Saturday, January 24, 2026

ಸತ್ಯ | ನ್ಯಾಯ |ಧರ್ಮ

ಗುಜರಾತ್ ಚುನಾವಣಾ ಫಲಿತಾಂಶ, ಸುಶಾಸನದ ಫಲ: ಸಿಎಂ ಬೊಮ್ಮಾಯಿ

ಬೆಂಗಳೂರು: ಗುಜರಾತ್  ಚುನಾವಣಾ  ಫಲಿತಾಂಶ ಸುಶಾಸನದ ಫಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಲಲಿತ್ ಅಶೋಕ್ ಹೋಟೆಲ್ ಬಳಿ  ಮಾತನಾಡಿದ್ದಾರೆ.

ಗುಜರಾತ್‌ ಚುನಾವಣೆ ಬಗ್ಗೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು, ʼಚುನಾವಣೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಈ ಬಾರಿಯೂ ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆ ಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ. ಇದುವರೆಗೂ ದೇಶದಲ್ಲಿ ಆಡಳಿತ  ವಿರೋಧ  ಟ್ರೆಂಡ್ ಇತ್ತು. ಗುಜರಾತ್ ಆಡಳಿತದ ಪರವಾಗಿದೆ ಎಂದು ನಿರೂಪಿಸಿದೆ. 7 ನೇ ಬಾರಿ ಗೆಲ್ಲುತ್ತಿರುವುದು ಸುಲಭದ ಮಾತಲ್ಲ. ಆಡಳಿತದ ಪರವಾಗಿ ಜನ ನಿಲ್ಲಲು ಸರ್ಕಾರಗಳು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ಗುಜರಾತ್ ಸರ್ಕಾರ ಮಾಡಿದೆʼ ಎಂದರು.

ಮೋದಿಯವರ ನಾಯಕತ್ವದ ಬಗ್ಗೆ ಮಾತನಾಡಿ, ʼಎಲ್ಲಕ್ಕೂ ಮಿಗಿಲಾಗಿ ಇದಕ್ಕೆ ಅಡಿಪಾಯ ಹಾಕಿ ಬೆಳಸಿ, ಮಾರ್ಗದರ್ಶನ ಮಾಡುತ್ತಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ.  ಅವರ ಸಕಾರಾತ್ಮಕ ನಾಯಕತ್ವ ಸುಮಾರು ಒಂದು ತಲೆಮಾರು ದಾಟಿದರೂ ಹಳೆ ಮತ್ತು ಹೊಸ  ಪೀಳಿಗೆ ಅವರ ಆಡಳಿತ, ದಕ್ಷತೆಯನ್ನು ಒಪ್ಪಿದ್ದಾರೆ. ದೇಶ ಮುನ್ನಡೆಸುವ ಶಕ್ತಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಳೆದ ಬಾರಿ 3 ರಾಜ್ಯಗಳಲ್ಲಿ ಸಹ  ಗೆದ್ದಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ಸಮಬಲದ ಹೋರಾಟವಿದೆ. ಅಂತಿಮವಾಗಿ ಬಿಜೆಪಿ ಗೆದ್ದು ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ  15 ವರ್ಷ ಆಡಳಿತ ಮಾಡುವುದೇ ದೊಡ್ಡ ಸಾಧನೆ. ಸ್ಥಳೀಯ ಸಮಸ್ಯೆಗಳು  ಬಹಳ ಇರುತ್ತವೆ. ಮತದಾರರ ಸಣ್ಣ ಸಂಖ್ಯೆ, ಬಹು ಆಯಾಮದ ಸ್ಪರ್ಧೆ ಇರುತ್ತದೆ. ಮುನಿಸಿಪಲ್ ಚುನಾವಣೆಯನ್ನು  ಸಾರ್ವತ್ರಿಕ ಚುನಾವಣೆಗೆ  ಹೋಲಿಕೆ ಮಾಡಲಾಗುವುದಿಲ್ಲ ಎಂದರು. 

ಬಿಜೆಪಿ ಗೆಲುವಿನ ಪರಿಣಾಮ ಸಕಾರಾತ್ಮಕವಾಗಿ ಕರ್ನಾಟಕದ ಚುನಾವಣೆಯ ಮೇಲೆ ಆಗಿಯೇ ಆಗುತ್ತದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ದೊಡ್ಡ ನೈತಿಕ ಬಲ ಸಿಗಲಿದೆ. ಇನ್ನಷ್ಟು ಹುರುಪು, ಹುಮ್ಮಸ್ಸಿನಲ್ಲಿ ಕೆಲಸ ಮಾಡಿದರೆ  ಜಯ ನಿಶ್ಚಿತ ಎಂದು ಪಕ್ಷದ ಬಗ್ಗೆ ಮಾತನಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page