Monday, June 17, 2024

ಸತ್ಯ | ನ್ಯಾಯ |ಧರ್ಮ

ಗೃಹಲಕ್ಷ್ಮಿ ಓಕೆ, ಕುಂಕುಮ ಬಳೆ ಯಾಕೆ?

ಮುಜರಾಯಿ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಮೂಢ ಸಂಪ್ರದಾಯವನ್ನು ಮುಂದುವರೆಸುವ ಮನೋಭಾವದೊಂದಿಗೆ ಮನು ಬರೆದ ಶಾಸನವನ್ನು ಒಪ್ಪಿಕೊಳ್ಳುವ ಮನೋಧರ್ಮವೂ ಎದ್ದು ಕಾಣುತ್ತದೆ. ಧರ್ಮ, ಸಂಪ್ರದಾಯಗಳ ಪಾಲನೆ ಎಂದೂ ಅವರವರ ವೈಯಕ್ತಿಕ ನಂಬಿಕೆ, ಆಚರಣೆಗಳಾಗಬೇಕೇ ಹೊರತು, ಆದೇಶಗಳ ಮೂಲಕ ಸರಕಾರವು ತಾನೂ ಅದರಲ್ಲಿ ಭಾಗಿಯಾಗುವುದಲ್ಲ ಶಾರದಾ ಗೋಪಾಲ, ಸಾಮಾಜಿಕ ಹೋರಾಟಗಾರರು 

ವರಮಹಾಲಕ್ಷ್ಮಿ ಹಬ್ಬದ ದಿನದಂದು ಮುಜರಾಯಿ ದೇವಸ್ಥಾನಕ್ಕೆ ಬರುವ ಮಹಿಳೆಯರಿಗೆ ಕುಂಕುಮ ಬಳೆಗಳನ್ನು ತನ್ನ ದುಡ್ಡಿನಲ್ಲಿಯೇ ಕೊಡಬೇಕೆಂದು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆಯಷ್ಟೇ. ಹಿಂದಿನ ಬಿಜೆಪಿ ಸರಕಾರ ಹಾಕಿಕೊಟ್ಟ ಸಂಪ್ರದಾಯವನ್ನು ಈಗಿನ ಸರಕಾರವೂ ವಿಚಾರ ಮಾಡದೆಯೇ ಮುಂದುವರೆಸಿದ್ದು ಆಶ್ಚರ್ಯಾಘಾತವನ್ನುಂಟುಮಾಡಿದೆ. ಜೊತೆಗೆ ಸಿಟ್ಟು, ವಿಷಾದವೂ ಸೇರಿದೆ.

ಒಂದುಕಡೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವೈಜ್ಞಾನಿಕತೆ ಬೆಳೆಸಿಕೊಳ್ಳುವುದರಿಂದ ಮಾತ್ರ  ನಾವು ನಾಗರಿಕರಾಗಲು, ಮಾನವೀಯರಾಗಲು ಸಾಧ್ಯ. ಸಮಾಜದ ಹಲವು ಸಮಸ್ಯೆಗಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಗಳಲ್ಲಿ ಪರಿಹಾರವಿದೆ ಎಂದು ಹೇಳುತ್ತಿರುವಾಗ, ಸರಕಾರದ ಒಂದು ಅಂಗವಾದ ಮುಜರಾಯಿ ಇಲಾಖೆ ಇಂತಹ ಅವೈಜ್ಞಾನಿಕ, ಓಲೈಕೆ ಮಾಡುವ ಸುತ್ತೋಲೆ ಹೊರಡಿಸಿದ್ದು ಅಘಾತ ತರದಿನ್ನೇನು? ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ತರುವ ಬಗ್ಗೆ ವಿಚಾರ ಮಾಡುತ್ತಿರುವ ಸರಕಾರದ ಒಂದು ಇಲಾಖೆ ಸ್ತ್ರೀಯರಿಗೆ ಬಳೆ ಕುಂಕುಮ ವಿತರಿಸುತ್ತಿದೆಯಲ್ಲ?

