Thursday, June 13, 2024

ಸತ್ಯ | ನ್ಯಾಯ |ಧರ್ಮ

ಗುಡಿಸಲೆಂಬ ಅರಮನೆಯಲ್ಲಿ ಗಂಗೆ

(ಈ ವರೆಗೆ…)ಗಂಗೆಯನ್ನು ರೈಲ್ವೇ ಸ್ಟೇಶನ್‌ ಗೆ ಕರೆತಂದು ಅಲ್ಲಿ ಮೋಹನ ಆಕೆಯೊಡನೆ ಸತ್ಯ ನುಡಿಯುತ್ತಾನೆ. ತನಗೆ ಕೆಲಸವಿಲ್ಲದೆ ಇದ್ದು ಈ ವರೆಗೆ ಹೇಳಿರುವುದೆಲ್ಲವೂ ಸುಳ್ಳು ಎಂದು ಹೇಳುತ್ತಾನೆ. ಗಂಗೆ ಅವನ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಊರಿಗೆ ಹಿಂದಿರುಗಿ ದುಡಿಯೋಣ ಎಂದ ಗಂಗೆಯ ಮಾತನ್ನು ಒಪ್ಪಲಾರದೆ ಕೊನೆಗೂ ಭೋಗನೂರಿನ ತನ್ನ ಮನೆಗೆ ಹೋಗುವ ಯೋಚನೆ ಮಾಡುತ್ತಾನೆ. ಭೋಗನೂರಿನಲ್ಲಿ ಏನು ನಡೆಯಿತು? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ನಲುವತ್ತ ನಾಲ್ಕನೆಯ ಕಂತು.

ಹಠಮಾರಿ ಅವ್ವ ಬಡಪೆಟ್ಟಿಗೆ ಬಗ್ಗುವವಳಲ್ಲ ಎಂದು ಅರಿತಿದ್ದ ಮೋಹನ, ಗಂಗೆಯನ್ನು ಸಂಪಿಗೆ ಕಟ್ಟೆಯ ತನ್ನ ಬಾಲ್ಯ ಸ್ನೇಹಿತ ವೇಣುವಿನ ಮನೆಯಲ್ಲಿ ದಿನದ ಮಟ್ಟಿಗೆ  ಉಳಿಸಿ, ತಾನು ಭೋಗನೂರಿಗೆ ಬಂದು ತಲುಪಿದ. ಅದಾಗಲೇ ಬಳೆಗಾರ ಭದ್ರಪ್ಪನಿಂದ ಮಗನ ಮದುವೆ ವಿಷಯ ತಿಳಿದು  ಕೆಂಡಾಮಂಡಲವಾಗಿದ್ದ ಮೋಹನನ ಅವ್ವ ಚಿಕ್ಕತಾಯಮ್ಮ, ಮಗ ಎದುರು ಬಂದು ನಿಂತದ್ದೆ ತಡ, ಹಸಿದ ಚಿರತೆಯಂತೆ ಅವನ ಮೇಲೆ ಎಗರಿ ರಂಪ ರಾಮಾಯಣ ಮಾಡಿದಳು. ಅವ್ವನಿಂದ ಇದನ್ನೆಲ್ಲ ನಿರೀಕ್ಷಿಸಿದ್ದ ಮೋಹನ, ಕೋಪದಿಂದ ಉಕ್ಕುತ್ತಿದ್ದ ಅವಳ ಒಳಕುದಿ ಇಳಿಯುವವರೆಗೂ ತುಟಿ ಪಿಟಿಕ್ ಎನ್ನಲಿಲ್ಲ. ಅವಳ ಯಾವ ಜಗ್ಗಾಟಕ್ಕೂ ಮಿಸುಕಾಡದೇ ಕಲ್ಲಿನಂತೆ  ತಣ್ಣಗೆ ಕುಳಿತೇ ಇದ್ದ. 

ಎಷ್ಟೋ ತಾಸಿನ ಹಾರಾಟದ ನಂತರ ಅವಳ ಗಂಟಲೊಣಗಿ ಆಯಾಸ ಆವರಿಸಿದಂತಾಯ್ತು. ಅದನ್ನು ಮಗನ ಎದುರು ತೋರಗೊಡದೆ ಬುಸುಬುಸು ಎನ್ನುತ್ತಲೆ ಅಡಿಗೆ ಕೋಣೆಗೆ ಹೋಗಿ ಗಟಗಟನೆ ಒಂದು ತಂಬಿಗೆ ನೀರು ಕುಡಿದಳು. ಕೋಪದ ದಗೆಯಲ್ಲಿ ಬೆವರಿ ನೀರಾಗಿದ್ದ ಚಿಕ್ಕತಾಯಮ್ಮ, ಹೊರಗಿನ ಜಗಲಿಕಟ್ಟೆಗೆ ಬಂದು  ಸೆರಗಿನಿಂದ ಬಿರುಸಾಗಿ ಗಾಳಿ ಹಾಕಿಕೊಳ್ಳುತ್ತಾ  ನಿಧಾನವಾಗಿ ತಣ್ಣಗಾಗ ತೊಡಗಿದಳು. 

