಬೆಂಗಳೂರಿನ ಶೆಷನ್ಸ್‌ ಕೋರ್ಟ್‌ ಜಾಮೀನನ್ನು ನೀಡಿತು. ಅವರಿಬ್ಬರು ಆರು ವರ್ಷಗಳ ಕಾಲ ಕಂಬಿಯನ್ನು ಎಣಿಸಿದ್ದರು. ಇವರಿಬ್ಬರನ್ನು ವಿಜಯಪುರದಲ್ಲಿ ಕೆಲವು ಹಿಂದುತ್ವಾದಿ ಸಂಘಟನೆಗಳ ಕಾರ್ಯಕರ್ತರು “ ಭಾರತ್‌ ಮಾತಾ ಕಿ ಜೈ ʼ,” ಸನಾತನ್‌ ಧರ್ಮ್‌ ಕಿ ಜೈ” ಎಂದು ಘೋಷಣೆಗಳನ್ನು ಕೂಗುತ್ತ ಭವ್ಯ ಸ್ವಾಗತವನ್ನು ಮಾಡಿದರು! ಅವರನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯ ಬಳಿ ಕರೆದುಕೊಂಡು ಹೋಗಿ, ಕೇಸರಿ ಶಾಲುಗಳನ್ನು ಹೊದಿಸಿ, ಕೊರಳಿಗೆ ಹಾರಗಳನ್ನು ಹಾಕಲಾಯಿತು! ನಂತರ ಅವರು ದೇವಾಲಯವೊಂದಕ್ಕೆ ಭೇಟಿಯನ್ನು ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಯಿತು.

ನಮ್ಮ ದೇಶದಲ್ಲಿ, ಹಿಂದೂ ಮತ/ಸನಾತನ ಧರ್ಮದ ಸಂರಕ್ಷಣೆಗಾಗಿ ಹೇಯ ಕೃತ್ಯಗಳನ್ನು ಎಸಗಿದ ಕೆಲವು ಕೊಲೆಗಡುಕರು/ಅತ್ಯಾಚಾರಿಗಳಿಗೆ, ಕೆಲವು ಹಿಂದುತ್ವವಾದಿ ಸಂಘಟನೆಗಳು ಅದ್ದೂರಿ ಸ್ವಾಗತ ಹಾಗೂ ಸನ್ಮಾನವನ್ನು ಮಾಡಿದ ಅನೇಕ ಉದಾಹರಣೆಗಳಿವೆ. ಅಂತಹವರು ತಮ್ಮ ಹಿತವನ್ನು ಬದಿಗಿಟ್ಟು ತ್ಯಾಗವನ್ನು ಮಾಡಿದ್ದಾರೆ ಎಂಬರ್ಥದ ಹೇಳಿಕೆಗಳನ್ನು ಹರಿಬಿಡಲಾಗುತ್ತದೆ! ಅವರು ಸೂಪರ್‌ ಹೀರೋಗಳು ಎಂದು ಬಿಂಬಿಸಲಾಗುತ್ತದೆ. ಇವುಗಳನ್ನು ನಂಬುವ, ಸಮರ್ಥಿಸುವ ದೊಡ್ಡ ದಂಡೇ ನಮ್ಮ ನಡುವೆ ಇದೆ! ಇಂತಹ ಬೆಳವಣಿಗೆಗಳ ಸುದ್ದಿಗಳನ್ನು ಯಾವ ಬಗೆಯ ಹಿಂಜರಿತವಿಲ್ಲದೆ, ರಾಜಾರೋಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಪರಮತ ದ್ವೇಷ, ಹಿಂಸೆ ಮತ್ತು ಹತ್ಯೆಗಳನ್ನು ವಿಜೃಂಭಿಸಲಾಗುತ್ತದೆ.