ಬಳೆ ಕುಂಕುಮಗಳನ್ನು ಧರಿಸುವ ರೂಢಿ ಹೆಣ್ಣು ಹುಟ್ಟಿದಾಗಿನಿಂದಲೇ ಬಂದಿದ್ದರೂ, ಮದುವೆಯಾದ ನಂತರವೂ ಮುಂದುವರೆದು, ಗಂಡನೇನಾದರೂ ಸತ್ತರೆ ಅವನ್ನು ತೆಗೆದುಹಾಕುವ ದುಷ್ಟ ಸಂಪ್ರದಾಯದ ಕಳಂಕ ಆ ರೂಢಿಗೆ ಮೆತ್ತಿಕೊಂಡಿದೆ. ಪುರುಷಪ್ರಧಾನ ವ್ಯವಸ್ಥೆ ಮಾಡಿಟ್ಟಿರುವ ರೂಢಿ ಇದು. ಪುರುಷಪ್ರಧಾನ ಮೌಲ್ಯಗಳನ್ನೇ ಮೈಗೂಡಿಸಿಕೊಂಡಿರುವ, ಮನು ಶಾಸ್ತ್ರವನ್ನೇ ಸಂವಿಧಾನ ಎಂದು ಇಂದಿಗೂ ನಂಬುವ ಬಿಜೆಪಿ ಸರಕಾರ ಇಂತಹ ಸಂಪ್ರದಾಯಗಳನ್ನು ತಂದಿದ್ದಾಗೇನೂ ಆಶ್ಚರ್ಯವಾಗಿರಲಿಲ್ಲ. ಸಹಜ ಅನಿಸಿತ್ತು. ಆದರೆ ವೈಜ್ಞಾನಿಕ ಮನೋಭಾವ ಇದೆಯೆಂದು ನಂಬಿರುವ ಹೊಸ ಸರಕಾರವೂ ಅದನ್ನೇ ಮುಂದುವರೆಸುವುದೆಂದರೆ? ಆಡುವುದೊಂದು, ಮಾಡುವುದೊಂದು ಆಯಿತಲ್ಲ ಇದು? ಇವೇ ಕುಂಕುಮ ಬಳೆಗಳು ಹಿಂದೂ-ಮುಸ್ಲಿಮ್, ಆದಿವಾಸಿ, ಕ್ರಿಶ್ಚಿಯನ್ ಮಧ್ಯೆ, ಗಂಡ ಇರುವ-ಗಂಡ ಸತ್ತ ಹಿಂದೂ ಹೆಣ್ಣುಮಕ್ಕಳ ಮಧ್ಯೆ ಗೋಡೆಯನ್ನು ಕಟ್ಟಿ ಬೇರ್ಪಡಿಸುತ್ತದೆನ್ನುವುದನ್ನು ಇಲಾಖೆಯ ಅಧಿಕಾರಿಗಳು ಅರಿಯರೇ? ಅರಿತಿದ್ದೂ ಇಂತಹ ಸುತ್ತೋಲೆಯನ್ನು ಹೊರಡಿಸಿದ್ದು ಹೇಗೆ? ಅಸೂಕ್ಷ್ಮತೆಯ ಪರಮಾವಧಿ ಇದು!