ಅವ್ವನೊಳಗಿನ ಕಾವು ತುಸು ಮಟ್ಟಿಗೆ ಇಳಿಯುತ್ತಿರುವುದನ್ನು  ಗಮನಿಸಿದ ಮೋಹನ, ಮೆಲ್ಲಗೆ ಗಂಗೆಗಿರುವ ಆಸ್ತಿ ಅಂತಸ್ತಿನ ಮಾತು ತೆಗೆದ. “ಇನ್ನು ಎಷ್ಟು ವರ್ಷ ಅಂತ ಈ ದರಿದ್ರ ಬಡತನದಲ್ಲಿ ಬೇಯೋದು ಅಕ್ಕ, ನನ್ಗೂ ಸಾಕಾಯ್ತು. ಇಂತ ಅಡ್ಡ ದಾರಿಲಿ ಮಾತ್ರ ನಾವು ಒಂದಿಷ್ಟು ನೆಮ್ಮದಿ ಕಾಣ್ಬಹುದು ಹೊರ್ತು ಒಳ್ಳೆದುಕ್ಕೆ  ಇದು ಕಾಲ ಅಲ್ಲ. ನಾನೇನು ಅವಳ ಅಂದ ಚಂದಕ್ಕೆ ಮರುಳಾಗಿ  ಮದುವೆ ಆಗಿದ್ದಲ್ಲ. ಅವಳು ಇರೋಳು ಒಬ್ಬಳೇ ಮಗಳು, ಮದುವೆ ನೆವದಲ್ಲಿ ಒಂದಷ್ಟು ಆಸ್ತಿ  ನಮ್ಮ ಕೈ ಸೇರ್ತದಲ್ಲ ಅಂತ ಮುಂದಾಲೋಚನೆ ಮಾಡಿ  ಅವ್ಳಿಗೆ ತಾಳಿ ಕಟ್ಟಿದ್ದು. ಇಲ್ಲಿ ನನ್ ಸುಖ ಮಾತ್ರ ನಾನು ನೋಡ್ಲಿಲ್ಲ. ಮನೆ ಹಿರಿ ಮಗ ಆಗಿ, ನನ್ನ ತಂಗಿ  ತಮ್ಮಂದಿರ್ನೆಲ್ಲ ಒಂದು ದಡ ಮುಟ್ಸಿ ನನ್ನ ಜವಾಬ್ದಾರಿ ತೀರಿಸ್ಕೊಬೇಕಲ್ಲ.. ಅದಕ್ಕೆ ನಾನು ಈ ನಿರ್ಧಾರ ತಗೊಂಡಿದ್ದು. ಅರ್ಥಮಾಡ್ಕೊ ಅಕ್ಕ. ನಿಮಗೆಲ್ಲಾ ಹೇಳಿ ಮಾಡಿಕೊಂಡಿದ್ದಿದ್ರೆ ಈ ಸಂಬಂಧವೇ ಮುರಿದು ಬೀಳ್ತಿತ್ತು.  ನಮ್ ಈ ಬಡತನ ನೋಡಿದ್ರೆ ಯಾರು ಹೆಣ್ಣು ಕೊಡ್ತಿದ್ರು ಹೇಳು” ಎಂದು ಆರ್ದ್ರವಾಗಿ ತನ್ನ ದುಃಖ ತೋಡಿಕೊಂಡ.