ಕೆಳಗಿನ ವಿವರಣಾ ಪಟ್ಟಿಯಲ್ಲಿ ಹೀನ ಅಪರಾಧಗಳನ್ನು ಎಸಗಿದವರು/ಆಪಾದಿತರನ್ನು ಹಿಂದುತ್ವವಾದಿ ಸಂಘಟನೆಗಳು ಸನ್ಮಾನ ಮಾಡಿದ ಪ್ರಸಂಗಗಳನ್ನು ಉಲ್ಲೇಖಿಸಲಾಗಿದೆ:
ಅ) ಉತ್ತರಪ್ರದೇಶದ ಮುಝಫರ್‌ನಗರ್ನಲ್ಲಿ 2013ರಲ್ಲಿ ಕೋಮು ಹಿಂಸೆ ಜರುಗಿತು. ಸುಮಾರು 60ಕ್ಕೂ ಹೆಚ್ಚು ಮಂದಿ ಹತ್ಯೆಗಿಡಾದರು; ಸುಮಾರು 40,000 ಹೆಚ್ಚು ಮಂದಿ ನಿರ್ವಸತಿಗೆ ಒಳಗಾದರು. ಅವರಲ್ಲಿ ಹೆಚ್ಚಿನ ಮಂದಿ ಮುಸಸ್ಮಾನರಾಗಿದ್ದರು. ಕೋಮುವಾದಿ ಕೃತ್ಯಗಳಿಗೆ ಕಾರಣಕರ್ತರು ಎಂದು ಆಪಾದಿಸಲಾಗಿದ್ದ ಸಂಗೀತ್‌ ಸೋಮ್‌ ಮತ್ತು ಸುರೇಶ್‌ ರಾಣಾ ಎಂಬ ಕಾರ್ಯಕರ್ತರನ್ನು ನರೇಂದ್ರ ಮೋದಿ ಭಾಷಣ ಮಾಡಿದ ರ್ಯಾಲಿಯಲ್ಲಿ ಸನ್ಮಾನಿಸಲಾಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು.

ಆ) ಪುಣೆಯ ಟೆಕ್ಕಿ ಮೋಹ್ಸೀನ್‌ ಶೇಖ್‌ನನ್ನು ಕೊಲ್ಲಲಾಯಿತು. ಈತನ ಕೊಲೆಯಲ್ಲಿ ಹಿಂದೂ ರಾಷ್ಟ್ರ ಸೇನೆಯ ಮುಖ್ಯಸ್ಥನಾದ ಧನಂಜಯ್‌ ದೇಸಾಯಿಯ ಕೈವಾಡವಿದೆ ಎಂದು ಶಂಕಿಸಿ, ಆತನನ್ನು ದಸ್ತಗಿರಿ ಮಾಡಲಾಯಿತು. ಅತನಿಗೆ ʼ ಹಿಂದುತ್ವ ಶೌರ್ಯ ಪುರಸ್ಕಾರ್‌ʼ ಬಿರುದನ್ನು ನೀಡಲಾಗುವುದೆಂದು ಕೆಲವು ಹಿಂದೂ ಸಂಘಟನೆಗಳು ಘೋಷಿಸಿದವು.

ಇ) 2018ರಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಹುಡುಗಿಯ ಮೇಲೆ ಬರ್ಬರವಾಗಿ ಗುಂಪು ಅತ್ಯಾಚಾರ ಮಾಡಿ, ಆಕೆಯನ್ನು ಕೊಲ್ಲಲಾಯಿತು. ಆ ಕೇಸಿನಲ್ಲಿ ಆಪಾದಿತರನ್ನು ಬಂಧಿಸಲಾಯಿತು. ಅವರ ಪರವಾಗಿ ಹಿಂದೂ ಏಕತಾ ಮಂಚ್‌ ಮತ್ತು ಕೆಲವು ಬಿಜೆಪಿ ನಾಯಕರು ಬಹಿರಂಗವಾಗಿ ರ್ಯಾಲಿಗಳನ್ನು ನಡೆಸಿದರು,