ಸರಕಾರ ಇಂತಹ ಸುತ್ತೋಲೆಯನ್ನು ಹೊರಡಿಸಿರುವುದು ಖಂಡಿತವಾಗಿ ಒಪ್ಪತಕ್ಕ ಮಾತಲ್ಲ. ಈ ಸುತ್ತೋಲೆಯಲ್ಲಿ ಮೂಢ ಸಂಪ್ರದಾಯವನ್ನು ಮುಂದುವರೆಸುವ ಮನೋಭಾವದೊಂದಿಗೆ ಮನು ಬರೆದ ಶಾಸನವನ್ನು ಒಪ್ಪಿಕೊಳ್ಳುವ ಮನೋಧರ್ಮವೂ ಎದ್ದು ಕಾಣುತ್ತದೆ. ಧರ್ಮ, ಸಂಪ್ರದಾಯಗಳ ಪಾಲನೆ ಎಂದೂ ಅವರವರ ವೈಯಕ್ತಿಕ ನಂಬಿಕೆ, ಆಚರಣೆಗಳಾಗಬೇಕೇ ಹೊರತು, ಆದೇಶಗಳ ಮೂಲಕ ಸರಕಾರವು ತಾನೂ ಅದರಲ್ಲಿ ಭಾಗಿಯಾಗುವುದಲ್ಲ.  ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಹಿಂದೂಗಳಷ್ಟೇ ಈ ರಾಜ್ಯದ ಪ್ರಜೆಗಳೇನು? ಕುಂಕುಮ ಬಳೆ ಧರಿಸುವ ಮುತ್ತೈದೆಯರಷ್ಟೇ ಈ ಸರಕಾರದ ಪ್ರಜೆಗಳಲ್ಲವಲ್ಲ?

