ಅಹಮದಾಬಾದ್: ಕೇವಲ ವಿವಾಹ ನೋಂದಣಿ ಪ್ರಮಾಣಪತ್ರ ಇದ್ದ ತಕ್ಷಣ ಆ ಮದುವೆ ಕಾನೂನುಬದ್ಧವಾಗಿ ಸಿಂಧುವಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದೂ ವಿವಾಹ ಕಾಯ್ದೆಯ ಪ್ರಕಾರ, ಆಚಾರ-ವಿಚಾರಗಳಿಗೆ ಅನುಗುಣವಾಗಿ ಮದುವೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದಾಗ ಮಾತ್ರ ಅದಕ್ಕೆ ಕಾನೂನುಬದ್ಧ ಮಾನ್ಯತೆ ಸಿಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಯಾವ ಸಮುದಾಯಗಳಲ್ಲಿ ಸಪ್ತಪದಿ ಪದ್ಧತಿ ಜಾರಿಯಲ್ಲಿದೆಯೋ, ಅಲ್ಲಿ ಆ ವಿಧಿವಿಧಾನವನ್ನು ಕಡ್ಡಾಯವಾಗಿ ನೆರವೇರಿಸಬೇಕು. ಅದನ್ನು ಮಾಡದಿದ್ದರೆ ಆ ವಿವಾಹ ಸಿಂಧುವಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
ಈಗಾಗಲೇ ಶಾಸ್ತ್ರೋಕ್ತವಾಗಿ ನಡೆದಿರುವ ಮದುವೆಗೆ ನೀಡಲಾಗುವ ಮದುವೆ ಪ್ರಮಾಣಪತ್ರವು ಕೇವಲ ಒಂದು ಲಿಖಿತ ಪುರಾವೆಯಷ್ಟೇ (ದಾಖಲೆ) ಹೊರತು, ಆಚರಣೆಗಳಿಲ್ಲದ ಮದುವೆಯನ್ನು ಮಾನ್ಯ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.