ಈ) ಜಾರ್ಖಂಡ್‌ನ ರಾಮ್‌ಗರ್ನಲ್ಲಿ 2017ರಲ್ಲಿ ಗೋವಿನ ಅಕ್ರಮ/ಕಳ್ಳ ಸಾಗಣೆ, ಹತ್ಯೆಯ ಕಾರಣವನ್ನು ಇರಿಸಿಕೊಂಡು ಅಲಿಮುದ್ದೀನ್‌ ಅನ್ಸಾರಿ ಎಂಬ ವ್ಯಕ್ತಿಯನ್ನು ಗುಂಪು ಹಿಂಸೆಯಲ್ಲಿ ಕೊಲ್ಲಲಾಯಿತು. ಕೆಳಹಂತದ ನ್ಯಾಯಾಲಯದಲ್ಲಿ ಎಂಟು ಮಂದಿಯನ್ನು ಆಪಾದಿತರೆಂಬ ತೀರ್ಪು ಹೊರಬಂದಿತು. ಉಚ್ಚ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರಕಿತು. 2018ರಲ್ಲಿ ಕೇಂದ್ರ ಸರ್ಕಾರದಲ್ಲಿ ಸಿವಿಲ್‌ ಏವಿಯೇಷನ್‌ ಖಾತೆಯ ರಾಜ್ಯ ಮಂತ್ರಿಯಾಗಿದ್ದ ಜಯಂತ್‌ ಸಿನ್ಹಾ ಈ ಎಂಟು ಮಂದಿಯನ್ನು ಭೇಟಿ ಮಾಡಿದ್ದಷ್ಟೇ ಅಲ್ಲದೆ ಅವರಿಗೆ ಮಾಲಾರ್ಪಣೆಯನ್ನೂ ಮಾಡಿದರು!

ಉ) ಗುಜರಾತಿನ 2002ರ ಕೋಮು ಗಲಭೆಯ ಭೀಕರ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಎಂಬ ಮಹಿಳೆಯನ್ನು ಗ್ಯಾಂಗ್‌ ರೇಪ್‌ ಮಾಡಲಾಯಿತು. ಆಕೆಯ 14 ಮಂದಿ ಸಂಬಂಧಿಕರನ್ನು ಹೇಯವಾಗಿ ಹತ್ಯೆ ಮಾಡಲಾಯಿತು. ಈ ಕೇಸ್‌ನಲ್ಲಿ ಆಪಾದಿತರಾಗಿದ್ದ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಆದರೆ 2022ರಲ್ಲಿ ಅವರ ಶಿಕ್ಷೆಯನ್ನು ಮೊಟಕುಗೊಳಿಸಲಾಯಿತು. ಅಗಸ್ಟ್‌ 15, 2022ರಂದು ಜರುಗಿದ ಸಮಾರಂಭವೊಂದರಲ್ಲಿ ಈ 11 ಮಾಹಾಮಾನವರಿಗೆ ಹೂಮಾಲೆಗಳನ್ನು ಹಾಕಿ, ಸಿಹಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಗೆ ಸೇರಿದ ಅರವಿಂದ್‌ ಸಿಸೋಡಿಯಾ ಎಂಬ ವ್ಯಕ್ತಿ ದೀನ್‌ ದಯಾಳ್‌ ಟ್ರಸ್ಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಯಿತು! ನಮ್ಮ ದೇಶದ ಸ್ವಾತಂತ್ರ್ಯ ದಿನವನ್ನು ಇದಕ್ಕಿಂತ ಉತ್ತಮ ಬಗೆಯಲ್ಲಿ ಆಚರಿಸಲು ಸಾಧ್ಯವೇ?

ಊ) ಇದೇ ವರ್ಷದ ಜೂನ್‌ 30ರಂದು ಗೋವಾದ ಪೊಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಒಂದು ಸನ್ಮಾನ ಸಮಾರಂಭವನ್ನು ಆಯೋಜಿಸಿತು. ಅದರಲ್ಲಿ ವಿಚಾರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಡಾ. ನರೇಂದ್ರ ಧಬೋಲ್ಕರ್‌ ಹತ್ಯೆಗೆ ಸಂಬಂಧಿಸಿದಂತೆ ಖುಲಾಸೆಗೊಂಡಿದ್ದ ಸನಾತನ ಸಂಸ್ಥೆಯ ಜೊತೆ ಸಂಪರ್ಕವಿದ್ದ ವಿಕ್ರಮ್‌ ಭಾವೆ ಮತ್ತು ಆತನ ವಕೀಲರಿಗೆ ಸನ್ಮಾನವನ್ನು ಮಾಡಲಾಯಿತು.

