ಗುಜರಾತ್‌: ಕಲಬೆರಕೆ ಮದ್ಯ ಸೇವಿಸಿ 13 ಮಂದಿ ಸಾವು

ಮದ್ಯಪಾನ ನಿಷೇಧ ಜಾರಿಯಲ್ಲಿರುವ ಗುಜರಾತ್‌ನಲ್ಲಿ ಕಲಬೆರಕೆ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ಭಾನುವಾರದ ವೇಳೆಗೆ 13ಕ್ಕೆ ಏರಿಕೆಯಾಗಿದೆ. ಭಾವನಗರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ದಿನಗಳ ಹಿಂದೆ ‘ಇಂಡಿಯನ್ ಮೇಡ್-ಫಾರಿನ್ ಲಿಕ್ಕರ್’ (IMFL) ಬ್ರ್ಯಾಂಡ್ ಹೆಸರಿನಲ್ಲಿದ್ದ ನಕಲಿ ಮದ್ಯವನ್ನು 67 ಜನರು ಸೇವಿಸಿದ್ದು, ಹಲವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಐವರು ಸಂತ್ರಸ್ತರು ಪ್ರಾಣ ಕಳೆದುಕೊಂಡಿದ್ದು, ಭಾನುವಾರ ಮತ್ತಿಬ್ಬರು ಸಾವಿಗೀಡಾಗಿದ್ದಾರೆ.

ಸಂತ್ರಸ್ತರು ಸೇವಿಸಿದ್ದ ಕಲಬೆರಕೆ ಮದ್ಯದಲ್ಲಿ ವಿಷಕಾರಿ ಮೆಥನಾಲ್ ಅಂಶ ಇರುವುದು ವಿಧಿವಿಜ್ಞಾನ (ಫೊರೆನ್ಸಿಕ್) ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ವಾರ್ತೇಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 21 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇವರಲ್ಲಿ 13 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಆಗಸ್ಟ್ 16 ರಂದು ಮೂವರು ಸ್ನೇಹಿತರು ಮದ್ಯ ಸೇವಿಸಿದ ನಂತರ ತೀವ್ರ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಒಬ್ಬರ ನಂತರ ಒಬ್ಬರಂತೆ ಮೃತಪಟ್ಟಾಗ ಈ ಕಲಬೆರಕೆ ಮದ್ಯ ಪ್ರಕರಣ ಬೆಳಕಿಗೆ ಬಂದಿತ್ತು.

Related Articles

ಇತ್ತೀಚಿನ ಸುದ್ದಿಗಳು