ಮಗನ ಜವಾಬ್ದಾರಿ ತುಂಬಿದ ನಡೆ ಕಂಡು ಚಿಕ್ಕತಾಯಮ್ಮನ ಕೋಪವೆಲ್ಲ ಸರ್ರನೆ ಇಳಿದು ” ಬಳೆಗಾರ ಭದ್ರಪ್ಪ್ ಸೆಟ್ಟಿ ಆ ಹುಡುಗಿ ಮನೆ ಇಚಾರನೆಲ್ಲಾ ಮೊದ್ಲೆ ಹೇಳಿದ್ದ. ನೀನು ಒಂದ್ಮಾತು ನಮ್ಗೆ ಹೇಳ್ದಂಗೆ ಹಿಂಗ್ ಮಾಡ್ದಲ್ಲ ಅಂತ ಸಿಟ್ ಬಂದು ಕೂಗಾಡ್ದೆ. ಆಗಿದ್ದಾಯ್ತು ಹೋಗ್ಲಿ ಬುಡು,  ಆ ಹುಡ್ಗಿನ ನಾಳಿಕೋಗಿ ಕರ್ಕೊಂಡು ಬಾ. ಅವಳ ಕಾಲ್ ದೆಸೆಯಿಂದನಾದ್ರೂ ನಮ್ಮನೆ ದರಿದ್ರ ಹರಿತದ ನೋಡನ” ಎಂದು ಹೇಳಿ ಮಗನಿಗೆ ಬಿಸಿ ಹಿಟ್ಟು ತಿರುವಿ ಊಟಕ್ಕಿಟ್ಟಳು.

 ಮಾರನೆಯ ದಿನ ಸಂಭ್ರಮದಿಂದ ಸಂಪಿಗೆ ಕಟ್ಟಿಗೆ ಬಂದ ಮೋಹನ ಅವ್ವ ಒಪ್ಪಿದ ವಿಚಾರವನ್ನೆಲ್ಲ ಗಂಗೆಗೆ ತಿಳಿಸಿದ. ಏನೋ ಎಂತೋ ಎಂದು ಆತಂಕದಲ್ಲಿಯೆ ರಾತ್ರಿ ಕಳೆದಿದ್ದ ಗಂಗೆಗೆ ಗಂಡನ ಮಾತು ಕೇಳಿ ನಿರಾಳವಾಯಿತು. ಸಡಗರ ತುಂಬಿಕೊಂಡವಳಂತೆ “ಏನೀ ಮೊದ್ಲುನೆದಪ ನಿಮ್ಮೂರಿಗೆ ಬತ್ತಿದ್ದೀನಿ ಬರೀ ಕೈಯಲ್ಲಿ ಹೋಗದು ಚೆನ್ನಾಗಿರಕಿಲ್ಲ ಒಂದೀಸು ಹೂವು, ಹಣ್ಣು ಮೈಸೂರ್ ಪಾಕೇನಾದ್ರು ತಕ್ಕೊಂಡು ಹೋಗನ” ಎಂದು ಹೇಳಿದಳು. ಗಂಗೆಯ ಸಂಪ್ರದಾಯಕ್ಕೆ ತಲೆದೂಗಿದ ಮೋಹನ ಅವಳನ್ನು ಸಂಪಿಗೆ ಕಟ್ಟೆಯ ಸಂತೆಮಾಳದೊಳಕ್ಕೆ ಕರೆದುಕೊಂಡು ಹೋದ. 

ಅಲ್ಲಿ ಹರಿಬಿರಿಯಲ್ಲಿಯೇ ವ್ಯಾಪಾರ ಕುದುರಿಸುತ್ತಿದ್ದ ನಾರಿಪುರದ ಸಂಕವ್ವ ಗಂಗೆಯ ಕಣ್ಣಿಗೆ ಬಿದ್ದಳು. ತವರನ್ನೇ ಕಂಡಂತೆ ಹಿಗ್ಗಿಹೋದ ಗಂಗೆ, ಟಣ್ಣನೆ ಸಂಕವ್ವನೆದುರು ಚಿಮ್ಮಿನಿಂತು, ಊರಿನ ಕಷ್ಟ ಸುಖಗಳನ್ನೆಲ್ಲ ವಿಚಾರಿಸಿ “ನಮ್ಮವ್ವುನ್ನು ಅಪ್ಪುನ್ನು ನೋಡಂಗ್ ಆಗದೆ ನಾಳಿಕೊಸಿ ಭೋಗ್ನೂರಿಗೆ ಬಂದು ಹೋಗ ಕೇಳ್ತಿರ ಸಂಕವ್ವ” ಎಂದು ನಿಂತ ಕಾಲಿನ ಮೇಲೆ ತನ್ನ ಬಯಕೆಯನ್ನು ಸಂಕವ್ವನ  ಮುಂದೆ ಒಗೆದು ಬಿಟ್ಟಳು. ಹೆಂಡತಿಯ ಮಾತು ಕೇಳಿ ತಬ್ಬಿಬ್ಬುಗೊಂಡ ಮೋಹನ, ತಾನೆ ಏನೇನೋ ಸಾಬೂಬು ಹೇಳಿ ಅತ್ತೆ ಮಾವ ಬರುವುದನ್ನು ತಪ್ಪಿಸಲು ನೋಡಿದ. ಇದ್ಯಾವುದು ಗಂಗೆಗೆ ತಿಳಿಯದಾಯಿತು ” ಅವ್ರ್ಗೆ ಅಂತ ಘನಂದಾರಿ ಕೆಲ್ಸ ಏನು ಇರಕ್ಕಿಲ್ಲ ನೀವು ಸುಮ್ಕಿರಿ, ಸಂಕವ್ವ ಒಂದೇ ಒಂದಪ ಬಂದು ಹೋಗಕೇಳಿ ಸಾಕು” ಎಂದು ಹೇಳಿ ಸಂಕವ್ವನನ್ನು ಬೀಳ್ಕೊಂಡು ಮೋಹನನ ಹಿಂದೆ ಭೋಗನೂರಿನತ್ತ ನಡೆದಳು.