ಮೇಲೆ ಪ್ರಸ್ತಾಪಿಸಿರುವಂತಹ ಇನ್ನು ಅನೇಕ ಸನ್ಮಾನ ಸಮಾರಂಭಗಳು ನಮ್ಮ ದೇಶದ ಅನೇಕ ಭಾಗಗಳಲ್ಲಿ ಜರುಗಿವೆ. ಯು ಆರ್ ಅನಂತಮೂರ್ತಿ ಗತಿಸಿದಾಗ ಕೆಲವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಇಂತಹ ಒಂದು ಮನಸ್ಥಿತಿ ಬೆಳೆಯುತ್ತಿರುವುದರ, ಬೆಳೆಸುತ್ತಿರುವುದರ ಹಿಂದೆ ಯಾವ ಶಕ್ತಿಗಳ ಕಾರಸ್ಥಾನಗಳಿವೆ? ಇದರಿಂದಾಗುವ ರಾಜಕೀಯ ಲಾಭಗಳೇನು ಎಂಬಿತ್ಯಾದಿ ಪ್ರಶ್ನೆಗಳ ಬಗೆಗೆ ಪ್ರತ್ಯೇಕವಾದ ವಿವರಣೆ ಬೇಕಿಲ್ಲ! ಡಾ,ನರೇಂದ್ರ ಧಬೋಲ್ಕರ್‌, ಗೋವಿಂದ್‌ ಪನ್ಸಾರೆ, ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್‌ ಅಂತಹ ವ್ಯಕ್ತಿಗಳ ಕಗ್ಗೊಲೆಯನ್ನು ಮಾಡಿದವರಿಗೆ, ಲಿಂಚಿಂಗ್‌ನಲ್ಲಿ ಭಾಗವಹಿಸಿದವರಿಗೆ ಸೂಕ್ತವಾದ ಶಿಕ್ಷೆ ದೊರಕುತ್ತದೆಯೇ?

ಇಂತಹ ಕೃತ್ಯಗಳನ್ನು ಖಂಡಿಸಿದರೇ, ಪ್ರಶ್ನಿಸಿದರೇ, ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಲಾಗುತ್ತದೆ. ಅನ್ಯಮತದವರು ಕುಕೃತ್ಯಗಳನ್ನು ಮಾಡುವುದಿಲ್ಲವೇ, ಏಕೆ ಅವುಗಳ ಬಗೆಗೆ ನೀವು ಬರೆಯುವುದಿಲ್ಲ: ಹೇಳಿಕೆಗಳನ್ನು ಕೊಡುವುದಿಲ್ಲ ಎಂಬ ವಿತ್ತಂಡ, ಅಸಂಬದ್ಧ ವಾದಗಳನ್ನು ಮುಂದಿಡಲಾಗುತ್ತದೆ. ಮಾನವತೆಯಲ್ಲಿ ನೈಜ ನಂಬಿಕೆಯಿರುವ ವ್ಯಕ್ತಿ ಎಲ್ಲ ಮತಗಳ ಮೂಲಭೂತವಾದ/ಕೋಮುವಾದಗಳನ್ನು ವಿರೋಧಿಸುತ್ತಾನೆ. ಅಂತಹ ವ್ಯಕ್ತಿ ಎಷ್ಟೇ ಬಾರಿ ತನ್ನ ಪಕ್ಷಪಾತರಹಿತ ನಿಲುವಿನ ನಿದರ್ಶನಗಳನ್ನು ನೀಡಿದರೂ, ಅವುಗಳನ್ನು ಸಾರಾಸಗಟಾಗಿ, ನಕಾರಾತ್ಮಕ ರೀತಿಯಲ್ಲಿ ಕಡೆಗಣಿಸಲಾಗುತ್ತದೆ! ಇದು ನವಭಾರತದ ಒಂದು ಬೆಳವಣಿಗೆ!

ಕೊಲೆಗಳನ್ನು ಸಂಭ್ರಮಿಸುವ ಈ ಪರಿ ವಿಕೃತಿಯೇ ಸರಿ. ಆತಂಕಕಾರಿಯಾದ ಈ ಬೆಳವಣಿಗೆ ನಮ್ಮ ಸಮ್ಮಿಳಿತ ಸಂಸ್ಕೃತಿಯ ಮೇಲೆ ಆಗುತ್ತಿರುವ ಅನೇಕ ಪ್ರಹಾರಗಳಲ್ಲಿ ಒಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೂ ಇದು ಮಾರಕ!

ಬರೆದವರು: ಮ ಶ್ರೀ ಮುರಳಿ ಕೃಷ್ಣ

Related Articles

ಇತ್ತೀಚಿನ ಸುದ್ದಿಗಳು

You cannot copy content of this page