ಮೊರ್ಬಿ, ಗುಜರಾತ್: ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬೃಹತ್ ಸೇತುವೆ ಕುಸಿತದ ದುರಂತದಲ್ಲಿ ಬದುಕುಳಿದವರ ಯೋಗಕ್ಷೇಮವನನ್ನು ವಿಚಾರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಸ್ಪತ್ರಗಳಿಗೆ ಭೇಟಿನೀಡಲಿರುವ ವಿಷಯ ತಿಳಿದು, ಗುಜರಾತ್‌ನ ಮೊರ್ಬಿಯ ಸಿವಿಲ್ ಆಸ್ಪತ್ರೆಯನ್ನು ರಾತ್ರಿಯಿಡಿ ಸ್ವಚ್ಚಗೊಳಿಸಿ, ಸುಣ್ಣ-ಬಣ್ಣ ಹಚ್ಚಿ ಅಲಂಕಿರಿಸಿರುವುದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕೇಬಲ್ ತೂಗು ಸೇತುವೆಯ ಭೀಕರ ಕುಸಿತದಲ್ಲಿ ಸತ್ತ 135 ಜನರಲ್ಲಿ, 47 ಮಕ್ಕಳು. 100 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಹಲವರು ಮೋರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ನರೇಂದ್ರ ಮೋದಿಯವರು ಗಾಯಾಳುಗಳು ಚಿಕಿತ್ಸೆಪಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದರು.
ವಿಷಯ ತಿಳಿದ ಎನ್‌ಡಿಟಿವಿ ವರದಿಗಾರರು, ರಾತ್ರಿ ವೇಳೆ ಆಸ್ಪತ್ರೆಗೆ ಭೇಟಿನೀಡಿದಾಗ, ಮೋದಿಯವರು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕಾರಣ, ಮಧ್ಯರಾತ್ರಿಯಲ್ಲೇ, ಆಸ್ಪತ್ರೆಯಲ್ಲಿ ಸ್ವಚ್ಚಗೊಳಿಸುವ ಕೆಲಸ, ಕೆಲವು ಗೋಡೆಗಳು ಮತ್ತು ಚಾವಣಿಯ ಭಾಗಗಳಿಗೆ ಹೊಸದಾಗಿ ಬಣ್ಣ ಬಳಿಯುವ ಕೆಲಸ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಎರಡು ವಾರ್ಡ್‌ಗಳಲ್ಲಿ, ದುಸ್ಥಿತಿ ಹೊಂದಿರುವ ಬೆಡ್‌ಗಳನ್ನು ಸಹ ತೆಗೆದು, ಹೊಸ ಬೆಡ್‌ಗಳನ್ನು ಬದಲಾಹಿಸಿರುವ ದೃಶ್ಯಗಳನ್ನು ಎನ್‌ಡಿಟಿವಿ ಸೆರೆಹಿಡಿದಿದೆ.
ವರದಿ ತಿಳಿದ ಬಳಿಕ, ಈ ಸುದ್ದಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು (ಎಎಪಿ), ಬಿಜೆಪಿಯು ಪ್ರಧಾನಿಯವರ ʼಫೋಟೋಶೂಟ್‌ಗೆʼ ಈ ರೀತಿಯ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿವೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ನಾಳೆ ಪ್ರಧಾನಿ ಮೋದಿ ಅವರು ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಹೊಳೆಯುವ ಟೈಲ್ಸ್ ಅಳವಡಿಸಲಾಗುತ್ತಿದೆ. ಯಾಕೆಂದರೆ, ಪ್ರಧಾನಿ ಮೋದಿ ಅವರ ಚಿತ್ರದಲ್ಲಿ ಯಾವುದೇ ಕೊರತೆ ಇರಬಾರದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದೆ.
ಆಮ್ ಆದ್ಮಿ ಪಕ್ಷವು ಕೂಡ ʼಮೋರ್ಬಿ ಸಿವಿಲ್ ಆಸ್ಪತ್ರೆಯಲ್ಲಿನ ದೃಶ್ಯಗಳ ಕುರಿತು ಟ್ವೀಟ್ ಮಾಡಿದ್ದು, ನಾಳೆ ಪ್ರಧಾನಿಯವರ ಫೋಟೋಶೂಟ್‌ನಲ್ಲಿ ಯಾವುದೇ ಲೋಪವಾಗದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿ ಈ ಕೆಲಸ ಮಾಡಿದ್ದರೆ, ಮಧ್ಯರಾತ್ರಿಯಲ್ಲಿ ಆಸ್ಪತ್ರೆಯನ್ನು ಅಲಂಕರಿಸುವ ಅಗತ್ಯವಿರಲಿಲ್ಲ ಎಂದು ವ್ಯಂಗಿಸಿದೆ.