ಶಿರಸಿ: ಜನರ ಮತ ಸೆಳೆಯಲು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬದಲು ಗ್ಯಾರಂಟಿ ಕಾರ್ಡ್ ನೀಡಿ ಮತವನ್ನು ಕೇಳಲಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಮಂಗಳವಾರದಂದು ಮುಂದಿನ ಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ʼ ಈಗಾಗಲೇ ಕಾಂಗ್ರೆಸ್ ನಶಿಸಿದೆ. ಜೆಡಿಎಸ್ ಪಕ್ಷ ಕೆಲವೇ ಸೀಟುಗಳನ್ನು ಪಡೆಯಲಿವೆ. ಈಗ ಸದ್ಯಕ್ಕೆ ಬಿಜೆಪಿ ಮಾತ್ರ ಆಮ್ ಆದ್ಮಿ ಪಕ್ಷಕ್ಕೆ ನೇರ ಎದುರಾಳಿಯಾಗಿದೆ. ರಾಜ್ಯದಲ್ಲಿ ಚುನಾವಣೆ ವೇಳೆ ಆಪ್‌ನ ಅಲೆಗಳು ಅಪ್ಪಳಿಸಲಿವೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಓಡಿಸಲು ಪೊರಕೆ ಹಿಡಿದಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಪ್ರತ್ಯೇಕ ಪ್ರಣಾಳಿಗೆಗಳನ್ನು ನೀಡಿ ಜನರನ್ನು ನಂಬಿಸಿ ತಮ್ಮಡೆಗೆ ಸೆಳೆಯುತ್ತವೆ. ಆದರೆ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬದಲು ಗ್ಯಾರಂಟಿ ಕಾರ್ಡ್ ನೀಡಿ ಮತವನ್ನು ಕೇಳಲಿದೆ ಎಂದಿದ್ದಾರೆ.
ಆಪ್ ಶುರುವಾಗಿ ಹತ್ತು ವರ್ಷಗಳಾಗಿದೆ. ಆಗಿನಿಂದಲೂ ಈ ಸಣ್ಣ ಪಕ್ಷ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಹೋರಾಡುತ್ತಲೇ ಬಂದಿದೆ. ಒಂಭತ್ತು ರಾಷ್ಟ್ರೀಯ ಪಕ್ಷಗಳಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚು ಮುನ್ನೆಲೆಗೆ ಬರುತ್ತಿದೆ ಎಂದು ಮಾತನಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನವರಿ ಎರಡನೇ ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಆ ಬಳಿಕ 224 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿರ್ಧರಿಸಲಾಗುವುದು. ಅಪರಾಧ ಹಿನ್ನಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲʼ ಎಂದು ತಿಳಿಸಿದರು.