ಬೀದರ್: ಕೇಂದ್ರ ಸರ್ಕಾರದ ವತಿಯಿಂದ ಬೀದರ್ ನಾಂದೇಡ್ ರೈಲು ಯೋಜನೆ ಮಂಜೂರಾಗಲಿದ್ದು, ಇದರ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಹಾಗೂ ರಾಜ್ಯದ ಪಾಲಿನ ಹಣ ಎರಡನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಔರಾದ್ ನಲ್ಲಿ ಆಯೋಜಿಸಿರುವ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಔರಾದ್ ಕೆರೆ ತುಂಬಿಸುವ ಯೋಜನೆ 36 ಕೆರೆಗಳ ತುಂಬಿಸುವ 698 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದು 40 ಗ್ರಾಮಗಳಿಗೆ ಉಪಯೋಗವಾಗುತ್ತಿದೆ. ಸಂಸದ ಭಗವಂತ ಖೂಬಾ ಹಾಗೂ ಸಚಿವ ಚೌಹಾಣ್ ಅವರ ಒತ್ತಡಕ್ಕೆ ಮಣಿದು 700 ಕೋಟಿ ರೂ.ಗಳ ಯೋಜನೆಯನ್ನು ಕೈಗೊಳ್ಳಲಾಗಿದೆ. ಬರುವ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ, ನವೆಂಬರ್ ನಲ್ಲಿ ಪ್ರಾರಂಭಿಸಲಾಗುವುದು ಎಂದರು.
ಭಾಲ್ಕಿ ವಿಧಾನಸಭಾ ಕ್ಷೇಡತ್ರದ 24 ಸಾವಿರ ಕರೆ ಜಮೀನಿಗೆ ಒಂದು ಟಿಎಂಸಿ ನೀರಿನಲ್ಲಿ 762 ಕೋಟಿ ರೂ.ಗಳ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಕೆಲಸ ಮಾಡಲಾಗುತ್ತಿದೆ. ಬೀದರ್ ನಲ್ಲಿ ಈ ಎರಡು ಯೋಜನೆಗಳು ಬಹಳ ದಿನಗಳ ಬೇಡಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ಮಾಡದ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಬೀದರ್ ನಮ್ಮ ರಾಜ್ಯದ ಮುಕುಟ ಪ್ರಾಯ ಇದ್ದಹಾಗೆ. ಅತ್ಯುತ್ತಮ ಹವಾಮಾನ, ಕೈಗಾರಿಕೆಗೆ ಸೂಕ್ತ ವಾತಾವರಣ, ಕೃಷಿಗೆ ಫಲವತ್ತಾದ ಮಣ್ಣು, ಐತಿಹಾಸಿಕ ಕುರುಹುಗಳಿರುವ ಜಿಲ್ಲೆ. ಬೀದರ್ ಹಾಗೂ ಕಲಬುರ್ಗಿ ಕೋಟೆಗಳ ಅಭಿವೃದ್ದಿಗೆ ತಲಾ 20 ಕೋಟಿ ರೂ ದಗಿಸಲಾಗಿದೆ. ಪ್ರವಾಸೋದ್ಯಮ ಇಲ್ಲಿಂದ ಪ್ರಾರಂಭವಾಗಬೇಕೆಂದು ಈ ಭಾಗದ ಪ್ರವಾಸೋದ್ಯಮ ಅಭಿವೃದ್ದಿಗೆ ಆದ್ಯತೆ ನೀಡುತ್ತಿದ್ದೇವೆ. ಸಮಗ್ರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯ ಜೊತೆಗೆ ಬೀದರ್ ಜಿಲ್ಲೆಯ ಅಭಿವೃದ್ಧಿಯನ್ನೂ ತೆಗೆದುಕೊಳ್ಳಾಗಿದೆ. ಬಸವಕಲ್ಯಾಣ ಗ್ರಾಮದ ಸಮಗ್ರ ಅಭಿವೃದ್ಧಿಗೂ ಅನುದಾನ ಒದಗಿಸಿದೆ. ಸಿಪೆಟ್ ಯೋಜನೆ ಕರ್ನಾಟಕಕ್ಕೆ ಮಾಡಲು ರಾಜ್ಯ ಸರ್ಕಾರದ ಪಾಲು 50 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಿ ಇಂದು ಅಡಿಗಲ್ಲು ಹಾಕಲಾಗಿದೆ. ಅದರ ಶ್ರೇಯಸ್ಸು ಕೇಂದ್ರ ಸಚಿವ ಭಗವಂತ್ ಖೂಬಾ ಅವರಿಗೆ ಸಲ್ಲಬೇಕು ಎಂದರು.
ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿ
ಕಾರಂಜಾ ಯೋಜನೆಯ ನಾಲೆಗಳ ಅಭಿವೃದ್ಧಿಗೆ ಈ ವರ್ಷ ಕ್ರಮ ಕೈಗೊಂಡಿದೆ. ಕಾರಾಂಜಾ ನದಿಯ ಕೊನೆಯ ಭಾಗದಲ್ಲಿ ನೀರು ಲಭ್ಯವಾಗಿಲ್ಲದೆ ರೈತರ ಬವಣೆ ನಮಗೆ ತಿಳಿದಿದೆ. ಕಾರಾಂಜಾ ನದಿಯಿಂದ ಔರಾದ್ ಗೆ ಕುಡಿಯುವ ನೀರು ಯೋಜನೆ ಜಾರಿಗೆ ಮಂಜೂರಾತಿ ನೀಡುವುದಾಗಿ ಭರವಸೆ ಇತ್ತರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿಯಾದಾಗ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿಗೆ 9000 ಕೋಟಿ ರೂ.ಗಳನ್ನು ಒದಗಿಸುತ್ತಿದ್ದು, ನಗರ ಪ್ರದೇಶಕ್ಕೆ 7500 ಕೋಟಿ ಒದಗಿಸಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 2000 ಶಾಲಾ ಕೊಠಡಿಗಳ ನಿರ್ಮಾಣವಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಕನಿಷ್ಠ 50 ಕೊಠಡಿಗಳ ನಿರ್ಮಾಣವಾಗಲಿದೆ. 70 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 34 ಪಿ.ಹೆಚ್.ಸಿ ಕೇಂದ್ರಗಳನ್ನು ಸಿ ಹೆಚ್ ಸಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೃಷಿ,ಕೈಗಾರಿಕೆ, ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ಪೌಷ್ಟಿಕ ಆಹಾರ, ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ವಿಶೇಷ ಅನುದಾನ, ಬೀದರ್ ಅಭಿವೃದ್ಧಿಗೆ ನಮ್ಮಸರ್ಕಾರ ಬದ್ಧವಾಗಿದೆ ಎಂದರು.
ಬಸವ ಕಲ್ಯಾಣ ಅಭಿವೃದ್ದಿ
ಬಸವ ಕಲ್ಯಾಣ ಅಭಿವೃದ್ದಿಗೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. 1400 ಕೋಟಿ ರೂ.ಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿ ಸಂಪೂರ್ಣವಾಗಿ ಖರ್ಚು ಮಾಡಲಾಗುತ್ತಿದೆ. ಮಾರ್ಚ್ ನಿಂದ ಮುಂದಿನ ಜನವರಿವರೆಗೆ ಸಂಪೂರ್ಣ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ವರ್ಷ ಬಜೆಟ್ ನಲ್ಲಿ 3000 ಕೋಟ ರೂ.ಗಳನ್ನು ಒದಗಿಸಿ ಕ್ರಿಯಾಯೋಜನೆಗೆ ಅನುಮೋದನೆಯನ್ನೂ ನೀಡಲಾಗಿದೆ. ಮುಂದಿನ ಬಜೆಟ್ ನಲ್ಲಿ 5000 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು. 1400 ನೇಮಕಾತಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 500 ಶಿಕ್ಷಕರಿದ್ದಾರೆ. ಎನ್.ಇ. ಪಿ ಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ನೀರಾವರಿಗೆ ವಿಶೇಷ ಅನುದಾನ, ಅನುಭವ ಮಂಟಪ ನಿರ್ಮಾಣಕ್ಕೆ ಈಗಾಗಲೆ 500 ಕೋಟಿ ರೂ. ಒದಗಿಸಿದೆ. ಈ ಹಿನ್ನಲೆಯಲ್ಲಿ ಬಸವ ಕಲ್ಯಾಣ ಅಭಿವೃದ್ದಿಗೆ ವಿಶೇಷ ಅನುದಾನ ನೀಡಲಾಗಿದೆ ಎಂದರು.