ಅಣ್ಣಂದಿರು ಹೇಳಿದ್ದ ದೊಡ್ಡ ತೊಟ್ಟಿಮನೆಯ ಕಲ್ಪನೆಯಲ್ಲಿಯೇ ಊರು ಪ್ರವೇಶಿಸಿದ ಗಂಗೆಯನ್ನು ಆಗಲೋ ಈಗಲೋ ಬೀಳುವಂತಿದ್ದ ಒಂದು ಹರುಕು ಮುರುಕು ಮನೆಯ ಮುಂದೆ ತಂದು ನಿಲ್ಲಿಸಿದ ಮೋಹನ ” ಇದೇ ನಮ್ಮ ಅರಮನೆ ಮಹಾರಾಣಿಯವರು ಬಲಗಾಲಿಟ್ಟು ಒಳಗೆ ಬರಬೇಕಾಗಿ ವಿನಂತಿ”  ಎಂದು ಹೇಳುವುದರ ಮೂಲಕ ತನ್ನೊಳಗಿನ ಸಂಕೋಚವನ್ನು ಮರೆಮಾಚಿಕೊಳ್ಳಲೆತ್ನಿಸಿದ. ತಾನು ಬದುಕಿ ಬಾಳಬೇಕಾದ ಮನೆಯನ್ನು ಕಣ್ಣು ತುಂಬಿ ಕೊಳ್ಳಲು ಕಾತರಳಾಗಿದ್ದ ಗಂಗೆ  “ಏ…ಯಾವಾಗ್ಲೂ ಹುಡುಗಾಟವೆಯಾ ನಿಮ್ಗೆ. ಸುಮ್ನೆ ನಿಮ್ಮನೆಗೆ ಕರ್ಕೊಂಡು ಹೋಗಿ ಜನವೆಲ್ಲಾ ನಮ್ಮುನ್ನೆ ನೋಡ್ತವ್ರೆ” ಎಂದಳು ನಾಚಿಕೆಯಿಂದ.

ಒಳಗಿನಿಂದ ಓಡಿ ಬಂದ ಮೋಹನನ ತಂಗಿ ರತ್ನ “ಓ..ಈಗ ಬಂದ್ರ ಅತ್ತಿಗ್ಯಮ್ಮ ಒಳಗ್ ಬರ್ಬೇಡಿ ತಾಳಿ ಸೇರ್ ಇಡ್ತಿನಿ” ಎಂದು ಹೇಳುವುದರ ಮುಖಾಂತರ ಇದು ನೀನು ಬಾಳಿ ಬದುಕಬೇಕಾದ ಮನೆಯೇ ಎಂದು ಸ್ಪಷ್ಟಪಡಿಸಿ ಹೋಗಿದ್ದಳು.  ನಾದಿನಿಯ ಮಾತು ಕೇಳಿ ಪೆಚ್ಚಾದ ಗಂಗೆ ಕಿರುಗಣ್ಣಿನಲ್ಲಿಯೇ ಮೋಹನನನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಅವಳ ನೋಟಕ್ಕೆ ಕುಗ್ಗಿದ ಮೋಹನನಿಗೆ ತಾನು ಹೊಸೆದು ನಿಲ್ಲಿಸಿದ್ದ ಸುಳ್ಳುಗಳೆ ತನ್ನನ್ನು ಪಾತಾಳಕ್ಕೆ ಹಾಕಿ ಅಮುಕಿದಂತಾಯಿತು. ಗಂಗೆಯ ಮುಂದೆ ತಲೆ ಎತ್ತಿ ನಿಲ್ಲಲಾರದೆ  ಕ್ಷಣ ಎತ್ತಲಾದರು ಓಡಿಬಿಡಬೇಕೆನಿಸಿತು. 