ಎಲ್ಲಾ ಜಾತಿ, ಧರ್ಮದ ಮಹಿಳೆಯರಿಗೂ ಸಲ್ಲುವ ಗೃಹಲಕ್ಷ್ಮಿ, ಉಚಿತ ಬಸ್ ಪ್ರಯಾಣದಂಥ  ಮಹಿಳಾ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದ ಸರಕಾರ, ಕುಂಕುಮ ಬಳೆಯ ವಿಚಾರ ಮಾಡಿ ಎಡವಿದೆ. ಈ ಸರಕಾರ ಅಥವಾ ಸರಕಾರವನ್ನು ರಚಿಸಿರುವ ಪಕ್ಷದಿಂದ ನಮಗೆ- ಮಹಿಳೆಯರಿಗೆ ನಿರೀಕ್ಷೆ ಬಹಳವಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ಹೆಣ್ಣುಮಕ್ಕಳಿಗೆ ಚುನಾವಣೆಗಳಲ್ಲಿ ಅವಕಾಶ ಕೊಡಿ. ಮಂತ್ರಿಮಂಡಲದಲ್ಲಿ ಹೆಚ್ಚು ಮಹಿಳೆಯರಿರುವಂತೆ ಮಾಡಿ. ಮನೆಯಲ್ಲಿ ಹೆಂಗಸರಿಗೆ ಅಡಿಗೆಮನೆ, ಮಕ್ಕಳು ಮುದುಕರನ್ನು ನೋಡಿಕೊಳ್ಳುವ ಕೆಲಸ ಎಂಬ ಆಲೋಚನೆಯನ್ನೇ ಮುಂದುವರೆಸುತ್ತ ಆರಿಸಿಬಂದ ಮಹಿಳೆಯರಿಗೆ ಅವರಲ್ಲಿ ಅದೆಷ್ಟು ಸಾಮರ್ಥ್ಯವಿದ್ದರೂ ಪರಿಗಣಿಸದೆ ಮಹಿಳಾ ಮತ್ತು ಮಕ್ಕಳ ಇಲಾಖೆಗಷ್ಟೇ ಅವಳನ್ನು ಮಂತ್ರಿ ಮಾಡುವ ಸಂಪ್ರದಾಯವನ್ನು ಕೈಬಿಡಿ. (ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಗೃಹಸಚಿವರನ್ನಾಗಿ ಮಾಡಿ ಅವರ ಸಾಮರ್ಥ್ಯವನ್ನು ಒರೆಗೆ ಹಚ್ಚಬಹುದಿತ್ತು.)   ಎಲ್ಲಾ ರಂಗಗಳಲ್ಲೂ ಮಿಂಚುತ್ತಿರುವ ಹೆಣ್ಣುಮಕ್ಕಳನ್ನು ಸನ್ಮಾನಿಸಿ, ಹೆಚ್ಚೆಚ್ಚು ಹೆಣ್ಣುಮಕ್ಕಳು ಓದಿ, ವಿದ್ಯೆ ಪಡೆದು ಅಂತಹ ಜಾಗಕ್ಕೆ ಬರುವಂತೆ ಮಾಡಿ. ಕಾನೂನಿದ್ದೂ ಬಾಲ್ಯವಿವಾಹಗಳು ಇನ್ನೂ ನಿಂತಿಲ್ಲ. ಹೆಣ್ಣಿನ ಜೀವನವನ್ನೇ ನುಂಗಿ ನೊಣೆಯುವ ಘೋರ ಸಂಪ್ರದಾಯವದು. ಆದರೆ ಅಧಿಕಾರಿಗಳಲ್ಲಿ ಬಾಲ್ಯವಿವಾಹ ನಿಲ್ಲಿಸುವ ಮನೋವೃತ್ತಿಯೇ ಇಲ್ಲವಾಗಿ ಎಂಥ ಬಲಿಷ್ಠ ಕಾನೂನಿದ್ದರೂ ಅದಕ್ಕೆ ಉಗುರಿಲ್ಲವಾಗಿದೆ. ಕಠಿಣ ಕ್ರಮ ಕೈಗೊಂಡು ಬಾಲ್ಯವಿವಾಹ ನಿಲ್ಲಿಸಿ ಹೆಣ್ಣುಮಕ್ಕಳ ಶಿಕ್ಷಣವನ್ನುಕಡ್ಡಾಯ ಮಾಡುವ ಕಠಿಣ ಕಾನೂನು ಮಾಡಿ. ಹೀಗೇನಾದರೂ ಮಾಡಿದಲ್ಲಿ ಒಂದು ಹಿಂದೂ ಹಬ್ಬದಂದು ಸರ್ವಧರ್ಮದ ಹೆಣ್ಮಕ್ಕಳಿಗೆ ಉಡುಗೊರೆ ಕೊಟ್ಟ ಖ್ಯಾತಿ ಈ ಸರಕಾರದ್ದಾಗುತ್ತದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಕುಂಕುಮಬಳೆ ಕೊಡುವ ಆದೇಶವನ್ನು ಸರಕಾರ ಹಿಂತೆಗೆದುಕೊಳ್ಳಲಿ ಎನ್ನುತ್ತಲೇ ಸರಕಾರದ ಇತ್ತೀಚಿನ ಒಂದು ಕಾರ್ಯವನ್ನು ಶ್ಲಾಘಿಸಲೇಬೇಕು. ಅದೆಂದರೆ ಸರ್ಕಾರಿ, ಅನುದಾನಿತ ಶಾಲೆಗಳ ಸುಮಾರು 18 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ ಕಿನ್ ವಿತರಣೆ ಮಾಡುವ `’ಶುಚಿ”ಯೋಜನೆಯನ್ನು ಪುನರ್ ಜಾರಿ ಮಾಡುತ್ತಿರುವುದು. ಹಿಂದಿನ ಸರಕಾರ ಯಾವ ಕಾರಣಕ್ಕಾಗಿ ಇದನ್ನು ನಿಲ್ಲಿಸಿತ್ತೋ ಗೊತ್ತಿಲ್ಲ. ಯಾರಿಗೂ ಗೊತ್ತಿಲ್ಲ. ಹುಡುಗಿಯರ ಶಿಕ್ಷಣಕ್ಕೆ ಇಂಬು ಕೊಡುವ ಇಂತಹ ಹೆಚ್ಚೆಚ್ಚು ಕ್ರಮಗಳು, ಯೋಜನೆಗಳು ನಾವು ಆರಿಸಿ ತಂದ ಈ ಸರಕಾರದಿಂದ ಬರಲಿ.

ಶಾರದಾ ಗೋಪಾಲ

ಅಂಕಣಕಾರರು, ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿ-ಅಜಲು- ಕೊರಗರ ಜೀವಸಂಕುಲವನ್ನೆ ಹಿಂಡುತ್ತಿದೆ

Related Articles

ಇತ್ತೀಚಿನ ಸುದ್ದಿಗಳು