ಗಂಗೆ ಸೇರನ್ನು ಒದ್ದು ಒಳಗೆ ಬಂದದ್ದೆ ತಡ, ಸುತ್ತಾ ಮುತ್ತಾ ಇವಳನ್ನೇ ನೋಡುತ್ತಾ ನಿಂತಿದ್ದ ಅಕ್ಕ ಪಕ್ಕದ ಹಿರಿಯ ಹೆಂಗಸರೆಲ್ಲ ಅವಳ ಹಿಂದೆಯೇ ದಾಂಗುಡಿಯಿಟ್ಟರು.  ಹೀಗೆ ಒಳ ಬಂದ ಹೆಂಗಸರಿಗೆಲ್ಲ ತಾನು ತಂದಿದ್ದ  ಹೂವು ಹಣ್ಣು ಮೈಸೂರುಪಾಕು ಕೊಟ್ಟು ಉಪಚರಿಸಿದ ಗಂಗೆ ಅವರೆಲ್ಲರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಕೊಂಡಳು. ಜುಗ್ಗುತನವನ್ನೇ ಹಾಸಿ ಹೊದ್ದುಕೊಂಡಿದ್ದ ಚಿಕ್ಕತಾಯಮ್ಮನಿಗೆ ಒದಗಿ ಬಂದಿರುವ  ಮುತ್ತಿನಂತಹ ಸೊಸೆ ಕಂಡು ಬಂದವರೆಲ್ಲ ಆಶ್ಚರ್ಯ ಚಕಿತರಾದರು.

 “ನಮ್ ಚಿಕ್ಕ ತಾಯಿ ಅದೃಷ್ಟ ಅಂದ್ರೆ ಇದಲ್ವಾ ಮತ್ತೆ” ಎಂದು ಕೆಲವರು ಮೂಗುಮುರಿದರೆ, ಇನ್ನೂ ಕೆಲವರು “ಆ ಘಟವಾಣಿ ಈ ಹೂನಂತ ಮಗಿನ ಹೆಂಗ್ ಬಾಳುಸ್ತಳೋ ಏನೋ” ಎಂದು ತಮ್ಮ ತಮ್ಮೊಳಗೆ ಲೊಚಗುಟ್ಟುತ್ತಲೇ ಗಂಗೆಯನ್ನು ಹರಸಿದರು. “ಮಾಲಕ್ಷ್ಮಿ ಬಂದಂಗೆ ನಿಮ್ಮನೆಗೆ ಬಂದವ್ಳೆ ಮೋನಪ್ಪ ಚಂದನಾಗಿ ಬಾಳ್ಸಪ್ಪ” ಎಂದು ಮೋಹನನಿಗೆ ಕಿವಿ ಮಾತು ಹೇಳಿದರು.

ಹರಿದಿದ್ದ ಸೀರೆಯನ್ನು ಗಂಟು ಹಾಕಿ,  ಕೆದರಿದ್ದ ತಲೆಯ ಮೇಲೆ ಬಟ್ಟೆ ತುಂಬಿದ ಮಂಕರಿ ಹೊತ್ತು ಒಳ ಬಂದ ಮೋಹನನ ಅವ್ವ ಚಿಕ್ಕತಾಯಮ್ಮ ಅಲ್ಲಿ ಸೇರಿದ್ದವರನ್ನೆಲ್ಲಾ ನೋಡಿ ” ಅಯ್ಯೋ ಅಯ್ಯೋ ಹಾದಿ ಬೀದಿಲೋಗೊ ನಾಯಿ ನರಿಗೊಳೆಲ್ಲ ನಮ್ಮನೆ ವಳ್ಗೆ  ಅಟ್ಕಯಿಸ್ಕೊಂಡು ಕೂತವಲ್ಲ. ಇದ್ಯಾಕ್ಣೆ ರತ್ನಿ ಓಡ್ಸೋದು ಬುಟ್ಟು ಗರ ಬಡ್ದೊಳಂಗೆ ನೋಡ್ಕೊಂಡು ಕೂತಿದ್ದಿ” ಎಂದು ಘರ್ಜಿಸಿದ್ದೆ ತಡ ಒಳಗೆ ಕೂಡಿಕೊಂಡಿದ್ದ ಹೆಂಗಸರೆಲ್ಲಾ  ತಟ್ಟನೆ ಕರಗಿ ಕಣ್ಮರೆಯಾದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.

ಹಿಂದಿನ ಸಂಚಿಕೆ-ನಟನೆ ಕಳಚಿದ ಮೋಹನ..

Related Articles

ಇತ್ತೀಚಿನ ಸುದ್ದಿಗಳು